ಬೆಳಗಾವಿ: ಚರ್ಚ್‌ಗೆ ನುಗ್ಗಿ ಪಾದ್ರಿಗೆ ತಲ್ವಾರ್ ತೋರಿಸಿರುವ ಅಪರಿಚಿತ ವ್ಯಕ್ತಿಯು ಜೀವ ಬೆದರಿಕೆ ಹಾಕಿರುವ ಘಟನೆ ಬೆಳಗಾವಿಯ ಬಾಕ್ಸೈಟ್ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ದಿ ವರ್ಕರ್ಸ್ ಚರ್ಚ್‌ನಲ್ಲಿ ನಡೆದಿದೆ. ಸ್ಥಳೀಯರು ಆಗಮಿಸುತ್ತಿದ್ದಂತೆ ಆತ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಎಪಿಎಂಸಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಈ ವ್ಯಕ್ತಿಯು ಕಾಂಪೌಂಡ್ ಜಿಗಿದು ಮೊದಲ ಮಹಡಿಯ ಮನೆ ಎದುರು ಬಂದಿದ್ದ. ದುಷ್ಕರ್ಮಿಯಿಂದ ತಪ್ಪಿಸಿಕೊಂಡ ಫಾದರ್ ಫ್ರಾನ್ಸಿಸ್ ಡಿಸೋಜ ಮೊದಲ ಮಹಡಿಯಿಂದ ಕೆಳಗಿಳಿದರು. ತಕ್ಷಣ ಸ್ಥಳೀಯರು ರಕ್ಷಣೆಗೆ ಧಾವಿಸಿದರು. ಜನರು ಸೇರುವುದನ್ನು ಗಮನಿಸಿದ ವ್ಯಕ್ತಿ ಅಲ್ಲಿಂದ ಪರಾರಿಯಾದ. ವ್ಯಕ್ತಿಯೊಬ್ಬ ತಲ್ವಾರ್ ಹಿಡಿದು ಚರ್ಚ್ ಒಳಗೆ ನುಗ್ಗುವ ದೃಶ್ಯವು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚರ್ಚ್‌ಗೆ ಹೊಂದಿಕೊಂಡಂತೆ ಇರುವ ಮನೆಯ ಸ್ಟೋರ್ ರೂಮ್‌ನಲ್ಲಿ ಈತ ಕಳ್ಳತನಕ್ಕೆ ಬಂದಿರಬಹುದು ಎಂದು ಶಂಕಿಸಲಾಗಿದೆ. ಎಪಿಎಂಸಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಬೆಳಗಾವಿಯಲ್ಲಿ ಕರ್ನಾಟಕ ವಿಧಾನಮಂಡಲ ಅಧಿವೇಶನ ಆರಂಭವಾಗುವುದಕ್ಕೆ ಒಂದು ದಿನ ಮೊದಲು ವರದಿಯಾಗಿರುವ ಈ ಘಟನೆಯ ಬಗ್ಗೆ ವ್ಯಾಪಕ ಆಕ್ಷೇಪಗಳು ವ್ಯಕ್ತವಾಗಿವೆ. ಅಧಿವೇಶನದಲ್ಲಿ ಮಂಡಿಸಬಹುದು ಎಂದು ಹೇಳಲಾಗುತ್ತಿರುವ ಮತಾಂತರ ನಿಷೇಧ ಕಾಯ್ದೆಗೆ ಕ್ರಿಶ್ಚಿಯನ್ನರು ಸೇರಿದಂತೆ ಹಲವು ಸಮುದಾಯಗಳಿಂದ ವ್ಯಾಪಕ ಆಕ್ಷೇಪಗಳು ವ್ಯಕ್ತವಾಗಿವೆ. ಸಿಸಿಟಿವಿ ಫೂಟೇಜ್ಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ವಿಶ್ಲೇಷಿಸಿರುವ ಪೊಲೀಸರು ಅಗತ್ಯ ಭದ್ರತೆ ಒದಗಿಸಲಾಗಿದೆ ಎಂದು ಹೇಳಿದ್ದಾರೆ. ಘಟನೆಯನ್ನು ಖಂಡಿಸಿರುವ ಬೆಂಗಳೂರು ಆರ್ಚ್ಬಿಷಪ್ ಕಚೇರಿಯ ವಕ್ತಾರ ಜೆ.ಎ.ಕಾಂತರಾಜ್, ‘ಇದು ಅಪಾಯಕಾರಿ ಮತ್ತು ಆಘಾತಕಾರಿ ಪ್ರವೃತ್ತಿ’ ಎಂದರು.
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಕರ್ನಾಟಕದ 30 ಹಿಂದುಪರ ಸಂಘಟನೆಗಳ ನಾಯಕರೊಂದಿಗೆ ಮಾತುಕತೆ ನಡೆಸಿದ ನಂತರ ಮಾತನಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಶೀಘ್ರ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸುವುದಾಗಿ ತಿಳಿಸಿದ್ದರು. ಮುಖ್ಯಮಂತ್ರಿಯ ಈ ನಿರ್ಧಾರವನ್ನು ಪ್ರತಿಪಕ್ಷ ಕಾಂಗ್ರೆಸ್ ವಿರೋಧಿಸಿತ್ತು.
ಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದ ಬೆಂಗಳೂರಿನ ಆರ್ಚ್ ಬಿಷಪ್ ಪೀಟರ್ ಮಚಾದೊ, ‘ಕರ್ನಾಟಕದ ಕ್ರೈಸ್ತ ಸಮುದಾಯವು ಸರ್ಕಾರದ ನಿರ್ಧಾರವನ್ನು ಸಂಪೂರ್ಣವಾಗಿ ವಿರೋಧಿಸುತ್ತದೆ. ಈಗಾಗಲೇ ಸಾಕಷ್ಟು ಕಾನೂನುಗಳು ಮತ್ತು ನ್ಯಾಯಾಲಯದ ನಿರ್ದೇಶನಗಳಿವೆ. ಹೀಗಿರುವಾಗ ಮತ್ತೊಂದು ಹೊಸ ಕಾಯ್ದೆಯ ಔಚಿತ್ಯವಾದರೂ ಏನು’ ಎಂದು ಪ್ರಶ್ನಿಸಿದ್ದರು.
ಇದನ್ನೂ ಓದಿ: ಮತಾಂತರ ನಿಷೇಧ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಮತಾಂತರ ಆಗುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದ ಹೆಚ್.ಆಂಜನೇಯ
ಇದನ್ನೂ ಓದಿ: ಮತ್ತೆ ಜೋರಾದ ಮತಾಂತರ ಕಾಯ್ದೆ ಜಾರಿ ಚರ್ಚೆ; ಕಾಂಗ್ರೆಸ್ ವಿರೋಧ, ಭಾರತೀಯ ಕ್ರೈಸ್ತ ಒಕ್ಕೂಟದಿಂದ ಧರಣಿಗೆ ನಿರ್ಧಾರ
Published On - 3:06 pm, Sun, 12 December 21