Bangalore Crime: ಟಿವಿ ನೋಡುವ ವಿಷಯಕ್ಕೆ ದಂಪತಿ ಜಗಳ: ಮೂರು ವರ್ಷದ ಮಗಳನ್ನೇ ಕೊಂದ ತಾಯಿ
ಟಿವಿ ನೋಡುವ ವಿಚಾರಕ್ಕೆ ದಂಪತಿ ಜಗಳವಾಡುತ್ತಿರುವಾಗ ತನ್ನ ತಂದೆಯ ಪರ ಮಾತನಾಡಿದ್ದಾಳೆ ಎಂಬ ಕಾರಣಕ್ಕೆ 3 ವರ್ಷದ ಮಗುವನ್ನು ಕತ್ತು ಹಿಸುಕಿ ತಾಯಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಬೆಂಗಳೂರು: ಟಿವಿ ನೋಡುವ ವಿಚಾರಕ್ಕೆ ದಂಪತಿ ಜಗಳವಾಡುತ್ತಿರುವಾಗ ತನ್ನ ತಂದೆಯ ಪರ ಮಾತನಾಡಿದ್ದಾಳೆ ಎಂಬ ಕಾರಣಕ್ಕೆ 3 ವರ್ಷದ ಮಗುವನ್ನು ಕತ್ತು ಹಿಸುಕಿ ತಾಯಿಯೇ ಕೊಲೆ ಮಾಡಿರುವ ಘಟನೆ ನಡೆದಿದೆ. ಮಂಗಳವಾರ ರಾತ್ರಿ ನಾಗರಭಾವಿ ಬಳಿಯ ಬಿಡಿಎ ಲೇಔಟ್ ಬಳಿ ಕೊಲೆ ಮಾಡಲಾಗಿದೆ. ಬುಧವಾರ ಬೆಳಿಗ್ಗೆ ದಾರಿಹೋಕರು ಬಾಲಕಿಯ ಶವವನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಕಾರ್ಮಿಕರಾದ ಸುಧಾ ಮತ್ತು ಈರಣ್ಣ ಅವರ ಪುತ್ರಿ ವಿನುತಾ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
26 ವರ್ಷದ ಸುಧಾ ಆರೋಪಿ, ಇವರು ಮಲ್ಲತಹಳ್ಳಿ ನಿವಾಸಿ. ನಗರದ ಟೈಲ್ಸ್ ಅಂಗಡಿಯಲ್ಲಿ ಹೌಸ್ಕೀಪಿಂಗ್ ಕೆಲಸ ಮಾಡುತ್ತಿದ್ದರು. ಮಂಗಳವಾರ ಮಧ್ಯಾಹ್ನ 2 ಗಂಟೆ ಸುಧಾ ಗಂಡ ಈರಣ್ಣ ಕೆಲಸ ಮುಗಿಸಿ ಮನೆಗೆ ಬಂದಿದ್ದರು. ಆಗ ಮಗಳು ವಿನುತಾ ಟಿವಿ ನೋಡುತ್ತಿದ್ದಳು. ಈರಣ್ಣ ಹೋಗಿ ಮಗಳ ಪಕ್ಕ ಕುಳಿತು, ಟಿವಿಯಲ್ಲಿ ನ್ಯೂಸ್ ಹಾಕಿದ್ದಾರೆ. ಅಷ್ಟಕ್ಕೇ ಸುಧಾ ಕೆಂಡಾಮಂಡಲರಾಗಿದ್ದಾರೆ. ನೀವು ಸದಾ ನ್ಯೂಸ್ ನೋಡುತ್ತಿರುತ್ತೀರಿ. ಎಲ್ಲಾ ಸಮಯದಲ್ಲೂ ನ್ಯೂಸ್ಗಳನ್ನೇ ನೋಡಬೇಕು ಅಂತಾದರೆ ನೀವು ಮನೆಗೆ ಬರಬೇಕಾಗಿಲ್ಲ ಎಂದು ಸುಧಾ ಕೋಪಗೊಂಡಿದ್ದಾಳೆ. ದಂಪತಿ ಜಗಳದ ಸಮಯದಲ್ಲಿ ಮಗಳು ಮಧ್ಯ ಪ್ರವೇಶಿಸಿ ತಾಯಿಯನ್ನು ಸುಮ್ಮನಿರಲು ಹೇಳಿದ್ದಾಳೆ. ಜತೆಗೆ ತಂದೆ ಟಿವಿ ನೋಡಲಿ ಎಂದು ಹೇಳಿದ್ದಾಳೆ. ಇದರಿಂದ ಕೋಪಗೊಂಡ ಸುಧಾ ಮಗುವನ್ನು ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ವಿಚಾರಣೆಯ ಬಳಿಕ ತಿಳಿಸಿದ್ದಾರೆ.
ಕೊಲೆ ಮಾಡಿದ ತಾಯಿ ಸುಧಾ, ಮಂಗಳವಾರ ರಾತ್ರಿ ಜ್ಞಾನಭಾರತಿ ಪೊಲೀಸರಿಗೆ ಮಗು ಕಾಣೆಯಾಗಿದೆ ಎಂದು ದೂರು ನೀಡಿದ್ದರು. ಮಲ್ಲತಹಳ್ಳಿಯ ಅಂಗಡಿಗೆ ಹೋಗಿದ್ದಾಗ ಮಗು ಕಾಣೆಯಾಗಿದೆ ಎಂದು ದೂರು ದಾಖಲಿಸಿದ್ದರು. ಬುಧವಾರ ಮಗುವಿನ ಶವವನ್ನು ಗುರುತಿಸಿದ ನಂತರ, ಪೊಲೀಸರು ದಂಪತಿಯನ್ನು ಕರೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ವೇಳೆ ಸುಧಾ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ.
ಇದನ್ನೂ ಓದಿ: ತುಮಕೂರಿನ ಪಾಗಲ್ ಪ್ರೇಮಿಯಿಂದ ಅಪ್ರಾಪ್ತೆ ಕೊಲೆ
ಬೆಂಗಳೂರಿನಲ್ಲಿ ಪ್ರೇಯಸಿಯನ್ನು ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಪ್ರಿಯತಮ.. ನಿಮ್ಹಾನ್ಸ್ ಪಾಲು
(bengaluru nagarbhavi woman kills 3 year old child for supporting father during couples fight over tv held)