ಬಿಕ್ಲು ಶಿವ ಕೊಲೆ ಕೇಸ್: ಮತ್ತಿಬ್ಬರ ಬಂಧನ, ಭೈರತಿ ಬಸವರಾಜ್ ಸಹೋದರನ ಮಗ ವಶಕ್ಕೆ
ಬೆಂಗಳೂರಿನ ರೌಡಿಶೀಟರ್ ಬಿಕ್ಲು ಶಿವನ ಕೊಲೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು ಇದೀಗ ಮತ್ತೆ ಇಬ್ಬರನ್ನು ಬಂಧಿಸಿದ್ದಾರೆ. ಜೊತೆಗೆ ಬಿಜೆಪಿ ಶಾಸಕ ಭೈರತಿ ಬಸವರಾಜ್ ಸಹೋದರನ ಮಗನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಭೈರತಿ ಬಸವರಾಜ್ ಸಹೋದರನ ಮಗ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಕಾರು ನೀಡಿದ್ದ.

ಬೆಂಗಳೂರು, ಜುಲೈ 21: ಬಿಕ್ಲು ಶಿವ ಕೊಲೆ ಕೇಸ್ (bilkul shiva case) ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಇದೇ ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜ್ (Byrathi Basavaraj) ಹೆಸರು ಕೂಡ ತಳಕು ಹಾಕಿಕೊಂಡಿದ್ದು, ಐದನೇ ಆರೋಪಿ ಆಗಿದ್ದಾರೆ. ಇತ್ತೀಚೆಗೆ ವಿಚಾರಣೆಗೆ ಕೂಡ ಹಾಜರಾಗಿದ್ದರು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರನ್ನು ಬಂಧಿಸಿದ್ದು, ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅರುಣ್, ನವೀನ್ ಬಂಧಿತರು. ಭೈರತಿ ಬಸವರಾಜ್ ಸಹೋದರನ ಮಗ ಅನಿಲ್ನನ್ನು ವಶಕ್ಕೆ ಪಡೆದಿದ್ದಾರೆ.
ಅರುಣ್ ಮತ್ತು ನವೀನ್ ಮೊದಲನೇ ಆರೋಪಿ ಜಗದೀಶ್ ಸಹಚರರು. ಕೊಲೆ ಬಳಿಕ ಇಬ್ಬರು ತಲೆಮರೆಸಿಕೊಂಡಿದ್ದರು. ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಅನಿಲ್ ಕಾರು ನೀಡಿದ್ದ. ಹೀಗಾಗಿ ಸದ್ಯ ಅನಿಲ್ನನ್ನು ವಶಕ್ಕೆ ಪಡೆದಿರುವ ಬೆಂಗಳೂರಿನ ಭಾರತಿನಗರ ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ: ಬಿಕ್ಲು ಶಿವ ಹತ್ಯೆ: ಬಿಜೆಪಿ ಎಂಎಲ್ಎಗೆ ನೋಟಿಸ್, ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಕೊಟ್ಟ ಮೃತನ ತಾಯಿ
ರೌಡಿಶೀಟರ್ ಬಿಕ್ಲು ಶಿವನ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಅಷ್ಟಕ್ಕೂ, ಬಿಕ್ಲು ಕೊಲೆಗೆ ಕಾರಣ ಕಿತ್ತಗನೂರಲ್ಲಿರುವ ಒಂದೂವರೆ ಎಕರೆ ಜಮೀನು. ಜಮೀನಿಗೆ ಮೂವರು ಮಾಲೀಕರಿದ್ದು, ಈ ಪೈಕಿ ನದಾಫ್ ಬಳಿ ಬಿಕ್ಲು ಜಮೀನು ಖರೀದಿ ಅಗ್ರಿಮೆಂಟ್ ಮಾಡಿಸಿಕೊಂಡಿದ್ದ.
ಮತ್ತೊಬ್ಬ ಮಾಲೀಕನಿಂದ ರವಿ ಅಗ್ರಿಮೆಂಟ್ ಮಾಡಿಸಿಕೊಂಡು ಕಾಂಪೌಂಡ್ ಹಾಕುತ್ತಿದ್ದ. ಇದರಿಂದ ಕೆರಳಿದ ಶಿವು ಕಾಂಪೌಂಡ್ ಕೆಡವಿದ್ದ. ಬಳಿಕ ರವಿ ಬೆನ್ನಿಂದೆ ಇದ್ದ ಜಗದೀಶ್ ಮತ್ತು ಕಿರಣ್, ಶಿವುಗೆ ಪ್ರಾಣ ಬೆದರಿಕೆ ಹಾಕಿದ್ದರು. ಈ ಬಗ್ಗೆ ಶಿವು ಅಂದಿನ ಕಮಿಷನರ್ಗೆ ದೂರು ನೀಡಿದ್ದ. ರಾಮಮೂರ್ತಿನಗರ ಠಾಣೆಗೆ ದೂರು ನೀಡಿದ್ದ. ಆದರೆ ಅವರು ಎನ್ಸಿಆರ್ ದಾಖಲಿಸಿ ಕೈ ಚೆಲ್ಲಿದ್ದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ರೌಡಿಶೀಟರ್ ಕೊಲೆ: ಬಿಜೆಪಿ ಶಾಸಕ ಭೈರತಿ ಬಸವರಾಜ್ ಸೇರಿ ಐವರ ವಿರುದ್ಧ ಎಫ್ಐಆರ್
ಶಿವನನ್ನ ಮುಗಿಸುವುದಕ್ಕೆ ಸ್ಕೆಚ್ ಹಾಕಿದ್ದ ಜಗದೀಶ್, ಸ್ಯಾಮ್ಯುಯೆಲ್ ಎಂಬಾತನನ್ನ ವಾಚ್ ಮಾಡುವುದಕ್ಕೆ ಬಿಟ್ಟಿದ್ದ. ಕಳೆದ 45 ದಿನಗಳಿಂದ ಶಿವನ ಚಲನವಲನಗಳನ್ನ ಸ್ಯಾಮ್ಯುಯೆಲ್ ಗಮನಿಸ್ತಿದ್ನಂತೆ. ಆತನಿಗೆ ಪ್ರತಿ ನಿತ್ಯ 1 ಸಾವಿರ ಹಣವನ್ನ ಜಗ್ಗ ಕೊಡ್ತಿದ್ನಂತೆ. ಕೊಲೆ ದಿನ ಕೂಡ ಸ್ಯಾಮ್ಯುಯೆಲ್ ಕೊಟ್ಟ ಲೊಕೇಷನ್ ಆಧರಿಸಿ ಬಂದವರು, ಬಿಕ್ಲು ಶಿವುನನ್ನ ಕೊಂದು ಪರಾರಿ ಆಗಿದ್ದರು.
ವರದಿ: ವಿಕಾಸ್ ಕ್ರೈಂ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:40 am, Mon, 21 July 25







