ಅಕ್ರಮವಾಗಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆ ಆರೋಪ: 3 ಸೈಬರ್ ಸೆಂಟರ್ ಸೀಜ್
ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಹಣ ನೀಡದಂತೆ ಮತ್ತು ಹಣ ಪಡೆಯದಂತೆ ಸ್ಪಷ್ಟ ನಿರ್ದೇಶನ ಇದೆ. ಆದರೂ ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಅಕ್ರಮವಾಗಿ ಅರ್ಜಿ ಸಲ್ಲಿಸುವುದಲ್ಲದೇ, ಹಣ ಕೂಡ ಪಡೆಯಲಾಗುತ್ತಿದೆ. ಅಂತಹ ಸೈಬರ್ ಸೆಂಟರ್ಳನ್ನು ಸೀಜ್ ಮಾಡಲಾಗುತ್ತಿದೆ.
ಚಿತ್ರದುರ್ಗ, ಜುಲೈ 29: ಅಕ್ರಮವಾಗಿ ಗೃಹಲಕ್ಷ್ಮೀ ಯೋಜನೆಗೆ (Gruha Lakshmi Scheme) ಅರ್ಜಿ ಸಲ್ಲಿಕೆ ಆರೋಪ ಕೇಳಿಬಂದ ಹಿನ್ನೆಲೆ ಹೊಸದುರ್ಗದ 3 ಸೈಬರ್ ಸೆಂಟರ್ಗಳ ಮೇಲೆ ತಹಶೀಲ್ದಾರ್ ಪುಟ್ಟರಾಜಗೌಡ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಗ್ರಾಮ ಒನ್, ಕರ್ನಾಟಕ ಒನ್ ಲಾಗಿನ್ ಐಡಿ ದುರ್ಬಳಕೆ ಆರೋಪ ಹಿನ್ನೆಲೆ ಜನಸ್ನೇಹಿ, ಸ್ಫೂರ್ತಿ, ವೈಷ್ಣವಿ ಸೈಬರ್ ಕೇಂದ್ರಗಳನ್ನು ಸೀಜ್ ಮಾಡಲಾಗಿದೆ. ಲಾಗಿನ್ ಐಡಿ ನೀಡಿದವರ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಹಣ ವಸೂಲಿ: ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳ ಮೇಲೆ ರೇಡ್
ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರದಲ್ಲಿಯೂ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಹಣ ವಸೂಲಿ ಮಾಡಲಾಗುತ್ತಿದೆ ಎಂದು ಟಿವಿ9 ವರದಿಯಿಂದ ಎಚ್ಚೆತ್ತ ದೇವನಹಳ್ಳಿ ತಹಶೀಲ್ದಾರ್ ಬಾಲಕೃಷ್ಣ ಅವರು ಇಂದು ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳ ಮೇಲೆ ರೇಡ್ ಮಾಡಿ ಪರಿಶೀಲನೆ ಮಾಡಿದ್ದಾರೆ.
ಇದನ್ನೂ ಓದಿ: Tiger Census 2022: ಹುಲಿ ಗಣತಿ 2022ರ ವರದಿ ಬಿಡುಗಡೆ: ಕರ್ನಾಟಕಕ್ಕೆ ಮತ್ತೆ 2ನೇ ಸ್ಥಾನ
₹100, ₹300 ಹಣ ಕೇಳುವ ವಿಡಿಯೋ ಸಮೇತ ಟಿವಿ9 ವರದಿ ಪ್ರಸಾರ ಮಾಡಲಾಗಿತ್ತು. ಗ್ರಾಮ ಒನ್ ಕೇಂದ್ರದ ಸಿಬ್ಬಂದಿಗೆ ಹಣ ಪಡೆಯದಂತೆ ತಿಳಿಸಲಾಗಿದೆ. ಅದೇ ರೀತಿಯಾಗಿ ಹಣ ಕೇಳಿದರೆ ದೂರು ನೀಡುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ. ಕೇಂದ್ರಗಳಲ್ಲಿ ಕಡ್ಡಾಯವಾಗಿ ಉಚಿತ ನೋಂದಣಿ ಬೋರ್ಡ್ ಹಾಕುವಂತೆ ತಹಶೀಲ್ದಾರ್ ಸೂಚನೆ ನೀಡಿದ್ದಾರೆ.
ಐಡಿ ಬ್ಲಾಕ್: ‘ಗ್ರಾಮ ಒನ್ ಕೇಂದ್ರ’ ಸೀಜ್
ಬೆಳಗಾವಿ: ಅರ್ಜಿ ಸಲ್ಲಿಕೆಗೆ ಹಣ ವಸೂಲಿ ಪ್ರಶ್ನಿಸಿದ್ದಕ್ಕೆ ಆವಾಜ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತ ಬೆಳಗಾವಿ ಜಿಲ್ಲಾಡಳಿತದ ನಿರ್ದೇಶನದಂತೆ ಐಡಿ ಬ್ಲಾಕ್ ಮಾಡಿ ‘ಗ್ರಾಮ ಒನ್ ಕೇಂದ್ರ’ ಸೀಜ್ ಮಾಡಲಾಗಿದೆ. ಈ ಕುರಿತಾಗಿ ಅಥಣಿ ತಹಶೀಲ್ದಾರ್ ಬಿ.ಎಸ್.ಖಡಕಬಾವಿ ಪ್ರತಿಕ್ರಿಯೆ ನೀಡಿದ್ದು, ನಿನ್ನೆ ಸಂಜೆ ಅರ್ಜಿ ಸಲ್ಲಿಕೆಗೆ ಹಣ ಪಡೆದಿದ್ದಾರೆ ಎಂಬ ಮಾಹಿತಿ ಬಂತು. ಅಥಣಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗುವುದು.
ಇದನ್ನೂ ಓದಿ: Gruha Lakshmi Scheme: ಗೃಹ ಲಕ್ಷ್ಮಿ ಯೋಜನೆ ನೋಂದಣಿಗೆ ಲಂಚ ಪಡೆಯುತ್ತಿರುವ ಬೆಂಗಳೂರು ಒನ್ ಸಿಬ್ಬಂದಿ
ಗೃಹಲಕ್ಷ್ಮೀ ಅರ್ಜಿ ಸಲ್ಲಿಕೆಗೆ ಹಣ ಪಡೆಯದಂತೆ ನಿರ್ದೇಶನ ಇದೆ. ಕೆಡಿಪಿ ಸಭೆಯಲ್ಲೂ ಸಚಿವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ದೂರು ಬಂದಲ್ಲಿ ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ. ಅಥಣಿ ತಾಲೂಕಿನಲ್ಲಿ ಯಾರೇ ಹಣ ಪಡೆದರೂ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.