ಭೈರತಿ ಬಸವರಾಜ್ ವಿರುದ್ಧ ನಿಲುವಳಿ ಸೂಚನೆ ಮಂಡಿಸಲು ಕಾಂಗ್ರೆಸ್ ನಿರ್ಧಾರ: ಕಾರ್ಯದರ್ಶಿಗೆ ಮಾಹಿತಿ ಪತ್ರ
ಸಚಿವ ಭೈರತಿ ಬಸವರಾಜ್ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಲು ಕಾಂಗ್ರೆಸ್ ವಿಧಾನಸಭೆಯಲ್ಲಿ ನಿಲುವಳಿ ಮಂಡಿಸಲು ಸಿದ್ಧತೆ ನಡೆಸಿದೆ.
ಬೆಳಗಾವಿ: ನಕಲಿ ದಾಖಲೆ ಸೃಷ್ಟಿಸಿ ಜಮೀನು ವರ್ಗಾವಣೆ ಮಾಡಿದ ಅಕ್ರಮ ಆರೋಪ ಎದುರಿಸುತ್ತಿರುವ ಸಚಿವ ಭೈರತಿ ಬಸವರಾಜ್ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಈ ಸಂಬಂಧ ವಿಧಾನಸಭೆಯಲ್ಲಿ ಶುಕ್ರವಾರ (ಡಿ.17) ನಿಲುವಳಿ ಮಂಡಿಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ. ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿಗೆ ಮಾಹಿತಿ ಪತ್ರ ನೀಡಿದೆ. ವಿಧಾನ ಪರಿಷತ್ನಲ್ಲಿ ಗುರುವಾರ (ಡಿ.16) ಈ ವಿಷಯ ಪ್ರಸ್ತಾಪಿಸಿ ಕಾಂಗ್ರೆಸ್ ಗದ್ದಲ ಎಬ್ಬಿಸಿತ್ತು. ಇದೀಗ ವಿಧಾನಸಭೆಯಲ್ಲೂ ವಿಷಯ ಪ್ರಸ್ತಾಪಿಸಿ ಸಚಿವರ ರಾಜೀನಾಮೆಗೆ ಒತ್ತಾಯಿಸಲು ಕಾಂಗ್ರೆಸ್ ನಿರ್ಧರಿಸಿದೆ.
ನಿಲುವಳಿ ಮಂಡನೆಯಿಂದ ಕಾಂಗ್ರೆಸ್ ಪಕ್ಷವನ್ನು ಹಿಂದೆ ಸರಿಯುವಂತೆ ಮಾಡಲು ಬಿಜೆಪಿ ಹಲವು ತಂತ್ರಗಳನ್ನು ಬಳಸಿತ್ತು. ಈ ಕುರಿತು ಸಂಧಾನಕ್ಕಾಗಿ ಆರೋಗ್ಯ ಸಚಿವ ಕೆ.ಸುಧಾಕರ್ ಯತ್ನಿಸಿದ್ದರು. ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಚಿವ ಡಾ.ಸುಧಾಕರ್ ಕರೆ ಮಾಡಿ, ನಿಲುವಳಿ ಸೂಚನೆ ಮಂಡಿಸಬೇಡಿ ಎಂದು ಸರ್ಕಾರದ ಪರವಾಗಿ ಮನವಿ ಮಾಡಿ, ಮನವೊಲಿಸಲು ಯತ್ನಿಸಿದರು. ಕೆಲ ಇತರ ವಿರೋಧ ಪಕ್ಷಗಳ ನಾಯಕರೊಂದಿಗೂ ಮಾತನಾಡಿದರು.
ಸಚಿವ ಭೈರತಿ ಬಸವರಾಜ್ ವಿರುದ್ಧ ಕಾಂಗ್ರೆಸ್ ನಾಯಕರು ಸದನದ ಹೊರಗೂ ವಾಗ್ದಾಳಿ ಮುಂದುವರಿಸಿದ್ದಾರೆ. ಹಾವೇರಿಯಲ್ಲಿ ಪ್ರತಿಕ್ರಿಯಿಸಿದ ಕೆಪಿಸಿಸಿ ಕಾಱಧ್ಯಕ್ಷ ಸಲೀಂ ಅಹಮದ್, ಭೈರತಿ ಬಸವರಾಜ್ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಲೇ ಸಚಿವ ಸಂಪುಟದಿಂದ ಕೈಬಿಡಬೇಕು. ಈ ಸರ್ಕಾರ ಭ್ರಷ್ಟರಿಗೆ ರಕ್ಷಣೆ ಕೊಡುತ್ತಿದೆ ಎಂದು ಆರೋಪ ಮಾಡಿದರು. ಸಚಿವ ಭೈರತಿ ಬಸವರಾಜ ವಿರುದ್ಧ ಭೂ ಹಗರಣದ ಆರೋಪದ ಬಗ್ಗೆ ಚರ್ಚೆಗೆ ಅವಕಾಶ ಕೇಳಿದ್ದಕ್ಕೆ ನಿನ್ನೆ ಹನ್ನೊಂದು ನಮ್ಮ ಪಕ್ಷದ 11 ಸದಸ್ಯರನ್ನು ಅಮಾನತು ಮಾಡಿದರು. ಭೂ ಹಗರಣದ ಮಾಡಿರೋ ಭೈರತಿ ಬಸವರಾಜ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಈ ಸರ್ಕಾರವು ಭ್ರಷ್ಟರಿಗೆ ರಕ್ಷಣೆ ಕೊಡುತ್ತಿದೆ. ಪರ್ಸೆಂಟೇಜ್ ಬಗ್ಗೆ ಗುತ್ತಿಗೆದಾರರು ಪ್ರಧಾನಿಗೆ ಪತ್ರ ಬರೆದಿದ್ದು ಇತಿಹಾಸದಲ್ಲಿ ಇದೇ ಮೊದಲು. ಪ್ರಧಾನಿಗೆ ಬದ್ಧತೆ ಇದ್ದರೆ ಕೂಡಲೇ ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕಿತ್ತು. ಹನ್ನೊಂದು ವಿಧಾನ ಪರಿಷತ್ ಕ್ಷೇತ್ರಗಳಲ್ಲಿ ನಾವು ಜಯಗಳಿಸಿದ್ದೇವೆ ಎಂದರು. ಪರ್ಸೆಂಟೇಜ್ ಬಗ್ಗೆ ಮಾತನಾಡಲು ಕಾಂಗ್ರೆಸ್ನವರಿಗೆ ನೈತಿಕತೆ ಇಲ್ಲ ಎಂದಿರುವ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರಸ್ತಾಪಿಸಿದ ಅವರು, ಕುಮಾರಸ್ವಾಮಿ ಏನು ಹೇಳ್ತಾರೆ ಎನ್ನುವುದೇ ನಮಗೆ ಅರ್ಥ ಆಗುವುದಿಲ್ಲ. ಸಿದ್ದರಾಮಯ್ಯ ಯಾವುದೇ ಭ್ರಷ್ಟಾಚಾರ, ಆರೋಪಗಳಿಲ್ಲದೆ ಐದು ವರ್ಷ ಪೂರ್ಣ ಸರಕಾರ ನಡೆಸಿದರು. ಕುಮಾರಸ್ವಾಮಿ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ: ಬೆಂಗಳೂರು ಹೊರವಲಯದಲ್ಲಿ ಎರಡು ದೊಡ್ಡ ಚಿತಾಗಾರ ಸ್ಥಾಪನೆ: ಸಿಎಂ ಬಸವರಾಜ ಬೊಮ್ಮಾಯಿ ಇದನ್ನೂ ಓದಿ: ಬಿಟ್ಕಾಯಿನ್ ಆರೋಪಿ ಶ್ರೀಕಿ ಉಳಿಸಲು ಸರ್ಕಾರದ ಯತ್ನ: ಪ್ರತಿಪಕ್ಷಗಳ ಆರೋಪ ಗೃಹ ಸಚಿವರ ಉತ್ತರ
Published On - 7:59 pm, Thu, 16 December 21