ಕೊಡಬೇಕಾದ ಹಣವನ್ನೇ ಕೊಟ್ಟು ಹನಿಟ್ರ್ಯಾಪ್ ಅಂದ್ರು: ನವ್ಯಶ್ರೀ ಆರೋಪ
ನನಗೆ ಆದ ಅನ್ಯಾಯದ ಬಗ್ಗೆ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದೆ. ಎಫ್‌ಐಆರ್ ಆಗಿ 13 ದಿನಗಳಾದರೂ ರಾಜಕುಮಾರ ಟಾಕಳೆ ಬಂಧನವಾಗಿಲ್ಲ. ನಾನು ಹೆದರಿ ಓಡುವವಳಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ: ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ ಟಾಕಳೆ ವಿರುದ್ಧ ಪೊಲೀಸರಿಗೆ ದೂರು ನೀಡಿರುವ ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ ಬೆಳಗಾವಿಯ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದರು. ರಾಜಕುಮಾರ ಟಾಕಳೆ ಜಾಮೀನು ಅರ್ಜಿ ವಜಾ ಮಾಡಿದ ಕೋರ್ಟ್ ತೀರ್ಪಿನ ಬಗ್ಗೆ ಸಂತಸ ವ್ಯಕ್ತಪಡಿಸಿದರು. ನನಗೆ ಆದ ಅನ್ಯಾಯದ ಬಗ್ಗೆ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದೆ. ಎಫ್‌ಐಆರ್ ಆಗಿ 13 ದಿನಗಳಾದರೂ ರಾಜಕುಮಾರ ಟಾಕಳೆ ಬಂಧನವಾಗಿಲ್ಲ. ನಾನು ಹೆದರಿ ಓಡುವವಳಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾವು ನಡೆಸುತ್ತಿರುವ ಎನ್ಜಿಒ ಕುರಿತ ಮಾಹಿತಿ ಬಹಿರಂಗಪಡಿಸಿದ ಅವರು, ಈ ಸಂಸ್ಥೆಯಲ್ಲಿ ನಾನೊಬ್ಬಳೇ ಅಲ್ಲ. ಬೇರೆಯವರೂ ಇದ್ದಾರೆ. ಸಿಕ್ಕಸಿಕ್ಕವರ ಹತ್ತಿರ ಹಣ ಸಂಗ್ರಹಿಸಿ ನಾನು ಕೆಲಸ ಮಾಡುತ್ತಿಲ್ಲ. ನನಗೆ ಕೊಡಬೇಕಾದ ಹಣವನ್ನೇ ಕೊಟ್ಟು ಹನಿಟ್ರ್ಯಾಪ್ ಹಣೆಪಟ್ಟಿ ಕಟ್ಟಲು ಯತ್ನಿಸಿದ್ದಾರೆ. ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಆತನೇ ನವ್ಯಶ್ರೀಗೆ ನೀಡಬೇಕಾದ ಹಣವನ್ನ ಕೊಟ್ಟಿದ್ದೇನೆ. ನನಗೂ ನವ್ಯಶ್ರೀಗೂ ಸಂಬಂಧ ಇಲ್ಲ ಎಂದು ಬರೆದು ಕೊಟ್ಟಿದ್ದ. ಈಗ ಆತನೇ ತಾನು ತೊಡಿದ ಗುಂಡಿಯಲ್ಲಿ ತಾನೇ ಬಿದ್ದಿದ್ದಾನೆ ಎಂದು ಹೇಳಿದರು.
ಈ ಪ್ರಕರಣದಲ್ಲಿರುವ ವೈಯಕ್ತಿಕ ವಿಚಾರ. ಈ ವಿಚಾರಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ. ನನ್ನ ಮಾನಹಾನಿಯಾಗಿದೆ, ಅನ್ಯಾಯ ಆಗಿದೆ ಹೀಗಾಗಿ ನಾನು ಹೋರಾಟ ಮಾಡುತ್ತಿದ್ದೇನೆ. ನಾನು ಕೇಸ್ ದಾಖಲಿಸಿದ ಬಳಿಕ ಆತನನ್ನ ಕರೆದು ವಿಚಾರಣೆ ಮಾಡಬೇಕಿತ್ತು. ಆದರೆ ಆತ ತಲೆ ಮರೆಸಿಕೊಂಡಿದ್ದಾನೆ. ಯಾರ ಒತ್ತಡಕ್ಕೂ ಮಣಿಯದೆ ಪೊಲೀಸ್ ಇಲಾಖೆ ನ್ಯಾಯ ಕೊಡಿಸಬೇಕು. ಮತ್ತಷ್ಟು ಹೆಣ್ಣುಮಕ್ಕಳ ವಿಡಿಯೋ ಹೊರಗೆ ಬರಬಾರದು ಎಂದಾದರೆ ಅವನ ಬಂಧನವಾಗಬೇಕು ಎಂದು ಆಗ್ರಹಿಸಿದರು.
ಆತ ನನ್ನನ್ನು ಹೆಂಡತಿ ಎಂದು ಒಪ್ಪಿಕೊಳ್ಳಲಿ, ಬಿಡಲಿ. ಅವನಿಂದ ನನ್ನ ಮಾನಹಾನಿಯಾಗಿದೆ. ಮದುವೆಯಾಗಿರೋ ಫೋಟೊಗಳು ಸಹ ಇವೆ. ಪೊಲೀಸರು ಆ ಫೋಟೊಗಳನ್ನು ಶೀಘ್ರ ಕೊಡುತ್ತೇನೆ. ಸದ್ಯಕ್ಕೆ ರಾಜಕಾರಣದಿಂದ ದೂರ ಇದ್ದೇನೆ ಎಂದರು. ನನಗೆ ಸಂಬಂಧಪಟ್ಟ ಕೆಲವು ದಾಖಲೆಗಳು ಈಗಾಗಲೇ ಸಲ್ಲಿಕೆಯಾಗಿವೆ. ನಾನು ಅವನ ಹೆಂಡತಿ ಎಂದು ತನಿಖೆಯಲ್ಲಿ ಸಾಬೀತುಪಡಿಸುತ್ತೇನೆ. ರಾಜಕುಮಾರ ಟಾಕಳೆಯನ್ನು ಬಂಧಿಸಿ, ಅನ್ಯಾಯವಾದ ಹೆಣ್ಣುಮಗಳಿಗೆ ನ್ಯಾಯ ಕೊಡಿಸಬೇಕು ಎಂದು ವಿನಂತಿಸಿದರು. ಇಂದು ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ರಾಜಕುಮಾರ ಬಂಧಕ್ಕಾಗಿ ಮನವಿ ಮಾಡಿದ್ದೇವೆ. ಮಂಗಳವಾರದೊಳಗೆ ಬಂಧಿಸದಿದ್ದರೆ ಬುಧವಾರದಿಂದ ಮಹಿಳಾ ಸಂಘದ ಜತೆಗೆ ಪೊಲೀಸ್ ಕಮೀಷನರ್ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇನೆ ಎಂದರು.
ಇದೇ ವೇಳೆ, ‘ನಾನು ಬಿಗ್ಬಾಸ್ಗೆ ಯಾಕೆ ಹೋಗಬಾರದು’ ಎಂದು ಕೇಳಿದ ಅವರು, ತಮ್ಮ ಕನಸು ಹಂಚಿಕೊಂಡರು.