ಲಾಕ್ಡೌನ್ ಸಮಯದಲ್ಲಿ ಜನರ ನೆರವಿಗೆ ನಿಂತ ಬೆಂಗಳೂರಿನ ಕಲಿ ತಂಡ; ದಿನದ 24 ಗಂಟೆಯೂ ಸಾಮಾಜಿಕ ಸೇವೆಗೆ ಮೀಸಲು
ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ಕೊರೊನಾ ಕಲಿಗಳು ಎಂಬ ತಂಡ, ಸಾರ್ವಜನಿಕರ ಸಹಾಯಕ್ಕಾಗಿ ಹಗಲು ರಾತ್ರಿ ಶ್ರಮಿಸುತ್ತಿದೆ. ಈ ತಂಡದಲ್ಲಿ ಅನ್ನಪೂರ್ಣೇಶ್ವರಿ ಠಾಣೆಯ ಪಿಎಸ್ಐ ಶಾಂತಪ್ಪ ಸೇರಿದಂತೆ ಕೆಲ ಸರ್ಕಾರಿ ನೌಕರರು ಸೇವೆ ಸಲ್ಲಿಸುತ್ತಿದ್ದು, ಒಟ್ಟು 15 ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಜನರಿಗೆ ಮಾಹಿತಿ ನೀಡುವ ಸಲುವಾಗಿ ಕೊರೊನಾ ಕಲಿಗಳು ಎಂಬ ಹೆಸರಿನಲ್ಲಿ ಕೊರೊನಾ ಕಾಲ್ ಸೆಂಟರ್ವೊಂದನ್ನು ಪ್ರಾರಂಬಿಸಿದ್ದಾರೆ.
ಬೆಂಗಳೂರು: ಕೊರೊನಾ ಎರಡನೇ ಅಲೆ ತೀವ್ರವಾಗಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲು ಸರ್ಕಾರ ಲಾಕ್ಡೌನ್ ಜಾರಿಗೆ ತಂದಿದೆ. ಆದರೆ ಇದರಿಂದಾಗಿ ಜನರು ಜೀವನ ನಡೆಸುವುದು ಕಷ್ಟವಾಗಿದ್ದು, ಕೆಲಸವಿಲದೇ ಕಂಗಾಲಾಗಿ ಅಕ್ಷರಶಃ ಸಂಕಷ್ಟ ಎದುರಿಸುತ್ತಿದ್ದಾರೆ. ಆದರೆ ಇಂತಹವರ ನೆರವಿಗಾಗಿ ಸಾಕಷ್ಟು ಸಂಘ-ಸಂಸ್ಥೆಗಳು ಮತ್ತು ಸೆಲಬ್ರಿಟಿಗಳು ಮುಂದೆ ಬಂದಿದ್ದು, ಸಹಾಯ ಹಸ್ತ ನೀಡುತ್ತಿದ್ದಾರೆ. ಅದರಂತೆ ಕೊರೊನಾದ ಸಂದಿಗ್ಧ ಕಾಲದಲ್ಲಿ ಜನರಿಗೆ ಸಹಾಯವಾಗುವ ನಿಟ್ಟಿನಲ್ಲಿ ಒಂದಿಷ್ಟು ಸರ್ಕಾರಿ ನೌಕರರು ಸೇರಿದಂತೆ ಸಮಾನ ಮನಸ್ಕರ ತಂಡವೊಂದು ಮುಂದೆ ಬಂದಿದೆ.
ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ಕೊರೊನಾ ಕಲಿಗಳು ಎಂಬ ತಂಡ, ಸಾರ್ವಜನಿಕರ ಸಹಾಯಕ್ಕಾಗಿ ಹಗಲು ರಾತ್ರಿ ಶ್ರಮಿಸುತ್ತಿದೆ. ಈ ತಂಡದಲ್ಲಿ ಅನ್ನಪೂರ್ಣೇಶ್ವರಿ ಠಾಣೆಯ ಪಿಎಸ್ಐ ಶಾಂತಪ್ಪ ಸೇರಿದಂತೆ ಕೆಲ ಸರ್ಕಾರಿ ನೌಕರರು ಸೇವೆ ಸಲ್ಲಿಸುತ್ತಿದ್ದು, ಒಟ್ಟು 15 ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಜನರಿಗೆ ಮಾಹಿತಿ ನೀಡುವ ಸಲುವಾಗಿ ಕೊರೊನಾ ಕಲಿಗಳು ಎಂಬ ಹೆಸರಿನಲ್ಲಿ ಕೊರೊನಾ ಕಾಲ್ ಸೆಂಟರ್ವೊಂದನ್ನು ಪ್ರಾರಂಬಿಸಿದ್ದಾರೆ.
ಕೊರೊನಾ ಸೋಂಕಿತರಿಗೆ ನೆರವಾಗುವ ನಿಟ್ಟಿನಲ್ಲಿ ನಗರದಲ್ಲಿನ ಆಸ್ಪತ್ರೆಗಳಲ್ಲಿನ ಬೆಡ್, ಆಕ್ಸಿಜನ್ ಕುರಿತು ಮಾಹಿತಿ ನೀಡಲಾಗುತ್ತಿದೆ. ಜತೆಗೆ ಆ್ಯಂಬುಲೆನ್ಸ್ ಸರ್ವೀಸ್, ಮೆಡಿಕಲ್ ಕಿಟ್ ಹಾಗೂ ಕಷ್ಟದಲ್ಲಿರುವವರಿಗೆ ಫುಡ್ ಕಿಟ್ ನೀಡುವ ಕಾರ್ಯವನ್ನು ಮಾಡಲಾಗುತ್ತಿದೆ. ನಮ್ಮ ತಂಡದಲ್ಲಿ ಸರ್ಕಾರಿ ಹಾಗೂ ಖಾಸಗಿ ನೌಕರರೇ ಇದ್ದು, ಶಿಫ್ಟ್ ಲೆಕ್ಕದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಕಲಿ ತಂಡದ ಸದಸ್ಯೆ ಶ್ರೀದೇವಿ ತಿಳಿಸಿದ್ದಾರೆ.
ಎಂಎನ್ಸಿ ಕಂಪನಿಗಳಲ್ಲಿ ನೈಟ್ ಶಿಫ್ಟ್ನಲ್ಲಿ ಕೆಲಸ ಮಾಡುವವರು, ಇಲ್ಲಿ ಹಗಲು ಸೇವೆ ಮಾಡುತ್ತಿದ್ದಾರೆ. ಇನ್ನು ರಾತ್ರಿ ಇಲ್ಲಿ ಸೇವೆ ಮಾಡುವವರು ಬೆಳಿಗ್ಗೆ ತಮ್ಮ ಕೆಲಸಕ್ಕೆ ಮರಳುತ್ತಾರೆ. ಈ ಕೊರೊನಾ ಕಲಿಗಳ ತಂಡಕ್ಕೆ ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳುವ ಜನರಿಗೆ ಮುಖ್ಯವಾಗಿ ಧೈರ್ಯ ತುಂಬುವ ಕೆಲಸವನ್ನೂ ಸಹ ಮಾಡಲಾಗುತ್ತಿದೆ. ಸದ್ಯ ಸಮಾಜದ ಒಳಿತಿಗಾಗಿ ಈ ತಂಡ ಕಾರ್ಯ ನಿರ್ವಹಿಸುತ್ತಿದ್ದು, ನಿಮಗೂ ಕೂಡ ಏನದರೂ ಸಹಾಯ ಬೇಕಾದರೆ ಅಥವಾ ಈ ತಂಡದ ಮೂಲಕ ನಿಮಗೆ ಸಹಾಯ ಮಾಡುವ ಮನಸ್ಸಿದ್ದರೆ ಈ ಮೇಲ್ಕಂಡ ಪೋನ್ ನಂಬರ್ಗೆ ಕರೆ ಮಾಡಬಹುದಾಗಿದೆ. ನೀವು ಕೂಡ ಈ ನಂಬರ್ಗೆ ಕರೆ ಮಾಡಿ ನಿಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವುದಕ್ಕೆ ಅವಕಾಶ ಇದೆ ಹಾಗೆಯೇ ಲಾಕ್ಡೌನ್ ಸಂದರ್ಭದಲ್ಲಿ ನಿಮಗೆ ರೇಷನ್ ಅವಶ್ಯಕತೆ ಇದ್ದರೂ ಸಹ ಈ ತಂಡ ನಿಮಗೆ ನೆರವು ನೀಡಲಿದೆ.
ಕರೆ ಮಾಡಬೇಕಾದ ನಂಬರ್: 86606871378 ಅಥವಾ 8951430015
ವರದಿ: ಶಿವಪ್ರಸಾದ್
ಇದನ್ನೂ ಓದಿ:
ಬಿಜೆಪಿ ಯುವಮೋರ್ಚಾದಿಂದ ಲಾಕ್ಡೌನ್ ಪ್ಯಾಕೇಜ್ ಪಡೆಯಲು ಕಾರ್ಮಿಕ ವರ್ಗಕ್ಕೆ ನೆರವು