ಭೂಕಬಳಿಕೆ ಪ್ರಕರಣ: ಭೈರತಿ ಬಸವರಾಜ್ ರಾಜೀನಾಮೆಗೆ ಸಿದ್ದರಾಮಯ್ಯ ಒತ್ತಾಯ; ಸಂಪುಟದಿಂದ ವಜಾಗೊಳಿಸಲು ಆಗ್ರಹ

| Updated By: ganapathi bhat

Updated on: Dec 17, 2021 | 3:58 PM

ಸಮನ್ಸ್ ಬಂದಾಗಲೇ ಭೈರತಿ ರಾಜೀನಾಮೆ ನೀಡಬೇಕಿತ್ತು. ಭೈರತಿ ಬಸವರಾಜ್‌ರಿಂದ ಸಿಎಂ ರಾಜೀನಾಮೆ ಪಡೆಯಲಿ. ರಾಜೀನಾಮೆ ನೀಡದಿದ್ದರೆ ಸಂಪುಟದಿಂದ ವಜಾಗೊಳಿಸಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭೂಕಬಳಿಕೆ ಪ್ರಕರಣ: ಭೈರತಿ ಬಸವರಾಜ್ ರಾಜೀನಾಮೆಗೆ ಸಿದ್ದರಾಮಯ್ಯ ಒತ್ತಾಯ; ಸಂಪುಟದಿಂದ ವಜಾಗೊಳಿಸಲು ಆಗ್ರಹ
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ
Follow us on

ಬೆಳಗಾವಿ: ಸಚಿವ ಭೈರತಿ ಬಸವರಾಜ್ ವಿರುದ್ಧದ ಭೂಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿ ಸುವರ್ಣಸೌಧದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕಡಿಕಾರಿದ್ಧಾರೆ. ಅಂದು ಖಾಲಿ ಪೇಪರ್ ಮೇಲೆ ಸಹಿ ತೆಗೆದುಕೊಂಡಿದ್ದಾರೆ. ಅಪರಾಧಿಕ ಒಳಸಂಚು ಮಾಡಿ ಅಣ್ಣಯ್ಯಪ್ಪ ಕಡೆಯಿಂದ ಸಹಿ ಹಾಕಿಸಿಕೊಂಡಿದ್ದಾರೆ. ಸಹಿ ಹಾಕಿಸಿಕೊಂಡು ವಿಭಾಗಪತ್ರ ಸೃಷ್ಟಿ ಮಾಡಿದ್ದಾರೆ. 2003ರ ಮೇ 21ರಂದು ವಿಭಾಗ ಮಾಡಿಕೊಂಡು ಅಂದೇ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ. ಮಾದಪ್ಪ ಎನ್ನುವವರು ಐವರ ಮೇಲೆ ಕೇಸ್ ಹಾಕಿದ್ದಾರೆ. ಸಚಿವ ಭೈರತಿ, ಎಮ್​ಎಲ್​ಸಿ ಶಂಕರ್ ಸೇರಿ ಐವರ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ. ಜನಪ್ರತಿನಿಧಿಗಳ ಕೋರ್ಟ್‌ನಿಂದ ಈಬಗ್ಗೆ ಆದೇಶ ಬಂದಿದೆ ಎಂದು ಸುವರ್ಣಸೌಧದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. 

ಕೂಡಲೇ ಸಚಿವ ಸಂಪುಟದಿಂದ ಭೈರತಿರನ್ನ ವಜಾಗೊಳಿಸಲಿ. ಸಮನ್ಸ್ ಬಂದಾಗಲೇ ಭೈರತಿ ರಾಜೀನಾಮೆ ನೀಡಬೇಕಿತ್ತು. ಭೈರತಿ ಬಸವರಾಜ್‌ರಿಂದ ಸಿಎಂ ರಾಜೀನಾಮೆ ಪಡೆಯಲಿ. ರಾಜೀನಾಮೆ ನೀಡದಿದ್ದರೆ ಸಂಪುಟದಿಂದ ವಜಾಗೊಳಿಸಲಿ. ಭೈರತಿ ಪವರ್ ಫುಲ್‌ ಪರ್ಸನ್ ಎಂದು ಜಡ್ಜ್‌ ಹೇಳಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭೈರತಿ ಬಸವರಾಜ್‌ ಆಗ ಸಿದ್ದರಾಮಯ್ಯನ ಶಿಷ್ಯ, ಈಗ ಅಲ್ಲ. ಈಗ ಅವನು ನನ್ನ ಶಿಷ್ಯನೆಂದು ಒಪ್ಪಿಕೊಳ್ಳಲೂ ನಾನು ಸಿದ್ಧನಿಲ್ಲ ಎಂದು ಗರಂ ಆಗಿದ್ದಾರೆ.

ಸಚಿವ ಭೈರತಿ ಬಸವರಾಜ್ ವಿರುದ್ಧದ ಭೂಕಬಳಿಕೆ ಪ್ರಕರಣದ ಬಗ್ಗೆ ಸದನದಲ್ಲಿ ನಿಯಮ 60ರಡಿ ಚರ್ಚೆಗೆ ಅವಕಾಶ ಕೇಳಿದ್ದೆವು ಎಂದು ಸುವರ್ಣಸೌಧದಲ್ಲಿ ವಿಪಕ್ಷನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಸಾರ್ವಜನಿಕರ ಪ್ರಾಮುಖ್ಯತೆ ವಿಚಾರ ಆಗಿದ್ದರಿಂದ ಮನವಿ ಮಾಡಿದ್ದೆವು. ಕ್ರಮಬದ್ಧವಾಗಿ ನೋಟಿಸ್ ಕೊಟ್ಟಿದ್ದೆವು. ನೋಟಿಸ್ ಕೊಟ್ಟವರಿಗೆ ಪ್ರಾಥಮಿಕ ಪ್ರಸ್ತಾಪಕ್ಕೆ ಅವಕಾಶ ಮಾಡುತ್ತಾರೆ. ನಿಯಮ 60ರಡಿ ಕೇಳಿದ್ರೆ ನಿಯಮ 69ರಡಿ ಚರ್ಚೆಗೆ ಅವಕಾಶ ಕೊಡುತ್ತಾರೆ ಎಂದು ಸುವರ್ಣಸೌಧದಲ್ಲಿ ವಿಪಕ್ಷನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಕೆ.ಆರ್.ಪುರಂ ಹೋಬಳಿಯ ಕಲ್ಕೆರೆ ಬಳಿಯ ಆಸ್ತಿ ಕಬಳಿಕೆ, ಭೂಕಬಳಿಕೆ ಬಗ್ಗೆ ಪೊಲೀಸ್ ಠಾಣೆಗೆ ದೂರು ಕೊಡುತ್ತಾರೆ. ಪ್ರಕರಣ ಸಂಬಂಧ ಪೊಲೀಸರು ಬಿ ರಿಪೋರ್ಟ್ ಹಾಕುತ್ತಾರೆ, ಬಿ ರಿಪೋರ್ಟ್‌ ಪ್ರಶ್ನಿಸಿ ಮಾದಪ್ಪ ಮೇಲ್ಮನವಿ ಸಲ್ಲಿಸುತ್ತಾರೆ. ಆಗ ಪಿಸಿಆರ್ ದಾಖಲಿಸಿಕೊಂಡು ವಿಚಾರಣೆ ನಡೆಯುತ್ತದೆ. ವಿಚಾರಣೆಗೆ ತೆಗೆದುಕೊಳ್ಳಲು ನಿರ್ಧಾರವಾಗಿ ದೂರು ದಾಖಲು ಮಾಡಲಾಗುತ್ತದೆ. ಐಪಿಸಿ ಸೆಕ್ಷನ್‌ 120, 420, 465, 467ರಡಿ ಕೇಸ್ ದಾಖಲು ಮಾಡಲಾಗುತ್ತದೆ. ಒಳಸಂಚು, ದಾಖಲೆ ಸೃಷ್ಟಿ ಮಾಡಿದ ಆರೋಪದಡಿ ಮೊಕದ್ದಮೆ ದಾಖಲಾಗುತ್ತದೆ. ಭೈರತಿ ಬಸವರಾಜ್ ಸೇರಿ ಐವರಿಗೂ ಸಮನ್ಸ್‌ ಜಾರಿ ಮಾಡಿದೆ. ಇದು ಜಾಮೀನು ರಹಿತ ಕೇಸ್, ಅತ್ಯಂತ ಗಂಭೀರ ಪ್ರಕರಣ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಸಚಿವ ಭೈರತಿ ಬಸವರಾಜ್ ವಿರುದ್ಧದ ಭೂಕಬಳಿಕೆ ಪ್ರಕರಣದ ನಿಲುವಳಿ ತಿರಸ್ಕಾರ ಮಾಡಬೇಕೆಂದು ಮೊದಲೇ ತೀರ್ಮಾನ ಮಾಡಲಾಗಿದೆ. ತಿರಸ್ಕರಿಸಬೇಕೆಂದು ಮೊದಲೇ ನಿರ್ಧರಿಸಿ ಸ್ಪೀಕರ್‌ ಬಂದಿದ್ರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನಾವು ಮಾತನಾಡಲು ಸ್ಪೀಕರ್ ಅವಕಾಶವನ್ನೇ ನೀಡಲಿಲ್ಲ. ಭೂಕಬಳಿಕೆ ಪ್ರಕರಣದ ದೂರುದಾರರಿಗೆ ನ್ಯಾಯ ಸಿಗಬೇಕು. ಅಧಿಕಾರದಲ್ಲಿರುವುದರಿಂದ ಪ್ರಭಾವ ಬೀರುವ ಸಾಧ್ಯತೆ ಇದೆ. ಭೈರತಿ ರಾಜೀನಾಮೆ ನೀಡಬೇಕು, ಇದು ನೈತಿಕತೆ ಜವಾಬ್ದಾರಿ. ಸಚಿವ ಸುಧಾಕರ್ ನನ್ನ ಜತೆ ಸೆಟಲ್‌ಮೆಂಟ್‌ಗೆ ಪ್ರಯತ್ನಿಸಿಲ್ಲ. ಪ್ರಕರಣವನ್ನು ನಾವು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ. ಚರ್ಚೆಗೆ ಅವಕಾಶ ಕೊಡಬೇಕು, ರಾಜೀನಾಮೆ ಕೊಡಬೇಕು. ಇದು ನಮ್ಮ ಡಿಮ್ಯಾಂಡ್ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸಚಿವ ಭೈರತಿ ಬಸವರಾಜ ಭೂಕಬಳಿಕೆ ಎಫ್​ಐಆರ್​ ವಿಚಾರವಾಗಿ ಬೆಳಗಾವಿಯ ಸುವರ್ಣಸೌಧದಲ್ಲಿ ಸಚಿವ ಮುನಿರತ್ನ ಮಾತನಾಡಿದ್ದಾರೆ. 2003ರಲ್ಲಿ ಭೈರತಿ ಬಸವರಾಜ ಹಣ ನೀಡಿ ಖರೀದಿಸಿದ್ದ ಆಸ್ತಿ ಅದು. ಕುಟುಂಬ ವ್ಯಾಜ್ಯವನ್ನು ರಾಜಕೀಯ ಕಾರಣಕ್ಕಾಗಿ ತಂದಿದ್ದಾರೆ. ಅಂದು ಕಾಂಗ್ರೆಸ್ ಪಕ್ಷದವರೇ ಬಿ ರಿಪೋರ್ಟ್​ ನೀಡಿದ್ದರು. ಇವತ್ತು ಯಾಕೆ ರಾಜೀನಾಮೆ ಕೇಳುತ್ತಿದ್ದಾರೋ ಗೊತ್ತಿಲ್ಲ. ಈ ದೇಶದ ಕಾನೂನಿಗೆ ಪ್ರತಿಯೊಬ್ಬರೂ ಗೌರವ ಕೊಡಬೇಕು ಎಂದು ಮುನಿರತ್ನ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಭೈರತಿ ಬಸವರಾಜ್ ವಿರುದ್ಧ ನಿಲುವಳಿ ಸೂಚನೆ ಮಂಡಿಸಲು ಕಾಂಗ್ರೆಸ್ ನಿರ್ಧಾರ: ಕಾರ್ಯದರ್ಶಿಗೆ ಮಾಹಿತಿ ಪತ್ರ

ಇದನ್ನೂ ಓದಿ: ಸಹೋದರನ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಭೇಷ್ ಎಂದರು ಸಿದ್ದರಾಮಯ್ಯ