ಬೆಂಗಳೂರಿನಲ್ಲಿ ಮತ್ತೊಂದು ಮ್ಯಾನ್ಹೋಲ್ ದುರಂತ: ಓರ್ವ ಕಾರ್ಮಿಕ ಸಾವು
ಮ್ಯಾನ್ ಹೋಲ್ ಸ್ಚಚ್ಛಗೊಳಿಸಲು ಬೇಕಾದರೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾವು ನೋವುಗಳು ಸಂಭವಿಸಿದಾಗ ಸರ್ಕಾರ, ಸಚಿವರು, ಬಿಬಿಎಂಪಿ ಅಧಿಕಾರಿಗಳು ಹೇಳಿಕೆ ಕೊಡುತ್ತಾರೆ. ಆದ್ರೆ, ಅದು ಕಾರ್ಯರೂಪಕ್ಕೆ ಬರುತ್ತಿಲ್ಲ. ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸದಿರುವುದರಿಂದ ಬೆಂಗಳೂರಿನಲ್ಲಿ ಮತ್ತೊಂದು ಮ್ಯಾನ್ ಹೋಲ್ ದುರಂತ ಸಂಭವಿಸಿದೆ.

ಬೆಂಗಳೂರು, (ಜುಲೈ 21): ಮ್ಯಾನ್ ಹೋಲ್ ಗೆ(manhole) ಇಳಿದು ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಕಾರ್ಮಿಕನೋರ್ವ ಮೃತಪಟ್ಟಿರುವ ಘಟನೆ ಬೆಂಗಳೂರಿನ (Bengaluru) RMC ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರಿನ ಆಶ್ರಯನಗರದ ನಿವಾಸಿ ಪುಟ್ಟಸ್ವಾಮಿ ಮೃತ ದುರ್ವೈವಿ. ಮ್ಯಾನ್ ಹೋಲ್ ಸ್ವಚ್ಛಗೊಳಿಸಲು ಆಂಥೋನಿ ಹಾಗೂ ಪುಟ್ಟಸ್ವಾಮಿ ಒಳಚರಂಡಿಗೆ ಇಳಿದಿದ್ದರು. ಸುಮಾರು ಅರ್ಧ ಗಂಟೆ ಒಳಗಡೆ ಕೆಲಸ ಮಾಡಿದ್ದಾರೆ. ಬಳಿಕ ಉಸಿರುಗಟ್ಟಿದಂತಾಗಿದ ಮೇಲೆ ಅಂಥೋನಿ ಹಾಗೂ ಪುಟ್ಟಸ್ವಾಮಿ ಆಚೆ ಬಂದಿದ್ದಾರೆ. ನಂತರ ಆಸ್ಪತ್ರೆಗೆ ದಾಖಲಾಗದೆ ಪುಟ್ಟಸ್ವಾಮಿ ಮನೆಗೆ ತೆರಳಿದ್ದ ವೇಳೆ ಸಾವನ್ನಪ್ಪಿದ್ದಾನೆ.ಇನ್ನು ಅಸ್ವಸ್ಥಗೊಂಡಿದ್ದ ಆಂಥೋನಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಹಣದ ಆಸೆ ತೋರಿಸಿ ಒಳಚರಂಡಿಗೆ ಇಳಿಸಿರುವ ಶಂಕೆ ವ್ಯಕ್ತವಾಗಿದ್ದು, ಯಾರು ಇಳಿಸಿದ್ದು ಸೇರಿದಂತೆ ಈ ಬಗ್ಗೆ ಇನ್ನಿತರ ಇನ್ನಷ್ಟು ಮಾಹಿತಿ ತಿಳಿದುಬರಬೇಕಿದೆ.
ಈ ಹಿಂದೆ ಮ್ಯಾನ್ ಹೋಲ್ ದುರಂತ ಸಂಭವಿಸಿದ್ದಾಗ ಎಚ್ ಆಂಜನೇಯ್ಯ ಅವರು ಕೆಲ ಕಟ್ಟು ನಿಟ್ಟಿನ ಸೂಚನೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಬಿಬಿಎಂಪಿಗೆ ನೀಡಿದ್ದರು. ಮ್ಯಾನ್ ಹೋಲ್ಗೆ ಇನ್ನು ಮುಂದೆ ಯಾರೂ ಇಳಿಯಬಾರದು. ಮ್ಯಾನ್ ಹೋಲ್ ಇಳಿಯುವ ಮುನ್ನ ಸ್ಥಳಿಯ ಪೊಲೀಸ್, ಅಗ್ನಿಶಾಮಕ ಸಿಬ್ಬಂದಿ ಇರಬೇಕು. ಯಂತ್ರದ ಮೂಲಕ ಮ್ಯಾನ್ ಹೋಲ್ ಓಪನ್ ಮಾಡಬೇಕು. ಅನಿವಾರ್ಯ ಕಾರಣದಿಂದ ಮ್ಯಾನ್ ಹೋಲ್ ನಲ್ಲಿ ಇಳಿಯಬೇಕಾದಲ್ಲಿ ಎಲ್ಲಾ ರೀತಿಯ ಪ್ರಿಕಾಶನ್ ಇರಬೇಕು ಎಂದು ಹೇಳಿದ್ದರು.
ಆದ್ರೆ, ಪದೇ ಪದೇ ಬೆಂಗಳೂರಿನಲ್ಲಿ ಈ ಮ್ಯಾನ್ ಹೋಲ್ ದುರಂತಗಳು ಸಂಭವಿಸುತ್ತಲೇ ಇವೆ. ಘಟನೆ ನಡೆದು ಸಾವು ನೋವು ಸಂಭವಿಸಿದಾಗ ಮಾತ್ರ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಮ್ಯಾನ್ ಹೋಲ್ಗೆ ಕಾರ್ಮಿಕರನ್ನು ಇಳಿಸಬೇಕೆಂಬ ಮಾತುಗಳನ್ನಾಡುತ್ತಾರೆ. ಆದರೂ ಪದೇ ಪದೇ ಇಂತಹ ದುರ್ಘಟನೆಗಳು ನಡೆಯುತ್ತಲೇ ಇವೆ. ಈ ಬಗ್ಗೆ ಸರ್ಕಾರ, ಇದಕ್ಕೊಂದು ಮಾರ್ಗಸೂಚಿ ಜಾರಿಗೆ ತರಬೇಕಿದೆ.




