ಅರ್ಧ ಡೋಸ್ ಕೊರೊನಾ ಲಸಿಕೆ ಕೊಟ್ಟು ಯಾಮಾರಿಸ್ತಾರೆ! ಬೆಂಗಳೂರಲ್ಲಿ ಪೊಲೀಸರಿಗೇ ಮೋಸ ಮಾಡಿದ ಆರೋಗ್ಯ ಕೇಂದ್ರದ ಸಿಬ್ಬಂದಿ
ಡಾ.ಎಂ.ಕೆ.ಪುಷ್ಪಿತಾಗೂ ಬಿಬಿಎಂಪಿಗೂ ಯಾವುದೇ ಸಂಬಂಧವಿಲ್ಲ. ಅವರು ಈಗ ನಮ್ಮ ಸಿಬ್ಬಂದಿ ಅಲ್ಲ, ಹೀಗಾಗಿ ಈ ವಿಚಾರದಲ್ಲಿ ನಮಗೆ ಸಂಬಂಧವಿಲ್ಲ ಎಂದಿರುವ ಗೌರವ್ ಗುಪ್ತಾ, ಪೋಲಿಸರೇ ಸುಮೊಟೋ ದೂರು ದಾಖಲಿಸಿದ್ದಾರೆ ತನಿಖೆ ನಡೆಸುತ್ತಾರೆ ಎಂದಿದ್ದಾರೆ.
ಬೆಂಗಳೂರು: ಕೊರೊನಾ ಎರಡನೇ ಅಲೆಯಿಂದ ಇಡೀ ದೇಶವೇ ಕಂಗಾಲಾಗಿ ಹೋಗಿದೆ. ಕರ್ನಾಟಕ ರಾಜ್ಯದಲ್ಲಿ ಕಳೆದೊಂದು ವಾರದಿಂದ ಸೋಂಕಿತರ ಪ್ರಮಾಣದಲ್ಲಿ ಕೊಂಚ ಇಳಿಮುಖ ಕಂಡುಬರುತ್ತಿದೆಯಾದರೂ ಪರಿಸ್ಥಿತಿ ಹತೋಟಿಗೆ ಬಂದಿಲ್ಲ. ಇಂತಹ ಸಂದರ್ಭದಲ್ಲಿ ಮೂರನೇ ಅಲೆಯನ್ನು ಸಶಕ್ತವಾಗಿ ಎದುರಿಸಬೇಕೆಂದರೆ ಕೊರೊನಾ ಲಸಿಕೆಯೊಂದೇ ಸದ್ಯಕ್ಕಿರುವ ಪರಿಣಾಮಕಾರಿ ಮಾರ್ಗ ಎಂದು ತಜ್ಞರು ಒತ್ತಿ ಹೇಳುತ್ತಿದ್ದಾರೆ. ಜನರು ಸಹ ಲಸಿಕೆಗಾಗಿ ಮುಗಿಬೀಳುತ್ತಿದ್ದಾರೆ. ಆದರೆ, ಇಲ್ಲೊಂದೆಡೆ ಲಸಿಕೆ ಹಾಕಿಸಿಕೊಳ್ಳಲು ಬರುವವರಿಗೆ ವೈದ್ಯರಿಂದ ಭಾರೀ ಮೋಸ ಆಗುತ್ತಿರುವುದು ಬೆಳಕಿಗೆ ಬಂದಿದೆ. ಬೆಂಗಳೂರಿನ ಮಂಜುನಾಥನಗರದ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಹಾಕಿಸಿಕೊಂಡ ಪೊಲೀಸರಿಗೇ ಈ ಮೋಸವಾಗಿದ್ದು, ಅಲ್ಲಿನ ವೈದ್ಯರು ಕೇವಲ ಅರ್ಧ ಡೋಸ್ ಲಸಿಕೆ ನೀಡುವ ಮೂಲಕ ಕೊರೊನಾ ವಾರಿಯರ್ಸ್ಗಳನ್ನೇ ಯಾಮಾರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಜನರ ರಕ್ಷಣೆಗಾಗಿ ತಮ್ಮ ಸ್ವಂತ ಜೀವವನ್ನು ಪಣಕ್ಕಿಟ್ಟು ರಸ್ತೆಗಳಲ್ಲಿ ಬಿಸಿಲು, ಮಳೆಯನ್ನದೇ ನಿಂತು ಕಾಯುವ ಆರಕ್ಷಕರಿಗೇ ಹೀಗೆ ಹಾಫ್ಡೋಸ್ ನೀಡಿದರೆ ಇನ್ನು ಜನಸಾಮಾನ್ಯರ ಗತಿಯೇನು ಎಂಬ ಆತಂಕ ಕಾಡಲಾರಂಭಿಸಿದೆ. ಮಂಜುನಾಥನಗರದ ಆರೋಗ್ಯ ಕೇಂದ್ರದ ಡಾ.ಎಂ.ಕೆ.ಪುಷ್ಪಿತಾ ಈ ಅಕ್ರಮವೆಸಗುತ್ತಿದ್ದಾರೆ ಎನ್ನುವುದು ಬೆಳಕಿಗೆ ಬಂದಿದ್ದು, ಇವರ ಬಳಿ ಲಸಿಕೆ ಪಡೆದ ಬಸವೇಶ್ವರ ನಗರ ಠಾಣೆ ಪೊಲೀಸರಿಗೆ ಚಿಂತೆ ಆರಂಭವಾಗಿದೆ.
ಕೊರೊನಾ ವಾರಿಯರ್ಸ್ ಹಣೆಪಟ್ಟಿ ಹೊತ್ತಿರುವ ಪೊಲೀಸರಿಗೇ ಮೋಸವಾಗುತ್ತಿದೆ ಎನ್ನುವುದು ಬೆಳಕಿಗೆ ಬಂದಿದ್ದರೂ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಮಾತ್ರ ಈ ವಿಚಾರದಲ್ಲಿ ದನಿ ಎತ್ತುತ್ತಿಲ್ಲ. ಇಲ್ಲಿನ ಆರೋಗ್ಯ ಕೇಂದ್ರಕ್ಕೆ ಸರ್ಕಾರ ನೀಡಿದ್ದ ಕೊವಿಡ್ ಲಸಿಕೆಯಲ್ಲಿ ಅಕ್ರಮವಾಗುತ್ತಿದೆ ಎಂದು ಹೇಳಿದರೂ ಬಿಬಿಎಂಪಿ ಈ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಡಾ.ಎಂ.ಕೆ.ಪುಷ್ಪಿತಾ ಅವರನ್ನು ವಜಾ ಮಾಡಲಾಗಿದೆ ಎಂಬ ಸಬೂಬು ನೀಡಲಾಗುತ್ತಿದ್ದು, ಬಿಬಿಎಂಪಿ ಅಧಿಕಾರಿಗಳು ದೂರು ನೀಡದ ಬಗ್ಗೆ ಪ್ರಶ್ನಿಸಿದರೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಡಾ.ಎಂ.ಕೆ.ಪುಷ್ಪಿತಾ ಈಗ ನಮ್ಮ ಸಿಬ್ಬಂದಿ ಅಲ್ಲ ಎಂದು ಗೌರವ್ ಗುಪ್ತಾ ಉತ್ತರಿಸಿದ್ದಾರೆ.
ಡಾ.ಎಂ.ಕೆ.ಪುಷ್ಪಿತಾಗೂ ಬಿಬಿಎಂಪಿಗೂ ಯಾವುದೇ ಸಂಬಂಧವಿಲ್ಲ. ಅವರು ಈಗ ನಮ್ಮ ಸಿಬ್ಬಂದಿ ಅಲ್ಲ, ಹೀಗಾಗಿ ಈ ವಿಚಾರದಲ್ಲಿ ನಮಗೆ ಸಂಬಂಧವಿಲ್ಲ ಎಂದಿರುವ ಗೌರವ್ ಗುಪ್ತಾ, ಪೋಲಿಸರೇ ಸುಮೊಟೋ ದೂರು ದಾಖಲಿಸಿದ್ದಾರೆ ತನಿಖೆ ನಡೆಸುತ್ತಾರೆ ಎಂದಿದ್ದಾರೆ. ಇತ್ತ ಪ್ರಕರಣದ ಬಗ್ಗೆ ತನಿಖೆ ನಡೆಸಲು ಬಿಬಿಎಂಪಿ ಅಧಿಕಾರಿಗಳನ್ನು ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಬರುವಂತೆ ತಿಳಿಸಲಾಯಿತಾದರೂ, ಅಲ್ಲಿಗೆ ಬಂದ ಅಧಿಕಾರಿಗಳು ತನಿಖೆಗೆ ಸೂಕ್ತ ರೀತಿಯಲ್ಲಿ ಸಹಕರಿಸದೇ ಠಾಣೆಯಲ್ಲಿ ಕುಳಿತು ಬಳಿಕ ಹೊರ ನಡೆದಿದ್ದಾರೆ ಎನ್ನಲಾಗುತ್ತಿದೆ.
ಇತ್ತ ಮಂಜುನಾಥ ನಗರ ಆರೋಗ್ಯ ಕೇಂದ್ರದ ಸಿಬ್ಬಂದಿಯನ್ನು ತನಿಖೆಗೆ ಒಳಪಡಿಸಲು ಪೋಲಿಸರು ಪ್ರಯತ್ನಿಸುತ್ತಿರುವರಾದರೂ ಬಂಧನ ಭೀತಿಯಿಂದ ಆರೋಗ್ಯ ಕೇಂದ್ರ ಸಿಬ್ಬಂದಿ ಕಾಲ್ಕಿತ್ತಿದ್ದಾರೆ. ಲಸಿಕೆ ನೀಡುತ್ತಿದ್ದ ಆರೋಗ್ಯ ಕೇಂದ್ರ ಸಿಬ್ಬಂದಿ ಸರಸ್ವತಿ, ಸೌಮ್ಯಾ, ಬಿಬಿಎಂಪಿ ಆರೋಗ್ಯ ಇಲಾಖೆ ಅಧಿಕಾರಿ ರಘು, ಸ್ವಾಬ್ ಕಲೆಕ್ಟ್ ಮಾಡಲು ಗುತ್ತಿಗೆ ಆಧಾರದಲ್ಲಿ ನೇಮಕವಾಗಿದ್ದ ಗಿರೀಶ್ ಸೇರಿದಂತೆ ಎಲ್ಲರೂ ಕಾಣೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ರೂಪಾಂತರ ವೈರಸ್ ವಿರುದ್ಧ ಎರಡು ಡೋಸ್ ಲಸಿಕೆ ಮಾತ್ರ ಬಲವಾದ ರಕ್ಷಣೆ ಒದಗಿಸಬಲ್ಲದು: ವರದಿ
ಕೊವಿಡ್ ಸೋಂಕಿನಿಂದ ರಕ್ಷಿಸಲು ಲಸಿಕೆಯ 3ನೇ ಡೋಸ್ ನೀಡಬೇಕು ಎಂದ ಮಾಡೆರ್ನಾ ಕಂಪನಿಯ ಸಿಇಒ
Published On - 7:11 am, Wed, 26 May 21