ಬಳ್ಳಾರಿ ವಿಮ್ಸ್ ದುರ್ಘಟನೆ: ಮೃತ ರೋಗಿಗಳ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಣೆ
ವಿದ್ಯುತ್ ಸಂಪರ್ಕ ಕಡಿತಗೊಂಡ ಹಿನ್ನೆಲೆ ವೆಂಟಿಲೇಟರ್ ಕಾರ್ಯ ಸ್ಥಗಿತವಾಗಿ ಸಾವನ್ನಪ್ಪಿದ ಮೂವರು ರೋಗಿಗಳ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.
ಬಳ್ಳಾರಿ: ವಿದ್ಯುತ್ ಸಂಪರ್ಕ ಕಡಿತಗೊಂಡ ಹಿನ್ನೆಲೆ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಕಾರ್ಯ ಸ್ಥಗಿತವಾಗಿ ಐಸಿಯುನಲ್ಲಿದ್ದ ಮೂವರು ರೋಗಿಗಳು ಸಾವನ್ನಪ್ಪಿದ ಪ್ರಕರಣ ಸಂಬಂಧ ರೋಗಿಗಳ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ಘೋಷಣೆ ಮಾಡಿದೆ.
ವಿವಿಧ ವಾರ್ಡ್ ಹಾಗೂ ಆಸ್ಪತ್ರೆಗೆ ವಿದ್ಯುತ್ ಸರಬರಾಜು ಮಾಡುವ ಮೇನ್ ಕೇಬಲ್ ಬ್ಲಾಸ್ಟ್ ಆದ ಪರಿಣಾಮ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ವಿಮ್ಸ್ ಆಸ್ಪತ್ರೆಯ ರೋಗಿಗಳು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದ್ದಲ್ಲದೆ ಘಟನೆಯಲ್ಲಿ ಮೂವರು ರೋಗಿಗಳು ಸಾವನ್ನಪ್ಪಿದ್ದರು. ಸಮಸ್ಯೆ ಆರಂಭವಾಗಿ 24 ಗಂಟೆ ಕಳೆದರೂ ಸರಿಪಡಿಸುವಲ್ಲಿ ವಿಳಂಭವಾಗಿದೆ. ಹೀಗಾಗಿ ಜನರೇಟರ್ ಮೂಲಕ ತಾತ್ಕಾಲಿಕ ವಿದ್ಯುತ್ ಪೂರೈಕೆ ಮಾಡಲಾಗಿದ್ದು, ಐಸಿಯುನಲ್ಲಿದ್ದ ರೋಗಿಗಳನ್ನು OT ವಾರ್ಡ್ ಹಾಗೂ ಟ್ರಾಮ್ ಕೇರ್ ಸೆಂಟರ್ ಸೇರಿದಂತೆ ಬೇರೆ ಬೇರೆ ವಾರ್ಡ್ಗಳಿಗೆ ಶಿಫ್ಟ್ ಮಾಡಲಾಗಿತ್ತು.
ಹಾವು ಕಡಿತ ಹಿನ್ನೆಲೆ ಸೆಪ್ಟೆಂಬರ್ 13 ರಂದು ವಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಬಳ್ಳಾರಿ ತಾಲೂಕಿನ ಚಾಗನೂರು ಗ್ರಾಮದ ಚೆಟ್ಟೆಮ್ಮ, ಕಿಡ್ನಿ ವೈಫಲ್ಯದಿಂದ ಸೆ.11ರಂದು ಆಸ್ಪತ್ರೆಗೆ ದಾಖಲಾಗಿದ್ದ ಮೌಲಾ ಹುಸೇನ್ ಹಾಗೂ ಚೇಳು ಕಡಿತಕ್ಕೆ ಒಳಗಾಗಿ ಸೆ.6ರಂದು ಆಸ್ಪತ್ರೆಗೆ ದಾಖಲಾಗಿದ್ದ ಬಳ್ಳಾರಿ ತಾಲೂಕಿನ ಜೋಳದರಾಶಿಯ ಮನೋಜ್ ಎಂಬವರು ಸಾವನ್ನಪ್ಪಿದ್ದರು.
ಇನ್ನು ಘಟನೆ ಸಂಬಂಧ ಬಳ್ಳಾರಿ ವಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡ ಸ್ಪಷ್ಟನೆ ನೀಡಿದ್ದು ವಿಮ್ಸ್‌ನಲ್ಲಿ ವಿದ್ಯುತ್ ಅವಘಡದಿಂದ ಸಾವು ಸಂಭವಿಸಿಲ್ಲ ಎಂದಿದ್ದರು. ಅಲ್ಲದೆ ಐಸಿಯುನಲ್ಲಿದ್ದ ರೋಗಿಗಳ ಸಾವಿನ ಬಗ್ಗೆ ವರದಿ ನೀಡುವಂತೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹಾಗೂ ಉಸ್ತುವಾರಿ ಸಚಿವ ಬಿ ಶ್ರೀರಾಮುಲು ಸೂಚಿಸಿದ್ದರು.
ಮತ್ತಷ್ಟು ಜಿಲ್ಲಾವಾರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:07 pm, Thu, 15 September 22