ಅಧಿವೇಶನ ವಿರುದ್ಧ ಎಂಇಎಸ್ ಮಹಾಮೇಳಾವ್ ಆಯೋಜನೆ, ಮಹಾ ಸಂಸದ ಧೈರ್ಯಶೀಲ್ ಮಾನೆ ಬೆಳಗಾವಿ ಪ್ರವೇಶಕ್ಕೆ ನಿರ್ಬಂಧ
ಸುವರ್ಣಸೌಧದಲ್ಲಿ ಸೋವಾರದಿಂದ ಪ್ರಾರಂಭವಾಗುವ ಚಳಿಗಾಲದ ಅಧಿವೇಶನಕ್ಕೆ ವಿರುದ್ಧವಾಗಿ ಎಂಇಎಸ್ ಮಹಾಮೇಳಾವ್ ಆಯೋಜನೆ ಮಾಡಲು ಸಿದ್ದತೆ ಮಾಡಿಕೊಂಡಿದೆ.
ಬೆಳಗಾವಿ: ನಾಳೆ (ಡಿ.19) ರಿಂದ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ (Winter Session) ಪ್ರಾರಂಭವಾಗುವ ಹಿನ್ನೆಲೆ ಅಧಿವೇಶನಕ್ಕೆ ವಿರುದ್ಧವಾಗಿ ಎಂಇಎಸ್ (MES) ಮಹಾಮೇಳಾವ್ ಆಯೋಜನೆ ಮಾಡಲು ಸಿದ್ದತೆ ಮಾಡಿಕೊಂಡಿದೆ. ಈ ಮಹಾಮೇಳಾವ್‌ಗೆ ಮಹರಾಷ್ಟ್ರದ ಸಂಸದ ಧೈರ್ಯಶೀಲ್ ಬರುತ್ತೇನೆ ಎಂದಿದ್ದಾರೆ.
ಆದರೆ ಸಂಸದ ಧೈರ್ಯಶೀಲ್ ಮಾನೆ ಪ್ರಚೋದನಕಾರಿ ಭಾಷಣ ಮಾಡುವ ಸಾಧ್ಯತೆ ಇದೆ. ಇದರಿಂದ ಶಾಂತಿ ಸುವ್ಯವಸ್ಥೆ ಹದಗೆಡುವ ಹಿನ್ನೆಲೆ ಕಲಂ 143(3) ಅನ್ವಯ ಸಂಸದ ಧೈರ್ಯಶೀಲ್ ಬೆಳಗಾವಿ ಪ್ರವೇಶಕ್ಕೆ ನಿರ್ಬಂಧಿಸಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.
2. ಬೆಳಗಾವಿ ಅಧಿವೇಶನಕ್ಕೆ ತಟ್ಟಲಿದೆ ಪ್ರತಿಭಟನೆ ಬಿಸಿ, ಈ ಬಾರಿ ಅತೀ ಹೆಚ್ಚು ಪ್ರತಿಭಟನೆಗಳು ನೊಂದಣಿ
ಚಳಿಗಾಲದ ಅಧಿವೇಶನಕ್ಕೆ ಸಿದ್ಧತೆಗಳು ನಡೆಯುತ್ತಿದೆ. ಇದರ ಬೆನ್ನಲ್ಲೆ ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ ತಟ್ಟಲು ಕೆಲವೊಂದು ಸಂಘಟನೆಗಳು ತಯಾರಿ ನಡೆಸುತ್ತಿದ್ದು, ಪ್ರತಿಭಟನೆಗೆ ಅನುಮತಿ ಕೋರಿ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಬಾರಿ ಅತಿ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿರುವುದು ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸುವ ಸಾಧ್ಯತೆ ಇದೆ. ನಗರ ಪೊಲೀಸ್ ಆಯುಕ್ತರ ಬಳಿ ಹಲವು ಸಂಘಟನೆಗಳು ಪ್ರತಿಭಟನೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದು, ಪ್ರತಿಭಟನಾಕಾರರಿಗೆ ಈಗಾಗಲೇ ಹೋರಾಟಕ್ಕೆ ಪೊಲೀಸ್ ಇಲಾಖೆ ಜಾಗ ನಿಗದಿ ಮಾಡಿದೆ.
ಇದನ್ನೂ ಓದಿ: ಸುವರ್ಣಸೌಧದಲ್ಲಿ ಸಾವರ್ಕರ್ ಫೋಟೋ? ಪಟ್ಟು ಬಿಡದ ಬಿಜೆಪಿ: ಸರ್ಕಾರವನ್ನು ಹಣಿಯಲು ಸಿದ್ದವಾದ ಕಾಂಗ್ರೆಸ್
ಹೆಚ್ಚಿನ ಅರ್ಜಿ ಸಲ್ಲಿಕೆಯಾಗಿರುವುದರಿಂದ ಪೊಲೀಸರು ಪ್ರತಿಭಟನಾಕಾರರಿಗೆ ಪ್ರತಿಭಟನೆ ನಡೆಸಲು ಸ್ಥಳಗಳನ್ನು ನಿಗದಿ ಮಾಡಿದೆ. ಮೀಸಲಾತಿ ಕುರಿತು ವಿವಿಧ ಸಮುದಾಯಗಳಿಂದ ಹೋರಾಟ ನಡೆಯಲಿದ್ದು, ರೈತ ಹೋರಾಟ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಹೋರಾಟಕ್ಕೆ ಸಜ್ಜಾಗುತ್ತಿವೆ. ಒಂದು ದಿನಕ್ಕೆ ಹತ್ತು ಕಡೆ ಪ್ರತಿಭಟನೆ ನಡೆಸುವ ನಿಟ್ಟಿನಲ್ಲಿ ಒಟ್ಟು ಹತ್ತು ಟೆಂಟ್‌ಗಳ ನಿರ್ಮಾಣ ಮಾಡಲಾಗಿದೆ.
ಸುವರ್ಣ ಸೌಧದ ಮುಂಭಾಗದ ಬಸ್ತವಾಡ ಬಳಿ ಏಳು ಟೆಂಟ್ ನಿರ್ಮಾಣ ಮಾಡಲಾಗಿದ್ದು, ಕೊಂಡಸಕೊಪ್ಪ ಗ್ರಾಮದ ಬಳಿ ಮೂರು ಟೆಂಟ್ ಹಾಕಲಾಗಿದೆ. ಟೆಂಟ್ ಸುತ್ತಮುತ್ತ ಸಿಸಿಟಿವಿ ಅಳವಡಿಕೆ ಮಾಡಲಾಗಿದ್ದು, ಪ್ರತಿಭಟನಾ ಸ್ಥಳಕ್ಕೆ ಓರ್ವ ಎಸ್‌ಪಿ ನೇತೃತ್ವದಲ್ಲಿ ಸಾವಿರಕ್ಕೂ ಅಧಿಕ ಪೊಲೀಸರಿಂದ ಬಂದೋಬಸ್ತ್ ನಡೆಸಲಾಗುತ್ತಿದೆ.
ಇದನ್ನೂ ಓದಿ: ಬೆಳಗಾವಿಗೆ ಬರುತ್ತಿದ್ದೇನೆ, ಸೂಕ್ತ ಭದ್ರತೆ ಕೊಡಿ; ಬೆಳಗಾವಿ ಪೊಲೀಸ್ ಆಯುಕ್ತರಿಗೆ ಮಹಾ ಸಂಸದ ಧೈರ್ಯಶೀಲ ಮಾನೆ ಪತ್ರ
ಡಿ.19ರಂದು ಕಬ್ಬಿಗೆ ಬೆಲೆ ನಿಗದಿಗೆ ಆಗ್ರಹಿಸಿ ರೈತರು ಹೋರಾಟ ನಡೆಸಲಿದ್ದಾರೆ. ಡಿ.21ರಂದು ಮಾದಿಗ ದಂಡೋರ ಸಮಿತಿಯಿಂದ ಹೋರಾಟ. ಡಿ.22ರಂದು ಪಂಚಮಸಾಲಿ ಸಮಾಜದಿಂದ ಬೃಹತ್ ಹೋರಾಟ ನಡೆಯಲಿದೆ. ಹೋರಾಟಕ್ಕೆ 100 ಎಕರೆ ಪ್ರದೇಶದ ಬೃಹತ್ ಜಾಗ ನಿಗದಿ ಮಾಡಲಾಗಿದೆ ಎಂದು ಬೆಳಗಾವಿ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಮಾಹಿತಿ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:18 pm, Sun, 18 December 22