ಕಲ್ಯಾಣ ಕರ್ನಾಟಕ ಭಾಗದಲ್ಲಿ ಉಂಟಾಗಿದೆ ಶಿಕ್ಷಕರ ಕೊರತೆ; ವಿದ್ಯಾರ್ಥಿಗಳ ಪಾಡು ಕೇಳೋರು​ ಯಾರು?

ರಾಜ್ಯದ ಬೇರೆ ಭಾಗಗಳಲ್ಲಿನ ಜಿಲ್ಲೆಗಳಿಗಿಂತ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಅನುಪಾತದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಇದು ಆ ಭಾಗದ ಶೈಕ್ಷಣಿಕ ಹಿನ್ನಡೆಗೆ ಕಾರಣವಾಗಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಉಂಟಾಗಿದೆ ಶಿಕ್ಷಕರ ಕೊರತೆ; ವಿದ್ಯಾರ್ಥಿಗಳ ಪಾಡು ಕೇಳೋರು​ ಯಾರು?
ಸಾಂದರ್ಭಿಕ ಚಿತ್ರ
Follow us
ರಾಜೇಶ್ ದುಗ್ಗುಮನೆ
| Updated By: ಆಯೇಷಾ ಬಾನು

Updated on: Dec 19, 2020 | 7:17 AM

ಕಲಬುರಗಿ: ರಾಜ್ಯದ ಬೇರೆ ಬಾಗಗಳಿಗೆ ಹೋಲಿಕೆ ಮಾಡಿದ್ರೆ ಕಲ್ಯಾಣ ಕರ್ನಾಟಕ ಭಾಗ ಶೈಕ್ಷಣಿಕವಾಗಿ ತೀರಾ ಹಿಂದುಳಿದಿದೆ. ಹೀಗಾಗಿ ಎಸ್ಎಸ್ಎಲ್​ಸಿ, ಪಿಯುಸಿ ಫಲಿತಾಂಶ ಬಂದಾಗ, ಈ ಭಾಗದ ಜಿಲ್ಲೆಗಳ ಫಲಿತಾಂಶವನ್ನು ಮೇಲಿನಿಂದ ನೋಡದೆ ಕೆಳಗಿನಿಂದ ನೋಡುವುದೆ ವಾಡಿಕೆಯಾಗಿದೆ. ಯಾಕೆಂದರೆ, ಅತಿ ಕಡಿಮೆ ಫಲಿತಾಂಶ ಬರೋದು ಕಲಬುರಗಿ, ರಾಯಚೂರು, ಕೊಪ್ಪಳ ಸೇರಿದಂತೆ ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿಯೇ.

ಮೊದಲಿನಿಂದಲೂ ಶೈಕ್ಷಣಿಕವಾಗಿ ಈ ಭಾಗ ಹಿಂದುಳಿದಿದೆ. ಅದು ಇಂದಿಗೂ ಕೂಡಾ ಮುಂದುವರಿಯುತ್ತಿದೆ. ರಾಜ್ಯದ ಬೇರೆ ಬಾಗಗಳಿಗೆ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಮತ್ತು ಮಕ್ಕಳ ನಡುವಿನ ಅನುಪಾತದಲ್ಲಿ ಅಜಗಜಾಂತರ ವ್ಯತ್ಯಾಸವಿದೆ.

ರಾಜ್ಯದ ಮೈಸೂರು ಸೇರಿದಂತೆ ಬೇರೆ ಬಾಗಗಳಲ್ಲಿ 13 ರಿಂದ 15 ಮಕ್ಕಳಿಗೆ ಒಬ್ಬ ಶಿಕ್ಷಕನಿದ್ದರೆ, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ 30 ರಿಂದ 35 ಮಕ್ಕಳಿಗೆ ಓರ್ವ ಶಿಕ್ಷಕ ಇದ್ದಾರೆ. ಯಾದಗಿರಿ ಜಿಲ್ಲೆಯ ಶಹಪೂರ ತಾಲೂಕಿನ ಮಾಧ್ಯಮಿಕ ಹಂತದಲ್ಲಿ 44147 ಮಕ್ಕಳಿದ್ದಾರೆ. ಅವರಿಗೆ ತಲಾ 42.28 ಮಕ್ಕಳಿಗೆ ಓರ್ವ ಶಿಕ್ಷಕರಿದ್ದಾರೆ. ಅದೇ ಮಂಡ್ಯದಲ್ಲಿ 6403 ಮಕ್ಕಳಿದ್ದು, ಅಲ್ಲಿ 16.05 ಮಕ್ಕಳಿಗೆ ಓರ್ವ ಶಿಕ್ಷಕರಿದ್ದಾರೆ.

ಪ್ರಾಥಮಿಕ ಶಾಲೆಗಳಿಗೆ ಹಾಸನದಲ್ಲಿ 12.20 ವಿದ್ಯಾರ್ಥಿಗಳಿಗೆ ಓರ್ವ ಶಿಕ್ಷಕರಿದ್ದರೆ, ಅದೇ ಯಾದಗಿರಿ ಜಿಲ್ಲೆಯಲ್ಲಿ 39.24 ವಿದ್ಯಾರ್ಥಿಗಳಿಗೆ ಓರ್ವ ಶಿಕ್ಷಕನಿದ್ದಾನೆ. ಕಿರಿಯ ಪ್ರಾಥಮಿಕ, ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಕೂಡಾ ಇದೇ ರೀತಿಯ ವ್ಯತ್ಯಾಸವಿದೆ.

ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಬರೋಬ್ಬರಿ 12,47,792 ಮ್ಕಕಳಿದ್ದಾರೆ. ಆದರೆ, ಈ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರು ಇರದೇ ಇರುವುದು ಈ ಭಾಗದಲ್ಲಿ ಶೈಕ್ಷಣಿಕ ಹಿನ್ನಡೆಗೆ ಕಾರಣವಾಗಿದೆ.

ಕಾಡುತ್ತಿರುವ ಶಿಕ್ಷಕರ ಸಮಸ್ಯೆ ಕಲ್ಯಾಣ ಕರ್ನಾಟಕ ಭಾಗ ಶೈಕ್ಷಣಿಕವಾಗಿ ಹಿಂದುಳಿದಿರುವದರಿಂದ ವಿಶೇಷ ಸ್ಥಾನಮಾನ ನೀಡಲಾಗಿದೆ. 371 ಜೆ ವಿಧಿಯಡಿ ಶೈಕ್ಷಣಿಕ ಮೀಸಲಾತಿಯನ್ನು ನೀಡಲಾಗಿದೆ. ಆದರೂ ಕೂಡಾ ಶೈಕ್ಷಣಿಕ ಅಭಿವೃದ್ದಿ ಮಾತ್ರ ತೃಪ್ತಿಕರವಾಗಿ ಬೆಳವಣಿಗೆ ಆಗುತ್ತಿಲ್ಲ. ವಿಶೇಷ ಸ್ಥಾನಮಾನ ಸಿಕ್ಕರು ಕೂಡಾ ಈ ಭಾಗದಲ್ಲಿ ಇನ್ನು ಕೂಡಾ ಶಿಕ್ಷಕರ ಕೊರತೆ ಹೆಚ್ಚಾಗಿದೆ.

ಪ್ರೌಢಶಾಲೆಗಳಲ್ಲಿ 1058 ಶಿಕ್ಷಕರ ಕೊರತೆ ಇದೆ. ಅದೇ ರೀತಿ 1764 ಪ್ರಾಥಮಿಕ ಶಿಕ್ಷಕರ ಕೊರತೆ ಇದೆ. ಈ ಹುದ್ದೆಗಳನ್ನು ಆದಷ್ಟು ಬೇಗನೆ ಭರ್ತಿ ಮಾಡಿದರೆ ಮಕ್ಕಳು ಮತ್ತು ಶಿಕ್ಷಕರ ನಡುವಿನ ವ್ಯತ್ಯಾಸವನ್ನು ತುಸು ಕಡಿಮೆ ಮಾಡಲು ಸಾಧ್ಯವಾಗುತ್ತದೆ. ರಾಜ್ಯದ ಬೇರೆ ಬಾಗಗಳಿಗಿಂತ ಈ ಭಾಗದಲ್ಲಿ ಮಕ್ಕಳು ಮತ್ತು ಶಿಕ್ಷಕರ ನಡುವಿನ ವ್ಯತ್ಯಾಸ ಹೆಚ್ಚಾಗಿರುವದರಿಂದ, ಖಾಲಿ ಇರುವ ಹುದ್ದೆಗಳನ್ನು ಬೇಗನೆ ಭರ್ತಿ ಮಾಡುವಂತೆ ಕಲಬುರಗಿ ಶಿಕ್ಷಣ ಆಯುಕ್ತಾಲಯದ ಅಧಿಕಾರಿಗಳು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಆದರೆ, ಸರ್ಕಾರ ಇನ್ನು ಯಾವುದೇ ಕ್ರಮಕೈಗೊಂಡಿಲ್ಲ.

ಈ ಹಿಂದೆ ಕಲ್ಯಾಣ ಕರ್ನಾಟಕ ಭಾಗದಲ್ಲಿನ ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡೋದಾಗಿ ಸರ್ಕಾರ ಹೇಳಿತ್ತು. ಆದ್ರೆ ಅದು ಭರವಸೆಯಾಗಿಯೇ ಉಳಿದಿದ ಹೀಗಾಗಿ ಮತ್ತೆ ಶಾಲೆಗಳು ಪ್ರಾರಂಭವಾದರೆ ಈ ಬಾರಿಯೂ ಕೂಡಾ ಈ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವುದು ಅನುಮಾನವಾಗಿದೆ.

ಸರ್ಕಾರದಿಂದ ಸಿಗುತ್ತಿಲ್ಲ ಸ್ಪಂದನೆ ಈ ಭಾಗಕ್ಕೆ ಈ ಹಿಂದೆ ಅನೇಕ ಶಿಕ್ಷಕರು ಆಯ್ಕೆಯಾಗಿದ್ದರು. ಆಯ್ಕೆಯಾದವರ ಪೈಕಿ ಬಹುತೇಕರು ವರ್ಗಾವಣೆ ಮಾಡಿಸಿಕೊಂಡು ಹೋಗಿದ್ದಾರೆ. ಹಳೆ ಮೈಸೂರು ಬಾಗ ಮತ್ತು ಮುಂಬೈ ಕರ್ನಾಟಕದ ಜಿಲ್ಲೆಗಳಲ್ಲಿನ ಅನೇಕರು ಈ ಭಾಗದಲ್ಲಿ ಶಿಕ್ಷಕರಾಗಿ ಆಯ್ಕೆಯಾಗಿದ್ದರು. ಹಾಗೆ ನೇಮಕಾತಿ ಹೊಂದಿದವರು ಕೆಲ ವರ್ಷಗಳ ನಂತರ ಬಿಸಿಲಿನ ನೆಪಹೇಳಿ ತಮ್ಮೂರಿಗೆ ವರ್ಗಾವಣೆ ಮಾಡಿಸಿಕೊಂಡು ಹೋಗಿದ್ದಾರೆ.

ಇದೀಗ ಸರ್ಕಾರ ಶಿಕ್ಷಕರ ನೇಮಕಾತಿಗೆ ಟಿಇಟಿ ಅರ್ಹತೆಯನ್ನು ಮಾನದಂಡ ಮಾಡಿದೆ. ಅನೇಕ ಸಲ ಶಿಕ್ಷಕರ ಭರ್ತಿಗೆ ಹುದ್ದೆಗೆ ಅರ್ಜಿ ಕರೆದರು ಕೂಡಾ ಇಂಗ್ಲಿಷ್, ವಿಜ್ಞಾನ, ಗಣಿತ ವಿಷಯಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿಗಳೇ ಬರುತ್ತಿಲ್ಲ. ಇದಕ್ಕೆ ಕಾರಣ ಅನೇಕರು ಟಿಇಟಿ ಅರ್ಹತೆಯನ್ನೇ ಪಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ಹುದ್ದೆ ಖಾಲಿಯಿದ್ದರೂ ಕೂಡಾ ಅರ್ಹರನ್ನು ನೇಮಕ ಮಾಡಿಕೊಳ್ಳಲು ಆಗುತ್ತಿಲ್ಲ. ಮೀಸಲಾತಿಯಿಂದಾಗಿ ಈ ಭಾಗದ ಹೆಚ್ಚಿನ ಜನರಿಗೆ ಶಿಕ್ಷಕರಾಗಲು ಅವಕಾಶವಿದೆ. ಆದ್ರೆ ಕೆಲವು ವಿಷಯಗಳಿಗೆ ಅರ್ಹತೆ ಹೊಂದಿದ ಶಿಕ್ಷಕರೇ ಸಿಗುತ್ತಾ ಇಲ್ಲಾ. ಹೀಗಾಗಿ ಶಿಕ್ಷಕರ ಕೊರತೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.

ರಾಜ್ಯ ಸರ್ಕಾರ ಶೈಕ್ಷಣಿಕವಾಗಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚಿನ ಒತ್ತನ್ನು ನೀಡಬೇಕಿದೆ. ಆ ಮೂಲಕ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ವ್ಯತ್ಯಾಸವನ್ನು ಕಡಿಮೆ ಮಾಡಿ, ಈ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲು ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕಿದೆ. ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಸಿಗದೇ ಹೋದ್ರೆ, ಅವರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಿದ್ರು ಕೂಡಾ ಅದರಿಂದ ಈ ಭಾಗದಲ್ಲಿ ಪ್ರಯೋಜನವಾಗದಂತಹ ಸ್ಥಿತಿ ನಿರ್ಮಾಣವಾಗುತ್ತದೆ.

ಕಲಬುರಗಿ: ನೆರೆ ಇಳಿದು 3 ತಿಂಗಳಾದ ಮೇಲೆ ಪರಿಶೀಲನೆಗೆ ಬಂದ ಅಧಿಕಾರಿಗಳಿಗೆ ಸಿಗುವುದೇನು?