ಸುವರ್ಣಸೌಧದಲ್ಲಿ ಸಾವರ್ಕರ್ ಫೋಟೋ? ಪಟ್ಟು ಬಿಡದ ಬಿಜೆಪಿ: ಸರ್ಕಾರವನ್ನು ಹಣಿಯಲು ಸಿದ್ದವಾದ ಕಾಂಗ್ರೆಸ್
ಸುವರ್ಣಸೌಧದಲ್ಲಿ ಸ್ವಾತಂತ್ರ್ಯ ವೀರ್ ಸಾವರ್ಕರ್ ಫೋಟೋ ಅನಾವರಣಗೊಳಿಸುವ ಸಾಧ್ಯತೆ ಇದ್ದು, ಈ ವಿಚರವಾಗಿ ರಾಜ್ಯ ಕಾಂಗ್ರೆಸ್ ನಾಯಕರು ಸರ್ಕಾರವನ್ನು ಹಣಿಯುವ ತಯಾರಿಯಲ್ಲಿದ್ದಾರೆ.
ಬೆಳಗಾವಿ: ಕಳೆದ ಎರಡು ತಿಂಗಳ ಹಿಂದೆ ಸ್ವಾತಂತ್ರ್ಯ ವೀರ್ ಸಾವರ್ಕರ್ (Veer Savarkar) ಕಿಡಿ ರಾಜ್ಯಾದ್ಯಂತ ವ್ಯಾಪಿಸಿತ್ತು. ಶಿವಮೊಗ್ಗದಲ್ಲಿ (Shivamogga) ಹತ್ತಿದ ಜ್ವಾಲೆ ಇಡಿ ರಾಜ್ಯವನ್ನೇ ವ್ಯಾಪಿಸಿತ್ತು. ಸಾವರ್ಕರ್ ಭಾವಚಿತ್ರ ಅವಳವಡಿಸುವ ವಿಚಾರವಾಗಿ ಕೋಮುಗಲಭೆ ನಡೆಯಿತು. ಮತ್ತು ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಯಿತು. ಈಗ ಸಾವರ್ಕರ್ ವಿಚಾರ ಮತ್ತೆ ಮುನ್ನಲೆಗೆ ಬರುವ ಲಕ್ಷಣಗಳು ಕಾಣುತ್ತಿವೆ. ಇದಕ್ಕೆ ಕಾರಣ ಸುವರ್ಣಸೌಧದಲ್ಲಿ ಸಾವರ್ಕರ್ ಫೋಟೋ ಅನಾವರಣಗೊಳಿಸುವ ಸಾಧ್ಯತೆ ಇದೆ.
ಶಿವಮೊಗ್ಗದಿಂದ ಪ್ರಾರಂಭವಾದ ಸಾವರ್ಕರ್ ವಿವಾದ
ಆಗಸ್ಟ 13 ಶಿವಮೊಗ್ಗ ಜಿಲ್ಲೆಯ ಸಿಟಿ ಸೆಂಟರ್ ಮಾಲ್ನಲ್ಲಿ 75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಹಾಕಿ ಅಲಂಕರಿಸಲಾಗಿತ್ತು. ಭಾವಚಿತ್ರಗಳ ಮಧ್ಯದಲ್ಲಿ ವಿನಾಯಕ ದಾಮೋದರ ಸಾವರ್ಕರ್ ಭಾವಚಿತ್ರ ಗಮನಿಸಿ ಎಂ.ಡಿ.ಷರೀಫ್ ಅಲಿಯಾಸ್ ಆಸೀಫ್ ಆಕ್ರೋಶ ವ್ಯಕ್ತಪಡಿಸಿದ್ದನು. ಈ ವಿಚಾರವಾಗಿ ಎಸ್ಡಿಪಿಐ ಕಾರ್ಯಕರ್ತರು ಮಾಲ್ ಎದುರು ಪ್ರತಿಭಟನೆ ಮಾಡಿದ್ದರು.
ಇದನ್ನೂ ಓದಿ: ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ: ಪರಿಷತ್ನಲ್ಲಿ 10 ವಿಧೇಯಕಗಳು ಮಂಡನೆ -ಹಂಗಾಮಿ ಸಭಾಪತಿ ರಘುನಾಥ್ ಮಲ್ಲಾಪೂರೆ
ಪ್ರೇಮ್ ಸಿಂಗ್ ಚಾಕು ಇರಿತ
ಆಗಸ್ಟ್ 16 ರಂದು ಶಿವಮೊಗ್ಗದ ಸರ್ಕಲ್ನಲ್ಲಿ ವೀರ ಸಾವರ್ಕರ್ ಫ್ಲೆಕ್ಸ್ ಅವಳವಡಿಸುವ ವಿಚಾರವಾಗಿ ಗಲಾಟೆ ನಡೆದಿತ್ತು. ಗಲಾಟೆ ವೇಳೆ ಪ್ರೇಮ್ ಸಿಂಗ್ ಎಂಬುವರಿಗೆ ಚಾಕುರಿಯಲಾಗಿತ್ತು. ಈ ಪ್ರಕರಣದ ಮೂವರು ಆರೋಪಿ ನದೀಮ್, ಅಬ್ದುಲ್ ರೆಹಮಾನ್, ತನ್ವೀರ್ನನ್ನು ಪೊಲೀಸರು ಬಂಧಿಸಿದ್ದರು. ಇದಾದ ನಂತರ ಬಜರಂಗದಳ ಕಾರ್ಯಕರ್ತ ಸುನಿಲ್ ಮೇಲೆ ಹಲ್ಲೆ ಮಾಡಲಾಗಿತ್ತು.
ಘಟನೆ ನಂತರ ಪ್ರಕರಣ ತೀರ್ವ ಸ್ವರೂಪ ಪಡೆದುಕೊಂಡಿದ್ದು, ರಾಜಕೀಯ ಸ್ವರೂಪ ಪಡೆದುಕೊಂಡವು. ರಾಜ್ಯ ರಾಜಕೀಯ ನಾಯಕರು ಪರಸ್ಪರ ವಾಗ್ದಾಳಿ ಶುರು ಹಚ್ಚಿಕೊಂಡರು.
ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಯಾಕೆ ಇಡಬೇಕು:ಸಿದ್ದರಾಮಯ್ಯ
ಇದಾದ ನಂತರ ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಯಾಕೆ ಇಡಬೇಕು ಎಂದು ವಿಪಕ್ಷನಾಯಕ ಸಿದ್ದರಾಮಯ್ಯ ಹೇಳಿಕೆ ಸಾಕಷ್ಟು ವೈರಲ್ ಆಯಿತು. ಅದು #MuslimArea ಟ್ರೆಂಡ್ ಆಗುವಷ್ಟು ವ್ಯಾಪಕ ಟೀಕೆಗೆ ಗುರಿಯಾಗಿತ್ತು.
ಮುಸ್ಲಿಮರದ್ದು ಒಂದಿಂಚೂ ಜಾಗ ಇಲ್ಲ: ಕೆ ಎಸ್ ಈಶ್ವರಪ್ಪ
ಮುಸ್ಲಿಂರ ಜಾಗದಲ್ಲಿ ಏಕೆ ಸಾವರ್ಕರ್ ಪೋಟೋ ಹಾಕಬೇಕಿತ್ತು? ಎಂಬ ಸಿದ್ದರಾಮಯ್ಯ ಹೇಳಿಕೆಗೆ ಕೆ ಎಸ್ ಈಶ್ವರಪ್ಪ ಟಾಂಗ್ ಕೊಟ್ಟಿದ್ದಾರೆ. ಏನು ಅವರ ಅಪ್ಪಂದ ಆ ಜಾಗ ? ಮುಸ್ಲಿಂದ್ದು ಒಂದಿಂಚೂ ಜಾಗ ಇಲ್ಲ; ಎಲ್ಲಾ ಹಿಂದೂಸ್ಥಾನದ್ದು. ಮುಸ್ಲಿಂಮರಿಗೆ ಯಾವ ಜಾಗವನ್ನೂ ನಾವು ಕೊಟ್ಟಿಲ್ಲ ಎಂದಿದ್ದರು.
ಮತ್ತೆ ಮುನ್ನೆಲೆಗೆ ಬರುವುದೇ ಸಾವರ್ಕರ್ ವಿವಾದ ?
ನಾಳೆ (ಡಿ.19) ರಿಂದ ಚಳಿಗಾಲದ ಅಧಿವೇಶನ ಪ್ರಾರಂಭವಾಗಲಿದೆ. ಈ ಅಧಿವೇಶನದಲ್ಲಿ ಸುವರ್ಣಸೌಧದಲ್ಲಿ ಸಾವರ್ಕರ್ ಫೋಟೋ ಅನಾವರಣಗೊಳಿಸುವ ಸಾಧ್ಯತೆ ಇದೆ. ಈ ವಿಚಾರವಾಗಿ, ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಈ ವಿಚಾರವಿಟ್ಟುಕೊಂಡು ವಿರೋಧ ಪಕ್ಷ ಸರ್ಕಾರವನ್ನು ಹಣಿಯುವ ಸಾಧ್ಯತೆ ಇದೆ.
ಇದನ್ನೂ ಓದಿ: ಬೆಳಗಾವಿ ಅಧಿವೇಶನಕ್ಕೆ ತಟ್ಟಲಿದೆ ಪ್ರತಿಭಟನೆ ಬಿಸಿ, ಈ ಬಾರಿ ಅತೀ ಹೆಚ್ಚು ಪ್ರತಿಭಟನೆಗಳು ನೊಂದಣಿ
ಸಾವರ್ಕರ್ಗೂ ಕರ್ನಾಟಕಕ್ಕೂ ಏನ್ ಸಂಬಂಧ
ಸಾವರ್ಕರ್ಗೂ ಕರ್ನಾಟಕಕ್ಕೂ ಏನ್ ಸಂಬಂಧ ಎಂದು ಇಂದು (ಡಿ.18) ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಂಡಿ ಗ್ರಾಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್, ಗಾಂಧೀಜಿ ಫೋಟೋ ಅನಾವರಣ ಇದೆ. ಫೋಟೋ ಅನಾವರಣ ಕಾರ್ಯಕ್ರಮಕ್ಕೆ ಸ್ಪೀಕರ್ ಕಚೇರಿಯಿಂದ ಆಹ್ವಾನ ಬಂದಿದೆ. ಸಾವರ್ಕರ್ ಫೋಟೋ ವಿಚಾರ ಹೇಳಿಲ್ಲ ಎಂದರು.
ನಾಳೆ ಅದನ್ನು ನೋಡಿ ಮಾತುನಾಡುತ್ತೇನೆ
ಸುವರ್ಣ ವಿಧಾನಸೌಧದಲ್ಲಿ ಸಾವರ್ಕರ್ ಭಾವಚಿತ್ರ ಅಳವಡಿಸಲು ಸಾಧ್ಯತೆ ಇದೆ ಎಂದು ನನಗೂ ಅದರ ಬಗ್ಗೆ ಯಾರೋ ಹೇಳಿದರು. ನಾಳೆ ಅದನ್ನು ನೋಡಿ ಮಾತುನಾಡುತ್ತೇನೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:40 pm, Sun, 18 December 22