ಅಕ್ರಮ ಆಸ್ತಿ ಗಳಿಕೆ ಆರೋಪ; ಕೆಆರ್​ ಪುರ ತಹಶೀಲ್ದಾರ್ ಅಜಿತ್ ರೈ 7 ದಿನ ಲೋಕಾಯುಕ್ತ ಕಸ್ಟಡಿಗೆ

ಹೆಚ್ಚಿನ ತನಿಖೆಗಾಗಿ ಅಜಿತ್ ಅವರನ್ನು ಅವರ ಹುಟ್ಟೂರಾದ ಪುತ್ತೂರಿಗೆ ಕರೆದೊಯ್ಯಲು ಲೋಕಾಯುಕ್ತರಿಗೆ ನ್ಯಾಯಾಲಯ ಅನುಮತಿ ನೀಡಿದೆ.

ಅಕ್ರಮ ಆಸ್ತಿ ಗಳಿಕೆ ಆರೋಪ; ಕೆಆರ್​ ಪುರ ತಹಶೀಲ್ದಾರ್ ಅಜಿತ್ ರೈ 7 ದಿನ ಲೋಕಾಯುಕ್ತ ಕಸ್ಟಡಿಗೆ
ಕೆಆರ್​ ಪುರ ತಹಶೀಲ್ದಾರ್ ಅಜಿತ್ ರೈ 7 ದಿನ ಲೋಕಾಯುಕ್ತ ಕಸ್ಟಡಿಗೆ
Follow us
|

Updated on: Jun 30, 2023 | 2:49 PM

ಬೆಂಗಳೂರು: ಲೋಕಾಯುಕ್ತ ದಾಳಿ ವೇಳೆ ಅಕ್ರಮ ಆಸ್ತಿ, ಸಂಪತ್ತು ಪತ್ತೆಯಾದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ತಹಶೀಲ್ದಾರ್ (KR Pura Tahasildar) ಅಜಿತ್ ರೈ (Ajit Rai) ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕೋರ್ಟ್ ಅವರನ್ನು ಹೆಚ್ಚಿನ ತನಿಖೆಗಾಗಿ ಏಳು ದಿನಗಳ ಕಾಲ ಲೋಕಾಯುಕ್ತ ಕಸ್ಟಡಿಗೆ ಒಪ್ಪಿಸಿ ಶುಕ್ರವಾರ ಆದೇಶ ನೀಡಿದೆ. 24 ಗಂಟೆಗಳಿಗೂ ಹೆಚ್ಚು ಕಾಲ ನಡೆದ ದಾಳಿ, ಶೋಧ ಕಾರ್ಯದ ವೇಳೆ ತಹಶೀಲ್ದಾರ್ ಅವರ ನಿವಾಸ ಮತ್ತು ಇತರ ಕಡೆಗಳಲ್ಲಿ ಆಸ್ತಿಗಳಲ್ಲಿ ಅಕ್ರಮ ಆಸ್ತಿ ಪತ್ತೆಯಾದ ಹಿನ್ನೆಲೆಯಲ್ಲಿ ಲೋಕಾಯುಕ್ತರು ಗುರುವಾರ ಅವರನ್ನು ಬಂಧಿಸಿದ್ದರು.

ಅಜಿತ್‌ನನ್ನು ಬಂಧಿಸಿದ ನಂತರ ಲೋಕಾಯುಕ್ತ ಪೊಲೀಸರು ಬೆಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 10 ದಿನಗಳ ಕಸ್ಟಡಿಗೆ ಕೋರಿದ್ದಾರೆ. ಎರಡೂ ಕಡೆಯ ವಾದವನ್ನು ಆಲಿಸಿದ ನ್ಯಾಯಾಲಯ ಏಳು ದಿನಗಳ ಕಾಲ ಲೋಕಾಯುಕ್ತರ ಕಸ್ಟಡಿಗೆ ಒಪ್ಪಿಸಿತು.

ಹೆಚ್ಚಿನ ತನಿಖೆಗಾಗಿ ಅಜಿತ್ ಅವರನ್ನು ಅವರ ಹುಟ್ಟೂರಾದ ಪುತ್ತೂರಿಗೆ ಕರೆದೊಯ್ಯಲು ಲೋಕಾಯುಕ್ತರಿಗೆ ನ್ಯಾಯಾಲಯ ಅನುಮತಿ ನೀಡಿದೆ.

ಲೋಕಾಯುಕ್ತರು ಜೂನ್ 28 ರಂದು ಬೆಂಗಳೂರಿನ ಸಹಕಾರ ನಗರದಲ್ಲಿರುವ ಅಜಿತ್ ರೈ ಅವರ ನಿವಾಸ ಮತ್ತು ಇತರ 10 ಸ್ಥಳಗಳ ಮೇಲೆ ದಾಳಿ ನಡೆಸಿ 40 ಲಕ್ಷ ನಗದು, 3.5 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಚಿನ್ನಾಭರಣಗಳು ಮತ್ತು ಹಲವಾರು ಆಸ್ತಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ವರದಿಗಳ ಪ್ರಕಾರ, ಅಜಿತ್ ಬೆಂಗಳೂರಿನ ಹೊರವಲಯದಲ್ಲಿ ಕುದುರೆ ಸವಾರಿ ತರಬೇತಿ ಕೇಂದ್ರವನ್ನು ಪ್ರಾರಂಭಿಸಲು ಯೋಜಿಸಿದ್ದರು ಎನ್ನಲಾಗಿದೆ.

ಇದನ್ನೂ ಓದಿ: Lokayukta: ಕುಬೇರ ತಹಶೀಲ್ದಾರ್ ಅಜಿತ್ ರೈ ಬಂಧಿಸಿದ ಲೋಕಾಯುಕ್ತ ಪೊಲೀಸರು

ಇತ್ತೀಚೆಗಷ್ಟೇ ಕೆಆರ್ ಪುರಂ ತಹಶೀಲ್ದಾರ್ ಹುದ್ದೆಗೆ ಅಜಿತ್ ವರ್ಗಾವಣೆಯಾಗಿದ್ದು, ಹುದ್ದೆಯ ಜವಾಬ್ದಾರಿ ಸ್ವೀಕರಿಸಲು ಕಾಯುತ್ತಿದ್ದರು ಎನ್ನಲಾಗಿದೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ಲೋಕಾಯುಕ್ತ ದಾಳಿ ಬೆಳವಣಿಗೆಗಳಿಂದ ಅವರು ಒಂದಿನಿತೂ ವಿಚಲಿತರಾದಂತೆ ಕಂಡು ಬಂದಿರಲಿಲ್ಲ. ವಿಚಾರಣೆಯ ಸಮಯದಲ್ಲಿ ಅವರು ನಸುನಗುತ್ತಿದ್ದರು ಎಂದು ‘ನ್ಯೂಸ್9’ ವರದಿ ಮಾಡಿದೆ.

ದಾಳಿ ವೇಳೆ ಅಜಿತ್ ರೈಗೆ ಸೇರಿದ 100 ಎಕರೆಗೂ ಅಧಿಕ ಆಸ್ತಿಗೆ ಸಂಬಂಧಿಸಿದ ದಾಖಲೆ ಪತ್ರಗಳು ಲಭ್ಯವಾಗಿದ್ದು, ಅಜಿತ್ ರೈ ಸಂಬಂಧಿಕರು, ಸ್ನೇಹಿತರ ಹೆಸರಲ್ಲೂ ಆಸ್ತಿ ಪತ್ರಗಳು ಪತ್ತೆಯಾಗಿವೆ. ಬೇನಾಮಿ ಹೆಸರಿನಲ್ಲಿ ಅಜಿತ್​ ರೈ ಆಸ್ತಿ ಮಾಡಿರುವ ಶಂಕೆ ವ್ಯಕ್ತವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ