ಕೊರೊನಾ ಪೀಡಿತರ ನೆರವಿಗೆ ಮೂರು ತಿಂಗಳ ಸಂಬಳ ಮೀಸಲು; ಚಿತ್ರದುರ್ಗದ ಲೈನ್ ಮ್ಯಾನ್ ನಿಸ್ವಾರ್ಥ ಸೇವೆಗೆ ಸ್ಥಳೀಯರ ಮೆಚ್ಚುಗೆ

ಸಂಕಷ್ಟದಲ್ಲಿರುವವರಿಗೆ, ಕೊವಿಡ್ ಕರ್ತವ್ಯದಲ್ಲಿರಿವವರಿಗೆ ನೆರವಾಗುವ ಉದ್ದೇಶ ನನ್ನದು. ಹೀಗಾಗಿ ನನ್ನ ಮೂರು ತಿಂಗಳ ಸಂಬಳವನ್ನೂ ಕೊವಿಡ್ ಪರಿಹಾರಕ್ಕೆ ಬಳಸಿಕೊಳ್ಳುವಂತೆ ಜಿಲ್ಲಾಡಳಿತ ಮತ್ತು ಬೆಸ್ಕಾಂ ಅಧಿಕಾರಿಗಳಿಗೆ ಮನವಿ ನೀಡಿದ್ದೇನೆ ಎಂದು ಲೈನ್ ಮ್ಯಾನ್ ಮಂಜುನಾಥ ತಿಳಿಸಿದ್ದಾರೆ.

ಕೊರೊನಾ ಪೀಡಿತರ ನೆರವಿಗೆ ಮೂರು ತಿಂಗಳ ಸಂಬಳ ಮೀಸಲು; ಚಿತ್ರದುರ್ಗದ ಲೈನ್ ಮ್ಯಾನ್ ನಿಸ್ವಾರ್ಥ ಸೇವೆಗೆ ಸ್ಥಳೀಯರ ಮೆಚ್ಚುಗೆ
ಚಿತ್ರದುರ್ಗದ ಲೈನ್ ಮ್ಯಾನ್ ನಿಸ್ವಾರ್ಥ ಸೇವೆಗೆ ಸ್ಥಳೀಯರ ಮೆಚ್ಚುಗೆ

ಚಿತ್ರದುರ್ಗ : ಕೊರೊನಾ ಎರಡನೇ ಅಲೆ ತೀವ್ರವಾದ ಹಿನ್ನೆಲೆಯಲ್ಲಿ ಸರ್ಕಾರ ಲಾಕ್​ಡೌನ್​ ಜಾರಿಗೊಳಿಸಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಆದರೆ ಲಾಕ್​ಡೌನ್​ ಜಾರಿಯಾದ ದಿನದಿಂದ ಕೂಲಿ ಕಾರ್ಮಿಕರು, ವ್ಯಾಪಾರಿಗಳು ಸಂಕಷ್ಟ ಎದುರಿಸುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕೆಲವು ಸಂಘ -ಸಂಸ್ಥೆಗಳು, ಸೆಲೆಬ್ರಿಟಿಗಳು ನೊಂದವರ ನೆರವಿಗೆ ನಿಂತಿದ್ದಾರೆ. ಹೀಗಿರುವಾಗಲೇ ವೃತ್ತಿಯಲ್ಲಿ ಬೆಸ್ಕಾಂ ಇಲಾಖೆಯ ಲೈನ್ ಮ್ಯಾನ್ ಆಗಿರುವ ಚಿತ್ರದುರ್ಗದ ವ್ಯಕ್ತಿಯೊಬ್ಬರು ಲಾಕ್​ಡೌನ್​ನಿಂದ ಸಂಕಷ್ಟಕ್ಕೊಳಗಾದ ಜನರಿಗೆ ಸಹಾಯ ಹಸ್ತ ನೀಡಿದ್ದಾರೆ.

ಚಿತ್ರದುರ್ಗ ನಗರದ ಬೆಸ್ಕಾಂ ಕಚೇರಿಯಲ್ಲಿ ಲೈನ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿರುವ ಮಂಜುನಾಥ ಕಳೆದ ಹದಿನೈದು ದಿನಗಳಿಂದ ತಾನು ದುಡಿದ ಹಣದಲ್ಲಿ ಈ ಸೇವಾ ಕಾರ್ಯದಲ್ಲಿ ತೊಡಗಿದ್ದಾರೆ. ತಂದೆ ತಾಯಿ ಕಷ್ಟಪಟ್ಟು ಬೆಳೆಸಿದ ಪರಿಣಾಮ ಈ ಮಟ್ಟಕ್ಕೆ ಬೆಳೆದಿದ್ದೇನೆ. ನಮ್ಮಿಂದ ಈ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರಿಗೆ, ಕೊವಿಡ್ ಕರ್ತವ್ಯದಲ್ಲಿರಿವವರಿಗೆ ನೆರವಾಗುವ ಉದ್ದೇಶ ನನ್ನದು. ಹೀಗಾಗಿ ನನ್ನ ಮೂರು ತಿಂಗಳ ಸಂಬಳವನ್ನೂ ಕೊವಿಡ್ ಪರಿಹಾರಕ್ಕೆ ಬಳಸಿಕೊಳ್ಳುವಂತೆ ಜಿಲ್ಲಾಡಳಿತ ಮತ್ತು ಬೆಸ್ಕಾಂ ಅಧಿಕಾರಿಗಳಿಗೆ ಮನವಿ ನೀಡಿದ್ದೇನೆ ಎಂದು ಲೈನ್ ಮ್ಯಾನ್ ಮಂಜುನಾಥ ತಿಳಿಸಿದ್ದಾರೆ.

ಲೈನ್ ಮ್ಯಾನ್ ಮಂಜುನಾಥ ಅವರ ಸೇವಾಕಾರ್ಯ ಅನೇಕರಿಗೆ ಸ್ಪೂರ್ತಿ ನೀಡುತ್ತಿದೆ. ಹದಿನೈದು ದಿನದಲ್ಲಿ ಸುಮಾರು ಮೂರು ಸಾವಿರ ಮಾಸ್ಕ್, ಸ್ಯಾನಿಟೈಸರ್ ಹಂಚಿ ಜಾಗೃತಿ ಮೂಡಿಸಿದ್ದಾರೆ. ಅನೇಕ ಕಡೆ ತೆರಳಿ ಕೊರೊನಾ ವಾರಿಯರರ್ಸ್​ಗೆ ಮತ್ತು ನಿರಾಶ್ರಿತರಿಗೆ ಉಪಹಾರ ನೀಡಿದ್ದಾರೆ. ಹೀಗಾಗಿ, ಮಂಜುನಾಥ್ ಅವರ ಸೇವೆ ಕಂಡು, ನಾವು ಸಹ ನಾಳೆಯಿಂದಲೇ ಕೊರೊನಾ ವಾರಿಯರ್ಸ್ ಸೇರಿದಂತೆ ಸಂಕಷ್ಟಕ್ಕೀಡಾದ ಜನರಿಗೆ ತಂಪು ಪಾನೀಯ ಮತ್ತಿತರೆ ವ್ಯವಸ್ಥೆ ಮಾಡಲು ನಿರ್ಧರಿಸಿದ್ದೇವೆ ಎಂದು ಸ್ಥಳೀಯರಾದ ಕಾಂತರಾಜು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ನಗರದಲ್ಲಿ ಬೆಸ್ಕಾಂ ಲೈನ್ ಮ್ಯಾನ್ ಮಂಜುನಾಥ ನಿಸ್ವಾರ್ಥ ಸೇವೆ ಜನರ ಮೆಚ್ಚುಗೆ ಗಳಿಸಿದೆ. ಮಂಜುನಾಥ್ ಅನೇಕರಿಗೆ ಸೇವಾಕಾರ್ಯದ ಪ್ರೇರಣೆ ನೀಡಿದ್ದೂ, ನಿಜಕ್ಕೂ ಶ್ಲಾಘನೀಯ ಕಾರ್ಯವೇ ಸರಿ ಎಂದರೆ ಅತಿಶಯೋಕ್ತಿ ಆಗದು.

ಇದನ್ನೂ ಓದಿ:

ಕೊರೊನಾ ವಿರುದ್ಧದ ಹೋರಾಟಕ್ಕೆ ಪಾಂಡ್ಯ ಬ್ರದರ್ಸ್ ನೆರವು; 2000 ಆಕ್ಸಿಜನ್ ಕಾನ್ಸಂಟ್ರೇಟರ್ ಪೂರೈಸಿದ ಬಿಸಿಸಿಐ

ಗ್ರಾಮೀಣ ಭಾಗದ ಜನರ ಮನೆಗೆ ವೈದ್ಯಕೀಯ ಸೇವೆ; ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಸೋಂಕಿತರಿಗೆ ನೆರವು

 

Click on your DTH Provider to Add TV9 Kannada