ಮತ್ತೆ ಜೋರಾದ ಮತಾಂತರ ಕಾಯ್ದೆ ಜಾರಿ ಚರ್ಚೆ; ಕಾಂಗ್ರೆಸ್ ವಿರೋಧ, ಭಾರತೀಯ ಕ್ರೈಸ್ತ ಒಕ್ಕೂಟದಿಂದ ಧರಣಿಗೆ ನಿರ್ಧಾರ
ಮತಾಂತರ ನಿಷೇಧ ಕಾಯ್ದೆ ಜಾರಿಗೆ ಮುಂದಾಗಿರುವ ಸರ್ಕಾರ ಅಧಿವೇಶನದಲ್ಲಿ ಮಂಡನೆಗೆ ಸಿದ್ಧತೆ ನಡೆಸ್ತಿದೆ ಎನ್ನಲಾಗಿದೆ. ಸದ್ಯಕ್ಕೆ ರಾಜ್ಯದಲ್ಲಿ ಮತಾಂತರ ತಡೆಗೆ ನಿರ್ದಿಷ್ಟ ಕಾಯ್ದೆ ಇಲ್ಲ, ಒಂದ್ವೇಳೆ ಮತಾಂತರ ಮಾಡಿದರೂ ಶಿಕ್ಷೆಗೆ ಒಳಪಡಿಸಲು ಆಗಲ್ಲ.
ಬೆಂಗಳೂರು: ರಾಜ್ಯದಲ್ಲಿ ಮತ್ತೆ ಮತಾಂತರ ಕಾಯ್ದೆ ಜಾರಿ ಚರ್ಚೆ ಜೋರಾಗಿದೆ. ಬೆಳಗಾವಿ ಅಧಿವೇಶನದಲ್ಲೇ ಕಾಯ್ದೆ ಜಾರಿಗೊಳಿಸಬೇಕು ಎಂಬ ಉದ್ದೇಶ ಸರ್ಕಾರದ ಮಟ್ಟದಲ್ಲಿ ಇದೆಯಾದರೂ ಅದಕ್ಕೆ ಪೂರಕ ತಯಾರಿ ಇನ್ನೂ ಆಗಿಲ್ಲ. ಮತ್ತೊಂದೆಡೆ ಆಡಳಿದ ಪಕ್ಷದ ಶಾಸಕರೇ ಖಾಸಗಿ ವಿಧೇಯಕ ಮಂಡಿಸಲು ಮುಂದಾಗಿದ್ದಾರೆ. ಕಾಂಗ್ರೆಸ್ ಕೂಡಾ ವಿರೋಧ ಮಾಡ್ತಿದೆ. ಹಾಗೂ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡದಂತೆ ಆಗ್ರಹಿಸಿ ಭಾರತೀಯ ಕ್ರೈಸ್ತ ಒಕ್ಕೂಟ ಧರಣಿಗೆ ನಿರ್ಧರಿಸಿದೆ.
ಬಿಜೆಪಿ-ಕಾಂಗ್ರೆಸ್ ಮಧ್ಯೆ ಮತಾಂತರ ಸಮರ ಕಾಂಗ್ರೆಸ್-ಬಿಜೆಪಿ ನಡುವೆ ಮತಾಂತರ ಮಲ್ಲಯುದ್ಧವೇ ನಡೀತಿದೆ. ಮತಾಂತರ ನಿಷೇಧ ಕಾಯ್ದೆ ಭಾರೀ ಸಂಚಲನ ಸೃಷ್ಟಿಸಿದೆ. ಮತಾಂತರ ನಿಷೇಧ ಕಾಯ್ದೆ ತರಲು ಬಿಜೆಪಿ ಸರ್ಕಾರ ಹೊರಟಿರೋದು ಕಾಂಗ್ರೆಸ್ ನಾಯಕರ ಕಣ್ಣು ಕೆಂಪಾಗಾಗಿಸಿದೆ. ಮತಾಂತರ ನಿಷೇಧ ಕಾಯ್ದೆಯ ಬಗ್ಗೆ ಡಿಸೆಂಬರ್ 9ರಂದು ಸಭೆ ನಡೆದಿತ್ತು. ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿ ಹಲವು ಅಧಿಕಾರಿಗಳು ಭಾಗಿಯಾಗಿದ್ರು. ಆದ್ರೆ, ಅಂದಿನ ಸಭೆಯಲ್ಲಿ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ಹೀಗಾಗಿ ಅಧಿವೇಶನಕ್ಕೂ ಮುನ್ನ ಮತ್ತೊಮ್ಮೆ ಚರ್ಚೆ ನಡೆಸಲು ಸಚಿವರು ತೀರ್ಮಾನಿಸಿದ್ರು. ಇದೀಗ ಸೋಮವಾರದಿಂದ ಚಳಿಗಾಲದ ಅಧಿವೇಶನ ಆರಂಭವಾಗ್ತಿದ್ದು, ಮತಾಂತರ ನಿಷೇಧ ಕಾಯ್ದೆ ಕಾವೇರೋ ಸಾಧ್ಯತೆ ಇದೆ.
ಮತಾಂತರ ನಿಷೇಧ ಕಾಯ್ದೆಯಲ್ಲಿ ಏನಿದೆ? ಮತಾಂತರ ನಿಷೇಧ ಕಾಯ್ದೆ ಜಾರಿಗೆ ಮುಂದಾಗಿರುವ ಸರ್ಕಾರ ಅಧಿವೇಶನದಲ್ಲಿ ಮಂಡನೆಗೆ ಸಿದ್ಧತೆ ನಡೆಸ್ತಿದೆ ಎನ್ನಲಾಗಿದೆ. ಸದ್ಯಕ್ಕೆ ರಾಜ್ಯದಲ್ಲಿ ಮತಾಂತರ ತಡೆಗೆ ನಿರ್ದಿಷ್ಟ ಕಾಯ್ದೆ ಇಲ್ಲ, ಒಂದ್ವೇಳೆ ಮತಾಂತರ ಮಾಡಿದರೂ ಶಿಕ್ಷೆಗೆ ಒಳಪಡಿಸಲು ಆಗಲ್ಲ. ಹೀಗಾಗಿ ಕೆಲವು ಅಂಶಗಳೊಂದಿಗೆ ಕಾಯ್ದೆ ಜಾರಿಗೆ ಸರ್ಕಾರ ಪ್ಲ್ಯಾನ್ ಮಾಡಿದೆ. ದೂರು ನೀಡಿದರೆ ಶಿಕ್ಷೆಗೆ ಗುರಿಪಡಿಸುವ ಅಂಶ ಸೇರಿಸಿ, ಕಾಯ್ದೆ ಜಾರಿ ಮಾಡಲು ಮುಂದಾಗಿದೆ. ಕಾಯ್ದೆ ಜಾರಿಯಾದ್ರೆ, ಮತಾಂತರ ಮಾಡಿದರೆ ಶಿಕ್ಷೆಗೆ ಒಳಪಡಿಸುವ ಅವಕಾಶವಿರುತ್ತೆ. ಈ ಅಂಶವನ್ನೇ ಇಟ್ಟುಕೊಂಡು ಕಾಯ್ದೆ ಜಾರಿಗೆ ಸರ್ಕಾರ ಚರ್ಚೆ ನಡೆಸ್ತಿದೆ.
ಈ ಮಧ್ಯೆ ತನ್ನ ವೋಟ್ ಬ್ಯಾಂಕ್ ದೃಷ್ಟಿಯಿಂದ ವಿಪಕ್ಷ ಕಾಂಗ್ರೆಸ್ ಕಾಯ್ದೆ ಜಾರಿಗೆ ವಿರೋಧ ವ್ಯಕ್ತಪಡಿಸುತ್ತಿದೆ. ಹೀಗಾಗಿ ಈಗ ರಾಜ್ಯ ಸರ್ಕಾರ ಧಾರ್ಮಿಕ ಸೂಕ್ಷ್ಮತೆಯ ವಿಷಯವನ್ನು ನಿಭಾಯಿಸಲು ಎಚ್ಚರಿಕೆಯ ಹೆಜ್ಜೆ ಇಡಬೇಕಾದ ಅನಿವಾರ್ಯತೆಯ ಪರಿಸ್ಥಿತಿಯಲ್ಲಿದೆ. ಯಾಕಂದ್ರೆ, ಕಾಯ್ದೆ ಜಾರಿಗೆ ಸರ್ಕಾರದ ಮೇಲೆ ಒತ್ತಡ ಇರೋದ್ರ ಜೊತೆಗೆ, ಕಾಯ್ದೆ ಜಾರಿಗೆ ವಿರೋಧವೂ ಇಷ್ಟೇ ಇದೆ.
ಮತ್ತೊಂದೆಡೆ ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಮಂಡನೆ ಸಾಧ್ಯತೆ ಹಿನ್ನೆಲೆಯಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡದಂತೆ ಆಗ್ರಹಿಸಿ ಸರ್ಕಾರದ ಮೇಲೆ ಒತ್ತಡ ಹಾಕಲು ಭಾರತೀಯ ಕ್ರೈಸ್ತ ಒಕ್ಕೂಟ ಮುಂದಾಗಿದೆ. ಬೆಳಗಾವಿ ಅಧಿವೇಶನದ ವೇಳೆ ಡಿ.17ರಂದು ಭಾರತೀಯ ಕ್ರೈಸ್ತ ಒಕ್ಕೂಟ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಮತಾಂತರ ನಿಷೇಧ ಕಾಯ್ದೆ ಜಾರಿ ತರಬಾರದು ಮತ್ತು ಚರ್ಚ್ ಮೇಲೆ ದಾಳಿ ಪ್ರಕರಣ ತಡೆಗೆ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲು ಕ್ರೈಸ್ತ ಸಮುದಾಯದ ಮುಖಂಡರು ಚಿಂತಿಸಿದ್ದಾರೆ. ಈಗಾಗಲೇ ನಗರ ಪೊಲೀಸ್ ಆಯುಕ್ತರ ಬಳಿ ಭಾರತೀಯ ಕ್ರೈಸ್ತ ಒಕ್ಕೂಟ ಧರಣಿಗೆ ಅನುಮತಿ ಪಡೆದುಕೊಂಡಿದೆ.
ರಾಜ್ಯದಲ್ಲಿ ಜಾರಿಯಾಗುತ್ತಾ ಮತಾಂತರ ನಿಷೇಧ ಕಾಯ್ದೆ? ನಮ್ಮ ಸಂವಿಧಾನ ಧಾರ್ಮಿಕ ಸ್ವಾತಂತ್ರ ನೀಡಿದೆ. ಒಬ್ಬ ವ್ಯಕ್ತಿ ತನ್ನಿಚ್ಛೆಯಂತೆ ಯಾವುದೇ ಧರ್ಮವನ್ನ ಅನುಸರಿಸೋ ಅವಕಾಶ ಕೊಟ್ಟಿದೆ. ಆದ್ರೆ, ಬಲವಂತವಾಗಿ, ಆಸೆ, ಆಮೀಶಗಳಿಗೆ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರ ಮಾಡೋದನ್ನ ಒಪ್ಪೊದಿಲ್ಲ. ಆದ್ರೀಗ, ಇಂಥದ್ದೇ ಅಕ್ರಮ ಮತ್ತು ಬಲವಂತದ ಮತಾಂತರದ ಆರೋಪ ಕೇಳಿ ಬರ್ತಿದೆ. ಖುದ್ದು ಶಾಸಕ ಗೂಳಿ ಹಟ್ಟಿ ಶೇಖರ್ ತಮ್ಮ ತಾಯಿಯನ್ನೇ ಅನ್ಯ ಧರ್ಮಕ್ಕೆ ಮತಾಂತರ ಮಾಡಿದ್ದಾರೆ ಅಂತಾ ವಿಧಾನಸಭೆ ಕಲಾಪದಲ್ಲೇ ಕೆಲ ತಿಂಗಳ ಹಿಂದೆಯೇ ಹೇಳಿದ್ರು.
ಇದನ್ನೂ ಓದಿ: ಮತಾಂತರ ಕಾಯ್ದೆ ಜಾರಿ ವಿಚಾರ ಚರ್ಚಿಸಲು ಸಿಎಂ ಬೊಮ್ಮಾಯಿ ಭೇಟಿಗೆ ಆಗಮಿಸಿದ ಶ್ರೀಗಳ ನಿಯೋಗ