ಬಿಜೆಪಿಯಲ್ಲಿ ಭುಗಿಲೆದ್ದ ಬಂಡಾಯ ಶಮನಕ್ಕಾಗಿ ಇಂದು ಬೆಳಗಾವಿಗೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಆಗಮನ
ಟಿಕೆಟ್ ಹಂಚಿಕೆ ಬಳಿಕ ಬೆಳಗಾವಿ ಬಿಜೆಪಿಯಲ್ಲಿ ಬಂಡಾಯ ಎದ್ದಿದ್ದು, ಈ ವಿಚಾರವಾಗಿ ಇಂದು(ಏ.15) ಮಧ್ಯಾಹ್ನ 2.30ಕ್ಕೆ ಬೆಳಗಾವಿಗೆ ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಆಗಮಿಸಲಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಮಾಹಿತಿ ನೀಡಿದ್ದಾರೆ.
ಬೆಳಗಾವಿ: ಟಿಕೆಟ್ ಹಂಚಿಕೆ ಬಳಿಕ ಬೆಳಗಾವಿ ಬಿಜೆಪಿ(BJP)ಯಲ್ಲಿ ಬಂಡಾಯ ಎದ್ದಿದ್ದು, ಈ ವಿಚಾರವಾಗಿ ಇಂದು(ಏ.15) ಮಧ್ಯಾಹ್ನ 2.30ಕ್ಕೆ ಬೆಳಗಾವಿಗೆ ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್(Dharmendra Pradhan) ಆಗಮಿಸಲಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಮಾಹಿತಿ ನೀಡಿದ್ದಾರೆ. ಈ ವೇಳೆ ಟಿಕೆಟ್ ವಂಚಿತ ಶಾಸಕರು, ಆಕಾಂಕ್ಷಿಗಳ ಜೊತೆ ಚರ್ಚೆ ನಡೆಸುವ ಸಾಧ್ಯತೆಯಿದೆ. ಇನ್ನು ನಿನ್ನೆ(ಏ.14) ಬೆಳಗಾವಿಯಲ್ಲಿ ಧರ್ಮೇಂದ್ರ ಪ್ರಧಾನ್ ನೇತೃತ್ವದಲ್ಲಿ ಖಾಸಗಿ ಹೋಟೆಲ್ನಲ್ಲಿ ನಡೆಯಬೇಕಿದ್ದ ಸಭೆ ರದ್ದಾಗಿತ್ತು. ಈ ಹಿನ್ನಲೆ ಟಿಕೆಟ್ ವಂಚಿತ ಶಾಸಕ ಅನಿಲ್ ಬೆನಕೆ, ಮಹಾದೇವಪ್ಪ ಯಾದವಾಡ ಬೆಂಬಲಿಗರು ಮುತ್ತಿಗೆ ಹಾಕಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ ಕುಮಾರ್ ಸುರಾನಾ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿರನ್ನ ತರಾಟೆಗೆ ತಗೆದುಕೊಂಡಿದ್ದರು.
ಟಿಕೆಟ್ ಹಂಚಿಕೆ ಬಳಿಕ ಬೆಳಗಾವಿ ಜಿಲ್ಲೆಯ 8 ಕ್ಷೇತ್ರಗಳಲ್ಲಿ ಭುಗಿಲೆದ್ದಿರುವ ಬಂಡಾಯ
ಹೌದು ಬಿಜೆಪಿ ಟಿಕೆಟ್ ಹಂಚಿಕೆ ಬಳಿಕ ಇದೀಗ ಬೆಳಗಾವಿ ಜಿಲ್ಲೆಯ 8 ಕ್ಷೇತ್ರಗಳಾದ ಬೆಳಗಾವಿ ಉತ್ತರ, ರಾಮದುರ್ಗ, ಬೆಳಗಾವಿ ಗ್ರಾಮೀಣ, ಬೈಲಹೊಂಗಲ, ಯಮಕನಮರಡಿ, ಖಾನಾಪುರ, ಸವದತ್ತಿ, ಅಥಣಿ ಕ್ಷೇತ್ರದಲ್ಲಿ ಬಂಡಾಯ ಭುಗಿಲೆದ್ದಿದೆ.
ಟಿಕೆಟ್ ವಂಚಿತರಿಗೆ ಗಾಳ ಹಾಕುತ್ತಿರುವ ಕಾಂಗ್ರೆಸ್, ಜೆಡಿಎಸ್
ಇನ್ನು ಟಿಕೆಟ್ ವಂಚಿತ ಶಾಸಕದ್ವಯರಿಗೆ ಗಾಳ ಹಾಕುತ್ತಿರುವ ಕಾಂಗ್ರೆಸ್, ಜೆಡಿಎಸ್, ಈಗಾಗಲೇ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ, ಮಾಜಿ ಸಚಿವ ಶಶಿಕಾಂತ ನಾಯಿಕ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಟಿಕೆಟ್ ಬದಲಾವಣೆ ಮಾಡದಿದ್ರೆ ಕಾಂಗ್ರೆಸ್ ಸೇರಲು ಶಾಸಕ ಅನಿಲ್ ಬೆನಕೆ ಕೂಡ ಚಿಂತನೆ ನಡೆಸಿದ್ದಾರೆ. ಮತ್ತೊಂದೆಡೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಶಾಸಕ ಮಹಾದೇವಪ್ಪ ಯಾದವಾಡ ನಿರ್ಧರಿಸಿದ್ದು, ಸೋಮವಾರ ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದಾರೆ.
ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ