Belagavi Assembly Session Updates:
ಬೆಳಗಾವಿ: ಇಂದಿನಿಂದ ಬೆಳಗಾವಿಯಲ್ಲಿ ಚಳಿಗಾಲದ ವಿಧಾನಮಂಡಲ ಅಧಿವೇಶನ ಶುರುವಾಗಿದೆ(Belagavi Winter Session). ಸುವರ್ಣಸೌಧದಲ್ಲಿ(Suvarna Soudha) 10 ದಿನಗಳ ಕಾಲ ನಡೆಯಲಿರುವ ಅಧಿವೇಶನದಲ್ಲಿ ಬಿಜೆಪಿ ಸರ್ಕಾರದ(BJP Government) ವಿರುದ್ಧ ಮುಗಿಬೀಳಲು ಪ್ರತಿಪಕ್ಷಗಳು ಸಜ್ಜಾಗಿವೆ. ವಿಪಕ್ಷಗಳಿಗೆ ತಿರುಗೇಟು ನೀಡಲು ಬಿಜೆಪಿ ನಾಯಕರಿಂದಲೂ ಸಿದ್ಧತೆ ನಡೆಸಿವೆ. ಮಹಾರಾಷ್ಟ್ರ-ಕರ್ನಾಟಕ ರಾಜ್ಯಗಳ ನಡುವಿನ ಗಡಿ ವಿವಾದ, ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ, ಬೆಂಗಳೂರಿನಲ್ಲಿ ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ವಿಚಾರ, ರಾಜ್ಯ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ, ಬಿಜೆಪಿಗೆ ರೌಡಿಶೀಟರ್ಗಳ ಸೇರ್ಪಡೆ, ಪಿಎಸ್ಐ ನೇಮಕಾತಿ ಹಗರಣ, ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ವಿಚಾರ, ಕಬ್ಬು ಬೆಳೆಗಾರರ ಸಮಸ್ಯೆ, ಉ.ಕರ್ನಾಟಕ ಭಾಗದ ಸಮಸ್ಯೆ ಸೇರಿ ಹಲವು ವಿಷಯಗಳ ಬಗ್ಗೆ ಚರ್ಚೆ ಆಗಲಿದೆ. ಮತ್ತೊಂದೆಡೆ ಅಧಿವೇಶನಕ್ಕೆ ವಿರುದ್ಧವಾಗಿ MES ಮಹಾಮೇಳಾವ್ ಆಯೋಜನೆ ಮಾಡಿದ್ದು ಮಹಾಮೇಳಾವ್‌ಗೆ ಶಿವಸೇನೆ ಸಂಸದ ಧೈರ್ಯಶೀಲ್ ಮಾನೆ ಬೆಳಗಾವಿಗೆ ಬರಲಿದ್ದಾರೆ. ಆದ್ರೆ ಅವರಿಗೆ ಪ್ರವೇಶಕ್ಕೆ ನಿರ್ಬಂಧಿಸಿ ಬೆಳಗಾವಿ ಡಿಸಿ ನಿತೇಶ್ ಪಾಟೀಲ್ ಆದೇಶ ಹೊರಡಿಸಿದ್ದಾರೆ. ಜೊತೆಗೆ ಎರಡು ರೈತ ಸಂಘಟನೆಗಳು ಪ್ರತ್ಯೇಕ ಹೋರಾಟಕ್ಕೆ ಸಿದ್ಧತೆ ಮಾಡಿವೆ. ಹೀಗಾಗಿ ಬೆಳಗಾವಿಯಲ್ಲಿಂದು ಭಾರಿ ಗದ್ದಲಗಳಾಗುವ ಸಾಧ್ಯತೆ ಇದೆ.
ನಾನು ಹುಟ್ಟಿದ್ದು ಹಿಂದೂವಾಗಿ, ಸಾಯೋದು ಹಿಂದೂವಾಗಿ. ನಮ್ಮ ಭಾವ, ನಮ್ಮ ಭಕ್ತಿ ನಾವು ಆಚರಣೆ ಎಲ್ಲಾವು ಹಿಂದೂನೇ. ನಮ್ಮ ಪ್ರಚಾರ ನಮ್ಮ ಸಂವಿಧಾನ ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ರು.
ಬೆಳಗಾವಿಯ ಸುವರ್ಣ ಸೌಧದ ಬಳಿಯ ಬಸ್ತವಾಡ ಗ್ರಾಮದ ಬಳಿ ನಡೆದ ಪ್ರತಿಭಟನಾ ಸ್ಥಳಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿದ್ದು ಈ ವೇಳೆ ಸಾರಿಗೆ ನೌಕರನ ಬಳಿ ಮದ್ಯದ ಬಾಟಲಿ ಹಾಗೂ ಪೆಟ್ರೋಲ್ ಸಿಕ್ಕಿದೆ. ಪ್ರತಿಭಟನಾ ಸ್ಥಳದಲ್ಲಿ ಬ್ಯಾಗ್ ಪರಿಶೀಲನೆ ವೇಳೆ ಮದ್ಯದ ಬಾಟಲಿ ಹಾಗೂ ಎರಡು ಬಾಟಲ್ ಪೆಟ್ರೋಲ್ ಪತ್ತೆಯಾಗಿದೆ. ಇದನ್ನ ನೋಡಿ ಸಾರಿಗೆ ನೌಕರನನ್ನು ಪೊಲೀಸರು
ವಶಕ್ಕೆ ಪಡೆದಿದ್ದಾರೆ.
ಸದನದಲ್ಲಿ ಸಾವರ್ಕರ್ ಫೋಟೋ ಅಳವಡಿಸಿದ್ದಕ್ಕೆ ಪ್ರತಿಭಟನೆ ಮಾಡುತ್ತಿರುವ ಕಾಂಗ್ರೆಸ್ ವಿರುದ್ಧ ಆರೋಗ್ಯ ಸಚಿವ ಸುಧಾಕರ್ ಟಾಂಗ್ ಕೊಟ್ಟಿದ್ದಾರೆ. ಸಾವರ್ಕರ್ ಬಗ್ಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ. ಕಾಂಗ್ರೆಸ್ನವರು ಎಲ್ಲಾ ವಿಚಾರದಲ್ಲೂ ರಾಜಕೀಯ ಮಾಡುತ್ತಾರೆ. ರಾಜಕಾರಣದ ದೃಷ್ಟಿಯಿಂದಲೇ ಎಲ್ಲವನ್ನೂ ನೋಡುತ್ತಾರೆ. ಕಾಂಗ್ರೆಸ್ನವರಿಗೆ ಚರ್ಚೆ ಮಾಡಲು ಬೇರೆ ವಿಷಯಗಳಿಲ್ಲ. ಅದಕ್ಕಾಗಿ ಸಾವರ್ಕರ್ ವಿಚಾರದಲ್ಲಿ ಗದ್ದಲ ಎಬ್ಬಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನದ ಮೊದಲ ದಿನ ವೀಕ್ಷಕರ ಗ್ಯಾಲರಿಯಲ್ಲಿ ಬೆರಳೆಣಿಕೆಯಷ್ಟು ಜನರು ಮಾತ್ರ ಹಾಜರಾಗಿದ್ದಾರೆ. ವಿಧಾನಸಭೆಯಲ್ಲಿ ಕೇವಲ 10 ಜನರು ಹಾಜರಾಗಿದ್ದು ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಂತಾನ ಸೂಚನಾ ಕಲಾಪದಲ್ಲಿ ವೀಕ್ಷಕರ ಗ್ಯಾಲರಿ ಖಾಲಿ ಖಾಲಿಯಾಗಿದೆ. ನಾಳೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವ ನಿರೀಕ್ಷೆ ಇದೆ.
ನೆಹರು ಕುಟುಂಬ ಮಾತ್ರನಾ ಸ್ವಾತಂತ್ರ್ಯ ಹೋರಾಟ ಮಾಡಿದ್ದು? ವಿ.ಡಿ.ಸಾವರ್ಕರ್ ಕೂಡ ದೇಶ ಕಂಡ ಅಪ್ರತಿಮ ಹೋರಾಟಗಾರ. ಆಜಾದ್, ಭಗತ್ ಸಿಂಗ್ಗೆ ದೇಶಭಕ್ತಿ ತುಂಬಿದ್ದು ವಿ.ಡಿ.ಸಾವರ್ಕರ್ ಎಂದು ಬೆಳಗಾವಿಯಲ್ಲಿ ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್ ಹೇಳಿಕೆ ನೀಡಿದ್ದಾರೆ. ಸಾವರ್ಕರ್ ಭಾವಚಿತ್ರಕ್ಕೆ ಸಾರ್ವಜನಿಕರು ಬೇಡ ಅಂತಿದ್ದೀರಾ? ಎಲ್ಲಾ ಸಿದ್ಧಾಂತದವರು ವಿ.ಡಿ.ಸಾವರ್ಕರ್ರನ್ನು ಒಪ್ಪಿಕೊಂಡಿದ್ದಾರೆ. ಸಾವರ್ಕರ್, ಅಂಬೇಡ್ಕರ್ ಫೋಟೋ ಹಾಕಲು ಚರ್ಚಿಸಬೇಕಾ? ಈ ಭಾಗದ ಸಮಸ್ಯೆ ಚರ್ಚೆ ಮಾಡುವುದಕ್ಕೆ ಸರ್ಕಾರ ಸಿದ್ಧವಿದೆ ಎಂದರು.
ನಾಡದ್ರೋಹಿ ಘೋಷಣೆ ಕೂಗಿದ ಎಂಇಎಸ್ ಪುಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂವತ್ತಕ್ಕೂ ಅಧಿಕ ಪುಂಡರನ್ನ ವಶಕ್ಕೆ ಪಡೆದು ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ಎಂಇಎಸ್ ಪುಂಡರು ಮಹಾಮೇಳಾವ್ ಮಾಡ್ತೇವಿ ಅವಕಾಶ ನೀಡುವಂತೆ ಕಿರಿಕ್ ಮಾಡಿದ್ರು, ಈ ವೇಳೆ ಅನುಮತಿ ಇಲ್ಲಾ ವಾಪಾಸ್ ತೆರಳುವಂತೆ ಪೊಲೀಸರು ಸೂಚಿಸಿದ್ದಾರೆ. ಆಗ ಪೊಲೀಸರ ಮಾತಿಗೂ ಬಗ್ಗದೇ ನಾಡದ್ರೋಹಿ ಘೋಷಣೆ ಕೂಗಿದ್ದು ಕೆಲವರನ್ನು ವಶಕ್ಕೆ ಪಡೆಯಲಾಗಿದೆ.
ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನಕ್ಕೆ ಸ್ವಾಗತ ಕೋರಿ ಹಾಕಲಾಗಿದ್ದ ಬ್ಯಾನರ್ಗಳು ಗಾಳಿಗೆ ಮಗುಚಿ ಬಿದ್ದಿವೆ. ಸುವರ್ಣಸೌಧ ಮುಂಭಾಗದ ಹೆದ್ದಾರಿಯಲ್ಲಿ ಅಳವಡಿಸಿದ್ದ ಬ್ಯಾನರ್ಗಳು ಮುರಿದುಬಿದ್ದಿದ್ದು ರಸ್ತೆಯ ಬದಿಗೆ ಹಾಕಿದ್ದ ಬ್ಯಾರಿಕೇಡ್ಗಳು ಸಹ ರಸ್ತೆಗೆ ಅಡ್ಡಲಾಗಿ ಬಿದ್ದಿವೆ. ಸದ್ಯ ಬ್ಯಾರಿಕೇಡ್ ಹಾಗೂ ಬ್ಯಾನರ್ಗಳನ್ನ ಪೊಲೀಸರು ತೆರವುಗೊಳಿಸಿದ್ದಾರೆ.
ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಹಿನ್ನೆಲೆ ಮೊದಲ ದಿನವೇ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ರೈತರು ಮುಂದಾಗಿದ್ದಾರೆ. ವಿವಿಧ ಭಾಗಗಳಿಂದ ಬಸ್ತವಾಡ ಕ್ಯಾಂಪ್ನತ್ತ ಬರುತ್ತಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಭಾರಿ ಪ್ರತಿಭಟನೆಗೆ ಸಿದ್ಧತೆ ನಡೆದಿದೆ. ಕೃಷಿ ಕಾಯ್ದೆ ವಾಪಸ್, ಕಬ್ಬಿಗೆ ಬೆಂಬಲ ಬೆಲೆಗೆ ಆಗ್ರಹಿಸಿ ಪ್ರತಿಭಟನೆ ನಡೆಯಲಿದೆ.
ಬೆಳಗಾವಿಯಲ್ಲಿ ಎಂಇಎಸ್ ಮಹಾಮೇಳಾವ್‌ಗೆ ಬ್ರೇಕ್ ಹಿನ್ನೆಲೆ ಗಡಿಯೊಳಗೆ ನುಗ್ಗಲು ಮಹಾರಾಷ್ಟ್ರ ವಿಕಾಸ ಅಘಾಡಿ ಕಾರ್ಯಕರ್ತರ ಯತ್ನಿಸಿದ್ದಾರೆ. ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್ಪೋಸ್ಟ್ ಮೂಲಕ ಬೆಳಗಾವಿ ಗಡಿಯೊಳಗೆ ನುಗ್ಗಲು 500ಕ್ಕೂ ಅಧಿಕ ಕಾರ್ಯಕರ್ತರು ಯತ್ನಿಸಿದ್ದಾರೆ. ಶಿವಸೇನೆ, NCP, ಕಾಂಗ್ರೆಸ್ ಪಕ್ಷದ ಧ್ವಜ ಹಿಡಿದು ಕಾರ್ಯಕರ್ತರು ಮುಂದೆ ಬಂದಿದ್ದಾರೆ. ಈ ವೇಳೆ ಪೊಲೀಸರು ತಡೆಯುತ್ತಿದ್ದಂತೆ ಸೇತುವೆ ಮೇಲೆ ನಿಂತು ಪುಂಡರು ಭಾಷಣ ಮಾಡ್ತಿದ್ದಾರೆ. ಬೆಳಗಾವಿ, ನಿಪ್ಪಾಣಿ, ಬೀದರ್, ಬಾಲ್ಕಿ ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಬೇಕು ಅಂತಾ ನಾಡದ್ರೋಹಿ ಘೋಷಣೆ ಕೂಗಿದ್ದಾರೆ.
ಸುವರ್ಣಸೌಧದಲ್ಲಿ ಸಾವರ್ಕರ್ ಫೋಟೋಗೆ ನಮ್ಮ ಆಕ್ಷೇಪ ಇಲ್ಲ. ಸಾವರ್ಕರ್ ಫೋಟೋ ಜೊತೆಗೆ ಇತರೆ ಮಹನೀಯರ ಫೋಟೋ ಹಾಕಿ. ಇದು ಪ್ರತಿಭಟನೆ ಅಲ್ಲ, ಇದು ನಮ್ಮ ಬೇಡಿಕೆ. ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಾಏಕಿ ಫೋಟೋ ಅಳವಡಿಕೆ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಏಕಾಏಕಿ ಭಾವಚಿತ್ರ ಅಳವಡಿಕೆ ಮಾಡಿದ್ದಾರೆ. ಭಾವಾಚಿತ್ರ ಅನಾವರಣ ಕಾರ್ಯಕ್ರಮಕ್ಕೆ ನಮಗೆ ಆಹ್ವಾನ ಇರಲಿಲ್ಲ. ಮಾಧ್ಯಮದ ಮೂಲಕ ತಿಳಿದುಕೊಂಡೆ. ಯಾರದೇ ಫೋಟೋ ಇಡಲು ವಿರೋಧ ಇಲ್ಲ. ಆದರೆ ಚರ್ಚೆ ಆಗದೆ ಇಟ್ಟಿರುವುದಕ್ಕೆ ನಮ್ಮ ವಿರೋಧ. ನಾವು ಅನೇಕ ಇಶ್ಯೂಗಳನ್ನು ಅಸೆಂಬ್ಲಿಯಲ್ಲಿ ಪ್ರಸ್ತಾಪ ಮಾಡುತ್ತೇವೆ. ಕಾನೂನು ಸುವ್ಯವಸ್ಥೆ, ಭ್ರಷ್ಟಾಚಾರ ಇದನ್ನು ಡೈವರ್ಡ್ ಮಾಡಲು ಈ ರೀತಿ ಫೋಟೋ ವಿವಾದ ಮುನ್ನಲೆಗೆ ತಂದಿದ್ದಾರೆ ಎಂದರು.
ವಿಧಾನಸಭೆ ಕಲಾಪ ಆರಂಭವಾಗಿದ್ದು ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಗುತ್ತಿದೆ. ಆನಂದ ಮಾಮನಿ, ಮುಲಾಯಂ ಸಿಂಗ್ ಯಾದವ್, ಕುಂಬಳೆ ಸುಂದರ್ ರಾವ್, ಶ್ರೀಶೈಲಪ್ಪ ಬಿದರೂರು, ಜಬ್ಬಾರ್ ಖಾನ್ ಹೊನ್ನಳ್ಳಿ ಸೇರಿ ಹಲವು ಗಣ್ಯರಿಗೆ ಸ್ಪೀಕರ್ ಕಾಗೇರಿ ಸಂತಾಪ ಸೂಚಿಸಿದ್ರು.
ಸಾವರ್ಕರ್ ಊಟ, ಸ್ನಾನ ಇಲ್ಲದೇ ಶಿಕ್ಷೆ ಅನುಭವಿಸಿದ್ದೋರು. ಅವರು ಹಿಂದೂ ಮಹಾಸಭಾಗೆ ಸೇರಿದ್ರು. ಇದೊಂದೇ ಕಾರಣಕ್ಕೆ ಕಾಂಗ್ರೆಸ್ ಹೀಗೆ ಮಾಡ್ತಿದೆ. ಕೇಸರಿ ಅಂದ್ರೆ ಅವರಿಗೆ ಆಗಲ್ಲ. ಯಾವ ಸ್ವಾತಂತ್ರ್ಯ ಹೋರಾಟಗಾರರಿಗೂ, ಸಾವರ್ಕರ್ ಕಡಿಮೆಯಿಲ್ಲ. ಅದು ಸ್ಪೀಕರ್ ಪರಮಾಧಿಕಾರ ನಾವು ಸ್ವಾಗತಿಸುತ್ತೇನೆ ಎಂದು ಸಚಿವ ಆರ್ ಅಶೋಕ್ ಪ್ರತಿಕ್ರಿಯಿಸಿದ್ದಾರೆ.
ಸಾವರ್ಕರ್ ಫೋಟೋ ಅನಾವರಣ ವಿಚಾರಕ್ಕೆ ಸಂಬಂಧಿಸಿ ಜೆಡಿಎಸ್ ಉಪನಾಯಕ ಬಂಡೇಪ್ಪ ಕಾಶಂಪೂರ್ ಮಾತನಾಡಿದ್ದು, ಇದು ಬಿಜೆಪಿಯ ಹಿಡನ್ ಅಜೆಂಡಾ. ಇವರಿಗೆ ಅಭಿವೃದ್ಧಿ ಬೇಕಾಗಿಲ್ಲ. ಇಷ್ಟು ದಿನ ಸುಮ್ಮನಿದ್ದು, ಈಗ ತರುವ ಅವಶ್ಯಕತೆ ಏನಿತ್ತು. ಸಮಸ್ಯೆಗಳ ಬಗ್ಗೆ ಚರ್ಚೆ ಬೇಕಾಗಿಲ್ಲ. ಗಲಾಟೆ ನಡುವೆ ಬಿಲ್ ಪಾಸ್ ಮಾಡಿಕೊಳ್ಳಲು ಹೊರಟಿದ್ದಾರೆ. ನಾವು ಜನಪರವಾಗಿದ್ದೇವೆ, ಅದಕ್ಕೆ ಹೆಚ್ಡಿಕೆ ಪಂಚರತ್ನ ಮಾಡಿದ್ದಾರೆ. ಅವರು ಪಂಚರತ್ನದಲ್ಲಿ ಭಾಗಿಯಾಗುತ್ತಾರೆ. ನಾಳೆ ಜೆಡಿಎಲ್ಪಿ ಸಭೆ ಮಾಡ್ತೇವೆ. ಸಭೆ ಮಾಡಿ, ಯಾವ ವಿಷಯಗಳ ಪ್ರಸ್ತಾಪ ಮಾಡಬೇಕು ಎಂದು ಚರ್ಚೆ ಮಾಡ್ತೇವೆ ಎಂದರು.
ಸುವರ್ಣಸೌಧದಲ್ಲಿ ಸಾವರ್ಕರ್ ಫೋಟೋ ಅಳವಡಿಕೆ ವಿಚಾರಕ್ಕೆ ಕಾಂಗ್ರೆಸ್ ನಾಯಕ ಕೆ.ಹೆಚ್.ಮುನಿಯಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಅವರು, ದೇಶದ ಸ್ವಾತಂತ್ರ್ಯ ಹೋರಾಟಗಾರರ ಫೋಟೋಗಳನ್ನು ಅಳವಡಿಸಲಿ. ವೀರ ಸಾವರ್ಕರ್ ಯಾವ ರೀತಿಯಲ್ಲಿ ಜೈಲುವಾಸ ಮಾಡಿದ್ರು. ಬ್ರಿಟಿಷರ ಜೊತೆ ಯಾವ ರೀತಿ ಸಂಪರ್ಕದಲ್ಲಿದ್ದರು ಎಂದು ಗೊತ್ತಿದೆ. ಸಾವರ್ಕರ್ ಬಗ್ಗೆ ವಿಶೇಷವಾಗಿ ನಾನು ಹೇಳಬೇಕಿಲ್ಲ. ಅದರ ಬಗ್ಗೆ ಮತ್ತೆ ಹೇಳಿ ನಾನು ಗೊಂದಲ ಸೃಷ್ಟಿ ಮಾಡುವುದಿಲ್ಲ ಎಂದರು.
ವೀರ ಸಾವರ್ಕರ್ ವಿಚಾರವನ್ನು ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಟಿಪ್ಪು ಮತಾಂಧ, ಟಿಪ್ಪು ಫೋಟೋ ಹಾಕಿದ್ರೆ ನಾವು ಒಪ್ಪುವುದಿಲ್ಲ. ಗಾಂಧೀಜಿ, ಅಂಬೇಡ್ಕರ್, ಪಟೇಲರಂತೆ ಸಾವರ್ಕರ್ ದೇಶ ಭಕ್ತ. ಇಂದಿರಾಗಾಂಧಿ ಕೂಡ ಸಾವರ್ಕರ್ ಸ್ಟ್ಯಾಂಟ್ ಬಿಡುಗಡೆ ಮಾಡಿದ್ರು. ಆ ವಿಚಾರ ಗೊತ್ತಿದ್ರೂ ಕಾಂಗ್ರೆಸ್ ನಾಯಕರು ಪ್ರತಿಭಟನೆ ಮಾಡ್ತಿದ್ದಾರೆ ಎಂದು ಬೆಳಗಾವಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ರು.
ಸಾವರ್ಕರ್ ಭಾವಚಿತ್ರ ಅಳವಡಿಕೆ ಕಾರ್ಯಕ್ರಮದಲ್ಲಿ ನಾವು ಭಾಗವಹಿಸುವುದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿಕೆ ನೀಡಿದ್ದಾರೆ. ಅಸೆಂಬ್ಲಿ ಹಾಲ್ ನಲ್ಲಿ ಮಹಾನ್ ವ್ಯಕ್ತಿಗಳ ಫೋಟೋಗಳನ್ನು ಹಾಕಬೇಕಿತ್ತು. ಸುವರ್ಣಸೌಧದ ಸಭಾಂಗಣದಲ್ಲಿ ಮಹಾತ್ಮಾ ಗಾಂಧಿ, ವಲ್ಲಭಭಾಯ್ ಪಟೇಲ್, ಬಸವಣ್ಣ, ಮಹರ್ಷಿ ವಾಲ್ಮಿಕಿ, ಡಾ. ಅಂಬೆಡ್ಕರ್, ನೆಹರು, ಅಬು ಜಗಜೀವನ್ ರಾಂ, ಕುವೆಂಪು ಫೋಟೋ ಹಾಕಬೇಕಿತ್ತು. ಅದು ಬಿಟ್ಟು ಏಕಾಏಕಿ ಸಾವರ್ಕರ್ ಫೋಟೋ ಹಾಕುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ ಎಂದರು.
ವಿಧಾನಸಭೆಯಲ್ಲಿ ಸಾವರ್ಕರ್, ಬಸವೇಶ್ವರ, ಗಾಂಧೀಜಿ ಭಾವಚಿತ್ರ ಅನಾವರಣಗೊಳಿಸಲಾಗಿದೆ. ಸ್ಪೀಕರ್, ಸಿಎಂ ಬೊಮ್ಮಾಯಿ ಮತ್ತು ಕಾನೂನು ಸಚಿವರಿಂದ ವಿವೇಕಾನಂದ, ಸುಭಾಷ್ ಚಂದ್ರ ಬೋಸ್, ಅಂಬೇಡ್ಕರ್, ಬಸವೇಶ್ವರ, ಗಾಂಧೀಜಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಸಾವರ್ಕರ್ ಭಾವಚಿತ್ರಗಳನ್ನು ಅನಾವರಣಗೊಳಿಸಲಾಗಿದೆ.
ಸಾವರ್ಕರ್ ವಿಚಾರವನ್ನ ಮುನ್ನಲೆಗೆ ತಂದು ಚರ್ಚಿಸುವ ಬದಲು ಇನ್ನಿತರ ನಾಯಕರ ಚಿತ್ರ ಏಕಿಲ್ಲ ಎಂದು ಪ್ರಶ್ನಿಸಲು ಕಾಂಗ್ರೆಸ್ ನಿರ್ಧರಿಸಿದೆ. ರಾಜ್ಯದ ಮಹಾನ್ ಪುರುಷರನ್ನ ಮುಂದಿಟ್ಟು ಕೌಂಟರ್ ಕೊಡಲು ಕಾಂಗ್ರೆಸ್ ಮುಂದಾಗಿದೆ. ಕುವೆಂಪು, ನಾರಾಯಣಗುರು ಅಂತಹ ದಾರ್ಶನಿಕರ ಫೋಟೋ ಏಕಿಲ್ಲ ಎಂದು ಪ್ರಶ್ನಿಸಲು ಮುಂದಾಗಿದೆ. ಸಾವರ್ಕರ್ ವಿಚಾರವಾಗಿ ಚರ್ಚೆ ಮಾಡಿದರೆ ಬಿಜೆಪಿ ಹಿಂದುತ್ವ ವಿಚಾರವನ್ನ ಮುನ್ನಲೆಗೆ ತರುತ್ತೆ. ಇದು ಚುನಾವಣೆಗೂ ಮೊದಲು ಧ್ರುವಿಕರಣಕ್ಕೆ ಸಹಾಯವಾಗಲಿದೆ. ಅದರ ಬದಲಾಗಿ ಇನ್ನಿತರ ಮಹಾನ್ ನಾಯಕರ ಚಿತ್ರಗಳಿಗೆ ಬೇಡಿಕೆ ಇಟ್ಟು ಹೋರಾಟ ರೂಪಿಸಲು ನಿರ್ಧರಿಸಿದೆ. ಈ ಸಂಬಂಧ ಈಗಾಗಲೇ ಸ್ಪೀಕರ್ ಗೆ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಮುಂದೆ ಸದನದಲ್ಲೂ ಈ ವಿಚಾರ ಪ್ರಸ್ತಾಪಿಸುವ ಬಗ್ಗೆ ಕೈ ಪಡೆ ನಿರ್ಧಾರ ಮಾಡಿದೆ.
ಸುವರ್ಣಸೌಧದಲ್ಲಿ ಸಾವರ್ಕರ್ ಫೋಟೋ ಅಳವಡಿಕೆ ವಿಚಾರಕ್ಕೆ ಸಂಬಂಧಿಸಿ ಸುವರ್ಣಸೌಧ ಮೆಟ್ಟಿಲುಗಳ ಮೇಲೆ ಕುಳಿತು ಕಾಂಗ್ರೆಸ್ ನಾಯಕರು ಧರಣಿ ನಡೆಸಿದ್ದಾರೆ. ಸಮಾಜ ಸುಧಾರಣೆಗೆ ಶ್ರಮಿಸಿದ ಮಹನೀಯರ ಫೋಟೋ ಅಳವಡಿಸಬೇಕು ಎಂದು ಪ್ರತಿಭಟನೆ ವೇಳೆ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಸಾವರ್ಕರ್ ಫೋಟೋ ಯಾಕೆ ಹಾಕಿದ್ದು ಅಂತ ಪ್ರಶ್ನಿಸಬೇಡಿ. ನಾವು ಹೇಳಿದ ದಾರ್ಶನಿಕರ ಫೋಟೋ ಯಾಕೆ ಹಾಕಿಲ್ಲ ಅಂತ ಪ್ರಶ್ನಿಸಿ ಎಂದು ಕಾಂಗ್ರೆಸ್ ನಾಯಕರಿಗೆ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಬೆಳಗಾವಿಗೆ ಆಗಮಿಸಿದ ಸಿದ್ದರಾಮಯ್ಯ ಸುವರ್ಣ ಸೌಧ ಮೆಟ್ಟಿಲುಗಳ ಮೇಲೆ ಕುಳಿತು ಪ್ರತಿಭಟನೆಗೆ ಮುಂದಾಗಿದ್ದಾರೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಸುವರ್ಣ ಸೌಧ ಪಶ್ಚಿಮ ದ್ವಾರದ ಮುಂಭಾಗ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ. ಸಿದ್ದರಾಮಯ್ಯಗೆ ಕೈ ಶಾಸಕರು, ಪರಿಷತ್ ಸದಸ್ಯರು ಸಾಥ್ ನೀಡಲಿದ್ದಾರೆ. ಸಾವರ್ಕರ್ ಭಾವಚಿತ್ರ ಅನಾವರಣ ವಿರೋಧಿಸಿ ಕುವೆಂಪು, ನಾರಾಯಣಗುರು ಭಾವ ಚಿತ್ರ ಹಿಡಿದುಕೊಂಡು ಪ್ರತಿಭಟನೆ ನಡೆಸಲಿದ್ದಾರೆ. ಸಿದ್ದರಾಮಯ್ಯ ಮಹರ್ಷಿ ವಾಲ್ಮೀಕಿ ಭಾವಚಿತ್ರ ಹಿಡಿದು ಸಿದ್ದರಾಗಿದ್ದಾರೆ.
ಬೆಳಗಾವಿಯಲ್ಲಿ ಇದೇ ಮೊದಲ ಬಾರಿ ಎಂಇಎಸ್ ಮಹಾಮೇಳಾವ್ ಬ್ರೇಕ್ ಹಿನ್ನೆಲೆ ಎಂಇಎಸ್ ಮುಖಂಡರ ಮೇಲೆ ಪೊಲೀಸರು ತೀವ್ರ ನಿಗಾ ಇಟ್ಟಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಅನೇಕ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಾಲಿಕೆ ಸದಸ್ಯ ರವಿ ಸಾಂಳುಕೆ, ಮಾಜಿ ಪಾಲಿಕೆ ಸದಸ್ಯ ನೇತಾಜಿ ಜಾಧವ್ ವಶಕ್ಕೆ ಪಡೆಯಲಾಗಿದ್ದು ಶುಭಂ ಸಳಕೆ, ಮಾಜಿ ಶಾಸಕ ಮನೋಹರ ಕಿರೇಣಕರ್ ಮೇಲೆ ನಿಗಾ ಇಡಲಾಗಿದೆ.
ಬೆಳಗಾವಿ ಸುವರ್ಣಸೌಧದಲ್ಲಿ ಸಾವರ್ಕರ್ ಫೋಟೋ ಅಳವಡಿಕೆ ವಿಚಾರಕ್ಕೆ ಸಂಬಂಧಿಸಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಅಸೆಂಬ್ಲಿ ಹಾಲ್ನಲ್ಲಿ ಹಲವು ಮಹನೀಯರ ಫೋಟೋ ಅಳವಡಿಸಬೇಕಿದೆ. ಮಹರ್ಷಿ ವಾಲ್ಮೀಕಿ, ಬಸವಣ್ಣ, ಕನಕದಾಸ, ಶಿಶುನಾಳ ಶರೀಫ, ನೆಹರು. ನಾರಾಯಣಗುರು, ಡಾ.ಬಿ.ಆರ್.ಅಂಬೇಡ್ಕರ್, ವಲ್ಲಭ ಬಾಯಿ ಪಟೇಲ್, ಬಾಬು ಜಗಜೀವನ ರಾಮ್, ಕುವೆಂಪು ಭಾವಚಿತ್ರವನ್ನು ಅಳವಡಿಸಿ. ದಾರ್ಶನಿಕರು, ವಿಚಾರವಂತರು, ರಾಷ್ಟ್ರ ನಾಯಕರ ಭಾವಚಿತ್ರ ಅಳವಡಿಸಿ. ಭಾರತದ ಸಂಸ್ಕೃತಿ ಪರಂಪರೆ, ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ವಿಚಾರಧಾರೆ, ಆದರ್ಶ ಸಾರ್ವಕಾಲಿಕ ಸತ್ಯ ಮತ್ತು ಅನುಕರಣೀಯ. ಹೀಗಾಗಿ ಸುವರ್ಣಸೌಧದ ಅಸೆಂಬ್ಲಿ ಹಾಲ್ನಲ್ಲಿ ಇವರೆಲ್ಲರ ಭಾವಚಿತ್ರ ಅಳವಡಿಸಿ ಎಂದು ಸ್ಪೀಕರ್ ಕಾಗೇರಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
ವ್ಯಾಕ್ಸಿನ್ ಡಿಪೋದಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಪ್ರತಿಕ್ರಿಯಿಸಿದ್ದು, ವ್ಯಾಕ್ಸಿನ್ ಡಿಪೋ ಸುತ್ತಮುತ್ತ 144 ಸೆಕ್ಷನ್ ಜಾರಿ ಮಾಡಿದ್ದೇವೆ. ಎಂಇಎಸ್ ಮಹಾಮೇಳಾವ್‌ಗೆ ಆಯೋಜನೆ ಮಾಡಿದ್ದರು. ಆದ್ರೇ ಇದಕ್ಕೆ ನಿರ್ಬಂಧ ಹೇರಲಾಗಿದೆ. ಟಿಳಕವಾಡಿ ಪೊಲೀಸ್ ಠಾಣೆಗೆ ಮಹಾಮೇಳಾವ್ ನಡೆಸುವ ಬಗ್ಗೆ ಅರ್ಜಿ ಕೊಟ್ಟಿದ್ದರು. ಅರ್ಜಿಯನ್ನ ತಿರಸ್ಕಾರ ಮಾಡಲಾಗಿದೆ. ಯಾವುದೇ ಸಭೆ ಸಮಾರಂಭ ಮಾಡಲು ಅವಕಾಶ ಇಲ್ಲ. ಸಭೆ ಸಮಾರಂಭ ಮಾಡಿದ್ರೇ ಅವರನ್ನ ವಶಕ್ಕೆ ಪಡೆದುಕೊಳ್ಳುತ್ತೇವೆ. ವೇದಿಕೆ ನಿರ್ಮಿಸಲು ಹೇಳಿದವರ ಬಗ್ಗೆ ವಿಚಾರಣೆ ಮಾಡುತ್ತೇವೆ. ಸಭೆ ಮಾಡದ ಕಾರಣ ಸದ್ಯಕ್ಕೆ ಯಾರ ಮೇಲೆಯೂ ಕೇಸ್ ಹಾಕಲ್ಲ. ಸಭೆ ಮಾಡಲು ಅಕ್ರಮ ಕೂಟ ರಚಿಸಿದ್ರೇ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿ ಬೆಳಗಾವಿಗೆ ಆಗಮಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಉ.ಕರ್ನಾಟಕ ಸಮಸ್ಯೆ ಬಗ್ಗೆ ಚರ್ಚಿಸಲು ಬೆಳಗಾವಿಯಲ್ಲಿ ಅಧಿವೇಶನ ಮಾಡಲಾಗುತ್ತಿದೆ. ನೆಲ ಜಲ ಸೇರಿ ಎಲ್ಲಾ ವಿಚಾರಗಳ ಬಗ್ಗೆಯೂ ಚರ್ಚೆ ಮಾಡ್ತೇವೆ. ಸ್ಪೀಕರ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ ಬರೆದ ವಿಚಾರ ನನಗೆ ಗೊತ್ತಿಲ್ಲ. ಇದು ಸ್ಪೀಕರ್ಗೆ ಬಿಟ್ಟಿರುವ ವಿಚಾರ. ಸ್ಪೀಕರ್, ವಿಪಕ್ಷ ನಾಯಕರ ಜೊತೆಗೂ ಚರ್ಚೆ ಮಾಡುತ್ತೇನೆ ಎಂದರು. ಇನ್ನು ಸುವರ್ಣಸೌಧ ಗೇಟ್ ಮುಂಭಾಗದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ವಾಹನಗಳ ಪಾಸ್ ಪರಿಶೀಲನೆ ಮಾಡಿ ಒಳಗಡೆ ಬಿಡಲಾಗುತ್ತಿದೆ. ಸುವರ್ಣಸೌಧಕ್ಕೆ ಬರುವವರಿಗೆ ಐಡಿ ಕಾರ್ಡ್ ಕಡ್ಡಾಯ.
ಬೆಳಗಾವಿಯ ಟಿಳಕವಾಡಿಯಲ್ಲಿರುವ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಎಂಇಎಸ್ ಮಹಾಮೇಳಾವ್‌ಗೆ ನಿರ್ಮಿಸಿದ್ದ ವೇದಿಕೆ ತೆರವು ಮಾಡಲಾಗುತ್ತಿದೆ. ಕಾರ್ಯಕ್ರಮದ ಆಯೋಜಕರು ವೇದಿಕೆ ತೆರವು ಮಾಡುತ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ್ದ ಎಡಿಜಿಪಿ ಅಲೋಕ್ ಕುಮಾರ್ ಕೂಡಲೇ ವೇದಿಕೆಯನ್ನ ಸಂಜೆ ವರೆಗೂ ಸೀಜ್ ಮಾಡುವಂತೆ ಸೂಚಿಸಿದ್ದರು. ವೇದಿಕೆ ನಿರ್ಮಿಸಿದ್ದು ಯಾರು ಅಂತಾ ಎಂಇಎಸ್ ಕಾರ್ಯಕರ್ತರಿಗೆ ಪ್ರಶ್ನೆ ಮಾಡಿದ್ದರು. ಕೂಡಲೇ ವೇದಿಕೆ ನಿರ್ಮಿಸಿದವರ ಮಾಹಿತಿ ಪಡೆಯುವಂತೆ ಸೂಚಿಸಿ ತೆರಳಿದ್ದರು. ಇದಾದ ಬಳಿಕ ಈಗ ಕಾರ್ಯಕ್ರಮ ಆಯೋಜಕರೇ ವೇದಿಕೆ ತೆರವು ಮಾಡಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಇದು 2ನೇ ಬಾರಿಯ ಚಳಿಗಾಲದ ಅಧಿವೇಶನ. ಬರುವ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಸಿಎಂಗೆ ಭಾರೀ ಮಹತ್ವವಾಗಿರುವ ಸದನ. ಉತ್ತರ ಕರ್ನಾಟಕ ಭಾಗ ಗೆಲ್ಲಲು ಹಾಗೂ ವಿಪಕ್ಷಗಳ ಟೀಕೆಯಿಂದ ಮುಜಗರಕ್ಕೆ ಒಳಗಾಗದ ರೀತಿ ಸದನ ಯಶಸ್ವಿಗೆ ಬಿಜೆಪಿ ಪಣ ತೊಟ್ಟಿದೆ. ಸದನ ಯಶಸ್ವಿಗೊಳಿಸಿ, ಜನತೆಗೆ ಸೂಕ್ತ ಸಂದೇಶ ನೀಡಲು ಸಿಎಂ ತಂತ್ರ ಹೆಣೆದಿದ್ದು ಸಚಿವರ ಜೊತೆ ಸಭೆ ನಡೆಸಿ ಸದನದಲ್ಲಿ ತಂತ್ರ ಪ್ರತಿತಂತ್ರಗಾರಿಕೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಆದ ಭ್ರಷ್ಟಾಚಾರದ ಮೂಲಕ ತಿರುಗೇಟು ನೀಡಲು ಪ್ಲಾನ್ ನಡೆದಿದೆ. ಕಾಂಗ್ರೆಸ್ ಟೀಕೆಗಳಿಗೆ ತಕ್ಕ ಉತ್ತರ ನೀಡಲು ಸಿದ್ಧರಾಗಿರಿ ಎಂದು ಸಿಎಂ ಬೊಮ್ಮಾಯಿ ಸಂದೇಶ ರವಾನಿಸಿದ್ದಾರೆ.
ಸಾವರ್ಕರ್ ಫೋಟೋ ವಿವಾದ ವಿಚಾರಕ್ಕೆ ಸಂಬಂಧಿಸಿ ವಿರೋಧ ಪಕ್ಷದ ನಾಯಕರ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರು ಸಭೆ ಸೇರಲಿದ್ದಾರೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಇದಕ್ಕೆ ಪ್ಲಾನ್ ಮಾಡಿಕೊಳ್ಳಲಾಗುತ್ತಿದೆ. 9.30ಕ್ಕೆ ತುರ್ತು ಮೀಟಿಂಗ್ ನಡೆಸಲಿದ್ದಾರೆ. ಫೋಟೋ ಅನಾವರಣ ಸಂದರ್ಭದಲ್ಲೇ ಸುವರ್ಣ ಸೌಧದಲ್ಲಿ ಪ್ರತಿಭಟನೆ ನಡೆಸುವ ಕುರಿತು ಪ್ಲಾನ್ ಮಾಡಿಕೊಳ್ಳಲಾಗುತ್ತಿದೆ.
ಬೆಳಗಾವಿಯಲ್ಲಿ ಎಂಇಎಸ್ನಿಂದ ಮಹಾಮೇಳಾವ್ ಆಯೋಜನೆ ಹಿನ್ನೆಲೆ ಟಿಳಕವಾಡಿಯ ವ್ಯಾಕ್ಸಿನ್ ಡಿಪೋ ಅರ್ಧ ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. 144 ಸೆಕ್ಷನ್ ಜಾರಿ ಮಾಡಿ ಪೊಲೀಸ್ ಆಯುಕ್ತ ಬೋರಲಿಂಗಯ್ಯ ಆದೇಶ ಹೊರಡಿಸಿದ್ದಾರೆ. ವ್ಯಾಕ್ಸಿನ್ ಡಿಪೋ ಸುತ್ತಮುತ್ತ ಗುಂಪು ಸೇರಿ ಓಡಾಡದಂತೆ ಸೂಚಿಸಲಾಗಿದೆ. ಗುಂಪು ಸೇರಿ ಓಡಾಡಿದ್ರೆ ಕಾನೂನು ಕ್ರಮ ಕೈಗೊಳ್ಳುವುವುದಾಗಿ ಮೈಕ್ ಮೂಲಕ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ವ್ಯಾಕ್ಸಿನ್ ಡಿಪೋದಲ್ಲಿ ಎಂಇಎಸ್ ಮಹಾಮೇಳಾವ್‌ಕ್ಕೆ ಅನುಮತಿ ಇಲ್ಲಾ ಎಂದು ಟಿವಿ9ಗೆ ಡಿಸಿಪಿ ರವೀಂದ್ರ ಗಡಾದಿ ಮಾಹಿತಿ ನೀಡಿದ್ದಾರೆ. ಎಂಇಎಸ್ ಸಂಘಟನೆ ನಿಗದಿ ಪಡಿಸಿದ್ದ ಸ್ಥಳಕ್ಕೆ ಬರಲು ಯಾರಿಗೂ ಅವಕಾಶ ಇಲ್ಲಾ. ನಿಷೇಧಾಜ್ಞೆ ಜಾರಿ ಹಿನ್ನೆಲೆ ಯಾರಿಗೂ ಅನುಮತಿ ಇರುವುದಿಲ್ಲ. ರಾತ್ರೋರಾತ್ರಿ ನಿರ್ಮಿಸಿದ್ದ ವೇದಿಕೆ ಕೂಡ ತೆಗೆಯುವಂತೆ ಸೂಚನೆ ನೀಡಿದ್ದೇವೆ. ಅನುಮತಿ ಪಡೆಯದೇ ವೇದಿಕೆ ನಿರ್ಮಿಸಿದ್ದರಿಂದ ತೆಗೆಯಲು ಸೂಚಿಸಿದ್ದೇವೆ. ಮಹಾಮೇಳಾವ್ ಆಯೋಜನೆ ಮಾಡಿದ್ದ ಸ್ಥಳದಲ್ಲಿ ನಿಷೇಧಾಜ್ಞೆ ಜಾರಿ ಇದ್ದು. ಯಾರಿಗೂ ಬರಲು ಬಿಡುವುದಿಲ್ಲ, ಎಲ್ಲಿಯೂ ಗುಂಪುಗೂಡಲು ಅವಕಾಶ ಇಲ್ಲಾ ಎಂದರು.
ಈ ಬಾರಿ ಚಳಿಗಾಲದ ಅಧಿವೇಶನಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಗೈರಾಗಲಿದ್ದಾರೆ. ಪಂಚರತ್ನ ರಥಯಾತ್ರೆ ಹಿನ್ನೆಲೆ ಸದನಕ್ಕೆ ಗೈರಾಗುವ ಸಾಧ್ಯತೆ ಇದೆ. ಸದ್ಯ ಹೆಚ್ಡಿಕೆ ಹಳೇ ಮೈಸೂರು ಭಾಗದಲ್ಲಿ ಪಂಚರತ್ನ ರಥಯಾತ್ರೆ ಮಾಡ್ತಿದ್ದಾರೆ. ಹೀಗಾಗಿ ಸದನದಲ್ಲಿ ಜೆಡಿಎಸ್ ಪರ ಬಂಡೆಪ್ಪ ಕಾಶೆಂಪೂರ್ ನಿಲುವಳಿ ಮಂಡಿಸಲಿದ್ದಾರೆ. ವಿಪಕ್ಷಗಳ ನಿಲುವಳಿ ಸೂಚನೆಗೆ ಜೆಡಿಎಸ್ ಬೆಂಬಲ ಸೂಚಿಸಲಿದೆ. ಇನ್ನು ಅಧಿವೇಶನದಲ್ಲಿ ಕ್ಷೇತ್ರವಾರು ಸಮಸ್ಯೆ, ಕ್ಷೇತ್ರಾಭಿವೃದ್ಧಿ ಬಗ್ಗೆ JDS ಚರ್ಚಿಸಲಿದೆ. ಉ.ಕರ್ನಾಟಕ ಅಭಿವೃದ್ಧಿ, ಗಡಿ ವಿಚಾರ ಬಗ್ಗೆ ಜೆಡಿಎಸ್ ಪ್ರಸ್ತಾಪ ಮಾಡಲಿದೆ. ಕೃಷ್ಣ, ಮಹದಾಯಿ ಸೇರಿದಂತೆ ರಾಜ್ಯದ ನೀರಾವರಿ ವಿಚಾರದ ಬಗ್ಗೆ ಚರ್ಚಿಸಲಿದೆ.
ಬೆಳಗಾವಿಯ ಸುವರ್ಣಸೌಧದಲ್ಲಿ ವಿಧಾನಮಂಡಲ ಅಧಿವೇಶನ ಹಿನ್ನೆಲೆ ಬೆಳಗಾವಿ ನಗರದಲ್ಲಿ ಹೆಚ್ಚುವರಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಬೆಳಗಾವಿಯಲ್ಲಿ 5 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜಿಸಲಾಗಿದೆ. ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ನೇತೃತ್ವದಲ್ಲಿ ಭದ್ರತೆ ಕೈಗೊಂಡಿದ್ದು ಆರು ಎಸ್ಪಿ, 11 ಎಎಸ್ಪಿ, 40 ಡಿವೈಎಸ್ಪಿ, 106 ಸಿಪಿಐ, 275 ಪಿಎಸ್ಐ, 234 ಮಹಿಳಾ ಪೊಲೀಸ್ ಸಿಬ್ಬಂದಿ, 16 ಸಿಎಆರ್, 35 ಕೆಎಸ್ಆರ್ಪಿ, 10 ಕ್ಯೂಆರ್ಟಿ ತುಕಡಿ ನಿಯೋಜನೆ ಮಾಡಲಾಗಿದೆ. ಹಾಗೂ ಸುವರ್ಣಸೌಧದ ಸುತ್ತಮುತ್ತ 450ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಅಳವಡಿಸಲಾಗಿದೆ.
ಅಧಿವೇಶನದ ಆರಂಭದ ದಿನವೇ ಸುವರ್ಣ ಸೌಧದ ಮುಂಭಾಗದಲ್ಲಿ ನಾಗರ ಹಾವುಗಳು ಪತ್ತೆಯಾಗಿವೆ. ಸುವರ್ಣ ಸೌಧದ ಮುಖ್ಯ ದ್ವಾರದ ಬಳಿಯೇ ಒಂದೇ ಜಾಗದಲ್ಲಿ ಎರಡು ನಾಗರ ಹಾವುಗಳು ಪತ್ತೆಯಾಗಿವೆ. ಟೆಂಟ್ ನಿರ್ಮಿಸುವ ಕಬ್ಬಿಣದ ರಾಡ್‌ಗಳಲ್ಲಿ ನಾಗರ ಹಾವುಗಳು ಅಡಗಿ ಕುಳಿತಿದ್ದವು. ಅಧಿವೇಶನ ಆರಂಭದ ದಿನವೇ ಹಾವುಗಳನ್ನ ಕಂಡು ಸಿಬ್ಬಂದಿ ಶಾಕ್ ಆಗಿದ್ದಾರೆ. ಉರಗ ರಕ್ಷಕನನ್ನ ಸ್ಥಳಕ್ಕೆ ಕರೆಯಿಸಿ ಕೂಡಲೇ ಹಾವುಗಳನ್ನ ರಕ್ಷಣೆ ಮಾಡಿ ಕಾಡಿಗೆ ಶಿಫ್ಟ್ ಮಾಡಲಾಗಿದೆ.
Published On - 8:30 am, Mon, 19 December 22