ಯಡಿಯೂರಪ್ಪ ಸಿಎಂ ಆಗಿದ್ದಾಗ ಪ್ರವಾಹ ಬಂದಿತ್ತು; ಈವರೆಗೆ ಸಂಪೂರ್ಣ ಪರಿಹಾರ ಕೊಟ್ಟಿಲ್ಲ: ಸಿದ್ದರಾಮಯ್ಯ ವಾಗ್ದಾಳಿ
ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಸಿದ್ದರಾಮಯ್ಯ ಹಾಗೂ ಜತೆಗೆ ಮಾಜಿ ಸಚಿವ ಕೆ.ಜೆ ಜಾರ್ಜ್ ಆಗಮಿಸಿದ್ದಾರೆ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸ್ವಾಗತಿಸಿದ್ದಾರೆ.
ಬೆಳಗಾವಿ: ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದಾಗ ಪ್ರವಾಹ ಬಂದಿತ್ತು. ಮನೆ ಬಿದ್ದವರಿಗೆ ಈವರೆಗೆ ಸಂಪೂರ್ಣ ಪರಿಹಾರ ಕೊಟ್ಟಿಲ್ಲ. ಒಂದು ಕಂತಿನ ಹಣ ಮಾತ್ರ ಬಿಡುಗಡೆ ಮಾಡಿದ್ದಾರೆ. ರಾಜ್ಯದಲ್ಲಿ ಪ್ರವಾಹದಿಂದ ಶೇ.70 ರಷ್ಟು ಬೆಳೆ ಹಾನಿ ಆಗಿದೆ. ಆದ್ರೆ ಪರಿಹಾರ ನೀಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕರ್ನಾಟಕ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರೈತರ ಹೋರಾಟ ರಾಜಕೀಯ ಪ್ರೇರಿತ ಎಂದಿದ್ದ ಬಿಜೆಪಿ, ಹಾಗಾದರೆ ಕೃಷಿ ಕಾಯ್ದೆಗಳನ್ನು ಏಕೆ ವಾಪಸ್ ಪಡೆದರು? ರಾಜ್ಯಸರ್ಕಾರ ರೈತರ ವಿರೋಧಿ ಎಂದು ಕಿಡಿಕಾರಿದ್ದಾರೆ.
ನಾಳೆಯಿಂದ ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನ ನಡೆಯಲಿದೆ. ಈ ಬಾರಿ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಯಲಿದೆ. ಅಧಿವೇಶನದಲ್ಲಿ ಪಾಲ್ಗೊಳ್ಳುವ ಕಾರಣದಿಂದ ಬೆಳಗಾವಿಗೆ ಆಗಮಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಈ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಸಿದ್ದರಾಮಯ್ಯ ಹಾಗೂ ಜತೆಗೆ ಮಾಜಿ ಸಚಿವ ಕೆ.ಜೆ ಜಾರ್ಜ್ ಆಗಮಿಸಿದ್ದಾರೆ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸ್ವಾಗತಿಸಿದ್ದಾರೆ.
ಬೆಳಗಾವಿಯಲ್ಲಿ ಅಧಿವೇಶನ ಇದ್ದಾಗ ಪ್ರತಿಭಟನೆ ಮಾಡೋದು ಸಹಜ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ವಿಚಾರವಾಗಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಆ ರೀತಿ ಲಘುವಾಗಿ ಮಾತನಾಡಲು ಹೋಗಬಾರದು. ದೆಹಲಿಯಲ್ಲಿ ಹೋರಾಟ ಮಾಡಿದ ರೈತರು ರಾಜಕೀಯ ಪ್ರೇರಿತ ಅಂತಾ ಬೊಮ್ಮಾಯಿ ಹೇಳಿದ್ದರು. ಮತ್ತೆ ಯಾಕೆ ಮೂರು ಕಾನೂನು ವಾಪಾಸ್ ತೆಗೆದುಕೊಂಡರು ಎಂದು ಟೀಕಿಸಿದ್ದಾರೆ.
ಅಂಜಲಿ ನಿಂಬಾಳ್ಕರ್ ಖಾನಾಪುರದಿಂದ ಬೆಳಗಾವಿವರೆಗೂ ಪಾದಯಾತ್ರೆ ಮಾಡುತ್ತಿದ್ದಾರೆ. ಅಂಜಲಿಯವರು ನನಗೂ ಬರುವಂತೆ ಕರೆದಿದ್ದಾರೆ. ನಾಳೆ ನಾನು ಎರಡು ಕಿ.ಮೀ. ಅವರೊಂದಿಗೆ ನಡೆಯುತ್ತೇನೆ ಎಂದು ತಿಳಿಸಿದ್ದಾರೆ. ಸಿದ್ದರಾಮಯ್ಯ ನಾಳೆ ಸರ್ಕಾರದ ಚಳಿ ಬಿಡಿಸಲು ರೆಡಿಯಾಗಿದ್ದಾರೆ ಎಂಬ ಪ್ರಶ್ನೆಗೆ ಅಸೆಂಬ್ಲಿಯಲ್ಲಿ ಬಂದು ನೋಡಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಾಜಿ ಕೇಂದ್ರ ಸಚಿವ, ಹಿರಿಯ ರಾಜಕಾರಣಿ ಆರ್ಎಲ್ ಜಾಲಪ್ಪ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ
ಇದನ್ನೂ ಓದಿ: ಬೆಳಗಾವಿ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ಸುವರ್ಣಸೌಧ ಚಲೋ