ನಮಗೆ ನೀರು ಕೊಡಿ ಇಲ್ಲವಾದ್ರೆ ಕರ್ನಾಟಕಕ್ಕೆ ಹೋಗ್ತೇವೆ: ಮಹಾರಾಷ್ಟ್ರದ ಜತ್ತ​ ತಾಲೂಕಿನ 42 ಹಳ್ಳಿಗಳ ಜನರ ಘೋಷಣೆ

| Updated By: ಆಯೇಷಾ ಬಾನು

Updated on: Nov 26, 2022 | 4:18 PM

8 ದಿನಗಳೊಳಗೆ ಮಹಾರಾಷ್ಟ್ರ ಸಿಎಂ, ಡಿಸಿಎಂ, ಜಲಸಂಪನ್ಮೂಲ ಸಚಿವರು ಉಮದಿ ಗ್ರಾಮಕ್ಕೆ‌ ಬರಬೇಕು. ನೀರಿನ ಸಮಸ್ಯೆ ಪರಿಹಾರಕ್ಕೆ ಏನು ಕ್ರಮ ಕೈಗೊಳ್ಳುವರಿದ್ದೀರಿ? ತಿಳಿಸಬೇಕು. -ಜಲ ಸಂಘರ್ಷ ಸಮಿತಿ ಮುಖಂಡ ಸುನೀಲ್ ಪೋತದಾರ್

ನಮಗೆ ನೀರು ಕೊಡಿ ಇಲ್ಲವಾದ್ರೆ ಕರ್ನಾಟಕಕ್ಕೆ ಹೋಗ್ತೇವೆ: ಮಹಾರಾಷ್ಟ್ರದ ಜತ್ತ​ ತಾಲೂಕಿನ 42 ಹಳ್ಳಿಗಳ ಜನರ ಘೋಷಣೆ
ಸುನೀಲ್ ಪೋತದಾರ್
Follow us on

ಬೆಳಗಾವಿ: ನಮಗೆ ನೀರು ಕೊಡಿ ಇಲ್ಲವಾದ್ರೆ ಕರ್ನಾಟಕಕ್ಕೆ ಹೋಗ್ತೇವೆ ಎಂದು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಉಮದಿ ಗ್ರಾಮದ ಜನ ಆಕ್ರೋಶ ಹೊರ ಹಾಕಿದ್ದಾರೆ. ಜತ್ ತಾಲೂಕು ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ಜತ್ ತಾಲೂಕಿನ 42 ಹಳ್ಳಿಗಳ ಜನರು ಉಮದಿ ಗ್ರಾಮದಲ್ಲಿ ಸಭೆ ಸೇರಿದ್ದು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಮಹಾರಾಷ್ಟ್ರದ ಜತ್, ಅಕ್ಕಲಕೋಟ, ಸೊಲ್ಲಾಪುರ ಕರ್ನಾಟಕಕ್ಕೆ ಸೇರಬೇಕು ಎಂಬ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ಸಂಚಲನ ಸೃಷ್ಟಿಯಾಗಿದೆ. ಮತ್ತೊಂದೆಡೆ ಗಡಿವಿವಾದ ಬೆನ್ನಲ್ಲೇ ಜತ್ ತಾಲೂಕು ನೀರಾವರಿ ಸಂಘರ್ಷ ಸಮಿತಿ ಹೋರಾಟ ಮತ್ತೆ ಮುನ್ನಲೆಗೆ ಬಂದಿದೆ. ಉಮದಿ ಗ್ರಾಮದಲ್ಲಿ ನಿನ್ನೆ ತಡರಾತ್ರಿವರೆಗೂ ಜತ್ ತಾಲೂಕು ನೀರಾವರಿ ಸಂಘರ್ಷ ಸಮಿತಿ ಸಭೆ ನಡೆದಿದ್ದು 6 ದಶಕಗಳಿಂದ ನೀರಿನ ಸಮಸ್ಯೆಯಿಂದ ಕಂಗೆಟ್ಟಿರುವ ಜತ್ ತಾಲೂಕಿನ 42 ಹಳ್ಳಿಗಳ ಪ್ರಮುಖರು ಸಭೆಯಲ್ಲಿ ಭಾಗಿಯಾಗಿದ್ದರು. ಸಭೆಯಲ್ಲಿ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ. ಸಭೆ ಬಳಿಕ ಹೋರಾಟಗಾರರು ಮಹಾರಾಷ್ಟ್ರ ಸರ್ಕಾರಕ್ಕೆ ಎಂಟು ದಿನಗಳ ಗಡುವು ನೀಡಿದ್ದಾರೆ.

ಎಂಟು ದಿನಗಳೊಳಗೆ ಮಹಾರಾಷ್ಟ್ರ ಸಿಎಂ, ಡಿಸಿಎಂ, ಜಲಸಂಪನ್ಮೂಲ ಸಚಿವರು ಜತ್ತ ತಾಲೂಕಿಗೆ ಬರಬೇಕು. ಜತ್ತ ತಾಲೂಕಿನ ನೀರಿನ ಸಮಸ್ಯೆ ಕುರಿತು ಪರಿಹಾರ ಕಲ್ಪಿಸಬೇಕು. 8 ದಿನಗಳೊಳಗೆ ನಿರ್ಧಾರ ಕೈಗೊಳ್ಳದಿದ್ರೆ ಕರ್ನಾಟಕ ಸಿಎಂರನ್ನು ಜತ್ತ ತಾಲೂಕಿಗೆ ಆಹ್ವಾನಿಸಿ ಕರ್ನಾಟಕ ಸೇರಲು ನಿರ್ಧಾರ ಪ್ರಕಟಿಸುತ್ತೇವೆ ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರ ಸರ್ಕಾರಕ್ಕೆ ನಾಚಿಕೆ ಆಗಬೇಕು

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಲ ಸಂಘರ್ಷ ಸಮಿತಿ ಮುಖಂಡ ಸುನೀಲ್ ಪೋತದಾರ್, ಮಹಾರಾಷ್ಟ್ರ ಸರ್ಕಾರಕ್ಕೆ ನಾಚಿಕೆ ಆಗಬೇಕು ನಾಲ್ಕು ದಶಕಗಳಿಂದ ನೀರು ಕೊಡಲಾಗಿಲ್ಲ. ಉಮದಿಯಲ್ಲಿ ಜತ್ತ ತಾಲೂಕಿನ 42 ಹಳ್ಳಿಗಳ ಪ್ರಮುಖರು ಸಭೆ ಸೇರಿದ್ದೇವೆ. ಕರ್ನಾಟಕಕ್ಕೆ ಸೇರಬೇಕು ಎಂಬುದು ನಮ್ಮ ಇಚ್ಛೆ ಇದೆ. ಮಹಾರಾಷ್ಟ್ರ ಸರ್ಕಾರಕ್ಕೆ ಒಂದು ವಾರದ ಗಡುವು ನೀಡುತ್ತೇವೆ ಎಂದು ಎಚ್ಚರಿಸಿದ್ದಾರೆ.

8 ದಿನಗಳೊಳಗೆ ಮಹಾರಾಷ್ಟ್ರ ಸಿಎಂ, ಡಿಸಿಎಂ, ಜಲಸಂಪನ್ಮೂಲ ಸಚಿವರು ಉಮದಿ ಗ್ರಾಮಕ್ಕೆ‌ ಬರಬೇಕು. ನೀರಿನ ಸಮಸ್ಯೆ ಪರಿಹಾರಕ್ಕೆ ಏನು ಕ್ರಮ ಕೈಗೊಳ್ಳುವರಿದ್ದೀರಿ? ತಿಳಿಸಬೇಕು. ಬಜೆಟ್‌ನಲ್ಲಿ ಎಷ್ಟು ಹಣ ಮೀಸಲು ಇಡಲಿದ್ದೀರಿ ಎಂಬುದು ಜನರಿಗೆ ತಿಳಿಸಿ. ಇಲ್ಲವಾದ್ರೆ ಎಂಟು ದಿನಗಳ ಬಳಿಕ ಕರ್ನಾಟಕ ಸಿಎಂರನ್ನು ಉಮದಿಗೆ ಆಹ್ವಾನಿಸುತ್ತೇವೆ. ನಾವು ಕರ್ನಾಟಕ ರಾಜ್ಯಕ್ಕೆ ಸೇರುವ ಬಗ್ಗೆ ನಿರ್ಣಯ ಕೈಗೊಳ್ಳುತ್ತೇವೆ. 2012ರ ಠರಾವು ಹಳೆಯದು ಇದೆ ಅಂತಾ ದೇವೇಂದ್ರ ಫಡ್ನವಿಸ್ ಹೇಳ್ತಾರೆ. ಆದ್ರೆ ನಮಗೆ ಈವರೆಗೂ ನೀರು ಸಿಕ್ಕಿಲ್ಲ. ನೀವು ಇಲ್ಲಿ ಬಂದು ಮಹಾರಾಷ್ಟ್ರ ಬಿಟ್ಟು ಹೋಗಬೇಡಿ ನಾವು ನೀರು ಕೊಡ್ತೇವೆ ಅಂತಾ ಹೇಳಿ. ಬೆಳಗಾವಿ, ಕಾರವಾರ ನೀವು ನಮಗೆ ಕೊಡ್ತೀರಾ ಅಂತಾ ಶರದ್ ಪವಾರ್ ಕೇಳಿದ್ದಾರೆ. ಇದರರ್ಥ ಜತ್ತ ತಾಲೂಕು ನಾವು ಕರ್ನಾಟಕಕ್ಕೆ ನೀಡ್ತೆವಿ ಎಂಬುದಾಗಿದೆ.

ಮಹಾಜನ್ ವರದಿ ಪ್ರಕಾರ ಜತ್ ತಾಲೂಕಿನ ಹಳ್ಳಿಗಳು ಕರ್ನಾಟಕಕ್ಕೆ ಸೇರುತ್ತವೆ. ಜತ್ತ ತಾಲೂಕು ಕರ್ನಾಟಕಕ್ಕೆ ಸೇರ್ಪಡೆ ಆಗುತ್ತೆ ಅಂತಾ ಯಾವುದೇ ಸೌಲಭ್ಯ ನಮಗೆ ನೀಡಿಲ್ಲ. 40 ವರ್ಷ ರಾಜಕಾರಣಿಗಳು ಏನೇನೋ ಬೊಗಳಿದ್ದಾರೆ. ನಾವು ಕರ್ನಾಟಕಕ್ಕೆ ಹೋಗುವ ನಿರ್ಧಾರ ಕೈಗೊಳ್ಳುವಂತೆ ಮಾಡಿದ್ಯಾರು? ಮೈಚಾಳ ಯೋಜನೆ ಜಾರಿ ಆಗುತ್ತೆ ಅಂತಾ ಹಲವು ವರ್ಷಗಳಿಂದ ನಿರೀಕ್ಷಿಸಿದರೂ ಆಗಿಲ್ಲ. ಬೆಳಗಾವಿ, ಕಾರವಾರ ಜನ ಮಹಾರಾಷ್ಟ್ರಕ್ಕೆ ಬರಲು ಏಕೆ ಉತ್ಸುಕರಾಗಿದ್ದಾರೆ ಗೊತ್ತಿಲ್ಲ. ಆದ್ರೆ ನಮಗೆ ನೀರು ಕೊಡ್ತಿಲ್ಲ ಅಂದ್ರೆ ನಾವು ಏನ್ ಮಾಡೋದು. ಮಹಾರಾಷ್ಟ್ರ ಸರ್ಕಾರದ ಯಾವುದೇ ಪ್ರತಿನಿಧಿ ನಮ್ಮನ್ನ ಸಂಪರ್ಕಿಸಿಲ್ಲ. ನಾವು ಯಾವುದೇ ಪಕ್ಷಕ್ಕೆ ಸಂಬಂಧಿಸಿದವರಲ್ಲ ಎಂದು ಜಲ ಸಂಘರ್ಷ ಸಮಿತಿ ಮುಖಂಡ ಸುನೀಲ್ ಪೋತದಾರ್ ಆಕ್ರೋಶ ಹೊರ ಹಾಕಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:49 am, Sat, 26 November 22