ಡಿಕೆಶಿಗೆ ಸತೀಶ್​​ ಸೆಡ್ಡು: ಡಿನ್ನರ್​​ ಮೀಟಿಂಗ್​​ ನೆಪದಲ್ಲಿ ಸಿಎಂ ಬಣದಿಂದಲೂ ಶಕ್ತಿ ಪ್ರದರ್ಶನ

ಬೆಳಗಾವಿ ಅಧಿವೇಶನದ ನಡುವೆ ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ವಿವಾದ ಮತ್ತೆ ತೀವ್ರಗೊಂಡಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಆಯೋಜಿಸಿದ ಡಿನ್ನರ್ ಮೀಟಿಂಗ್‌ಗೆ ಪ್ರತಿಯಾಗಿ, ಸಿಎಂ ಸಿದ್ದರಾಮಯ್ಯ ಬಣದ ಸತೀಶ್ ಜಾರಕಿಹೊಳಿ ಮತ್ತೊಂದು ಸಭೆ ನಡೆಸಿದ್ದಾರೆ. ಈ ಡಿನ್ನರ್ ರಾಜಕೀಯವು ಸಿದ್ದರಾಮಯ್ಯ-ಡಿಕೆಶಿ ಬಣಗಳ ನಡುವಿನ ಆಂತರಿಕ ಕಲಹ ಮತ್ತು ಶಕ್ತಿ ಪ್ರದರ್ಶನಕ್ಕೆ ಹಿಡಿದ ಕೈಗನ್ನಡಿಯಂತಿದೆ.

ಡಿಕೆಶಿಗೆ ಸತೀಶ್​​ ಸೆಡ್ಡು: ಡಿನ್ನರ್​​ ಮೀಟಿಂಗ್​​ ನೆಪದಲ್ಲಿ ಸಿಎಂ ಬಣದಿಂದಲೂ ಶಕ್ತಿ ಪ್ರದರ್ಶನ
ಖಾಸಗಿ ಹೋಟೆಲ್​​ನಲ್ಲಿ ಡಿನ್ನರ್​​ ಮೀಟಿಂಗ್​​
Edited By:

Updated on: Dec 18, 2025 | 11:47 AM

ಬೆಳಗಾವಿ, ಡಿಸೆಂಬರ್​ 18: ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್​​ ನಡುವೆ ಅಧಿಕಾರ ಹಂಚಿಕೆ ವಿವಾದ ಹೈಕಮಾಂಡ್​​ ಅಂಗಳ ತಲುಪಿದ ಬೆನ್ನಲ್ಲೇ ರಾಜ್ಯದಲ್ಲಿ ನಡೆಯುತ್ತಿದ್ದ ರಾಜಕೀಯ ವಾಗ್ಯುದ್ಧಕ್ಕೆ ಕೊಂಚ ಬ್ರೇಕ್​​ ಬಿದ್ದಿತ್ತು. ಆದರೆ ಬೆಳಗಾವಿ ಅಧಿವೇಶನದ ಹೊತ್ತಲ್ಲೇ ಡಿಸಿಎಂ ಡಿಕೆಶಿ ಆಯೋಜಿಸಿದ್ದ ಡಿನ್ನರ್​​ ಮೀಟಿಂಗ್ ಬಳಿಕ ಕಾಂಗ್ರೆಸ್​​ ಪಾಳಯದಲ್ಲಿ ಮತ್ತೆ ಬಣ ಬಡಿದಾಟ ಆರಂಭವಾಗಿದೆ. ಡಿಕೆಶಿಗೆ ಕೌಂಟರ್​​ ಎಂಬಂತೆ ಸಿಎಂ ಸಿದ್ದರಾಮಯ್ಯ ಆಪ್ತ ಬಣದ ಪ್ರಭಾವಿ ನಾಯಕ ಸತೀಶ್​​ ಜಾರಕಿಹೊಳಿ ಏರ್ಪಡಿಸಿದ್ದ ಡಿನ್ನರ್​​ ಮೀಟಿಂಗೇ ಇದಕ್ಕೆ ಸಾಕ್ಷಿ.

ಬೆಳಗಾವಿ ಅಧಿವೇಶನ ಸಂದರ್ಭದಲ್ಲೇ ರಾಜ್ಯ ಕಾಂಗ್ರೆಸ್​​ ಪಾಳಯದಲ್ಲಿ ಮತ್ತೊಂದು ಡಿನ್ನರ್ ಸಭೆ ನಡೆದಿದೆ. ಬೆಳಗಾವಿಯ ಖಾಸಗಿ ಹೋಟೆಲ್​ನಲ್ಲಿ ಊಟದ ನೆಪದಲ್ಲಿ ಸಿಎಂ ಸಿದ್ದರಾಮಯ್ಯ ಬಣದ ಬಹುತೇಕ ಶಾಸಕರು ಒಟ್ಟಿಗೆ ಸೇರಿದ್ದಾರೆ. ಸುಮಾರು 36 ಮಂದಿ ಶಾಸಕರು ಡಿನ್ನರ್​​ ಮೀಟಿಂಗ್​​ನಲ್ಲಿ ಭಾಗಿಯಾಗಿದ್ದು, ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಕೂಡ ಇದರಲ್ಲಿ ಭಾಗಿಯಾಗಿರೋದು ವಿಶೇಷವಾಗಿತ್ತು. ನಮ್ಮ ಜೊತೆ ಶಾಸಕರ ಬಲ ಇದೆ ಎಂದು ತೋರಿಸಲು ಡಿನ್ನರ್ ಆಯೋಜಿಸಿದ್ದ ಡಿ.ಕೆ. ಶಿವಕುಮಾರ್​ಗೆ ಕೌಂಟರ್ ಎನ್ನುವಂತೆ ಸತೀಶ್ ಜಾರಕಿಹೊಳಿ ನೆತೃತ್ವದಲ್ಲಿ ಮತ್ತೊಂದು ಬಣ ಒಟ್ಟಾಗಿರೋದು ಬೇರೆಯದ್ದೇ ಸಂದೇಶ ರವಾನಿಸಿದೆ. ಅಧಿಕಾರ ಹಂಚಿಕೆ ವಿಚಾರದ ಬಗ್ಗೆ ಕಾಂಗ್ರೆಸ್​​ ವರಿಷ್ಠರು ಕೂಡ ಚರ್ಚೆ ನಡೆಸುತ್ತಿದ್ದು, ಸಾಧಕ ಮತ್ತು ಬಾಧಕಗಳ ಪರಿಶೀಲನೆಗೆ ಮುಂದಾಗಿದ್ದಾರೆ. ಈ ಹೊತ್ತಲ್ಲಿ ರಾಜ್ಯ ಕಾಂಗ್ರೆಸ್​​ನಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳು, ಹೈಕಮಾಂಡ್​​ಗೆ ಸಂದೇಶ ರವಾನಿಸುವ ನಾಯಕರ ಯತ್ನ ಎಂಬ ಮಾತುಗಳೂ ಕೇಳಿಬಂದಿವೆ.

ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ಡಿಕೆಶಿ ಬಣಕ್ಕೆ ಮತ್ತೆ ರಾಜಣ್ಣ ಟಾಂಗ್

ಡಿನ್ನರ್​​ ಮೀಟಿಂಗ್​​ನಲ್ಲಿ ಯಾರೆಲ್ಲ ಭಾಗಿ?

ಬಾಬಾ ಸಾಹೇಬ್ ಪಾಟೀಲ್ , ಅಪ್ಪಾಜಿ ಸಿಎಸ್ ನಾಡಗೌಡ, ಕೆಎನ್ ರಾಜಣ್ಣ, ಯತೀಂದ್ರ ಸಿದ್ದರಾಮಯ್ಯ, ಬಿ.ಆರ್ ಪಾಟೀಲ್, ಯಾಸಿರ್ ಖಾನ್ ಪಠಾಣ್, ಎಂ.ಆರ್‌ ಪಾಟೀಲ್, ಶ್ರೀನಿವಾಸ್ ಮಾನೆ, ಮಂಥರ್ ಗೌಡ, ವಿಶ್ವಾಸ್ ವೈದ್ಯ, ಬಸವಂತಪ್ಪ, ಆಸೀಫ್ ಸೇಠ್, ಪಾವಗಡ ವೆಂಕಟೇಶ್, ಕಂಪ್ಲಿ ಗಣೇಶ್, ಶ್ರೀನಿವಾಸ್ ತರೀಕೆರೆ, ಎನ್‌ಟಿ ಶ್ರೀನಿವಾಸ್, ರಾಘವೇಂದ್ರ ಹಿಟ್ನಾಳ್, ದರ್ಶನ್ ದೃವನಾರಾಯಣ್, ನಾರಾ ಭರತ್ ರೆಡ್ಡಿ, ಮಹಾಂತೇಶ್ ಕೌಜಲಗಿ, ಭೀಮಣ್ಣ ನಾಯ್ಕ, ಬಿಬಿ ಚಿಮ್ಮನಕಟ್ಟಿ, ಯುಬಿ ಬಣಕಾರ್ , ಬಸವರಾಜ್ ಶಿವಣ್ಣನವರ್, ರಾಜು ಕಾಗೆ, ಕೋನರೆಡ್ಡ, ಅನಿಲ್ ಚಿಕ್ಕಮಾದು, ಗಣೇಶ್ ಪ್ರಸಾದ್, ಪುಟ್ಟರಂಗಶೆಟ್ಟಿ , ರಾಜ ನರಸಿಂಹ ನಾಯಕ್ , ರವಿ ಬೋಸರಾಜು, ಅಲ್ಲಮ ಪ್ರಭು ಪಾಟೀಲ್, ಜಿಟಿ ಪಾಟೀಲ್, ಗಣೇಶ್ ಹುಕ್ಕೇರಿ, ರಘುಮೂರ್ತಿ ಮತ್ತು ಪ್ರಕಾಶ್ ಕೋಳಿವಾಡ ಡಿನ್ನರ್​​ ಮೀಟಿಂಗ್​​ನಲ್ಲಿ ಭಾಗಿಯಾಗಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 11:46 am, Thu, 18 December 25