Belagavi News: ಗೃಹಲಕ್ಷ್ಮೀ ಅರ್ಜಿ ನೋಂದಣಿಗೆ ಹಣ ವಸೂಲಿ ಆರೋಪ; ಗ್ರಾಮ ಒನ್ ಕೇಂದ್ರದ ಲಾಗ್‌ಇನ್ ಐಡಿ ರದ್ದು
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲೊಂದಾದ ಗೃಹಲಕ್ಷ್ಮೀ ಯೋಜನೆಗೆ ಈಗಾಗಲೇ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಅದರಂತೆ ಅಕ್ರಮವಾಗಿ ಅರ್ಜಿ ನೋಂದಣಿಗೆ ಫಲಾನುಭವಿಗಳಿಂದ ಹಣ ವಸೂಲಿ ಮಾಡುತ್ತಿದ್ದ ಕೇಂದ್ರವನ್ನ ಸೀಜ್ ಮಾಡಲಾಗಿದೆ.
ಬೆಳಗಾವಿ, ಜು.30: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲೊಂದಾದ ಗೃಹಲಕ್ಷ್ಮೀ ಯೋಜನೆ(Gruha lakshmi scheme)ಗೆ ಈಗಾಗಲೇ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಅದರಂತೆ ಅರ್ಜಿ ಸಲ್ಲಿಸಲು ಫಲಾನುಭವಿಗಳಿಂದ ಯಾವುದೇ ಹಣ ಸ್ವೀಕರಿಸುವಂತಿಲ್ಲ ಎಂದು ಸರ್ಕಾರ ತಾಕೀತು ಮಾಡಿದೆ. ಆದರೂ ಕೂಡ ಬೆಳಗಾವಿ (Belagavi) ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದ ಗ್ರಾಮ ಒನ್ ಕೇಂದ್ರದಲ್ಲಿ ಫಲಾನುಭವಿಗಳ ಅರ್ಜಿ ನೋಂದಣಿಗೆ ಹಣ ವಸೂಲಿ ಆರೋಪ ಕೇಳಿಬಂದಿದೆ. ಈ ಹಿನ್ನಲೆ ಚಿಂಚಲಿ ಗ್ರಾಮ ಒನ್ ಕೇಂದ್ರದ ಲಾಗ್‌ಇನ್ ಐಡಿಯನ್ನು ರದ್ದು ಮಾಡಲಾಗಿದ್ದು, ಜೊತೆಗೆ ಕಂಪ್ಯೂಟರ್ ಆಪರೇಟರ್ ಅಜೀತ್ ಇದ್ಲಿ ವಿರುದ್ಧ ಐಪಿಸಿ ಸೆಕ್ಷನ್ 1860(U/s 406, 420)ರಡಿ ಕ್ರಿಮಿನಲ್ ಕೇಸ್ ಕೂಡ ದಾಖಲಾಗಿದೆ.
ಗೃಹಲಕ್ಷ್ಮೀ ಫಲಾನುಭವಿ ಅರ್ಜಿ ನೋಂದಣಿಗೆ 100 ರೂ. ಹಣ ಪಡೆದ ಆರೋಪ
ಇನ್ನು ಇತ ಗೃಹಲಕ್ಷ್ಮೀಗೆ ಅರ್ಜಿ ಹಾಕಲು ಬಂದಿದ್ದ ಸುಶೀಲಾ ಕಾಂಬಳೆ ಎಂಬುವರ ಬಳಿ 100 ರೂ. ಹಣ ಪಡೆದು ಅರ್ಜಿ ಹಾಕಿದ್ದನೆಂದು ಆರೋಪಿಸಲಾಗಿತ್ತು. ಜೊತೆಗೆ ಗ್ರಾಮ ಒನ್ ಕೇಂದ್ರದ ಸಿಬ್ಬಂದಿ ವಿರುದ್ಧ ದೂರು ಕೂಡ ನೀಡಲಾಗಿತ್ತು. ಈ ಹಿನ್ನೆಲೆ ರೆವಿನ್ಯೂ ಇನ್ಸ್‌ಪೆಕ್ಟರ್ ಹಾಗೂ ಇತರ ಸಿಬ್ಬಂದಿಗಳು ಆಗಮಿಸಿದ್ದರು. ಬಳಿಕ ರಾಯಬಾಗ ಸಿಡಿಪಿಒ ಸಂತೋಷ ಕಾಂಬಳೆ ಅವರು ಕುಡಚಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ದೂರಿನನ್ವಯ ಎಫ್ಐಆರ್ ದಾಖಲು ಮಾಡಲಾಗಿದೆ.
ಇದನ್ನೂ ಓದಿ:ಅಕ್ರಮವಾಗಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಆರೋಪ: 3 ಸೈಬರ್ ಸೆಂಟರ್ ಸೀಜ್
ಇನ್ನು ಇಂತಹ ಘಟನೆಗಳು ರಾಜ್ಯದ ಹಲವಾರು ಕಡೆಗಳಲ್ಲಿ ನಡೆದಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಹೌದು ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರದಲ್ಲಿಯೂ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಹಣ ವಸೂಲಿ ಮಾಡಲಾಗುತ್ತಿದೆಯೆಂದು ಟಿವಿ9 ವರದಿ ಮಾಡಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ದೇವನಹಳ್ಳಿ ತಹಶೀಲ್ದಾರ್ ಬಾಲಕೃಷ್ಣ ಎಂಬುವವರು ಕೂಡಲೇ ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳ ಮೇಲೆ ರೇಡ್ ಮಾಡಿ ಪರಿಶೀಲನೆ ಮಾಡಿದ್ದರು.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ