ಮೂಡಲಗಿಯಲ್ಲಿ ಏಳು ಭ್ರೂಣಗಳು ಪತ್ತೆ ವಿಚಾರ: ಏಳು ಭ್ರೂಣಗಳ ಪೈಕಿ ಆರು ಗಂಡು ಭ್ರೂಣಗಳು
ಭ್ರೂಣಗಳು ಹೇಗೆ ಸಂಗ್ರಹಿಸಲಾಯಿತು, ಇದು ಕಾನೂನು ಬಾಹಿರ ಆಗಿದ್ದರಿಂದ ಸಮಗ್ರ ತನಿಖೆಗೆ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ ನೀಡಿದ್ದಾರೆ.
ಬೆಳಗಾವಿ: ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ ಏಳು ಭ್ರೂಣಗಳು (Embryos) ಪತ್ತೆ ವಿಚಾರ ಹಿನ್ನೆಲೆ ಹಳ್ಳದಲ್ಲಿ ಸಿಕ್ಕ ಏಳು ಭ್ರೂಣ ಪೈಕಿ ಆರು ಭ್ರೂಣಗಳು ಗಂಡು ಭ್ರೂಣಗಳಾಗಿವೆ ಎಂದು ನಿನ್ನೆ ನಡೆದ ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ. ಬಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಈ ವೇಳೆ ಆರು ಗಂಡು ಭ್ರೂಣ, ಒಂದು ಸ್ಥೂಲ ಜನ್ಮಜಾತ ಬೆಳವಣಿಗೆ ವೈಪರೀತ್ಯ ಹೊಂದಿರುವ ಭ್ರೂಣವಾಗಿದೆ. ಈ ಭ್ರೂಣಗಳು ಫಾರ್ಮಾಲಿನ್ ಬಳಸಿ ವಸ್ತು ಸಂಗ್ರಹಾಲಯದಲ್ಲಿ ಶೇಖರಿಸಲ್ಪಡುವ ಮಾದರಿಯದ್ದಾಗಿವೆ ಎಂಬುದು ಮರಣೋತ್ತರ ಪರೀಕ್ಷೆಯಿಂದ ಭ್ರೂಣಗಳ ಸತ್ಯಾಂಶ ಬಯಲಾಗಿದೆ. ಭ್ರೂಣಗಳು ಹೇಗೆ ಸಂಗ್ರಹಿಸಲಾಯಿತು, ಇದು ಕಾನೂನು ಬಾಹಿರ ಆಗಿದ್ದರಿಂದ ಸಮಗ್ರ ತನಿಖೆಗೆ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ ನೀಡಿದ್ದಾರೆ.
ಘಟನೆ ಬಗ್ಗೆ ಮಾತಿಹಿ ಪಡೆದುಕೊಂಡ ಆರೋಗ್ಯ ಸಚಿವ ಡಾ. ಕೆ ಸುಧಾಕರ್:
ಇಡೀ ಘಟನೆಯ ಬಗ್ಗೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಬೆಳಗಾವಿ ಜಿಲ್ಲಾ ವೈದ್ಯಾಧಿಕಾರಿಗೆ (ಡಿಹೆಚ್ಒ ಡಾ. ಮಹೇಶ್ ಕೋಣಿ) ದೂರವಾಣಿ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಆ ವೇಳೆ ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ. ಯಾರದ್ದೇ ಒತ್ತಡ ಬಂದರು ತಲೆಕೆಡಿಸಿಕೊಳ್ಳದೆ ನೀವು ಕ್ರಮ ಕೈಗೊಳ್ಳಿ ಎಂದು ಬೆಳಗಾವಿ ಡಿಹೆಚ್ಒಗೆ ಆರೋಗ್ಯ ಸಚಿವ ಡಾ. ಸುಧಾಕರ್ ಸೂಚಿಸಿದ್ದಾರೆ. ಸ್ವತಃ ಆರೋಗ್ಯ ಸಚಿವರಿಂದಲೇ ಈ ಸೂಚನೆ ಹೊರಬೀಳುತ್ತಿದ್ದಂತೆ ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡ ಬೆಳಗಾವಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸೂಚನೆ ಮೇರೆಗೆ ಬೆಳಗಾವಿ ಜಿಲ್ಲೆಯಾದ್ಯಂತ ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ಮಾಡಿ, ಕಾರ್ಯಾಚರಣೆ ನಡೆಸಿದ್ದಾರೆ.
185ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ರೇಡ್:
ಬೆಳಗಾವಿ ಜಿಲ್ಲೆಯಾದ್ಯಂತ ನಿನ್ನೆ ಒಂದೇ ದಿನ 185ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ರೇಡ್ ಮಾಡಲಾಗಿದೆ. ಬೆಳಗಾವಿ ತಾಲೂಕು 64, ಅಥಣಿ 24, ಸವದತ್ತಿ 8, ರಾಯಬಾಗ 8, ಚಿಕ್ಕೋಡಿ 18, ಖಾನಾಪುರ 8, ರಾಮದುರ್ಗ 6, ಗೋಕಾಕ್ 40, ಬೈಲಹೊಂಗಲ 6 ಮತ್ತು ಹುಕ್ಕೇರಿ ಪಟ್ಟಣದಲ್ಲಿ 3 ಸ್ಕ್ಯಾನಿಂಗ್ ಸೆಂಟರ್ ಮೇಲೆ ದಾಳಿ ಮಾಡಿದ್ದು, ಕೇಂದ್ರ ಸರ್ಕಾರದ ಮಾರ್ಗಸೂಚಿ ಪಾಲಿಸುತ್ತಿರುವ ಬಗ್ಗೆ ಪರಿಶೀಲನೆ ಮಾಡಲಾಗಿದೆ.