ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 99 ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ; ಬೇಜವಾಬ್ದಾರಿ ಉತ್ತರ ನೀಡಿದ ಶಾಸಕ ಗಣೇಶ್ ಹುಕ್ಕೇರಿ
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಹಿನ್ನೆಲೆ ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಮಕ್ಕಳ ಹಾಜರಾತಿ ಶೂನ್ಯ ಕಾರಣವೊಡ್ಡಿ ನಿಪ್ಪಾಣಿಯ ಬಿ.ಶಂಕರಾನಂದ ನಗರದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಸೇರಿ ಮೂರು ಶಾಲೆಗಳು ಕ್ಲೋಸ್ ಆಗಿವೆ.
ಬೆಳಗಾವಿ, ಸೆ.01: ಜಿಲ್ಲೆಯ ಚಿಕ್ಕೋಡಿ (Chikkodi) ಶೈಕ್ಷಣಿಕ ಜಿಲ್ಲೆಯಲ್ಲಿ ಶಿಕ್ಷಕರ (Teacher) ಕೊರತೆ ಎದುರಾಗಿದೆ. ಇದರಿಂದ ಬಡ ರೈತರ ಮಕ್ಕಳ ಶಿಕ್ಷಣಕ್ಕೆ ತೊಂದರೆ ಉಂಟಾಗಿದೆ. ಹೌದು, 99 ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಲ್ಲ. ಈ ಹಿನ್ನಲೆ ಸರ್ಕಾರಿ ಶಾಲೆಗಳಿಂದ ಮಕ್ಕಳು ದೂರವಾಗುತ್ತಿದ್ದಾರೆ. ಇನ್ನು ಈಗಿರುವ ಅತಿಥಿ ಶಿಕ್ಷಕರೇ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಆಸರೆಯಾಗಿದ್ದಾರೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ 8 ತಾಲೂಕುಗಳಲ್ಲಿ ಶಿಕ್ಷಕರ ಕೊರತೆಯಿದ್ದು, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಆಸರೆಯಾಗಿದ್ದ ಸರ್ಕಾರಿ ಶಾಲೆ, ಇದೀಗ ಇದ್ದು, ಇಲ್ಲದಂತಾಗಿದೆ.
ಜಿಲ್ಲೆಯ 8 ತಾಲೂಕುಗಳಿಗೆ ಬೇಕಿದೆ ಶಿಕ್ಷಕರು
ಹೌದು, ಜಿಲ್ಲೆಯ ಚಿಕ್ಕೋಡಿ-8, ರಾಯಬಾಗ – 22, ಮೂಡಲಗಿ-13, ಗೋಕಾಕ್-1, ಅಥಣಿ – 30, ನಿಪ್ಪಾಣಿ – 15, ಹುಕ್ಕೇರಿ, ಕಾಗವಾಡ ತಾಲೂಕಿನ ತಲಾ ಐದು ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ. ಒಬ್ಬೊಬ್ಬರೇ ಅತಿಥಿ ಶಿಕ್ಷಕರು ಇಡೀ ಶಾಲೆಯ ಮಕ್ಕಳಿಗೆ ಪಾಠ ಮಾಡಬೇಕಾದ ಅನಿವಾರ್ಯತೆಯಿದೆ. ಇದರಿಂದ ಮಕ್ಕಳ ರೈತ ಮಕ್ಕಳ ಭವಿಷ್ಯ ಬೆಳೆಯುವಲ್ಲಿಯೇ ಕಮರಿ ಹೋಗುತ್ತಿದೆ.
ಇದನ್ನೂ ಓದಿ:ಉಡುಪಿ: ಬುದ್ದಿವಂತರ ಜಿಲ್ಲೆಯಲ್ಲಿಯೇ ಶಿಕ್ಷಕರ ಕೊರತೆ; ಬಾಗಿಲು ಮುಚ್ಚಿವೆ ಅನೇಕ ಶಾಲೆಗಳು
ಶಿಕ್ಷಕರ ಕೊರತೆ ಹಿನ್ನೆಲೆ ಸರ್ಕಾರಿ ಶಾಲೆಯಿಂದ ದೂರವಾಗುತ್ತಿದ್ದಾರೆ ಮಕ್ಕಳು
ಇನ್ನು ಶಿಕ್ಷಕರ ಕೊರತೆ ಹಿನ್ನೆಲೆ ಸರ್ಕಾರಿ ಶಾಲೆಯಿಂದ ಮಕ್ಕಳು ದೂರವಾಗುತ್ತಿದ್ದಾರೆ. ಅದರಂತೆ ಜಿಲ್ಲೆಯ ರಾಯಬಾಗ ತಾಲೂಕಿನ ಕೆಂಪಟ್ಟಿಯ ನಾಯಿಕ ತೋಟದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕಳೆದ 8 ವರ್ಷಗಳಿಂದ ಅತಿಥಿ ಶಿಕ್ಷಕರೇ ಆಸರೆಯಾಗಿದ್ದು, 100 ಮಕ್ಕಳ ಹಾಜರಾತಿ ಇದ್ದ ಶಾಲೆಯಲ್ಲಿ ಇಂದು 27ಕ್ಕೆ ಕುಸಿದಿದೆ. 1 ರಿಂದ 5ನೇ ತರಗತಿಯವರೆಗಿನ 27 ಮಕ್ಕಳಿಗೆ ಒಬ್ಬರೇ ಅತಿಥಿ ಶಿಕ್ಷಕಿಯಿದ್ದಾರೆ. ಈ ಕುರಿತು ಗ್ರಾಮಸ್ಥರು ಸರ್ಕಾರಿ ಶಿಕ್ಷಕರ ನೇಮಕಕ್ಕೆ ಹಲವು ಬಾರಿ ಮನವಿ ಮಾಡಿದರೂ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಇದರ ವಿರುದ್ದ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಶಿಕ್ಷಕರ ನೇಮಕವಾಗದ ಹಿನ್ನೆಲೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ
ಒಬ್ಬರೇ ಅತಿಥಿ ಶಿಕ್ಷಕರು 1 ರಿಂದ 5ನೇ ತರಗತಿವರೆಗೆ ಪಾಠ ಮಾಡುತ್ತಿದ್ದು, ಇದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಹೀಗಿದ್ದರೆ ಮಕ್ಕಳು ಕಲಿಯುವುದು ಹೇಗೆ ಎಂಬ ಪ್ರಶ್ನೆ ಮೂಡಿದೆ. ಈ ಹಿಂದೆ ಇದೇ ಶಾಲೆಯಲ್ಲಿ 100 ಜನ ವಿದ್ಯಾರ್ಥಿಗಳು ಇದ್ದರು, ಇಂದು 27 ವಿದ್ಯಾರ್ಥಿಗಳಿದ್ದಾರೆ. ಉಳ್ಳವರು ಮಕ್ಕಳನ್ನು ಖಾಸಗಿ ಶಾಲೆಗೆ ದಾಖಲಿಸಿ ಶಿಕ್ಷಣ ಕೊಡಿಸುತ್ತಾರೆ. ಆದರೆ, ಆರ್ಥಿಕ ಸಂಕಷ್ಟದಲ್ಲಿ ಇರುವ ಬಡ ರೈತರಿಗೆ ಇದರಿಂದ ಕಷ್ಟವಾಗಿದೆ. ಕೊನೆಪಕ್ಷ ಇಬ್ಬರು ಸರ್ಕಾರಿ ಶಿಕ್ಷಕರನ್ನಾದರೂ ನೇಮಿಸಿ ಕ್ರಮ ಕೈಗೊಳ್ಳಿ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಕೆಂಪಟ್ಟಿ ಗ್ರಾಮಸ್ಥರು ಟಿವಿ9 ಬಳಿ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ:ಕಲ್ಯಾಣ ಕರ್ನಾಟಕ ಭಾಗದಲ್ಲಿ ಉಂಟಾಗಿದೆ ಶಿಕ್ಷಕರ ಕೊರತೆ; ವಿದ್ಯಾರ್ಥಿಗಳ ಪಾಡು ಕೇಳೋರು ಯಾರು?
ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಹಿನ್ನೆಲೆ ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಮಕ್ಕಳ ಹಾಜರಾತಿ ಶೂನ್ಯ ಕಾರಣವೊಡ್ಡಿ ನಿಪ್ಪಾಣಿಯ ಬಿ.ಶಂಕರಾನಂದ ನಗರದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಸೇರಿ ಮೂರು ಶಾಲೆಗಳು ಕ್ಲೋಸ್ ಆಗಿವೆ. ಈ ಕುರಿತು ಡಿಡಿಪಿಐ ಅವರು ‘ಶಾಲೆಗಳನ್ನು ಮುಚ್ಚಿಲ್ಲ. ಮಕ್ಕಳು ಬಂದ್ರೆ ಶಿಕ್ಷಕರನ್ನು ನೇಮಿಸಿ ಆರಂಭಿಸುತ್ತೇವೆ ಎನ್ನುತ್ತಾರೆ.
ಡಿಡಿಪಿಐ ಮೋಹನ್ ಹಂಚ್ಯಾಟೆ
‘ಗಡಿ ಭಾಗದ ಶಾಲೆಗಳ ಅಭಿವೃದ್ಧಿಗೆ ವಿಶೇಷ ಕ್ರಿಯಾ ಯೋಜನೆ ತಯಾರಿಸಿ ಸರ್ಕಾರಕ್ಕೆ ಕಳುಹಿಸಿದ್ದೇವೆ. ಸರ್ಕಾರ ಹಂತದಲ್ಲಿ ಮಂಜೂರಾಗಿ ಬಂದ್ರೆ ಉತ್ತಮ ಸೌಲಭ್ಯ ಸಿಗುತ್ತೆ. ಈಗಾಗಲೇ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಗಳಲ್ಲಿ 3243 ಸರ್ಕಾರಿ ಶಿಕ್ಷಕರ ಹುದ್ದೆ ಖಾಲಿಯಿದೆ. ಇದುವರೆಗೆ 2561 ಅತಿಥಿ ಶಿಕ್ಷಕರ ನೇಮಕ ಮಾಡಿಕೊಂಡಿದ್ದೇವೆ. ಬಹಳಷ್ಟು ಶಿಕ್ಷಕರು ವರ್ಗಾವಣೆ ಆಗಿದ್ದು, ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗಿದೆ. ಪ್ರೌಢಶಾಲೆಗಳಲ್ಲಿ 536 ಶಿಕ್ಷಕರು ಖಾಲಿ ಇದ್ದು, 474 ಅತಿಥಿ ಶಿಕ್ಷಕರ ನೇಮಕವಾಗಿದೆ. ಶಿಕ್ಷಕರ ನೇಮಕಾತಿ ಕೆಲ ದಿನಗಳಲ್ಲಿ ಆಗುತ್ತದೆ ಎಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಡಿಡಿಪಿಐ ಮೋಹನ್ ಹಂಚ್ಯಾಟೆ ಹೇಳಿದರು.
ಇದನ್ನೂ ಓದಿ:8ರಿಂದ 10ನೇ ತರಗತಿವರೆಗೆ ಒಬ್ಬರೇ ಶಿಕ್ಷಕ: ಶಿಕ್ಷಕರನ್ನ ನೇಮಕಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದ ವಿದ್ಯಾರ್ಥಿಗಳು
ಬೇಜವಾಬ್ದಾರಿ ಉತ್ತರ ನೀಡಿದ ಶಾಸಕ ಗಣೇಶ್ ಹುಕ್ಕೇರಿ
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ವಿಚಾರ ಕುರಿತು ಮಾತನಾಡಿದ ಕಾಂಗ್ರೆಸ್ ಶಾಸಕ ಗಣೇಶ್ ಹುಕ್ಕೇರಿ ‘ಚಿಕ್ಕೋಡಿಯಲ್ಲಿ ಅಷ್ಟೇ ಅಲ್ಲ, ಇಡೀ ರಾಜ್ಯದಲ್ಲಿ ಶಿಕ್ಷಕರ ಕೊರತೆ ಇದೆ ಎನ್ನುವ ಮೂಲಕ ಬೇಜವಾಬ್ದಾರಿ ಉತ್ತರ ನೀಡಿದ್ದಾರೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:24 pm, Fri, 1 September 23