ಬಿಟ್​ಕಾಯಿನ್ ಆರೋಪಿ ಶ್ರೀಕಿ ಉಳಿಸಲು ಸರ್ಕಾರದ ಯತ್ನ: ಪ್ರತಿಪಕ್ಷಗಳ ಆರೋಪ ಗೃಹ ಸಚಿವರ ಉತ್ತರ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 16, 2021 | 5:54 PM

ನಮ್ಮ ಪೊಲೀಸರು ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ ಎಂದು ಯುಬಿ ವೆಂಕಟೇಶ ಪ್ರಶ್ನೆಗೆ ಸಚಿವ ಅರಗ ಜ್ಞಾನೇಂದ್ರ ಉತ್ತರಿಸಿದರು

ಬಿಟ್​ಕಾಯಿನ್ ಆರೋಪಿ ಶ್ರೀಕಿ ಉಳಿಸಲು ಸರ್ಕಾರದ ಯತ್ನ: ಪ್ರತಿಪಕ್ಷಗಳ ಆರೋಪ ಗೃಹ ಸಚಿವರ ಉತ್ತರ
ಗೃಹ ಸಚಿವ ಆರಗ ಜ್ಞಾನೇಂದ್ರ (ಎಡಚಿತ್ರ) ಮತ್ತು ಹ್ಯಾಕರ್ ಶ್ರೀಕಿ
Follow us on

ಬೆಳಗಾವಿ: ಬಿಟ್ ಕಾಯಿನ್​ ಅವ್ಯವಹಾರದ ಪ್ರಮುಖ ಆರೋಪಿ ಶ್ರೀಕಿಯನ್ನು ಉಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಶಾಸಕ ಯು.ಬಿ.ವೆಂಕಟೇಶ್ ನೇರ ಆರೋಪ ಮಾಡಿದರು. ಈ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ 3 ವರ್ಷಗಳಲ್ಲಿ 11 ಪ್ರಕರಣಗಳು ದಾಖಲಾಗಿವೆ. ಇದನ್ನು ಹಗರಣ ಎನ್ನಲು ಆಗುವುದಿಲ್ಲ, ಇದೊಂದು ಮೋಸದ ಜಾಲ ಎಂದು ಹೇಳಿದರು. ಆರೋಪಿ ಶ್ರೀಕಿ ಎರಡು ಪ್ರಕರಣಗಳಲ್ಲಿ ಇದ್ದಾನೆ. ಶ್ರೀಕಿ ಜೊತೆಗೆ ಇತರರೂ ಈ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದಾರೆ. ಅನೇಕ ಜನರು ಹಣ ಕಳೆದುಕೊಂಡಿದ್ದಾರೆ ಎಂದರು. ಮಾದಕ ವಸ್ತು ಸಾಗಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಶ್ರೀಕಿ ಬಂಧನವಾಗಿತ್ತು. ನಂತರದ ವಿಚಾರಣೆ ವೇಳೆ ಈತ ಹ್ಯಾಕರ್ ಎಂದು ತಿಳಿದುಬಂತು. ಶ್ರೀಕಿ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಯಾವ್ಯಾವ ಕಲಂಗಳ ಅನ್ವಯ ಪ್ರಕರಣ ಹಾಕಬೇಕು ಎಂಬುದನ್ನು ಯೋಚಿಸಿಯೇ ನಮ್ಮ ಪೊಲೀಸರು ಆರೋಪಪಟ್ಟಿ ಹಾಕಿದ್ದಾರೆ. ಶ್ರೀಕಿ ಈಗ ಜಾಮೀನಿನ ಮೇಲೆ ಇದ್ದಾನೆ. ಶ್ರೀಕಿಯನ್ನು ಉಳಿಸುವ ಅಗತ್ಯ ಯಾರಿಗೂ ಇಲ್ಲ. ನಮ್ಮ ಪೊಲೀಸರು ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ ಎಂದು ಯುಬಿ ವೆಂಕಟೇಶ ಪ್ರಶ್ನೆಗೆ ಸಚಿವ ಅರಗ ಜ್ಞಾನೇಂದ್ರ ಉತ್ತರಿಸಿದರು.

ಏನಿದು ಪ್ರಕರಣ?
ಬೆಂಗಳೂರಿನ ರಾಯಲ್ ಆರ್ಕೆಡ್ ಹೋಟೆಲ್​ನಲ್ಲಿ ಇತ್ತೀಚೆಗೆ ನಡೆದ ಗಲಾಟೆಯೊಂದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿತ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಡ್ರಗ್ಸ್ ಸೇವನೆ ಖಚಿತವಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ಬಂಧಿತನನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿದ್ದರು. ನಂತರ ಜಾಮೀನಿನ ಮೇಲೆ ಈತ ಬಿಡುಗಡೆಯಾಗಿದ್ದ. ಹ್ಯಾಕರ್ ಶ್ರೀಕಿ ಜೈಲಿನಿಂದ ಹೊರ ಬರುವಾಗ ಕಾಲಿಗೆ ಚಪ್ಪಲಿಯೂ ಇರಲಿಲ್ಲ. ಬೆಂಗಳೂರಿನ ಸ್ಟಾರ್ ಹೋಟೆಲ್ ಎನಿಸಿದ ರಾಯಲ್ ಆರ್ಕಿಡ್ ಹೋಟೆಲ್​ನ ಐಶಾರಾಮಿ ಕೊಠಡಿಯಲ್ಲಿದ್ದ ಶ್ರೀಕಿ ಖಾಸಗಿ ಜೆಟ್​ಗಳಲ್ಲಿ ವಿದೇಶಗಳಿಗೆ ಹೋಗುತ್ತಿದ್ದ. ಡ್ರಗ್ಸ್​ ಮತ್ತು ಮದ್ಯವ್ಯಸನಿಯಾಗಿದ್ದ.

ಸ್ಟಾರ್ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಿದ್ದರೂ ಶ್ರೀಕಿಯ ಬಳಿ ಒಂದೇ ಒಂದು ಬ್ಯಾಂಕ್ ಅಕೌಂಟ್ ಇಲ್ಲ. ಸ್ವಂತ ಮೊಬೈಲ್ ಅಥವಾ ಲ್ಯಾಪ್​ಟಾಪ್ ಸಹ ಇಲ್ಲ. ಸದಾಕಾಲವೂ ಬೇರೆಯವರ ಮೊಬೈಲ್ ಮತ್ತು ಲ್ಯಾಪ್​ಟಾಪ್ ಮೂಲಕವೇ ಕೆಲಸ ಮಾಡುತ್ತಿದ್ದ. ಎಲ್ಲವನ್ನೂ ಡಾರ್ಕ್​ವೆಬ್ ಮೂಲಕವೇ ನಿರ್ವಹಿಸುವ ಶ್ರೀಕಿ ಪಾಸ್​ವರ್ಡ್​ಗಳನ್ನು ನೆನಪಿನಲ್ಲಿಯೇ ಇಟ್ಟುಕೊಳ್ಳುತ್ತಿದ್ದ. ಪೊಲೀಸರು ವಿಚಾರಣೆ ನಡೆಸುವಾಗ This is irrelevant question ಎಂದು ಮುಖಕ್ಕೆ ಹೊಡೆದಂತೆ ಉತ್ತರಿಸುತ್ತಿದ್ದ ಶ್ರೀಕಿ ಸೈಬರ್ ಲೋಕದ ಅಪರಾಧಕ್ಕೆ ಸಾಕ್ಷಿ ಸಿಗದಂತೆ ಮಾಡಬಲ್ಲ ಚತುರ ಎನಿಸಿಕೊಂಡಿದ್ದಾನೆ.

ಇದನ್ನೂ ಓದಿ: ವೈದ್ಯಕೀಯ ಪರೀಕ್ಷೆಯಲ್ಲಿ ಹ್ಯಾಕರ್ ಶ್ರೀಕಿ, ವಿಷ್ಣು ಭಟ್ ಮಾದಕ ವಸ್ತು ಸೇವಿಸಿರುವುದು ದೃಢ
ಇದನ್ನೂ ಓದಿ: ಹ್ಯಾಕರ್ ಶ್ರೀಕಿ ಭದ್ರತೆಗೆ ಸಬ್​ಇನ್ಸ್‌ಪೆಕ್ಟರ್ ನಿಯೋಜನೆ; ಆದ್ರೆ ಆಸಾಮಿ ಎಲ್ಲಿದ್ದಾನೊ ಗೊತ್ತಿಲ್ಲ ಎಂದ ಕುಟುಂಬಸ್ಥರು!