ಬೆಳಗಾವಿ: ಜೈನಮುನಿ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ಹಲಗಾ ಗ್ರಾಮದ ಬಸದಿಗೆ ಗೃಹ ಸಚಿವ ಜಿ.ಪರಮೇಶ್ವರ್ (G Parameshwara) ಇಂದು ಭೇಟಿ ನೀಡಿದರು. ಘಟನೆ ಬಗ್ಗೆ ಜೈನಮುನಿಗಳ ಜತೆ ಗೃಹಸಚಿವರು ಚರ್ಚೆ ಮಾಡಿದ್ದಾರೆ. ಈ ವೇಳೆ ಜೈನಮುನಿ ಸಿದ್ದಸೇನ ಮಹಾರಾಜರು ಮಾತನಾಡಿದ್ದು, ಈ ಘಟನೆಯಿಂದ ಜೈನ ಸಮುದಾಯದ ಜನರಲ್ಲಿ ರೋಷ ಬಂದಿದೆ. ಸಾಧುಸಂತರಿಗೆ ಹೀಗಾದರೆ ಮುಂದೆ ಹೇಗೆ ಅನ್ನೋ ಪ್ರಶ್ನೆ ಮೂಡುತ್ತಿದೆ. ಇನ್ಮುಂದೆ ಈ ರೀತಿ ಘಟನೆ ಆಗಬಾರದು, ಸರ್ಕಾರದಿಂದ ರಕ್ಷಣೆ ಬೇಕು ಎಂದು ಡಾ.ಜಿ.ಪರಮೇಶ್ವರ್ಗೆ ಮನವಿ ಮಾಡಿದರು.
ಘಟನೆ ನಡೆದ 3-4 ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರಿಗೆ ತಮ್ಮ ಕಡೆಯಿಂದಲೂ ಅಭಿನಂದಿಸುವ ಕೆಲಸ ಮಾಡಿ. ರಾಜ್ಯ ಪೊಲೀಸ್ ಇಲಾಖೆ ಬಹಳ ಚೆನ್ನಾಗಿ ಕೆಲಸ ಮಾಡುತ್ತಿದೆ. ಪೊಲೀಸರಿಗೂ ಜೈನ ಸಮುದಾಯ ವತಿಯಿಂದ ಅಭಿನಂದಿಸುತ್ತೇವೆ. ಕರ್ನಾಟಕದಲ್ಲಿ ಮತ್ತೊಮ್ಮೆ ಇಂತಹ ಘಟನೆ ಮರುಕಳಿಸಬಾರದು ಎಂದು ಹೇಳಿದರು.
ಇದನ್ನೂ ಓದಿ: ಹಣಕಾಸಿನ ವ್ಯವಹಾರವೇ ಆಗಿದ್ದರೂ ಮುನಿಗಳ ಹತ್ಯೆ ಏಕೆ ಆಯ್ತು: ಮಾಜಿ ಸಿಎಂ ಬೊಮ್ಮಾಯಿ ಪ್ರಶ್ನೆ
ಪ್ರಕರಣ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಈ ಪ್ರಕರಣದಲ್ಲಿ ಯಾರೂ ರಾಜಕೀಯ ಮಾಡಲ್ಲ, ತಾರತಮ್ಯ ಮಾಡಲ್ಲ. ಕೊಲೆ ಆರೋಪಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಜೈನಮುನಿ ಹತ್ಯೆ ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ನಮ್ಮ ಇಲಾಖೆ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಮುಂದಿನ ದಿನದಲ್ಲಿ ಇಂತಹ ಕೃತ್ಯ ಮರುಕಳಿಸಿದಂತೆ ನೋಡಿಕೊಳ್ಳುತ್ತೇವೆ. ಈ ಪ್ರಕರಣವನ್ನು ಸಿಬಿಐಗೆ ಕೊಡುವ ಅಗತ್ಯ ಕಾಣಿಸುತ್ತಿಲ್ಲ. ನಮ್ಮ ಇಲಾಖೆ ಸಮರ್ಥವಾಗಿದೆ, ಈಗಾಗಲೇ ತನಿಖೆ ಶುರುವಾಗಿದೆ. ತನಿಖೆ ಮುಗಿದ ಮೇಲೆ ಎಲ್ಲಾ ಸತ್ಯಾಸತ್ಯತೆ ಗೊತ್ತಾಗಲಿದೆ.
ಇದನ್ನೂ ಓದಿ: ಜೈನ ಮುನಿ ಹತ್ಯೆ ಪ್ರಕರಣ: ಎರಡನೇ ಆರೋಪಿ ಹೆಸರು ಹೇಳದಿರುವುದು ಸಂಶಯಕ್ಕೆ ಕಾರಣ ಎಂದ ಅಭಯ್ ಪಾಟೀಲ್
ಬಿಜೆಪಿಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಆಗುತ್ತಿಲ್ಲ. ಸುಮ್ಮನೇ ಅಪವಾದ ಮಾಡಬಾರದು. ಬಿಜೆಪಿ ನಾಯಕರಲ್ಲಿ ಆಂತರಿಕ ಒಳಜಗಳ ಇದೆ ಎಂದು ಕಿಡಿಕಾರಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:54 pm, Mon, 10 July 23