ಬೆಳಗಾವಿ: ಪತ್ನಿ ನೆನಪಿಗಾಗಿ ಮೂರ್ತಿ ಸ್ಥಾಪನೆ; ಹೆಂಡತಿ ಪುತ್ಥಳಿಗೆ ಪೂಜೆ ಸಲ್ಲಿಸಿ ಸ್ಮರಿಸುತ್ತಿರುವ ಪತಿ

TV9kannada Web Team

TV9kannada Web Team | Edited By: preethi shettigar

Updated on: Nov 08, 2021 | 7:34 AM

ಬೆಳಗಾವಿ ನಗರದ ಶಿವಬಸವ ನಗರದಲ್ಲಿ ಪತಿ ತನ್ನ ಪತ್ನಿಯ ಮೂರ್ತಿಯನ್ನು ಸ್ಥಾಪಿಸಿದ್ದಾರೆ. ಮೈನುಬಾಯಿ ಚೌಗಲೆ ಎಂಬ ಮಹಿಳೆ ಮೇ 11ರಂದು ಅನಾರೋಗ್ಯದಿಂದ ಮೃತಪಟ್ಟಿದ್ದರು. ಇವರ ಸವಿನೆನಪಿಗೆ ಇದೀಗ ಪತಿಯೇ ಮೈನುಬಾಯಿಯ ಪುತ್ಥಳಿಯನ್ನು ಪ್ಲಾಸ್ಟರ್ ಆಪ್ ಪ್ಯಾರಿಸ್​ನಿಂದ ತಯಾರಿಸಿ ಮನೆಯಲ್ಲಿ ಸ್ಥಾಪಿಸಿದ್ದಾರೆ.

ಬೆಳಗಾವಿ: ಪತ್ನಿ ನೆನಪಿಗಾಗಿ ಮೂರ್ತಿ ಸ್ಥಾಪನೆ; ಹೆಂಡತಿ ಪುತ್ಥಳಿಗೆ ಪೂಜೆ ಸಲ್ಲಿಸಿ ಸ್ಮರಿಸುತ್ತಿರುವ ಪತಿ
ಮೈನುಬಾಯಿ ಚೌಗಲೆ ಮೂರ್ತಿ ಸ್ಥಾಪನೆ

ಬೆಳಗಾವಿ: ಪ್ರೀತಿಗಾಗಿ, ಪ್ರೀತಿಸಿದವರ ನೆನಪಿಗಾಗಿ ತಾಜಮಲ್ ಕಟ್ಟಿಸಿದ್ದನ್ನು ಕೇಳಿದ್ದೇವೆ. ಇದೇ ರೀತಿ ಹೆಂಡತಿ ಸವಿನೆನಪಿಗಾಗಿ ಗಂಡಂದಿರೂ ಧಾನ-ಧರ್ಮ ಮಾಡಿದ್ದನ್ನು ಹಲವು ಕಡೆ ಓದಿದ್ದೇವೆ. ಆದರೆ ಇಲ್ಲೊಬ್ಬ ಪತಿ ತನ್ನ ಪತ್ನಿ ಸಾವನ್ನಪ್ಪಿದ್ದನ್ನು ಮರೆಯಲು ಸಾಧ್ಯವಾಗದೆ ಹೆಂಡತಿಯ ಮೂರ್ತಿಯನ್ನೇ ಸ್ಥಾಪಿಸಿದ್ದಾರೆ. ಅಷ್ಟಕ್ಕೂ ಎನಿದು ಹೆಂಡತಿಯ ಪ್ರೀತಿಯ ಸಂಕೇತ, ಅದ್ಯಾವ ಕಾರಣಕ್ಕೆ ಹೆಂಡತಿಯ ಮೂರ್ತಿಯನ್ನು ಸ್ಥಾಪಿಸಿದ್ದಾರೆ? ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಬೆಳಗಾವಿ ನಗರದ ಶಿವಬಸವ ನಗರದಲ್ಲಿ ಪತಿ ತನ್ನ ಪತ್ನಿಯ ಮೂರ್ತಿಯನ್ನು ಸ್ಥಾಪಿಸಿದ್ದಾರೆ. ಮೈನುಬಾಯಿ ಚೌಗಲೆ ಎಂಬ ಮಹಿಳೆ ಮೇ 11ರಂದು ಅನಾರೋಗ್ಯದಿಂದ ಮೃತಪಟ್ಟಿದ್ದರು. ಇವರ ಸವಿನೆನಪಿಗೆ ಇದೀಗ ಪತಿಯೇ ಮೈನುಬಾಯಿಯ ಪುತ್ಥಳಿಯನ್ನು ಪ್ಲಾಸ್ಟರ್ ಆಪ್ ಪ್ಯಾರಿಸ್​ನಿಂದ ತಯಾರಿಸಿ ಮನೆಯಲ್ಲಿ ಸ್ಥಾಪಿಸಿದ್ದಾರೆ.

ಶಿವಾ ಚೌಗಲೆ ಮತ್ತು ಮೈನುಬಾಯಿ ಮೂವತ್ತು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು, ಹನ್ನೆರಡು ವರ್ಷದ ಬಳಿಕ ಈ ದಂಪತಿಗೆ ಮಗಳು ಜನಿಸುತ್ತಾಳೆ. ಇನ್ನೂ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಒಂದು ಬಾರಿಗೆ ಮೈನುಬಾಯಿ ಸದಸ್ಯೆ ಕೂಡ ಆಗಿದ್ದರು. ಇತ್ತ ಹೆಂಡತಿಯ ಮಾತನ್ನು ಚಾಚು ತಪ್ಪದೆ ಪಾಲಿಸುತ್ತಾ ಜೀವನ ಕಂಡುಕೊಂಡಿದ್ದ ಶಿವಾ ಚೌಗಲೆ ಕೂಡ ಒಂದು ಬಾರಿ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದರು. ಇದಾದ ಬಳಿಕ ಇಬ್ಬರು ಸಮಾಜ ಸೇವೆ ಮಾಡುತ್ತಾ ಒಬ್ಬರಿಗೊಬ್ಬರು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಾ ಜೀವನ ನಡೆಸುತ್ತಿದ್ದರು. ಆದರೆ ಮಹಾಮಾರಿ ಕೊರೊನಾ ಶಿವಾ ಚೌಗಲೆ ಅವರ ಹೆಂಡತಿ ಮೈನುಬಾಯಿ ಅನಾರೋಗ್ಯಕ್ಕಿಡಾಗುವಂತೆ ಮಾಡುತ್ತದೆ.

ಇದಾದ ಬಳಿಕ ಆಕೆ ಗುಣಮುಖ ಆಗುವುದೇ ಇಲ್ಲ ಹೀಗೆ ಮೇ.11ರಂದು ಮೈನುಬಾಯಿ ಕೊನೆಯುಸಿರೆಳೆಯುತ್ತಾಳೆ. ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಹೆಂಡತಿಯನ್ನು ಮರೆಯಲು ಆಗದೆ ಇದ್ದಾಗ ಹೊಳೆದಿದ್ದೇ ಮನೆಯಲ್ಲಿ ಆಕೆಯ ಮೂರ್ತಿ ಪ್ರತಿಷ್ಠಾಪಿಸುವ ಯೋಚನೆ. ಅದರಂತೆ ಇದೀಗ ಹೆಂಡತಿ ಮೈನುಬಾಯಿ ಮೂರ್ತಿಯನ್ನು ಸ್ಥಾಪಿಸಿ ತನ್ನೊಂದಿಗೆ ಪತ್ನಿ ಇದ್ದಾಳೆ ಎನ್ನುವಂತೆ ಮತ್ತೆ ಜೀವನ ಶುರು ಮಾಡಿದ್ದಾರೆ ಶಿವಾ ಚೌಗಲೆ.

ಇನ್ನೂ ಮೂರ್ತಿ ಪ್ರತಿಷ್ಠಾಪನೆಗೂ ಮುನ್ನವೇ ಶಿವಾ ಚೌಗಲೆ ಜೋತಿಷಿಗಳ ಮೊರೆ ಹೋಗಿದ್ದು, ಈ ವೇಳೆ ಪ್ಲಾಸ್ಟರ್ ಆಪ್ ಪ್ಯಾರೀಸ್​ನಿಂದ ಮೂರ್ತಿ ಪ್ರತಿಷ್ಠಾಪನೆ ಮಾಡಬಹುದು ಎಂದು ಜೋತಿಷಿಗಳು ಸಲಹೆ ನೀಡಿದ್ದಾರೆ. ದೀಪಾವಳಿ ಸಂದರ್ಭದಲ್ಲೇ ಮೂರ್ತಿ ಸ್ಥಾಪನೆ ಮಾಡಿ ಎಂದು ಕೂಡ ಅವರು ಹೇಳಿರುತ್ತಾರೆ. ಅವರೊಂದಿಗೆ ಚರ್ಚಿಸಿದ ಬಳಿಕ ಮೈನುಬಾಯಿ ಪ್ರತಿರೂಪದ ಮೂರ್ತಿಗೆ ಆರ್ಡರ್ ಕೊಟ್ಟು 45ದಿನಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್ ಮಟಿರಿಯಲ್​ನಿಂದ ಮೂರ್ತಿ ಸಿದ್ಧ ಮಾಡಿ ತಂದಿದ್ದಾರೆ.

ದೀಪಾವಳಿ ದಿನದಂದು ಅದ್ದೂರಿ ಮೆರವಣಿಗೆ ಮಾಡಿ ಕುಟುಂಬಸ್ಥರನ್ನು ಕರೆಸಿ ಊಟ ಹಾಕಿ ಮೂರ್ತಿಯನ್ನು ಸ್ಥಾಪಿಸಿದ್ದಾರೆ. ಹೆಂಡತಿ ಮೂರ್ತಿಯಲ್ಲಿ ಮೈನುಬಾಯಿ ಧರಿಸುತ್ತಿದ್ದ ಚಿನ್ನದ ಒಡೆವೆಗಳಾದ ಪಾಟ್ಲಿ, ಚಿನ್ನದ ಸರ, ಬಳೆ, ಕಿವಿವೊಲೆ, ಮೂಗಿನ ನತ್ತು ಸೇರಿದಂತೆ ಉಪಯೋಗಿಸುತ್ತಿದ್ದ ವಸ್ತುಗಳನ್ನು ಹಾಕಲಾಗಿದೆ. ಮೈನುಬಾಯಿ ಉಪಯೋಗಿಸುತ್ತಿದ್ದ ವಸ್ತುಗಳನ್ನು ಮೂರ್ತಿ ಪಕ್ಕದಲ್ಲೇ ಒಂದು ವಾರ್ ರೂಮ್ ಮಾಡಿ ಅಲ್ಲಿ ಇಡಲು ಯೋಜನೆ ಮಾಡಿದ್ದಾರೆ. ಸದ್ಯ ಹೆಂಡತಿ ಮೂರ್ತಿಗೆ ನಿತ್ಯವೂ ಪೂಜೆ ಮಾಡುತ್ತಾ ಆರಾಧಿಸುತ್ತಾ ಶಿವಾ ಚೌಗಲೆ ಕಾಲ ಕಳೆಯುತ್ತಿದ್ದಾರೆ ಎಂದು ಶಿವಾ ಚೌಗಲೆ ಸಂಬಂಧಿ ನಾಗವ್ವಾ ತಿಳಿಸಿದ್ದಾರೆ.

ಹೆಂಡತಿ ಮೃತಪಟ್ಟಳು ಅಂದರೆ ಬೇರೊಂದು ಮದುವೆಯಾಗಿ ಆಕೆಯನ್ನು ಮರೆತು ಜೀವನ ನಡೆಸುವ ಅದೆಷ್ಟೋ ಗಂಡಂದಿರ ನಡುವೆ, ಈ ಶಿವಾ ಚೌಗಲೆ ವಿಭಿನ್ನವಾಗಿದ್ದು, ಹೆಂಡತಿ ಮೂರ್ತಿ ಸ್ಥಾಪಿಸುವುದರ ಜತೆಗೆ ಅದಕ್ಕೆ ಪೂಜೆ ಮಾಡುತ್ತಾ ಹೆಂಡತಿಯನ್ನು ಆರಾಧಿಸುತ್ತಿರುವುದು ನಿಜಕ್ಕೂ ವಿಶೇಷ ಎನಿಸುತ್ತದೆ.

ವರದಿ: ಸಹದೇವ ಮಾನೆ

ಇದನ್ನೂ ಓದಿ: ಕೇದಾರನಾಥದ​ ಶಂಕರಾಚಾರ್ಯರ ಮೂರ್ತಿ ನೋಡಬೇಕು; ಪ್ರಧಾನಿ ಮೋದಿಗೆ ಹೆಚ್​ಡಿ ದೇವೇಗೌಡರಿಂದ ಪತ್ರ

ಶಿವಮೂರ್ತಿ ಮುರುಘಾಶರಣರಿಗೆ ಬೆಳ್ಳಿಯಲ್ಲಿ ತಯಾರಿಸಿದ ಅವರ ಪುತ್ಥಳಿಯನ್ನು ಉಡುಗೊರೆಯಾಗಿ ನೀಡಿ ಗೌರವಿಸಿದ ಶಿಷ್ಯವೃಂದ ಮತ್ತು ಭಕ್ತರು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada