ಬೆಳಗಾವಿ ಅಧಿವೇಶನಕ್ಕೆ ತಟ್ಟಲಿದೆ ಪ್ರತಿಭಟನೆ ಬಿಸಿ, ಈ ಬಾರಿ ಅತೀ ಹೆಚ್ಚು ಪ್ರತಿಭಟನೆಗಳು ನೊಂದಣಿ
ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಕೆಲ ಸಮೀತಿಗಳು ಪ್ಲಾನ್ ಮಾಡಿಕೊಂಡಿವೆ. ಅಧಿವೇಶನ ಸಮಯದಲ್ಲಿ ಪ್ರತಿಭಟನೆ ನಡೆಸಲು ಈಗಾಗಲೇ 62 ಸಂಘಟನೆಗಳು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿವೆ.
ಬೆಳಗಾವಿ: ಡಿಸೆಂಬರ್ 19ರಿಂದ ಡಿ.30ರವರೆಗೆ ಬೆಳಗಾವಿಯ ಸುವರ್ಣಸೌಧ (Belagavi Suvarna Soudha)ದಲ್ಲಿ ನಡೆಯಲಿರುವ 10ನೇ ಚಳಿಗಾಲದ ಅಧಿವೇಶನಕ್ಕೆ (Belagavi Winter Session) ಸಿದ್ಧತೆಗಳು ನಡೆಯುತ್ತಿದೆ. ಇದರ ಬೆನ್ನಲ್ಲೆ ಸರ್ಕಾರಕ್ಕೆ ಪ್ರತಿಭಟನೆ (Protest)ಯ ಬಿಸಿ ತಟ್ಟಲು ಕೆಲವೊಂದು ಸಂಘಟನೆಗಳು ತಯಾರಿ ನಡೆಸುತ್ತಿದ್ದು, ಪ್ರತಿಭಟನೆಗೆ ಅನುಮತಿ ಕೋರಿ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಬಾರಿ ಅತಿ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿರುವುದು ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸುವ ಸಾಧ್ಯತೆ ಇದೆ. ನಗರ ಪೊಲೀಸ್ ಆಯುಕ್ತರ ಬಳಿ ಹಲವು ಸಂಘಟನೆಗಳು ಪ್ರತಿಭಟನೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದು, ಪ್ರತಿಭಟನಾಕಾರರಿಗೆ ಈಗಾಗಲೇ ಹೋರಾಟಕ್ಕೆ ಪೊಲೀಸ್ ಇಲಾಖೆ ಜಾಗ ನಿಗದಿ ಮಾಡಿದೆ.
ಹೆಚ್ಚಿನ ಅರ್ಜಿ ಸಲ್ಲಿಕೆಯಾಗಿರುವುದರಿಂದ ಪೊಲೀಸರು ಪ್ರತಿಭಟನಾಕಾರರಿಗೆ ಪ್ರತಿಭಟನೆ ನಡೆಸಲು ಸ್ಥಳಗಳನ್ನು ನಿಗದಿ ಮಾಡಿದೆ. ಮೀಸಲಾತಿ ಕುರಿತು ವಿವಿಧ ಸಮುದಾಯಗಳಿಂದ ಹೋರಾಟ ನಡೆಯಲಿದ್ದು, ರೈತ ಹೋರಾಟ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಹೋರಾಟಕ್ಕೆ ಸಜ್ಜಾಗುತ್ತಿವೆ. ಒಂದು ದಿನಕ್ಕೆ ಹತ್ತು ಕಡೆ ಪ್ರತಿಭಟನೆ ನಡೆಸುವ ನಿಟ್ಟಿನಲ್ಲಿ ಒಟ್ಟು ಹತ್ತು ಟೆಂಟ್‌ಗಳ ನಿರ್ಮಾಣ ಮಾಡಲಾಗಿದೆ.
ಇದನ್ನೂ ಓದಿ: ಎಂಇಎಸ್ ಪುಂಡಾಟ ಇದೇ ಮೊದಲಲ್ಲ; ಅವರನ್ನು ಯಾವ ರೀತಿ ಹದ್ದುಬಸ್ತಿನಲ್ಲಿ ಇಡಬೇಕು ಎಂದು ಗೊತ್ತಿದೆ -ಸಿಎಂ ಬೊಮ್ಮಾಯಿ
ಸುವರ್ಣ ಸೌಧದ ಮುಂಭಾಗದ ಬಸ್ತವಾಡ ಬಳಿ ಏಳು ಟೆಂಟ್ ನಿರ್ಮಾಣ ಮಾಡಲಾಗಿದ್ದು, ಕೊಂಡಸಕೊಪ್ಪ ಗ್ರಾಮದ ಬಳಿ ಮೂರು ಟೆಂಟ್ ಹಾಕಲಾಗಿದೆ. ಟೆಂಟ್ ಸುತ್ತಮುತ್ತ ಸಿಸಿಟಿವಿ ಅಳವಡಿಕೆ ಮಾಡಲಾಗಿದ್ದು, ಪ್ರತಿಭಟನಾ ಸ್ಥಳಕ್ಕೆ ಓರ್ವ ಎಸ್‌ಪಿ ನೇತೃತ್ವದಲ್ಲಿ ಸಾವಿರಕ್ಕೂ ಅಧಿಕ ಪೊಲೀಸರಿಂದ ಬಂದೋಬಸ್ತ್ ನಡೆಸಲಾಗುತ್ತಿದೆ.
ಡಿ.19ರಂದು ಕಬ್ಬಿಗೆ ಬೆಲೆ ನಿಗದಿಗೆ ಆಗ್ರಹಿಸಿ ರೈತರು ಹೋರಾಟ ನಡೆಸಲಿದ್ದಾರೆ. ಡಿ.21ರಂದು ಮಾದಿಗ ದಂಡೋರ ಸಮಿತಿಯಿಂದ ಹೋರಾಟ. ಡಿ.22ರಂದು ಪಂಚಮಸಾಲಿ ಸಮಾಜದಿಂದ ಬೃಹತ್ ಹೋರಾಟ ನಡೆಯಲಿದೆ. ಹೋರಾಟಕ್ಕೆ 100 ಎಕರೆ ಪ್ರದೇಶದ ಬೃಹತ್ ಜಾಗ ನಿಗದಿ ಮಾಡಲಾಗಿದೆ ಎಂದು ಬೆಳಗಾವಿ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಮಾಹಿತಿ ನೀಡಿದ್ದಾರೆ.
ಅಧಿವೇಶನದ ದಿನವೇ ಎಂಇಎಸ್ ಮಹಾಮೇಳಾವ್ ಆಯೋಜನೆ
ಅಧಿವೇಶನ ಆರಂಭದ ದಿನವೇ ಎಂಇಎಸ್ ಮಹಾಮೇಳಾವ್ ಆಯೋಜನೆ ಮಾಡಲಾಗಿದೆ. ಈ ಸ್ಥಳಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆಳಗಾವಿಯ ಟೀಳಕವಾಡಿಯಲ್ಲಿರುವ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಪೊಲೀಸ್ ಭದ್ರತೆ ಸೇರಿದಂತೆ ಜಾಗ ಪರಿಶೀಲನೆ ನಡೆಸಲಾಯಿತು. ಸ್ಥಳದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿ, ಡ್ರೋಣ್ ಕಣ್ಗಾವಲು ಇರಿಸುವಂತೆ ಸೂಚನೆ ನೀಡಿದರು.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:17 pm, Sun, 18 December 22