ಜೈನ ಮುನಿ ಹತ್ಯೆ ಪ್ರಕರಣ: ಎರಡನೇ ಆರೋಪಿ ಹೆಸರು ಹೇಳದಿರುವುದು ಸಂಶಯಕ್ಕೆ ಕಾರಣ ಎಂದ ಅಭಯ್ ಪಾಟೀಲ್
ಚಿಕ್ಕೋಡಿಯಲ್ಲಿ ನಡೆದ ಜೈನ ಮುನಿ ಹತ್ಯೆ ಪ್ರಕರಣ ಸಂಬಂಧ ಪೊಲೀಸ್ ತನಿಖೆ ಮೇಲೆ ಸಂಶಯ ವ್ಯಕ್ತಪಡಿಸಿದ ಬಿಜೆಪಿ ಶಾಸಕ ಅಭಯ್ ಪಾಟೀಲ್, ಪೊಲೀಸರು ಟ್ರಸ್ಟಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ ಎಂದು ತಿಳಿಸಿದರು.
ಬೆಂಗಳೂರು: ಜೈನ ಮುನಿ ಕಾಮಕುಮಾರನಂದಿ ಮಹರಾಜರ ಹತ್ಯೆ ಪ್ರಕರಣ (Kamakumara Nandi Maharaj) ಸಂಬಂಧ ಪೊಲೀಸ್ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ ಎಂದು ಟ್ರಸ್ಟ್ ಸದಸ್ಯರು ಆರೋಪ ಮಾಡಿದ್ದಾರೆ. ಓರ್ವ ಆರೋಪಿ ಹೆಸರು ಮಾತ್ರ ಪೊಲೀಸರು ಬಹಿರಂಗವಾಗಿ ಹೇಳಿದ್ದಾರೆ. ಆದರೆ ಮತ್ತೋರ್ವನ ಹೆಸರನ್ನು ಬಹಿರಂಗವಾಗಿ ಹೇಳಿಲ್ಲ. ಇದು ಸಂಶಯಕ್ಕೆ ಕಾರಣವಾಗಿದೆ ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ್ ಪಾಟೀಲ್ (Abhay Patil) ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಪ್ರಕರಣದ ಎರಡನೇ ಆರೋಪಿ ಹಸನ್ ಹೆಸರು ಏಕೆ ಹೇಳುತ್ತಿಲ್ಲ ಎಂದು ಪ್ರಶ್ನಿಸಿದರು.
ಮುನಿಗಳು ಆರ್ಥಿಕ ವ್ಯವಹಾರದಲ್ಲಿ ತೊಡಗಿಕೊಂಡಿದ್ದರು ಎಂದು ಪೊಲೀಸರು ಹೇಳುತ್ತಿರುವುದು ಯಾರ ಒತ್ತಡದಿಂದ ಎಂದು ಹೇಳಬೇಕು. ದಿಗಂಬರ ಮುನಿಗಳು ಆರ್ಥಿಕ ವ್ಯವಹಾರದಲ್ಲಿ ತೊಡಗಿರಲಿಲ್ಲ. ನೀರು ಕುಡಿದು ಜೀವನ ಮಾಡುವ ಮುನಿಗಳು ಆರ್ಥಿಕ ವ್ಯವಹಾರದಲ್ಲಿ ಹೇಗೆ ತೊಡಗಿಸಿಕೊಳ್ಳುತ್ತಾರೆ? ಇಲಾಖೆ ಉಪಯೋಗಿಸಿಕೊಂಡು ತಪ್ಪು ಮಾಹಿತಿ ಕೊಡಬೇಡಿ. ಪೊಲೀಸ್ ಇಲಾಖೆ ತನಿಖೆಯಿಂದ ನನಗೆ ನಂಬಿಕೆ ಇಲ್ಲ ಎಂದರು.
ಜೈನ ಮುನಿಗಳು ಎಲ್ಲವನ್ನೂ ತ್ಯಾಗ ಮಾಡಿರುತ್ತಾರೆ. ಮುನಿಗಳಿಗೆ 41 ಎಕರೆ ಪೂರ್ವಾಶ್ರಮದ ಜಮೀನಿತ್ತು. ಅವರಿಗೆ ಹಣದ ಅವಶ್ಯಕತೆ ಏನಿದೆ? ಸರ್ಕಾರದ ಕಡೆಯಿಂದ ಸರಿಯಾದ ತನಿಖೆ ಆಗುವ ನಂಬಿಕೆ ನಮಗಿಲ್ಲ. ಯಾಕೆ ಹತ್ಯೆ ಮಾಡಿದವರ ಹೆಸರನ್ನು ಸರ್ಕಾರ ಮುಚ್ಚಿಡುತ್ತಿದೆ. ತನಿಖೆಗೂ ಮೊದಲೇ ಯಾಕೆ ಹಣಕಾಸು ವ್ಯವಹಾರದ ಬಗ್ಗೆ ಮಾತನಾಡುತ್ತಾರೆ ಎಂದು ಪ್ರಶ್ನಿಸಿ ಪ್ರಕರಣದ ತನಿಖೆಯನ್ನು ಸರ್ಕಾರ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.
ವಿಧಾನಸಭೆಯಲ್ಲೂ ಹತ್ಯೆ ಪ್ರಕರಣ ಪ್ರಸ್ತಾಪಿಸಿದ ಅಭಯ್ ಪಾಟೀಲ್
ವಿಧಾನಸಭೆ ಶೂನ್ಯವೇಳೆಯಲ್ಲಿ ಹತ್ಯೆ ಪ್ರಕರಣದ ಪ್ರಸ್ತಾಪ ಮಾಡಿದ ಅಭಯ್ ಪಾಟೀಲ್, ಸಿಬಿಐ ತನಿಖೆಗೆ ಆಗ್ರಹಿಸಿದರು. ಕೊಲೆ ಹಲವು ಸಂಶಯಗಳಿಗೆ ಕಾರಣವಾಗಿದೆ. ತನಿಖೆ ಪೂರ್ಣ ಆಗದೇ ಮಾಹಿತಿ ಸೋರಿಕೆ ಆಗಿದೆ. ಮೊದಲ ಆರೋಪಿ ಹೆಸರು ಮಾತ್ರ ಹೇಳುತ್ತಿದ್ದಾರೆ. ಎರಡನೇ ಆರೋಪಿ ಹೆಸರು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ ಎಂದಿದ್ದಾರೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:51 pm, Mon, 10 July 23