ಲೋಕಸಭಾ ಫಲಿತಾಂಶ ಬೆನ್ನಲ್ಲೇ ಬೆಳಗಾವಿ ಕಾಂಗ್ರೆಸ್​​ನಲ್ಲಿ ಅಲ್ಲೋಲ ಕಲ್ಲೋಲ, ಸ್ವಪಕ್ಷದ ಶಾಸಕರ ವಿರುದ್ಧವೇ ಸಿಡಿದೆದ್ದ ಜಾರಕಿಹೊಳಿ

ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್​​ನಲ್ಲಿ ಅಲ್ಲೋಲ ಕಲ್ಲೋಲವಾಗಲಿದೆ ಎಂದು ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್​ ನಾಯಕರು ಭವಿಷ್ಯ ನುಡಿದಿದ್ದರು. ಅದರಂತೆ ಇದೀಗ ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಕರ್ನಾಟಕ ಕಾಂಗ್ರೆಸ್ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಅದರಲ್ಲೂ ಪ್ರಮುಖವಾಗಿ ಬೆಳಗಾವಿ ಕಾಂಗ್ರೆಸ್​ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ.

ಲೋಕಸಭಾ ಫಲಿತಾಂಶ ಬೆನ್ನಲ್ಲೇ ಬೆಳಗಾವಿ ಕಾಂಗ್ರೆಸ್​​ನಲ್ಲಿ ಅಲ್ಲೋಲ ಕಲ್ಲೋಲ, ಸ್ವಪಕ್ಷದ ಶಾಸಕರ ವಿರುದ್ಧವೇ ಸಿಡಿದೆದ್ದ ಜಾರಕಿಹೊಳಿ
ಮಹೇಂದ್ರ ತಮ್ಮಣ್ಣವರ್, ಸತೀಶ್ ಜಾರಕಿಹೊಳಿ, ಲಕ್ಷ್ಮಣ ಸವದಿ
Follow us
|

Updated on:Jun 07, 2024 | 6:29 PM

ಬೆಳಗಾವಿ, (ಜೂನ್ 07): ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಕಾಂಗ್ರೆಸ್​ನಲ್ಲಿ ಅಸಮಾಧಾನಗಳು ಭುಗಿಲೆದ್ದಿವೆ. ಅದರಲ್ಲೂ ಪ್ರಮುಖವಾಗಿ ಬೆಳಗಾವಿ ಜಿಲ್ಲಾ ಕಾಂಗ್ರಸ್​​ನಲ್ಲಿ ನಾಯಕರ ನಡುವೆ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಹೌದು..ಸಚಿವ ಸತೀಶ್ ಜಾರಕಿಹೊಳಿ ಅವರು ತಮ್ಮ ಪಕ್ಷದ ಶಾಸಕರಾದ ಲಕ್ಷ್ಮಣ ಸವದಿ, ಮಹೇಂದ್ರ ತಮ್ಮಣ್ಣವರ್ ವಿರುದ್ಧ ಬಹಿರಂಗವಾಗಿಯೇ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಮ್ಮನ್ನ ತುಳಿಯುತ್ತಿದ್ದಾರೆ ಎಂದು ಕುಡುಚಿ ಕಾಂಗ್ರೆಸ್ ಶಾಸಕ ಮಹೇಂದ್ರ ತಮ್ಮಣ್ಣವರ್, ಸತೀಶ್ ಜಾರಕಿಹೊಳಿ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ್ದರು. ಇದಕ್ಕೆ ಈಗ ಸತೀಶ್ ಜಾರಕಿಹೊಳಿ ತಿರುಗೇಟು ತಿರುಗೇಟು ನೀಡಿದ್ದಾರೆ. ಅಲ್ಲದೇ ಕುಡಚಿ, ಅಥಣಿಯಲ್ಲಿ ಕಾಂಗ್ರೆಸ್ ಶಾಸಕರು ಕೆಲಸ ಮಾಡಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಬೆಳಗಾವಿಯಲ್ಲಿಂದು (ಜೂನ್ 07) ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಕುಡಚಿ, ಅಥಣಿಯಲ್ಲಿ ಕಾಂಗ್ರೆಸ್ ಶಾಸಕರು ಕೆಲಸ ಮಾಡಿಲ್ಲ. ಕುಡಚಿ ವಿಧಾನಸಭಾ ಕ್ಷೇತ್ರದಲ್ಲಿ ಎರಡು ದಿನ ಇದ್ದೆ. ಆದರೆ ಮಹೇಂದ್ರ ತಮ್ಮಣ್ಣವರ್ ಅವರು ನನ್ನ ಕೈಗೆ ಸಿಗಲಿಲ್ಲ. ಅಥಣಿಯಲ್ಲೂ ಹಾಗೇ ಆಯ್ತು. ಯಾರ ಬಗ್ಗೆಯೂ ಪಕ್ಷದ ವರಿಷ್ಠರಿಗೆ ದೂರು ಕೊಡುವುದಿಲ್ಲ. ಪಕ್ಷದ ವಿರುದ್ಧ ಕೆಲಸ ಮಾಡಿದವರ ಬಗ್ಗೆ ಜನರಿಗೆ ಗೊತ್ತಾಗಬೇಕಿತ್ತು. ಅದನ್ನು ಜನರಿಗೆ ಹೇಳುವ ಕೆಲಸ ಮಾಡಿರುವೆ. ನಾವು ಸವದಿಯವರು ರಾಜಕೀಯವಾಗಿ ದೂರವಾಗಿದ್ವಿ. ಈ ಚುನಾವಣೆಯಲ್ಲಿ ನಾವು ಹತ್ತಿರ ಆಗುವುದಕ್ಕೆ ಅವಕಾಶವಿತ್ತು. ಅಥಣಿ ಕ್ಷೇತ್ರದಲ್ಲಿ ಕಾಂಗ್ರೆಸ್​ಗೆ ಲೀಡ್ ಆಗುತ್ತೆ ಅಂದುಕೊಂಡಿದ್ದೆ. ಆದರೆ ಅಥಣಿಯಲ್ಲಿ ಲೀಡ್ ಸಿಕ್ಕಿಲ್ಲ ಎಂದು ಪರೋಕ್ಷವಾಗಿ ಶಾಸಕ ಲಕ್ಷ್ಮಣ ಸವಿ ವಿರುದ್ಧ ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ: ಬಿಜೆಪಿಯಿಂದ ಪಕ್ಷಕ್ಕೆ ಬಂದವರಿಂದ ಕೊನೆಯ ವರೆಗೂ ಸಮಸ್ಯೆ: ಸವದಿ ವಿರುದ್ಧ ಸತೀಶ್ ಜಾರಕಿಹೊಳಿ‌ ಬಹಿರಂಗ ಅಸಮಾಧಾನ

ಪ್ರಕಾಶ್ ಹುಕ್ಕೇರಿ ಸೇರಿ ಇನ್ನುಳಿದ ನಾಯಕರು ಕೆಲಸ ಮಾಡಿದ್ದಾರೆ. ನನ್ನ ಪುತ್ರಿಯ ಗೆಲುವಿಗಾಗಿ ಕೆಲಸ ಮಾಡಿದ್ದಾರೆ. ಬೇರೆ ಕ್ಷೇತ್ರಗಳಲ್ಲೂ ಮುಖಂಡರು ಪಕ್ಷದ ಪರ ಕೆಲಸ ಮಾಡಿದ್ದಾರೆ ಎಂದು ಹೇಳಿದರು. ಈ ಮೂಲಕ ಬಿಜೆಪಿಯಿಂದ ಕಾಂಗ್ರೆಸ್​ಗೆ ಬಂದಿರುವ ಲಕ್ಷ್ಮಣ ಸವವಿ ಹಾಗೂ ಸತೀಶ್ ಜಾರಕಿಹೊಳಿ ಎಲ್ಲವೂ ಸರಿ ಇಲ್ಲ ಎನ್ನುವುದು ಸಾಬೀತಾಗಿದೆ.

ಸತೀಶ್ ಜಾರಕಿಹೊಳಿ ವಿರುದ್ಧ ಕುಡಚಿ ಶಾಸಕ ಕಿಡಿ

ಇನ್ನು ಇದಕ್ಕೂ ಮೊದಲು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ್ ಸತೀಶ್ ಜಾರಕಿಹೊಳಿ ವಿರುದ್ಧ ಕಿಡಿಕಾರಿದ್ದರು. ನನ್ನನ್ನೂ ಸೇರಿದಂತೆ ಈ ಭಾಗದ ನಮ್ಮ ದಲಿತ ನಾಯಕರನ್ನು ಜಾರಕಿಹೊಳಿ ಕುಟುಂಬ ರಾಜಕೀಯವಾಗಿ ನಿರ್ನಾಮ ಮಾಡುತ್ತಿದೆ ಎಂದು ಬಹಿರಂಗವಾಗಿಯೇ ಸಚಿವ ಸತೀಶ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಈ ಭಾಗದ ಪರಿಶಿಷ್ಟ ಜಾತಿ ಸಮುದಾಯದ ಎಲ್ಲ ನಾಯಕರನ್ನೂ ಜಾರಕಿಹೊಳಿ ಕುಟುಂಬದವರು ಮುಗಿಸುತ್ತಲೇ ಬಂದಿದ್ದಾರೆ. ಮಾಜಿ ಶಾಸಕ ಶ್ಯಾಮ ಘಾಟಗೆ, ಮಹಾವೀರ ಮೊಹಿತೆ, ಪ್ರದೀಪ ಮಾಳಗಿ, ಸುರೇಶ ತಳವಾರ ಅವರೆಲ್ಲ ಮನೆಯಲ್ಲಿ ಕುಳಿತುಕೊಳ್ಳುವಂತೆ ಮಾಡಿದ್ದು ಇದೇ ಕುಟುಂಬ. ಈಗ ಶಂಭು ಕಲ್ಲೋಳಿಕರ ಅವರನ್ನೂ ಮುಗಿಸಿದ್ದಾರೆ. ಕೊನೆಗೆ ಉಳಿದಿದ್ದು ನಾನೊಬ್ಬನೇ. ಹೀಗಾಗಿ, ನನ್ನ ಬೆನ್ನಿಗೆ ಬಿದ್ದಿದ್ದಾರೆ. ಅವರಿಗೆ ಪರಿಶಿಷ್ಟ ಜಾತಿ ಸಮುದಾಯದ ಏಳಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ದಲಿತ ಸಮಾಜದ ಮೇಲೆ ಅವರಿಗೆ ಕಳಕಳಿ ಇದ್ದರೇ ದಲಿತ ನಾಯಕರನ್ನು ಬೆಳೆಸುವ ಕೆಲಸ ಮಾಡುತ್ತಿದ್ದರು ಎಂದು ಖಾರವಾಗಿ ಮಾತನಾಡಿದ್ದರು.

ಒಟ್ಟಿನಲ್ಲಿ ಬೆಳಗಾವಿ ಕಾಂಗ್ರೆಸ್​ನಲ್ಲಿ ಮತ್ತೊಂದು ಸುತ್ತಿನ ಯುದ್ಧ ಶುರುವಾಗಿದ್ದು, ಇದು ಮುಂದೆ ಯಾವ ಹಂತಕ್ಕೆ ಹೋಗಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟುವ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:28 pm, Fri, 7 June 24

ತಾಜಾ ಸುದ್ದಿ