IT raid in Belagavi: ದೀಪಾವಳಿ ಲಕ್ಷ್ಮೀ ಪೂಜೆ ಮುಗಿಯುತ್ತಿದ್ದಂತೆ ಚಿನ್ನಾಭರಣ ಅಂಗಡಿಗಳ ಮೇಲೆ ಆದಾಯ ತೆರಿಗೆ ದಾಳಿ
ಬೆಳಗಾವಿಯ ಖಡೇಬಜಾರ್‌ನಲ್ಲಿರುವ ಪ್ರತಿಷ್ಠಿತ ಪೋತದಾರ್ ಜ್ಯುವೆಲ್ಲರ್ಸ್ ಅಂಗಡಿ ಮೇಲೆ ದಾಳಿ ನಡೆದಿದೆ. ಮಾಲೀಕ ಅನಿಲ್ ಪೋತದಾರ್ ನಿವಾಸದ ಮೇಲೂ ಐಟಿ ದಾಳಿ ನಡೆದಿದೆ.
ಬೆಳಗಾವಿ: ದೀಪಾವಳಿ ಲಕ್ಷ್ಮೀ ಪೂಜೆ ಮುಗಿಯುತ್ತಿದ್ದಂತೆ ಬೆಳಗಾವಿ ಜಿಲ್ಲೆಯಲ್ಲಿ ಚಿನ್ನಾಭರಣ ಅಂಗಡಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು IT ದಾಳಿ ನಡೆಸಿದ್ದಾರೆ. ಬೆಳಗಾವಿಯ ಖಡೇಬಜಾರ್‌ನಲ್ಲಿರುವ ಪ್ರತಿಷ್ಠಿತ ಪೋತದಾರ್ ಜ್ಯುವೆಲ್ಲರ್ಸ್ ಅಂಗಡಿ ಮೇಲೆ ದಾಳಿ ನಡೆದಿದೆ. ಮಾಲೀಕ ಅನಿಲ್ ಪೋತದಾರ್ ನಿವಾಸದ ಮೇಲೂ ಐಟಿ ದಾಳಿ ನಡೆದಿದೆ. ಬೆಳಗಾವಿಯ ಜಾಧವ್ ನಗರದಲ್ಲಿನ ಅನಿಲ್ ಮನೆಯಲ್ಲಿ ಶೋಧ ನಡೆದಿದೆ. ಪೊಲೀಸ್ ಭದ್ರತೆಯಲ್ಲಿ ಅಧಿಕಾರಿಗಳಿಂದ ದಾಖಲೆ ಪರಿಶೀಲನೆ ಕಾರ್ಯ ಮುಂದುವರಿದಿದೆ.
ಅನಿಲ್ ಪೋತದಾರ ಸಹೋದರರಾದ ಸಂಜೀವ್ ಮತ್ತು ರಾಜೀವ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಟೀಳಕವಾಡಿಯಲ್ಲಿರುವ ಎರಡು ನಿವಾಸಗಳಲ್ಲಿ ದಾಖಲೆಗಳ ಪರಿಶೀಲನೆ ನಡೆದಿದೆ. ಜಾಧವ್ ನಗರದಲ್ಲಿರುವ ಇನ್ನೋರ್ವ ಸಹೋದರನ ಮಗ ನಿಶಿಲ್ ಪೋತದಾರ ಮನೆ ಮೇಲೆಯೂ ದಾಳಿ ನಡೆದಿದೆ. ನಾಲ್ಕು ನಿವಾಸ ಮತ್ತು ಒಂದು ಜ್ಯುವಲೆರಿ ಶಾಪ್ ನಲ್ಲಿ ಐಟಿ ತಲಾಶ್ ನಡೆದಿದೆ. ಚಿನ್ನಾಭರಣ ಖರೀದಿ ಮತ್ತು ಆಸ್ತಿ ಖರೀದಿ ಪತ್ರಗಳು ಸೇರಿದಂತೆ ಕೆಲ ಮಹತ್ವದ ದಾಖಲೆಗಳು ವಶಕ್ಕೆ ಪಡೆದು, ಪರಿಶೀಲನೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ಡಿ.ಕೆ. ಶಿವಕುಮಾರ್ ಆಪ್ತ ಗುತ್ತಿಗೆದಾರ ಯು.ಬಿ. ಶೆಟ್ಟಿ ಮನೆ ಮೇಲೆ ಐಟಿ ದಾಳಿ ನಡೆದಿತ್ತು: ಇತ್ತೀಚೆಗೆ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರ ಆಪ್ತನ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಐಟಿ ದಾಳಿ ನಡೆಸಿದ್ದರು. ಗುತ್ತಿಗೆದಾರ ಯು.ಬಿ. ಶೆಟ್ಟಿ ಮನೆಯ ಮೇಲೆ ಐಟಿ ದಾಳಿ ನಡೆದಿತ್ತು. ಧಾರವಾಡದ ದಾಸನಕೊಪ್ಪ ಸರ್ಕಲ್‌ನಲ್ಲಿರುವ ಗುತ್ತಿಗೆದಾರ ಶೆಟ್ಟಿ ಮನೆ ಮೇಲೆ ದಾಳಿ ನಡೆದಿತ್ತು. ಗೋವಾದಿಂದ ಬಂದಿರುವ ಐವರು ಐಟಿ ಅಧಿಕಾರಿಗಳಿಂದ ಪರಿಶೀಲನೆ ನಡೆಸಿದ್ದರು.
ಗುತ್ತಿಗೆದಾರ ಶೆಟ್ಟಿ 80 ನೇ ಇಸ್ವಿಯಿಂದಲೂ ಡಿಕೆ ಶಿವಕುಮಾರ್ಗೆ ಆಪ್ತರು: ಗುತ್ತಿಗೆದಾರ ಯು.ಬಿ. ಶೆಟ್ಟಿ ಮನೆ ಮೇಲೆ ಐಟಿ ದಾಳಿ ಹಿನ್ನೆಲೆ ಕಾಂಗ್ರೆಸ್ ಮುಖಂಡ ರಾಬರ್ಟ್ ದದ್ದಾಪುರಿ ಹೇಳಿಕೆ ನೀಡಿದ್ದು ಮಾಧ್ಯಮದಲ್ಲಿ ಐಟಿ ದಾಳಿ ಸುದ್ದಿ ನೋಡಿ ಬಂದಿದ್ದೇನೆ. ನಮಗೆ ಒಳಗೆ ಹೋಗಲು ಬಿಡಲಿಲ್ಲ. ಬಳಿಕ ಶೆಟ್ಟಿ ಅವರೇ ಫೋನ್ ಮಾಡಿದರು. ಇಬ್ಬರು ಸಾಕ್ಷಿ ಬೇಕು ಅಂತಾ ಕೇಳಿದರು. ಇಬ್ಬರು ಸಾಕ್ಷಿದಾರರನ್ನು ಕೊಟ್ಟಿದ್ದೇವೆ. ಇತ್ತೀಚಿಗೆ ಅವರು ಶಿಕ್ಷಣ ಕ್ಷೇತ್ರಕ್ಕೆ ಬಂದಿದ್ದಾರೆ. ಇತ್ತೀಚಿಗೆ ಗುತ್ತಿಗೆ ಕಾಮಗಾರಿ ಬಿಟ್ಟಿದ್ದಾರೆ. 80 ನೇ ಇಸ್ವಿಯಿಂದಲೂ ಡಿಕೆ ಶಿವಕುಮಾರ್ ಅವರೊಂದಿಗೆ ಒಡನಾಟ ಹೊಂದಿದ್ದಾರೆ. ಉಡುಪಿ, ಮಂಗಳೂರಿನಲ್ಲಿ ಚುನಾವಣೆಗೆ ಶೆಟ್ಟಿ ಯತ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದಾಳಿಯಾಗಿರಬಹುದು ಎಂದು ತಿಳಿಸಿದ್ದಾರೆ.ರಾಜ್ಯದ ಪ್ರತಿಷ್ಠಿತ ಗುತ್ತಿಗೆದಾರರಾಗಿರುವ ಯು.ಬಿ.ಶೆಟ್ಟಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಉಪ್ಪುಂದ ಗ್ರಾಮದವರು.
TV9 Kannada Headlines @12PM (08-11-2021)
(belagavi it raid on jewellery shops and houses)
Published On - 12:42 pm, Mon, 8 November 21