AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿ ಮತ್ತು ಚಿಕ್ಕೋಡಿಯಲ್ಲಿ 15ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಬಂದ್​ ​

ಬೆಳಗಾವಿಯಲ್ಲಿ 1,516 ಶಾಲೆಗಳು ಮತ್ತು ಚಿಕ್ಕೋಡಿಯಲ್ಲಿ 1,982 ಶಾಲೆಗಳಿವೆ. ಎರಡು ನಗರಗಳ 3,498 ಶಾಲೆಗಳ ಪೈಕಿ 340 ಶಾಲೆಗಳು ಪ್ರೌಢಶಾಲೆಗಳಾಗಿವೆ. ಈ ಶಾಲೆಗಳಲ್ಲಿ 5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೆ ಪ್ರತಿ ವರ್ಷ ಪ್ರಾಥಮಿಕ ಶಾಲೆಗಳಿಗೆ ದಾಖಲಾತಿ ಕಡಿಮೆಯಾಗುತ್ತಲೇ ಇದೆ.

ಬೆಳಗಾವಿ ಮತ್ತು ಚಿಕ್ಕೋಡಿಯಲ್ಲಿ 15ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಬಂದ್​ ​
ಸಾಂದರ್ಭಿಕ ಚಿತ್ರ
ವಿವೇಕ ಬಿರಾದಾರ
|

Updated on: Sep 02, 2023 | 8:31 AM

Share

ಬೆಳಗಾವಿ: 2023-24 ಸಾಲಿನಲ್ಲಿ ಶೈಕ್ಷಣಿಕ ವರ್ಷದಲ್ಲಿ (2023-24 Academic Year) ಮಕ್ಕಳ ದಾಖಲಾತಿ ಕೊರತೆ ಹಾಗೂ ಶಿಕ್ಷಕರ ಕೊರತೆಯಿಂದ ಬೆಳಗಾವಿ (Belagavi) ಮತ್ತು ಚಿಕ್ಕೋಡಿಯಲ್ಲಿ (Chikkodi) 15ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಬಾಗಿಲನ್ನು ಇಲಾಖೆ ಮುಚ್ಚಿದೆ. ಬಹುತೇಕ ಪ್ರಾಥಮಿಕ ಶಾಲೆಗಳೇ ಬಂದ್​ ಆಗಿವೆ. 10ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳನ್ನು ಸಮೀಪದ ಇತರ ಶಾಲೆಗಳೊಂದಿಗೆ ವಿಲೀನಗೊಳಿಸಲು ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ. ಬೆಳಗಾವಿಯಲ್ಲಿ 1,516 ಶಾಲೆಗಳು ಮತ್ತು ಚಿಕ್ಕೋಡಿಯಲ್ಲಿ 1,982 ಶಾಲೆಗಳಿವೆ. ಎರಡು ನಗರಗಳ 3,498 ಶಾಲೆಗಳ ಪೈಕಿ 340 ಶಾಲೆಗಳು ಪ್ರೌಢಶಾಲೆಗಳಾಗಿವೆ.

ಈ ಶಾಲೆಗಳಲ್ಲಿ 5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೆ ಪ್ರತಿ ವರ್ಷ ಪ್ರಾಥಮಿಕ ಶಾಲೆಗಳಿಗೆ ದಾಖಲಾತಿ ಕಡಿಮೆಯಾಗುತ್ತಲೇ ಇದೆ. ಸರ್ಕಾರದ ನಿಯಮಗಳ ಪ್ರಕಾರ, 10 ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳನ್ನು ಮುಚ್ಚಲಾಗುತ್ತದೆ ಅಥವಾ ಇತರ ಶಾಲೆಗಳೊಂದಿಗೆ ವಿಲೀನಗೊಳಿಸಲಾಗುತ್ತಿದೆ. ಈಗಾಗಲೇ ಎರಡೂ ಜಿಲ್ಲೆಗಳ 15ಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚಲಾಗಿದೆ.

ಕಿತ್ತೂರು ಕರ್ನಾಟಕದ ಒಂಬತ್ತು ಶೈಕ್ಷಣಿಕ ಜಿಲ್ಲೆಗಳಲ್ಲಿ, ಈ ವರ್ಷ 550 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಲ್ಲಿ 10 ಕ್ಕಿಂತ ಕಡಿಮೆ ದಾಖಲಾತಿಗಳನ್ನು ಹೊಂದಿವೆ. ಇವುಗಳಲ್ಲಿ ಬೆಳಗಾವಿಯ ಏಳು ಶಾಲೆಗಳು ಮತ್ತು ಚಿಕ್ಕೋಡಿಯಲ್ಲಿ ಎಂಟು ಶಾಲೆಗಳು ಸೇರಿವೆ. ಇದೇ ಕಾರಣಕ್ಕೆ 100ಕ್ಕೂ ಹೆಚ್ಚು ಖಾಸಗಿ ಪ್ರಾಥಮಿಕ ಶಾಲೆಗಳನ್ನು ಮುಚ್ಚಲಾಗಿದೆ ಎಂದು ಧಾರವಾಡದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 99 ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ; ಬೇಜವಾಬ್ದಾರಿ ಉತ್ತರ ನೀಡಿದ ಶಾಸಕ ಗಣೇಶ್ ಹುಕ್ಕೇರಿ

ಇಲಾಖೆ ಮೂಲಗಳ ಪ್ರಕಾರ ಬೆಳಗಾವಿ ಮತ್ತು ಚಿಕ್ಕೋಡಿಯ ಶಾಲೆಗಳಲ್ಲಿ ಒಟ್ಟು 1,369 ಶಿಕ್ಷಕರ ಕೊರತೆ ಇದೆ. ಬೆಳಗಾವಿ ಜಿಲ್ಲೆಯ 136 ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ. ಅಥಣಿ ಮತ್ತು ಖಾನಾಪುರ ತಾಲೂಕಿನ ತಲಾ 30, ರಾಯಬಾಗದಲ್ಲಿ 22, ನಿಪ್ಪಾಣಿಯಲ್ಲಿ 15, ಮೂಡಲಗಿಯಲ್ಲಿ 14, ಚಿಕ್ಕೋಡಿಯಲ್ಲಿ 6, ಸವದತ್ತಿ, ಕಾಗವಾಡ ಮತ್ತು ಹುಕ್ಕೇರಿಯಲ್ಲಿ ತಲಾ ಐದು, ರಾಮದುರ್ಗದಲ್ಲಿ ಮೂರು ಮತ್ತು ಗೋಕಾಕದಲ್ಲಿ ಒಂದು ಶಾಲೆಯಲ್ಲಿ ಶಿಕ್ಷಕರಿಲ್ಲ. ಈ ಶಾಲೆಗಳಲ್ಲಿ ಅತಿಥಿ ಶಿಕ್ಷಕರೇ ಹೆಚ್ಚಾಗಿದ್ದು, ಮಕ್ಕಳ ಶಿಕ್ಷಣಕ್ಕೆ ತೀವ್ರ ತೊಂದರೆಯಾಗುತ್ತಿದೆ.

ಈ ಬಗ್ಗೆ ಚಿಕ್ಕೋಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಉಪನಿರ್ದೇಶಕ ಮೋಹನಕುಮಾರ ಹಂಚಾಟೆ ಮಾತನಾಡಿ, ಕಡಿಮೆ ಹಾಜರಾತಿ ಇರುವ ಚಿಕ್ಕೋಡಿಯಲ್ಲಿ ಮೂರು ಶಾಲೆಗಳು, ನಿಪ್ಪಾಣಿ, ರಾಯಬಾಗ ಮತ್ತು ಮೂಡಲಗಿಯಲ್ಲಿ ತಲಾ ಮೂರು ಶಾಲೆಗಳನ್ನು ಮುಚ್ಚಲಾಗುತ್ತಿದೆ. ಸರಕಾರದ ನಿಯಮಾವಳಿ ಪ್ರಕಾರವೇ ಮುಚ್ಚುವ ಪ್ರಕ್ರಿಯೆ ನಡೆದಿದೆ ಎಂದರು.

ಶಿಕ್ಷಕರ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ಶಾಲೆಗಳಲ್ಲಿ ಎರಡು ಹಂತದಲ್ಲಿ ಅತಿಥಿ ಶಿಕ್ಷಕರ ನೇಮಕಾತಿಗೆ ಇಲಾಖೆ ಅವಕಾಶ ನೀಡಿದೆ ಎಂದು ಬೆಳಗಾವಿಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಬಸವರಾಜ ನಾಲತವಾಡ ಹೇಳಿದರು.

ಧಾರವಾಡದ ಶಾಲಾ ಶಿಕ್ಷಣ ಹೆಚ್ಚುವರಿ ಆಯುಕ್ತೆ ಜಯಶ್ರೀ ಶಿಂತ್ರಿ ಮಾತನಾಡಿ, ಮುಚ್ಚಿದ ಶಾಲೆಗಳನ್ನು ತೆರೆಯಬೇಕಾದರೆ ಒಂದನೇ ತರಗತಿಗೆ ಕನಿಷ್ಠ 15 ಮಕ್ಕಳನ್ನು ದಾಖಲಿಸಬೇಕು. ಒಮ್ಮೆ ಮುಚ್ಚಿದ ಶಾಲೆಗಳು ಪುನರಾರಂಭವಾಗುವುದು ಅಪರೂಪ. ಶಾಲೆಗಳನ್ನು ಪುನಃ ತೆರೆಯಲು ಸರ್ಕಾರದ ವಿವಿಧ ಮಾನದಂಡಗಳನ್ನು ಪೂರೈಸಬೇಕು ಎಂದರು. ಇನ್ನು ಸರ್ಕಾರಿ ಶಾಲೆಗಳನ್ನು ಮುಚ್ಚುವ ಈ ಪ್ರವೃತ್ತಿಯು ಆತಂಕಕಾರಿಯಾಗಿದೆ ಎಂದು ಶಿಕ್ಷಣ ತಜ್ಞರ ಕಳವಳ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ