ಲಂಚ ಸ್ವೀಕರಿಸಿ ಪರಾರಿಯಾದ ಚಿಕ್ಕಜಾಲದ ಇನ್‌ಸ್ಪೆಕ್ಟರ್; ಫೋನ್ ಪೇಯಿಂದ ಸಿಕ್ಕಿಹಾಕಿಕೊಂಡ ಭ್ರಷ್ಟ ಪೊಲೀಸ್
ಚಿಕ್ಕಜಾಲ ಠಾಣೆಯಿಂದ ಎಸ್ಕೇಪ್ ಆಗಿರುವ ಇನ್‌ಸ್ಪೆಕ್ಟರ್ ಹೆಸರು ಪ್ರವೀಣ್ ಮಹೇಶ್ವರಪ್ಪ. ಇವರು ಲಂಚ ಪ್ರಕರಣದಲ್ಲಿ ಚಿಕ್ಕಜಾಲ ಪೊಲೀಸ್ ಠಾಣೆ ತೊರೆದ ಮೂರನೇ ಇನ್‌ಸ್ಪೆಕ್ಟರ್.
ಬೆಂಗಳೂರು: ಲಂಚದ ಆಸೆಗೆ ಬಿದ್ದು ಇಬ್ಬರು ಪೊಲೀಸ್ ಇನ್ಸ್ಪೆಕ್ಟರ್ಗಳು ಓಡಿ ಹೋಗಿದ್ದು, ಇದೀಗ ಮೂರನೇ ಪ್ರಕರಣದಲ್ಲಿ ಮತ್ತೊಬ್ಬ ಇನ್‌ಸ್ಪೆಕ್ಟರ್ ಪರಾರಿಯಾಗಿದ್ದಾರೆ. ಇನ್‌ಸ್ಪೆಕ್ಟರ್ ಹೆಸರಿನಲ್ಲಿ ಲಂಚ ಸ್ವೀಕರಿಸಿದ ಪೊಲೀಸ್ ಕಾನ್‌ಸ್ಟೆಬಲ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಇದು ಚಿಕ್ಕಜಾಲ ಪೊಲೀಸರ ರೋಚಕವಾದ ಲಂಚದ 3ನೇ ಕತೆ.
ಚಿಕ್ಕಜಾಲ ಠಾಣೆಯಿಂದ ಎಸ್ಕೇಪ್ ಆಗಿರುವ ಇನ್‌ಸ್ಪೆಕ್ಟರ್ ಹೆಸರು ಪ್ರವೀಣ್ ಮಹೇಶ್ವರಪ್ಪ. ಇವರು ಲಂಚ ಪ್ರಕರಣದಲ್ಲಿ ಚಿಕ್ಕಜಾಲ ಪೊಲೀಸ್ ಠಾಣೆ ತೊರೆದ ಮೂರನೇ ಇನ್‌ಸ್ಪೆಕ್ಟರ್. ಲಂಚ ಸ್ವೀಕರಿಸಿದ ಆರೋಪದಡಿ ಜೈಲು ಸೇರಿದ ಪೇದೆ ಹೆಸರು ರವಿ.
ಗುತ್ತಿಗೆದಾರ ಪ್ರಕಾಶ್ ಎಂಬುವವರ ಮೇಲೆ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಈ ಪ್ರಕರಣದಲ್ಲಿ ತ್ವರಿತವಾಗಿ ದೋಷಾರೋಪ ಪಟ್ಟಿ ಸಲ್ಲಿಸಲು ಹಾಗೂ ಪ್ರಕಾಶ್ ಅವರ ತಂದೆ ತಾಯಿ ಹಾಗೂ ಸಂಬಂಧಿಕರ ಹೆಸರು ಸೇರಿಸದೇ ಇರಲು 5 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 3 ಲಕ್ಷ ರೂ. 65 ಸಾವಿರ ರೂ.ಗಳನ್ನು ಹೆಡ್ ಕಾನ್‌ಸ್ಟೇಬಲ್ ರವಿ ಮೂಲಕ ಸ್ವೀಕರಿಸಿದ್ದರು.
ಇದನ್ನೂ ಓದಿ: Bribe: ಶಾಲಾ ಕಟ್ಟಡದ ಫಿಟ್ನೆಸ್ ಸರ್ಟಿಫಿಕೇಟ್ ಕೊಡಲು ಲಂಚ ಕೇಳಿದ್ದ ಅಗ್ನಿಶಾಮಕ ದಳ ಅಧಿಕಾರಿ ಲೋಕಾಯುಕ್ತ ಬಲೆಗೆ
ಆ ಬಳಿಕ ಮತ್ತೆ 5 ಲಕ್ಷ ರೂ. ಲಂಚ ನಿಡುವಂತೆ ಇನ್‌ಸ್ಪೆಕ್ಟರ್ ಪ್ರವೀಣ್ ಪರಮೇಶ್ವರಪ್ಪ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಈ ಹಣವನ್ನು ನೀಡದಿದ್ದಕ್ಕೆ ಗುತ್ತಿಗೆದಾರ ಪ್ರಕಾಶ್ ಅವರ ಪೋಷಕರಿಗೆ ಹಾಗೂ ಭಾಮೈದನಿಗೆ ನೋಟಿಸ್ ನೀಡಿ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ. ಲಂಚಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಲಂಚ ನೀಡಲು ಇಷ್ಟವಿಲ್ಲದ ಕಾರಣ ಗುತ್ತಿಗೆದಾರನ ಸಂಬಂಧಿಯೊಬ್ಬರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ.
ಟ್ರೂ ಕಾಲರ್ ನೋಡಿ ಎಸ್ಕೇಪ್: ಲಂಚ ತರುವಂತೆ ಕರೆ ಮಾಡಿ ಹೇಳಿದ್ದ ಪೇದೆ ರವಿ ಕುಮಾರ್, ಇನ್‌ಸ್ಪೆಕ್ಟರ್ ಪ್ರವೀಣ್ ಪರಮೇಶ್ವರಪ್ಪ ಇದ್ದಾರೆ ಎಂದು ಚಿಕ್ಕಜಾಲ ಪೊಲೀಸ್ ಠಾಣೆ ಬಳಿ ಕರೆಸಿಕೊಂಡಿದ್ದರು. ಲಂಚದ ಹಣ ಸ್ವೀಕರಿಸಿ ಇನ್ನೇನು ಲೋಕಾಯುಕ್ತ ಬಲೆಗೆ ಬೀಳುವ ಮುನ್ನ ಕಾನ್‌ಸ್ಟೇಬಲ್ ರವಿ ಎಚ್ಚೆತ್ತುಕೊಂಡರು. ಲಂಚ ಕೊಡಲು ಹೋಗಿದ್ದ ವ್ಯಕ್ತಿಗೆ ಬಂದ ಕರೆಯ ನಂಬರನ್ನು ಟ್ರೂ ಕಾಲರ್ ಆ್ಯಪ್ನಲ್ಲಿ ನೋಡಿ ಎಸಿಬಿ ಪೊಲೀಸ್ ಎಂದು ಹೆದರಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಅಚ್ಚರಿ ಏನೆಂದರೆ ಈ ಲಂಚ ಸ್ವೀಕರಿಸುವ ಮುನ್ನವೇ ಪೋನ್ ಪೇ ಮೂಲಕ 10 ಸಾವಿರ ಲಂಚದ ಹಣವನ್ನು ಮೂರನೇ ವ್ಯಕ್ತಿಯ ಮೊಬೈಲ್ಗೆ ಹಾಕಿಸಿಕೊಂಡು ಲಂಚ ಪಡೆದುಕೊಂಡಿದ್ದರು. ಸಾಕ್ಷಾಧಾರಗಳನ್ನು ಪರಿಶೀಲಿಸಿದ ಲೋಕಾಯುಕ್ತ ಪೊಲೀಸರು ಕಾನ್‌ಸ್ಟೇಬಲ್ ರವಿಯನ್ನು ಬಂಧಿಸಿದ್ದಾರೆ.
ಕಾನ್‌ಸ್ಟೇಬಲ್ ಬಂಧನವಾಗುತ್ತಿದ್ದಂತೆ ಪೊಲೀಸ್ ಇನ್‌ಸ್ಪೆಕ್ಟರ್ ಪ್ರವೀಣ್ ಪರಮೇಶ್ವರಪ್ಪ ಅವರ 2 ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿದ್ದು, ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಪ್ರವೀಣ್ ಅವರು ನಿರೀಕ್ಷಣಾ ಜಾಮೀನು ಪಡೆಯುವ ಸಲುವಾಗಿ ಠಾಣೆಗೆ ಹಾಜರಾಗದೇ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.