Lokayukta: ಕುಬೇರ ತಹಶೀಲ್ದಾರ್ ಅಜಿತ್ ರೈ ಬಂಧಿಸಿದ ಲೋಕಾಯುಕ್ತ ಪೊಲೀಸರು
ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಹಿನ್ನೆಲೆ ಕೆಆರ್ ಪುರ ತಹಶೀಲ್ದಾರ್ ಅಜಿತ್ ರೈ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಸೇರಿ ಅಜಿತ್ಗೆ ಸೇರಿದ 12 ಕಡೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು.
ಬೆಂಗಳೂರು: ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಮಾಡಿರುವ ಹಿನ್ನೆಲೆ ಕೆಆರ್ ಪುರ ತಹಶೀಲ್ದಾರ್ (KR Pura Tahasildar) ಅಜಿತ್ ರೈ ಅವರನ್ನು ಲೋಕಾಯುಕ್ತ (Lokayukta) ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಬೆಳಗ್ಗೆ ಅಜಿತ್ ರೈ ನಿವಾಸದ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು, ಸತತ 30 ಗಂಟೆಗಳ ಶೋಧ ನಡೆಸಿ ಲಭ್ಯವಾದ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದ್ದರು. ಈ ವೇಳೆ ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಮಾಡಿರುವುದು ಕಂಡು ಬಂದ ಹಿನ್ನೆಲೆ ಅಜಿತ್ ರೈ ಅವರನ್ನು ಬಂಧಿಸಲಾಗಿದ್ದು, 24 ಗಂಟೆಗಳ ಒಳಗಾಗಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.
ಅಜಿತ್ ರೈಗೆ ಸಂಬಂಧಿಸಿದ 10 ಸ್ಥಳಗಳಿಗೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು 40 ಲಕ್ಷ ನಗದು, 700 ಗ್ರಾಂ ಚಿನ್ನ, 1.90 ಕೋಟಿ ಮೌಲ್ಯದ ವಸ್ತುಗಳನ್ನು, ಐಷಾರಾಮಿ ಕಾರು ಮತ್ತು ಬೈಕ್ಗಳನ್ನು ವಶಕ್ಕೆ ಪಡೆದಿದ್ದರು. ದಾಳಿ ವೇಳೆ ಅಜಿತ್ ರೈಗೆ ಸೇರಿದ 100 ಎಕರೆಗೂ ಅಧಿಕ ವಿವಿಧ ಆಸ್ತಿ ಪತ್ರಗಳು ಲಭ್ಯವಾಗಿದ್ದು, ಅಜಿತ್ ರೈ ಸಂಬಂಧಿಕರು, ಸ್ನೇಹಿತರ ಹೆಸರಲ್ಲೂ ಆಸ್ತಿ ಪತ್ರಗಳು ಪತ್ತೆಯಾಗಿವೆ. ಬೇನಾಮಿ ಹೆಸರಿನಲ್ಲಿ ಅಜಿತ್ ರೈ ಆಸ್ತಿ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ಕುಬೇರ ತಹಶೀಲ್ದಾರ್ ಮನೆಯಲ್ಲಿ ಮೊಕ್ಕಾಂ ಹೂಡಿರುವ ಲೋಕಾಯುಕ್ತ ಪೊಲೀಸರು; ಅಜಿತ್ ರೈ ಬಳಿ ಏನೆಲ್ಲಾ ಇವೆ ಗೊತ್ತಾ?
ಹಾರ್ಸ್ ರೈಡಿಂಗ್ ಸ್ಕೂಲ್ ಮಾಡಲು ತಯಾರಿ ನಡೆಸುತ್ತಿದ್ದ ಅಜಿತ್ ರೈ ವರ್ಷಕ್ಕೆ ಒಂದು ಕೋಟಿಗೂ ಅಧಿಕ ಆದಾಯ ಹೊಂದಿದ್ದಾರೆ. ಆದರೂ ಆದಾಯವನ್ನು ದೊರೆತಿರುವ ಆಸ್ತಿಗಳು ಹಾಗೂ ಐಶಾರಾಮಿ ವಸ್ತುಗಳಿಗೆ ತಾಳೆ ಮಾಡಿದಾಗ ಸಾಕಷ್ಟು ವ್ಯತ್ಯಾಸ ಕಂಡುಬಂದಿದೆ. ಹೀಗಾಗಿ ಲೋಕಾಯುಕ್ತ ಪೊಲೀಸರು ದಾಖಲೆಗಳನ್ನು ಬಹಳ ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದ್ದರು. ಸದ್ಯ ತಹಶೀಲ್ದಾರ್ ಲೋಕಾಯುಕ್ತ ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:17 pm, Thu, 29 June 23