ಶಾಲಾ ಮಕ್ಕಳ ಪ್ರಾಣದ ಜೊತೆ ಶಿಕ್ಷಕನ ಚೆಲ್ಲಾಟ: ಕ್ರೂಸರ್ ವಾಹನದ ಟಾಪ್ ಮೇಲೆ ಕೂರಿಸಿ ಮಕ್ಕಳನ್ನು ಕರೆತಂದಿದ್ದಕ್ಕೆ ಮುಖ್ಯ ಶಿಕ್ಷಕನ ವಿರುದ್ಧ ಆಕ್ರೋಶ
ಕ್ರೀಡಾಕೂಟ ಮುಗಿದ ಬಳಿಕ ಬೆಂಡವಾಡ ಗ್ರಾಮದಿಂದ ವಾಪಸ್ ಮಂಟೂರ ಗ್ರಾಮಕ್ಕೆ ತೆರಳುತ್ತಿರುವಾಗ ಮುಖ್ಯ ಶಿಕ್ಷಕ ಆರ್.ಕೆ.ಲಮಾಣಿ ಕ್ರೂಸರ್ ವಾಹನದ ಟಾಪ್ ಮೇಲೆ 10 ಕ್ಕೂ ಹೆಚ್ಚು ಮಕ್ಕಳನ್ನ ಕುಳಿಸಿಕೊಂಡು ವಾಪಸ್ ಆಗಿದ್ದಾರೆ.
ಚಿಕ್ಕೋಡಿ: ಶಾಲಾ ಮಕ್ಕಳ ಪ್ರಾಣದ ಜೊತೆ ಮುಖ್ಯ ಶಿಕ್ಷಕ ಚೆಲ್ಲಾಟವಾಡಿದ್ದಾನೆ. ಕ್ರೂಸರ್ ವಾಹನದ ಟಾಪ್ ಮೇಲೆ ಕೂರಿಸಿ ಮಕ್ಕಳನ್ನ ಕರೆದೊಯ್ದ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಬೆಂಡವಾಡ ಗ್ರಾಮದಲ್ಲಿ ನಡೆದಿದೆ. ನಿನ್ನೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇದೇ ತಾಲೂಕಿನ ಮಂಟೂರ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಬೆಂಡವಾಡ ಗ್ರಾಮದಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದರು. ಕ್ರೀಡಾಕೂಟ ಮುಗಿದ ಬಳಿಕ ಬೆಂಡವಾಡ ಗ್ರಾಮದಿಂದ ವಾಪಸ್ ಮಂಟೂರ ಗ್ರಾಮಕ್ಕೆ ತೆರಳುತ್ತಿರುವಾಗ ಮುಖ್ಯ ಶಿಕ್ಷಕ ಆರ್.ಕೆ.ಲಮಾಣಿ ಕ್ರೂಸರ್ ವಾಹನದ ಟಾಪ್ ಮೇಲೆ 10 ಕ್ಕೂ ಹೆಚ್ಚು ಮಕ್ಕಳನ್ನ ಕುಳಿಸಿಕೊಂಡು ವಾಪಸ್ ಆಗಿದ್ದಾರೆ. ಇದು ಮಕ್ಕಳ ಜೊತೆ ಮುಖ್ಯ ಶಿಕ್ಷಕ ಚೆಲ್ಲಾಟವಾಡಿದ್ದಾನೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ವಾಹನ ಚಾಲಕ ಮಕ್ಕಳನ್ನು ಟಾಪ್ನಲ್ಲಿ ಕೂರಲು ಅವಕಾಶ ಕೊಡಬಾರದಿತ್ತು ಎಂದು ಕೆಲವರು ಗರಂ ಆಗಿದ್ದಾರೆ.
ನಿನ್ನೆ ಬೆಂಡವಾಡ ಗ್ರಾಮದಲ್ಲಿ ವಲಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ಹಿನ್ನಲೆ ರಾಯಬಾಗ ತಾಲೂಕಿನ 30 ಕ್ಕೂ ಅಧಿಕ ಮಂಟೂರು ಗ್ರಾಮದ ಸರ್ಕಾರಿ ಶಾಲೆ ಮಕ್ಕಳು ಹೋಗಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿ ಮಕ್ಕಳು ವಿವಿಧ ಪುರಸ್ಕಾರವನ್ನ ಪಡೆದಿದ್ದರು ಅದರ ಸಂಭ್ರಮಾಚರಣೆಯಲ್ಲಿ ಹಿಗ್ಗಿದ ಶಿಕ್ಷಕ 10 ಕ್ಕೂ ಹೆಚ್ಚು ಮಕ್ಕಳನ್ನ ಕ್ರೂಸರ್ ಟಾಪ್ ಮೇಲೆ ಹತ್ತಿಸಿ ಕೇಕೆ ಶಿಳ್ಳೆ ಹಾಕುತ್ತ ಮಕ್ಕಳನ್ನ ಬೆಂಡವಾಡದಿಂದ ಮಂಟೂರು ಕಡೆಗೆ ಕರೆದುಕೊಂಡು ಹೋಗುವಾಗ ಸ್ಥಳೀಯರು ಮೊಬೈಲ್ ಕ್ಯಾಮೆರಾದಲ್ಲಿ ದೃಷ್ಯಗಳನ್ನ ಸೆರೆ ಹಿಡಿದಿದ್ದಾರೆ. ಘಟನೆ ಸಂಬಂಧಪಟ್ಟಂತೆ ಮುಖ್ಯ ಶಿಕ್ಷಕ ಆರ್.ಕೆ. ಲಮಾಣಿ ವಿರುದ್ಧವಾಗಿ ಕ್ರಮ ಕೈಗೊಳ್ಳುವಂತೆ ಮೇಲಾಧಿಕಾರಿಗಳ ಗಮನಕ್ಕೂ ತಂದಿದ್ದಾರೆ. ಆದರೆ ಈ ವರೆಗೆ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡಿದ ಮುಖ್ಯ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳದಿರುವುದಕ್ಕೆ ಸಾಮಾಜಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
Published On - 2:50 pm, Fri, 22 July 22