
ಬೆಂಗಳೂರು, (ಜುಲೈ 24): ರೌಡಿ ಶೀಟರ್ ಬಿಕ್ಲು ಶಿವ (Biklu Shiva) ಕೊಲೆ ಪ್ರಕರಣ ಸಂಬಂಧ ಪೊಲೀಸರ ತನಿಖೆಯಲ್ಲಿ ಮತ್ತಷ್ಟು ಸ್ಫೋಟಕ ಸಂಗತಿಗಳು ಬೆಳಕಿಗೆ ಬಂದಿವೆ. ಬಿಕ್ಲು ಶಿವ ಕೊಲೆಯಾಗಲು ಪ್ರಮುಖ ಕಾರಣ ಏನು ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಕೊಲೆಗೆ ಸುಪಾರಿ ಪಡೆದಿದ್ದ ಗ್ಯಾಂಗ್ ಅನ್ನೂ ಬಲೆಗೆ ಕೆಡವಿದ್ದಾರೆ. ಇದರ ಬೆನ್ನಲ್ಲೇ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಿ ರಾಜ್ಯ ಸರ್ಕಾರ ಇಂದು (ಜುಲೈ 24) ಆದೇಶ ಹೊರಡಿಸಿದೆ.
ಇನ್ನು ಈ ಪ್ರಕರಣದ ಎ1 ಆರೋಪಿಯಾಗಿರುವ ಗದೀಶ್ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದೆ. ಪ್ರಕರಣ ಜಾಮೀನು ನೀಡಲು ಅರ್ಹವಲ್ಲ ಎಂದು ಹೇಳಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶ ಹೊರಡಿಸಿದೆ.
ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಬೈರತಿ ಬಸವರಾಜ್‌ಗೆ ಸಂಕಷ್ಟ ತಂದಿರುವ ಬಿಕ್ಲು ಶಿವ ಕೊಲೆ ಪ್ರಕರಣದ ಪ್ರಮುಖ ಆರೋಪಿ ದುಬೈಗೆ ಪಲಾಯನ ಮಾಡಿದ್ದಾನೆ. ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದ ಪ್ರಮುಖ ಆರೋಪಿ ಎಂದೇ ಶಂಕಿಸಲಾಗಿರುವ ಜಗದೀಶ್ ಅಲಿಯಾಸ್ ಜಗ್ಗ ಅಂದು ಶಿವನ ಕೊಲೆ ನಡೆದ ನಂತರ ಯಾರಿಗೂ ತಿಳಿಯದಂತೆ ದುಬೈಗೆ ಪರಾರಿಯಾಗಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ರೌಡಿ ಶೀಟರ್ ಬಿಕ್ಲು ಶಿವನನ್ನು ಕೊಲೆ ಮಾಡಲು ಕೇವಲ ಒಂದೂವರೆ ಲಕ್ಷ ರೂಪಾಯಿ ಸುಪಾರಿ ಪಡೆದಿದ್ದ ಗ್ಯಾಂಗ್ ಅಂದರ್ ಆಗಿದೆ. ಕೋಲಾರದ ಮಾಲೂರು ಮೂಲದ ನರಸಿಂಹ, ಮುರುಗೇಶ್, ಸುದರ್ಶನ, ಅವಿನಾಶ್ ದಿನ್ನಹಳ್ಳಿ ಎಂಬ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ಬಂಧಿತನಾಗಿರುವ ವಿಮಲ್ ಎಂಬ ಆರೋಪಿ ಮೂಲಕ ನರಸಿಂಹನಿಗೆ ಸುಪಾರಿ ನೀಡಲಾಗಿತ್ತು ಎಂಬ ಅಂಶ ಬಯಲಾಗಿದೆ. ಇಷ್ಟೇ ಅಲ್ಲ ಕೊಲೆಗೆ ಬಳಸಿದ್ದಸ್ಕಾರ್ಪಿಯೋ ಕಾರನ್ನು ಎರಡೂವರೆ ಲಕ್ಷ ರೂಪಾಯಿ ಕೊಟ್ಟು ರೆಡ್ಡಿ ಎಂಬುವವರ ಬಳಿ ಕನ್ನಡಪರ ಹೋರಾಟಗಾರ ಕಂ ನಟ ಆರ್.ಡಿ ಅನಿಲ್ ಖರೀದಿ ಮಾಡಿ ಕಿರಣ್ಗೆ ಕೊಟ್ಟಿದ್ದ ಎನ್ನಲಾಗಿದೆ.
ಇನ್ನು ಶಿವ ಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಆರೋಪ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿ ಕಿರಣ್ಗೆ ಪೊಲೀಸರು ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ನೀಡಿರುವುದು ಕಂಡುಬಂದ ಹಿನ್ನೆಲೆ ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು. ಮತ್ತು ವರದಿಯೊಂದಿಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸಬೇಕು ಎಂದು ಹೈಕೋರ್ಟ್ ಪೊಲೀಸರಿಗೆ ಸೂಚನೆ ನೀಡಿದೆ.