
ಬೆಳಗಾವಿ, ಜೂನ್ 23: ‘ಹಣ ನೀಡಿದವರಿಗಷ್ಟೇ ವಸತಿ ನಿಗಮದಲ್ಲಿ ಮನೆಗಳನ್ನು ಮಂಜೂರು ಮಾಡಲಾಗುತ್ತಿದೆ’ ಎಂಬ ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ್ (BR Patil) ಆಡಿಯೋ ವೈರಲ್ ಬೆನ್ನಲ್ಲೇ ಇದೀಗ ಮತ್ತೊಬ್ಬ ಕಾಂಗ್ರೆಸ್ ಶಾಸಕ ರಾಜು ಕಾಗೆ (MLA Raju Kage) ಹೊಸ ಬಾಂಬ್ ಸಿಡಿಸಿದ್ದಾರೆ. ಬಿ.ಆರ್.ಪಾಟೀಲ್ ಹೇಳಿದ್ದು ಸುಳ್ಳಲ್ಲ, ನಿಜಾನೆ ಇದೆ. ಅವರು ಹೇಳಿದ್ದ ಅಪ್ಪನ ಹಾಗಾಗಿದೆ ನನ್ನ ಪರಿಸ್ಥಿತಿ ಎಂದು ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕಾಗವಾಡ ವಿಧಾನಸಭಾ ಕ್ಷೇತ್ರದ ಶಾಸಕ ರಾಜು ಕಾಗೆ, ನಮ್ಮ ಸರ್ಕಾರದಲ್ಲಿ ಯಾವುದೇ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆಡಳಿತ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ ಎಂದು ಕಿಡಿಕಾರಿದ್ದಾರೆ.
25 ಕೋಟಿ ಅನುದಾನ ನೀಡಿ 2 ವರ್ಷ ಕಳೆದರೂ ವರ್ಕ್ ಆರ್ಡರ್ ಇಲ್ಲ. ಎರಡು ವರ್ಷ ಕಳೆದರೂ ವರ್ಕ್ ಆರ್ಡರ್ ನೀಡುತ್ತಿಲ್ಲ ಅಂದ್ರೆ ಏನರ್ಥ? ಇದರಿಂದ ನನ್ನ ಮನಸ್ಸಿಗೆ ಸಾಕಷ್ಟು ನೋವಾಗಿದೆ. ನಾನು ಸಹ ರಾಜೀನಾಮೆ ನೀಡುವ ಪರಿಸ್ಥಿತಿ ಬಂದಿದೆ. ಎರಡು ದಿನದಲ್ಲಿ ಮುಖ್ಯಮಂತ್ರಿಗೆ ರಾಜೀನಾಮೆ ಕೊಟ್ಟರು ಆಶ್ಚರ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರಾ ಅಥವಾ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ ಎನ್ನುವುದು ಅಸ್ಪಷ್ಟವಾಗಿದೆ.
ಶಾಸಕ ರಾಜು ಕಾಗೆ ಅಸಮಾಧಾನ ವಿಚಾರವಾಗಿ ಬೆಳಗಾವಿಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಪ್ರತಿಕ್ರಿಯಿಸಿದ್ದು, ರಾಜೀನಾಮೆ ಕೊಡಬೇಕು ಅಂತಾ ಹೇಳಿದ್ದಾರೆ. ನೀವು ರಾಜೀನಾಮೆ ಕೊಡುವುದರಿಂದ ಈ ಸಮಸ್ಯೆ ಸರಿಯಾಗಲ್ಲ. ನಿಮ್ಮ ಮುಖ್ಯಮಂತ್ರಿ ಅವರನ್ನ ರಾಜೀನಾಮೆ ಕೊಡಿಸಿ. ಜನರ ಬಳಿ ಹೋಗೋಣ ಏನು ತೀರ್ಮಾನ ಆಗುತ್ತೆ ನೋಡೋಣ. ಬಿಜೆಪಿಗೆ ಯಾರು ಬಂದರೂ ಸ್ವಾಗತ ಮಾಡುತ್ತೇವೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಪರಿಷತ್ ಬಿಜೆಪಿ ಸದಸ್ಯ ಸಿ.ಟಿ.ರವಿ ಹೇಳಿಕೆ ನೀಡಿದ್ದು, ಭ್ರಷ್ಟಾಚಾರ ಬಿಟ್ಟು ಕಾಂಗ್ರೆಸ್ ಇಲ್ಲ, ಕಾಂಗ್ರೆಸ್ ಬಿಟ್ಟು ಭ್ರಷ್ಟಾಚಾರವಿಲ್ಲ. ಅಂಗೈ ಹುಣ್ಣಿಗೆ ಕನ್ನಡಿ ಹಿಡಿಯುವ ಅವಶ್ಯಕತೆ ಇಲ್ಲ. B.R.ಪಾಟೀಲ್ ಹೇಳಿಕೆ ಬಗ್ಗೆ ಹಾಲಿ ಜಡ್ಜ್ ನೇತೃತ್ವದಲ್ಲಿ ತನಿಖೆ ಆಗಲಿ. ಅದಕ್ಕಿಂತ ಮೊದಲು ಜಮೀರ್ ಅಹ್ಮದ್ ರಾಜೀನಾಮೆ ಪಡೆಯಿರಿ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:14 pm, Mon, 23 June 25