ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಮತ್ತಿಬ್ಬರನ್ನು ವಶಕ್ಕೆ ಪಡೆದ ಎನ್​ಐಎ

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಬುಧವಾರ ಹಲವೆಡೆ ದಾಳಿ ನಡೆಸಿ ಶೋಧ ನಡೆಸಿದ್ದ ಎನ್​ಐಎ ಗುರುವಾರವೂ ದಾಳಿ ಮುಂದುವರಿಸಿದೆ. ಇದೇ ವೇಳೆ, ಬಾಂಬರ್ ಜತೆ ಸಂಪರ್ಕ ಇದ್ದಿರಬಹುದು ಎಂಬ ಶಂಕೆಯ ಮೇರೆಗೆ ಇಬ್ಬರನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದೆ.

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಮತ್ತಿಬ್ಬರನ್ನು ವಶಕ್ಕೆ ಪಡೆದ ಎನ್​ಐಎ
ಸಾಂದರ್ಭಿಕ ಚಿತ್ರ
Updated By: Ganapathi Sharma

Updated on: Mar 28, 2024 | 8:06 AM

ಬೆಂಗಳೂರು, ಮಾರ್ಚ್​ 28: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe) ಸಂಭವಿಸಿದ್ದ ಬಾಂಬ್ ಸ್ಫೋಟ (Bombm Blast Case) ಪ್ರಕರಣಕ್ಕೆ ಸಂಬಂಧಿಸಿ ಮತ್ತಿಬ್ಬರನ್ನು ರಾಷ್ಟ್ರೀಯ ತನಿಖಾ ದಳ (NIA) ಬೆಂಗಳೂರಿನಲ್ಲಿ ವಶಕ್ಕೆ ಪಡೆದುಕೊಂಡಿದೆ. ಘಟನೆ ಸಂಬಂಧ ಬೆಂಗಳೂರು ಮೂಲದ ಇಬ್ಬರನ್ನು ಶನಿವಾರವಷ್ಟೇ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಎನ್​ಐಎ ಮತ್ತೆ ದಾಳಿ ಹಾಗೂ ಶೋಧ ಕಾರ್ಯ ಮುಂದುವರಿಸಿತ್ತು. ಇದೀಗ ಶಂಕಿತರ ಜೊತೆ ಸಂಪರ್ಕ ಹೊಂದಿರುವ ಹಿನ್ನೆಲೆಯಲ್ಲಿ ಮತ್ತಿಬ್ಬರನ್ನು ವಶಕ್ಕೆ ಪಡೆದಿದೆ. ಸದ್ಯ ವಶಕ್ಕೆ ಪಡೆಯಲಾಗಿರುವ ಇಬ್ಬರು ನಿಷೇಧಿತ ‘ಅಲ್​ ಹಿಂದ್​ ಟ್ರಸ್ಟ್’​​ ಜೊತೆ ನಂಟು ಹೊಂದಿದ್ದರು.

ರಾಮೇಶ್ವರಂ ಕೆಫೆ ಸ್ಫೋಟ ಮತ್ತು ಹಿಂದಿನ ಕೆಲವು ಸ್ಫೋಟ ಪ್ರಕರಣಗಳ ನಡುವೆ ಸಾಮ್ಯತೆ ಇರುವುದರಿಂದ ಹಳೇ ಸ್ಫೋಟ ಪ್ರಕರಣಗಳಲ್ಲಿ ಶಾಮೀಲಾದ ಹಲವರ ಮೇಲೆ ಎನ್​ಐ ನಿಗಾ ಇರಿಸಿದೆ. ಈಗಾಗಲೇ ಜೈಲಿನಲ್ಲಿರುವ ಹಲವರನ್ನು ವಿಚಾರಣೆಗೆ ಒಳಪಡಿಸಿದ್ದ ಎನ್ಐಎ, ತಲೆಮರೆಸಿಕೊಂಡಿರುವ ಇನ್ನೂ ಹಲವರ ಮೇಲೆ ಕಣ್ಣಿಟ್ಟಿದೆ. ಶಂಕಿತರಿಗೆ ಪ್ರತ್ಯಕ್ಷ, ಪರೋಕ್ಷವಾಗಿ ನೆರವು ನೀಡಿದವರ ಮೇಲೂ ನಿಗಾ ಇಟ್ಟಿದೆ.

ಸದ್ಯ ಉಗ್ರ ಚಟುವಟಿಕೆಗಳಿಗೆ ನೆರವು ನೀಡಿದ ಆರೋಪ ಎದುರಿಸುತ್ತಿರುವವರನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಲಾಗುತ್ತಿದೆ. ಶಂಕಿತ ವ್ಯಕ್ತಿಗಳಿಂದ ಸ್ಫೋಟ ನಡೆಸಿದವರ ಬಗ್ಗೆ ಸುಳಿವು ಸಿಗುವ ಸಾಧ್ಯತೆ ಇದೆ. ತಾಂತ್ರಿಕವಾಗಿ ಅಥವಾ ಮೌಖಿಕವಾಗಿ ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ. ಹೀಗಾಗಿ ಈ ವಿಧಾನದಲ್ಲಿ ತನಿಖೆ ಮುಂದುವರಿಸಿಕೊಂಡು ಹೋಗಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇನ್ನು ರಾಮೇಶ್ವರಂ ಕೆಫೆ ಸ್ಫೋಟ ಸಂಬಂಧ ಎನ್​ಐಎ ಅಧಿಕಾರಿಗಳು ಬುಧವಾರ ಬೆಂಗಳೂರಿನ ಐದು ಕಡೆ, ಶಿವಮೊಗ್ಗ ಜಿಲ್ಲೆಯ 15 ಸ್ಥಳಗಳಲ್ಲಿ ಹಾಗೂ ತಮಿಳುನಾಡಿನ ಚೆನ್ನೈಯ ಆರು ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದರು.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಬೆಂಗಳೂರಿನ ಐದು ಕಡೆ ಎನ್​​ಐಎ ದಾಳಿ

ಚೆನ್ನೈನಲ್ಲಿ ಹಳೆಯ ವಾಷರ್‌ಮನ್‌ಪೇಟ್, ಮನ್ನಾಡಿ ಮತ್ತು ರಾಯಪೆಟ್ಟಾ ಸೇರಿದಂತೆ ಹಲವು ಸ್ಥಳಗಳಲ್ಲಿ ಬುಧವಾರ ಶೋಧ ನಡೆಸಲಾಗಿತ್ತು. ರಾಮನಾಥಪುರಂನಲ್ಲಿರುವ ಶೀಕ್ ದಾವೂದ್ ಮತ್ತು ಆತನ ತಂದೆಯ ನಿವಾಸಗಳಲ್ಲಿಯೂ ಶೋಧ ನಡೆಸಲಾಗಿತ್ತು. ಬುಧವಾರ ಹಲವು ಮೊಬೈಲ್ ಫೋನ್​ಗಳು ಮತ್ತು ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಕೆಲವು ವರ್ಷಗಳ ಹಿಂದೆ ನಿಷೇಧಿತ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಎನ್‌ಐಎ ಈ ಹಿಂದೆ ಎರಡು ಬಾರಿ ಶೀಕ್ ನಿವಾಸದಲ್ಲಿ ಶೋಧ ನಡೆಸಿತ್ತು ಎಂದು ಮೂಲಗಳು ತಿಳಿಸಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:04 am, Thu, 28 March 24