Gruha Lakshmi Scheme: ಗೃಹ ಲಕ್ಷ್ಮಿ ಯೋಜನೆ ನೋಂದಣಿಗೆ ಲಂಚ ಪಡೆಯುತ್ತಿರುವ ಬೆಂಗಳೂರು ಒನ್ ಸಿಬ್ಬಂದಿ
ಬೆಂಗಳೂರಿನ ಜೆಪಿ ನಗರದ ಅರಕೆರೆಯಲ್ಲಿ ಪ್ರತಿ ಅರ್ಜಿಗೆ 150-200 ರೂ. ವಸೂಲಿ ಮಾಡುತ್ತಿರುವುದು ‘ಟಿವಿ9 ರಿಯಾಲಿಟಿ ಚೆಕ್’ನಲ್ಲಿ ತಿಳಿದುಬಂದಿದೆ.
ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹ ಲಕ್ಷ್ಮಿ ಯೋಜನೆಗೆ (Gruha Lakshmi Scheme) ಅರ್ಜಿ ಸಲ್ಲಿಕೆ ಈಗಾಗಲೇ ಆರಂಭವಾಗಿದೆ. ಅರ್ಜಿ ಸಲ್ಲಿಕೆಗೆ ಹಣ ಪಡೆಯಬಾರದು, ಉಚಿತವಾಗಿ ಮಾಡಿಕೊಡಬೇಕು ಎಂದು ಸರ್ಕಾರ ಕಟ್ಟುನಿಟ್ಟಾಗಿ ಸೂಚನೆ ನೀಡಿದೆ. ಆದಾಗ್ಯೂ, ಉತ್ತರ ಕರ್ನಾಟಕದ ಹಲವೆಡೆ ಸೈಬರ್ ಸೆಂಟರ್ಗಳು ನೋಂದಣಿ ಪ್ರಕ್ರಿಯೆ ಮಾಡಿಕೊಡಲು ಹಣ ತೆಗೆದುಕೊಂಡಿದ್ದ ಬಗ್ಗೆ ಇತ್ತೀಚೆಗೆ ವರದಿಯಾಗಿತ್ತು. ಇದೀಗ ಕೆಲವು ‘ಬೆಂಗಳೂರು ಒನ್ (Bangalore One)’ ಕೇಂದ್ರಗಳಲ್ಲಿಯೂ ಲಂಚ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರಿನ ಜೆಪಿ ನಗರದ ಅರಕೆರೆಯಲ್ಲಿ ಪ್ರತಿ ಅರ್ಜಿಗೆ 150-200 ರೂ. ವಸೂಲಿ ಮಾಡುತ್ತಿರುವುದು ‘ಟಿವಿ9 ರಿಯಾಲಿಟಿ ಚೆಕ್’ನಲ್ಲಿ ತಿಳಿದುಬಂದಿದೆ. ಸರ್ಕಾರದ ಆದೇಶಕ್ಕೂ ಕಿಮ್ಮತ್ತು ಕೊಡದ ‘ಬೆಂಗಳೂರು ಒನ್’ ಸಿಬ್ಬಂದಿ ಅರ್ಜಿ ಸಲ್ಲಿಕೆಗೆ ಲಂಚ ಪಡೆಯುತ್ತಿದ್ದಾರೆ. ಸ್ವೀಕೃತಿ ಪತ್ರಕ್ಕೆ ಕೇವಲ 20 ರೂಪಾಯಿ ಕೊಡಬೇಕು. ಆದರೆ, ಆದರೆ ಅರ್ಜಿ ಸಲ್ಲಿಕೆಗೆ 200 ರೂ. ವಸೂಲಿ ಮಾಡುತ್ತಿದ್ದಾರೆ.
ಯೋಜನೆಗೆ ಹೆಸರು ನೋಂದಾಯಿಸುವುದಕ್ಕಾಗಿ ಹಣ ಪಡೆದ ಮೂರು ಖಾಸಗಿ ಸೈಬರ್ ಸೆಂಟರ್ಗಳ ವಿರುದ್ಧ ಇತ್ತೀಚೆಗೆ ರಾಯಚೂರಿನಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಹಣ ಪಡೆಯುತ್ತಿರುವ ಕುರಿತು ವ್ಯಾಪಕ ದೂರುಗಳು ಕೇಳಿಬಂದ ಬೆನ್ನಲ್ಲೇ, ಆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಖುದ್ದು ಎಚ್ಚರಿಕೆ ನೀಡಿದ್ದರು. ಅರ್ಜಿ ಸಲ್ಲಿಸಲು ಹಣ ಪಡೆದರೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಅವರು ಹೇಳಿದ್ದರು. ಆದಾಗ್ಯೂ, ನೋಂದಣಿಗೆ ಹಣ ಪಡೆಯುವಿಕೆ ಅನೇಕ ಕಡೆಗಳಲ್ಲಿ ಮುಂದುವರಿದಿದೆ.
ಇದನ್ನೂ ಓದಿ: ಗೃಹ ಲಕ್ಷ್ಮಿ ಯೋಜನೆ ಅರ್ಜಿಗೆ ಹಣ ಪಡೆದರೆ ಕ್ರಿಮಿನಲ್ ಕೇಸ್; ಸಿಎಂ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ
ಹಣ ತೆಗೆದುಕೊಂಡಿರುವುದು ಕಂಡುಬಂದರೆ ಕಠಿಣ ಕ್ರಮ; ಹೆಬ್ಬಾಳ್ಕರ್
ಗೃಹ ಲಕ್ಷ್ಮಿ ನೋಂದಣಿಗೆ ಯಾವುದೇ ಕಾರಣಕ್ಕೂ ಹಣ ತೆಗೆದುಕೊಳ್ಳುವ ಹಾಗಿಲ್ಲ. ಅದು ಸೈಬರ್ ಸೆಂಟರ್ಗಳಾಗಲಿ, ಬೆಂಗಳೂರು ಒನ್ ಸೆಂಟರ್ಗಳಾಗಲಿ ಎಲ್ಲರಿಗೂ ಅನ್ವಯ. ಹಣ ತೆಗೆದುಕೊಂಡಿರುವುದು ಕಂಡುಬಂದ್ರೆ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ‘ಟಿವಿ9’ಗೆ ಪ್ರತಿಕ್ರಿಯಿಸಿದ್ದಾರೆ.
ಸದ್ಯ ಬೆಂಗಳೂರಿನಲ್ಲಿ ‘ಬೆಂಗಳೂರು ಒನ್’ ಸೆಂಟರ್ಗಳಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಖಾಸಗಿ ಸೈಬರ್ ಸೆಂಟರ್ಗಳಲ್ಲಿ ಅರ್ಜಿ ಸಲ್ಲಿಸಲು ಲಿಂಕ್ ನೀಡಲಾಗಿಲ್ಲ. ಅಕ್ರಮವಾಗಿ ಲಿಂಕ್ ಪಡೆದು ಅರ್ಜಿ ಸಲ್ಲಿಸುತ್ತಿರುವುದು ಕಂಡು ಬಂದರೂ ಕ್ರಮ ತೆಗೆದುಕೊಳ್ಳುತ್ತೇವೆ. ವೆಬ್ಸೈಟ್ ಐಡಿಯನ್ನು ರದ್ದುಗೊಳಿಸುತ್ತೇವೆ. ಶನಿವಾರವೇ ಅರ್ಕೆರೆಯ ಬೆಂಗಳೂರ್ ಒನ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ.
ಗೃಹ ಲಕ್ಷ್ಮಿ ಯೋಜನೆಗೆ ಎಲ್ಲೆಲ್ಲಿ ಅರ್ಜಿ ಸಲ್ಲಿಸಬಹುದು?
ಗೃಹ ಲಕ್ಷ್ಮಿ ಯೋಜನೆಗೆ ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ ಹಾಗೂ ಕರ್ನಾಟಕ ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ಬೆಂಗಳೂರಿನಲ್ಲಿ ‘ಬೆಂಗಳೂರು ಒನ್’ ಕೇಂದ್ರಗಳಲ್ಲಿಯೂ ಅರ್ಜಿ ಸಲ್ಲಿಸಲು ಅವಕಾಶವಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:19 pm, Fri, 28 July 23