ಶುಗರ್ ಫ್ಯಾಕ್ಟರಿಗಳಿಗೆ ಮುತ್ತಿಗೆ: ಬೆಂಗಳೂರಿಗೆ ಕೇಂದ್ರ ಸಮಿತಿ; ಬೆಳಗಾವಿಗೆ ಬರುವಂತೆ ಕಬ್ಬು ಬೆಳೆಗಾರರು ಪಟ್ಟು

ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಹೋರಾಟ ತೀವ್ರಗೊಂಡಿದೆ. ರೈತರು ಸಕ್ಕರೆ ಕಾರ್ಖಾನೆಗಳ ಗೋದಾಮುಗಳಿಗೆ ಮುತ್ತಿಗೆ ಹಾಕಿ, ಸಕ್ಕರೆ ಮಾರಾಟ ಮಾಡದಂತೆ ಎಚ್ಚರಿಸಿದ್ದಾರೆ. ಇದೆಲ್ಲದರ ನಡುವೆ ರಾಜ್ಯಕ್ಕೆ ನಾಳೆ ಕೇಂದ್ರ ಸರ್ಕಾರ ರಚನೆ ಮಾಡಿರುವ ಸಮಿತಿ ಕೂಡ ಆಗಮಿಸುತ್ತಿದೆ. ಬೆಳಗಾವಿಗೆ ಬಂದು ಸಮಸ್ಯೆ ಆಲಿಸುವಂತೆ ರೈತರು ಪಟ್ಟುಹಿಡಿದಿದ್ದಾರೆ.

ಶುಗರ್ ಫ್ಯಾಕ್ಟರಿಗಳಿಗೆ ಮುತ್ತಿಗೆ: ಬೆಂಗಳೂರಿಗೆ ಕೇಂದ್ರ ಸಮಿತಿ; ಬೆಳಗಾವಿಗೆ ಬರುವಂತೆ ಕಬ್ಬು ಬೆಳೆಗಾರರು ಪಟ್ಟು
ಸಕ್ಕರೆ ಕಾರ್ಖಾನೆಗಳಿಗೆ ರೈತರ ಮುತ್ತಿಗೆ
Edited By:

Updated on: Oct 28, 2026 | 8:09 PM

ಮುಖ್ಯಾಂಶಗಳು

  • ರಾಜ್ಯದಲ್ಲಿ ಕಬ್ಬು ಬೆಳೆಗಾರರ ಹೋರಾಟ ವಿಚಾರ
  • 15ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆ ಗೋದಾಮುಗಳಿಗೆ ಮುತ್ತಿಗೆ 
  • ನಾಳೆ ಬೆಂಗಳೂರಿಗೆ ಕೇಂದ್ರ ಸರ್ಕಾರದ ಸಮಿತಿ ಆಗಮನ

ಬೆಳಗಾವಿ, ಅಕ್ಟೋಬರ್​​ 28: ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಹೋರಾಟ ಮತ್ತೊಂದು ಹಂತಕ್ಕೆ ತಲುಪಿದೆ. ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ನೀಡಿದ್ದ ಗಡುವು ಮುಕ್ತಾಯ ಬೆನ್ನಲ್ಲೇ ಜಿಲ್ಲೆಯ ವಿವಿಧ ಸಕ್ಕರೆ ಕಾರ್ಖಾನೆಗಳ ಗೋದಾಮುಗಳಿಗೆ ರೈತರು ಮುತ್ತಿಗೆ ಹಾಕಿ, ಸಕ್ಕರೆ ಮಾರಾಟ ಸ್ಥಗಿತಗೊಳಿಸುವಂತೆ ಎಚ್ಚರಿಕೆ ನೀಡಿದ್ದಾರೆ. ನಾಳೆ ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತರ ಜೊತೆಗೆ ದರ ನಿಗದಿ ಕುರಿತಾಗಿ ಮಹತ್ವದ ಸಭೆ ನಡೆಯಲಿದ್ದು, ಇದೇ ಸಂದರ್ಭದಲ್ಲಿ ರಾಜ್ಯಕ್ಕೆ ಕೇಂದ್ರದ ಸಮಿತಿ ಕೂಡ ಆಗಮಿಸುತ್ತಿದೆ.

ನಾಲ್ಕನೇ ದಿನಕ್ಕೆ ಕಾಲಿಟ್ಟ ರೈತರ ಅಹೋರಾತ್ರಿ ಹೋರಾಟ

ಕಬ್ಬಿಗೆ ನ್ಯಾಯಯುತ ಬೆಲೆ ಸಿಗಬೇಕೆಂಬ ಅನ್ನದಾತರ ಆಗ್ರಹಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ಪ್ರತಿ ಟನ್ ಕಬ್ಬಿಗೆ 5,500 ರೂ ದರ ನೀಡಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ. ಇದರಲ್ಲಿ ಒಂದು ಸಾವಿರ ರೂ ಸರ್ಕಾರದ ಪ್ರೋತ್ಸಾಹ ಧನ, ಕಾರ್ಖಾನೆಯವರು ಕನಿಷ್ಟ 4,500 ರೂ ನೀಡಲೇಬೇಕೆಂಬ ಪಟ್ಟು ಹಿಡಿದಿದ್ದಾರೆ. ಗುರ್ಲಾಪುರದಲ್ಲಿ ರೈತರ ಅಹೋರಾತ್ರಿ ಹೋರಾಟ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ನಿಪ್ಪಾಣಿ-ಮೂಡಲಗಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಸಿಎಂ ಜತೆಗಿನ ಸಭೆಯಲ್ಲಿ ಬಗೆಹರಿಯದ ಕಬ್ಬು ಬೆಳೆಗಾರರ ಸಮಸ್ಯೆ: ಹೋರಾಟ ಮುಂದುವರಿಸಲು ನಿರ್ಧಾರ

ರೈತರ ಬೇಡಿಕೆ ಈಡೇರಿಸಲು ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ನೀಡಿರುವ ಗಡುವು ಇಂದು ರಾತ್ರಿ ಮುಕ್ತಾಯ ಆಗಲಿದೆ. ಈ ಬೆನ್ನಲ್ಲೇ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ, ರಾಜ್ಯಾಧ್ಯಕ್ಷ ಶಶಿಕಾಂತ ಗುರೂಜಿ ಹೋರಾಟ ಮತ್ತಷ್ಟು ತೀವ್ರಗೊಳಿಸಲು ಕರೆ ನೀಡಿದ್ದಾರೆ. ಸಕ್ಕರೆ ಕಾರ್ಖಾನೆಗಳಿಗೆ ಮುತ್ತಿಗೆ ಹಾಕಿ ಗೋದಾಮುಗಳಿಗೆ ಬೀಗ ಹಾಕುವ ಮೂಲಕ ರೈತರ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಕಬ್ಬಿನ ಬೆಲೆ ನಿಗದಿಯಾಗುವವರೆಗೆ ಸಕ್ಕರೆ ಹೊರ ಹೋಗಬಾರದು ಎಂಬುದು ರೈತರ ಆಗ್ರಹವಾಗಿದೆ. ಅಲ್ಲದೆ, ಸಕ್ಕರೆಯ ಮಾರಾಟ ದರ ಪ್ರತಿ ಕೆಜಿ 50 ರೂಪಾಯಿಗಿಂತ ಕಡಿಮೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಚೂನಪ್ಪ ಪೂಜಾರಿ ಒತ್ತಾಯಿಸಿದ್ದಾರೆ.

15ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆ ಗೋದಾಮುಗಳಿಗೆ ಮುತ್ತಿಗೆ 

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹುಣಶ್ಯಾಳ ಪಿ.ಜಿ. ಗ್ರಾಮದಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ‌ ಒಡೆತನದ ಸತೀಶ್ ಶುಗರ್ಸ್ ಹಾಗೂ ಕತ್ತಿ ಕುಟುಂಬದ ಒಡೆತನದ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯ ವಿಶ್ವರಾಜ್ ಸಕ್ಕರೆ ಕಾರ್ಖಾನೆ, ಮಾಜಿ ಸಚಿವ ಶ್ರೀಮಂತ್ ಪಾಟೀಲ್ ಒಡೆತನದ ಸಕ್ಕರೆ ಕಾರ್ಖಾನೆ ಸೇರಿ 15ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆ ಗೋದಾಮುಗಳಿಗೆ ರೈತರು ಮುತ್ತಿಗೆ ಹಾಕಿದ್ದಾರೆ.

ರೈತ ಮುಖಂಡ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ಕಾರ್ಖಾನೆ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿ, ಕಬ್ಬಿನ ಬೆಲೆ ನಿಗದಿಯಾಗುವವರೆಗೆ ಸಕ್ಕರೆ ಮಾರಾಟ ಮಾಡದಂತೆ ಒತ್ತಾಯಿಸಿದ್ದಾರೆ. ರೈತರ ಮನವಿಗೆ ಕಾರ್ಖಾನೆಯವರು ಸ್ಪಂದಿಸಿದ್ದಾರೆ. ಅಕ್ಟೋಬರ್ 31ರಂದು ಬೃಹತ್ ಹೋರಾಟಕ್ಕೆ ರೈತರು ಸಿದ್ಧತೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆ ನಡೆಸಿ ಸೂಕ್ತ ಪರಿಹಾರ ಕಲ್ಪಿಸುವಂತೆ ರೈತರ ಒತ್ತಾಯಿಸಿದ್ದಾರೆ.

ನಾವು ಬೆಂಗಳೂರಿಗೆ ಬರಲ್ಲ; ಸಮಿತಿಯೇ ಬೆಳಗಾವಿಗೆ ಬರಲಿ

ಇದೆಲ್ಲದರ ನಡುವೆ ರಾಜ್ಯಕ್ಕೆ ನಾಳೆ ಕೇಂದ್ರ ಸರ್ಕಾರ ರಚನೆ ಮಾಡಿರುವ ಸಮಿತಿ ಕೂಡ ಆಗಮಿಸುತ್ತಿದೆ. ಆ ಮೂಲಕ ಸಮಿತಿ ರೈತರು ಮತ್ತು ಕಾರ್ಖಾನೆ‌ ಮಾಲೀಕರ ಸಮಸ್ಯೆ ಆಲಿಸಲಿದೆ. ಹೀಗಾಗಿ ಬೆಂಗಳೂರಿಗೆ ಬರುವಂತೆ ಶಶಿಕಾಂತ್ ಗೂರೂಜಿ ಹಾಗೂ ಚೂನಪ್ಪ ಪೂಜಾರಿಗೆ ಕರೆ ಮಾಡಲಾಗಿದೆ. ಈ ಕುರಿತಾಗಿ ಪ್ರತಿಕ್ರಿಯಿಸಿರುವ ಚೂನಪ್ಪ ಪೂಜಾರಿ, ‘ಕಬ್ಬು ಬೆಳೆ ಬೆಳಗಾವಿಗೆ ಸೇರಿ ಉತ್ತರ ಕರ್ನಾಟಕ ಭಾಗದಲ್ಲಿದೆ. ಬೆಳಗಾವಿಯಲ್ಲಿ ಶೇಕಡಾ 90ರಷ್ಟು ಕಬ್ಬು ಬೆಳೆಯುತ್ತಾರೆ. ನಾವು ಬೆಂಗಳೂರಿಗೆ ಬರಲ್ಲ, ಸಮಿತಿಯೇ ಬೆಳಗಾವಿಗೆ ಬರಲಿ, ನಾವ್ಯಾರು ಬೆಂಗಳೂರಿಗೆ ಹೋಗುತ್ತಿಲ್ಲ’ ಎಂದಿದ್ದಾರೆ. ಆ ಮೂಲಕ ಬೆಳಗಾವಿಗೆ ಬಂದು ಸಮಸ್ಯೆ ಆಲಿಸುವಂತೆ ರೈತರು ಪಟ್ಟುಹಿಡಿದಿದ್ದಾರೆ.

ಇದನ್ನೂ ಓದಿ: ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಯಿತಾ? ಸಭೆ ಮುಗಿಸಿ ಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು ನೋಡಿ

ಒಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲ ಕೆರಳಿಸಿದರೆ, ಇತ್ತ ಗುರ್ಲಾಪುರದಲ್ಲಿ ರೈತರು ಹೋರಾಟವನ್ನು ಮತ್ತಷ್ಟು ಉಗ್ರಗೊಳಿಸಲು ಸಿದ್ಧತೆ ನಡೆಸಿದ್ದಾರೆ. ನಾಳೆ ರೈತರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯಲ್ಲಿ ದರ ನಿಗದಿಯಾಗಿ ರೈತರಿಗೆ ಸ್ಪಂದಿಸಿದರೆ, ನಾಳೆಯೇ ಹೋರಾಟ ಹಿಂಪಡೆಯಲಿದ್ದಾರೆ. ಒಂದು ವೇಳೆ ಕಾರ್ಖಾನೆಯವರು ರೈತರು ನಿರೀಕ್ಷೆ ಇಟ್ಟುಕೊಂಡ ದರ ನಿಡದಿದ್ದರೆ ಹೋರಾಟದ ಸ್ವರೂಪ ಬದಲಾಗುವ ಸಾಧ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More
Loading...
Unable to load recommendations.
Follow Us