ಸ್ಮಶಾನಕ್ಕೆ ಹೋಗಲು ದಾರಿ ಇಲ್ಲದ್ದಕ್ಕೆ ಬೆಳಗಾವಿ ಡಿಸಿ ಕಚೇರಿ ಎದುರು ಶವವಿಟ್ಟು ಗ್ರಾಮಸ್ಥರ ಪ್ರತಿಭಟನೆ
ಸ್ಥಳಕ್ಕೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಭೇಟಿ ನೀಡಿದ್ದು, ಗ್ರಾಮಸ್ಥರ ಮನವಿಯನ್ನ ಜಿಲ್ಲಾಧಿಕಾರಿ ಆಲಿಸಿದರು. ನಾನೇ ಬುಧವಾರ ಗ್ರಾಮಕ್ಕೆ ಬಂದು ರೈತರ ಮನವೊಲಿಸುತ್ತೇನೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಬೆಳಗಾವಿ: ಸ್ಮಶಾನ (Cemetery) ಕ್ಕೆ ಹೋಗಲು ದಾರಿ ಇಲ್ಲ ಎಂದು ಆರೋಪಿಸಿ ಡಿಸಿ ಕಚೇರಿ ಎದುರು ಶವವಿಟ್ಟು ಏಣಗಿ ಗ್ರಾಮಸ್ಥರು ಪ್ರತಿಭಟನೆ ಮಾಡಿದರು. ಅಬ್ದುಲ್ ಮಿಶ್ರಿಕೋಟಿ(65) ಎಂಬುವವರು ಮೃತಪಟ್ಟಿದ್ದರು. ಸ್ಮಶಾನಕ್ಕೆ ಹೋಗುವುದಕ್ಕೆ ದಾರಿ ಇಲ್ಲ ಎಂದು ಜನರು ಗರಂ ಆಗಿದ್ದು, ಸ್ಮಶಾನಕ್ಕೆ ಜಾಗ ಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಬೇಕೆ ಬೇಕು ನ್ಯಾಯ ಬೇಕು ಅಂತಾ ಘೋಷಣೆ ಕೂಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಗ್ರಾಮಸ್ಥರ ಮನವೊಲಿಸಲು ಯತ್ನಿಸಿದರು. ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಆಗಮಿಸಿ, ಗ್ರಾಮಸ್ಥರ ಜತೆಗೆ ಚರ್ಚೆ ಮಾಡಿ ಮನವೊಲಿಸಲು ಯತ್ನಿಸಿದರು. ಸ್ಮಶಾನಕ್ಕೆ ಹೋಗುವ ದಾರಿ ಮಂಜೂರು ಮಾಡುವವರೆಗೂ ಹೋಗಲ್ಲ ಅಂತಾ ಗ್ರಾಮಸ್ಥರು ಪಟ್ಟು ಹಿಡಿದರು. ಈ ವೇಳೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ಜಾಗ ಕೊಡಿಸುವುದಾಗಿ ಎಡಿಸಿ ಹೇಳಿದ್ರೂ, ಅಧಿಕೃತ ಆದೇಶ ಮಾಡಿ ಅಂತಾ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ: IND vs IRE: ಕೋಚ್ ಲಕ್ಷ್ಮಣ್ ಮಾಡಿದ ಮಾಸ್ಟರ್ ಪ್ಲಾನ್ಗೆ ಮಕಾಡೆ ಮಲಗಿದ ಐರ್ಲೆಂಡ್: ಏನದು ಗೊತ್ತೇ?
ಸ್ಥಳಕ್ಕೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಭೇಟಿ ನೀಡಿದ್ದು, ಗ್ರಾಮಸ್ಥರ ಮನವಿಯನ್ನ ಜಿಲ್ಲಾಧಿಕಾರಿ ಆಲಿಸಿದರು. ರೈತರು ಸ್ಮಶಾನಕ್ಕೆ ಹೋಗಲು ಜಾಗ ಕೊಡುತ್ತಿಲ್ಲ. ಗ್ರಾಮದವರು ಒಟ್ಟಾಗಿ ಬಂದ್ರೇ ಕೂಡಲೇ ಜಮೀನು ಖರೀದಿ ಮಾಡಿ ಕೊಡುತ್ತೇವೆ. ಕಾನೂನು ರೀತಿ ಕ್ರಮ ಕೈಗೊಂಡು ಜಾಗ ಕೊಡಿಸಿ ಅಂತಾ ಗ್ರಾಮಸ್ಥರು ಪಟ್ಟು ಹಿಡಿದರು. ನಾನೇ ಬುಧವಾರ ಗ್ರಾಮಕ್ಕೆ ಬಂದು ರೈತರ ಮನವೊಲಿಸುತ್ತೇನೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದರು. ಇಬ್ಬರು ರೈತರು ಒಪ್ಪದಿದ್ದಕ್ಕೆ ಭೂಸ್ವಾದೀನ ಆಗುತ್ತಿಲ್ಲ. ತಾತ್ಕಾಲಿಕವಾಗಿ ಜೆಸಿಬಿಯಿಂದ ಈಗ ದಾರಿ ಮಾಡಿಕೊಡುವಂತೆ ಮನವಿ ಮಾಡಲಾಯಿತು.
ಸಮಸ್ಯೆಯ ಕುರಿತಾಗಿ ಗ್ರಾಮಸ್ಥರು ಎಂ.ಬಿ ಪಾಟೀಲ್ ಅವರಿಗೂ ಕೂಡ ಪತ್ರ ಬರೆದಿದ್ದು, ಸ್ಮಶಾನಗಳಿಗೆ ರಸ್ತೆಯ ಪತ್ತೆ ಇಲ್ಲದ್ದರಿಂದ ಸ್ಮಶಾನಕ್ಕೆ ಹತ್ತಿಕೊಂಡ ಜಮೀನುಗಳ ಮಲಿಕರು ರಸ್ತೆ ನೀಡದೆ ಪದೆ ಪದೆ ಕಿರಿ ಕಿರಿ ಮಾಡುತ್ತಿರುವದರಿಂದ ಅಂತ್ಯಸಂಸ್ಕಾರಕ್ಕೆ ತೀವ್ರ ತರನಾದ ತೊಂದರೆಯಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಸವದತ್ತಿ ತಾಲೂಕಾ ತಹಶಿಲ್ದಾರ ಹತ್ತಿರ ಸಾಕಷ್ಟು ಮನವಿ ಮಾಡಿದ್ದರು ಯಾವುದೆ ಪ್ರಯೋಜನವಾಗಿಲ್ಲ. ಗ್ರಾಮದಲ್ಲಿ ಇತ್ತಿಚ್ಚಿಗೆ ತೀರಿಕೊಂಡವರ ಶವಸಂಸ್ಕಾರಕ್ಕಾಗಿ 6ಘಂಟೆಕ್ಕಿಂತ ಹೆಚ್ಚಿನ ಸಮಯ ಕಾಯುವಂತಾಯಿತು. ಕೊನೆಗೆ ಸಮೀಪದ ಸುತಗಟ್ಟಿ ಗ್ರಾಮದ ಸರಹದ್ದಿಯ ರಸ್ತೆಯಿಂದ 2ಘಂಟೆಗಳ ಕಾಲ ಶವ ಸಾಗಿಸಿ ಅಂತ್ಯಕ್ರಿಯೆ ಮಾಡಲಾಯಿತು. ಇದರಿಂದ ನಾಗರಿಕ ಸಮಾಜ ತಲೆತಗ್ಗಿಸಿ ನಡೆಯುವಂತ್ತಾಗಿದ್ದು ಸರ್ಕಾರದ ಸ್ಮಶಾನವಿದ್ದರು ಅದಕ್ಕೆ ಸಂಪರ್ಕ ರಸ್ತೆ ಇಲ್ಲದೆ ಪ್ರತಿ ಬಾರಿ ಅಂತ್ಯಕ್ರಿಯೆ ಕೈಗೊಳ್ಳುವಾಗ ಈ ದುಸ್ಥಿತಿ ಉಂಟಾಗುತ್ತಿದ್ದು ಇದಕ್ಕೊಂದು ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: Maharashtra Politics: ಸುಪ್ರೀಂಕೋರ್ಟ್ ಕದ ತಟ್ಟಿದ ಶಿವಸೇನೆ ಬಣ ಬಿಕಟ್ಟು: ಇಂದು ವಿಚಾರಣೆ