ದೊಡ್ಡಬಳ್ಳಾಪುರ, ನ.14: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದಲ್ಲಿ ಬೀದಿನಾಯಿಗಳ (Street Dogs) ಅಟ್ಟಹಾಸ ಮಿತಿ ಮೀರಿದೆ. ಕಳೆದ ರಾತ್ರಿಯಿಂದ 14 ಮಂದಿ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ನಗರದ ಟಿಬಿ ಸರ್ಕಲ್, ತಾಲೂಕು ಕಚೇರಿ ರಸ್ತೆ, ಕೋರ್ಟ್ ರಸ್ತೆ, ಡಿ ಕ್ರಾಸ್ ಸೇರಿದಂತೆ ಹಲವು ಕಡೆ ಬೀದಿ ನಾಯಿಗಳು ದಾಳಿ ಮಾಡಿವೆ. ರಸ್ತೆಯಲ್ಲಿ ಹೋಗುತ್ತಿದ್ದ ಮಕ್ಕಳು ಸೇರಿದಂತೆ ಪುರುಷರ ಮೇಲೆ ಬೀದಿ ನಾಯಿಗಳು ಎರಗಿವೆ. ಬೀದಿ ನಾಯಿಗಳ ಅಟ್ಟಹಾಸಕ್ಕೆ ದೊಡ್ಡಬಳ್ಳಾಪುರ ಜನ ಬೆಚ್ಚಿಬಿದ್ದಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ಬೀದಿ ನಾಯಿಗಳು ಸಿಕ್ಕಸಿಕ್ಕವರ ಮೇಲೆ ದಾಳಿ ಮಾಡುತ್ತಿವೆ. ರಸ್ತೆಯಲ್ಲಿ ಓಡಾಡುವುದಕ್ಕೂ ಜನ ಭಯಪಡುವಂತಾಗಿದೆ. ಹತ್ತು ಮಕ್ಕಳು ಹಾಗು ನಾಲ್ಕು ಪುರುಷರನ್ನ ಈಗಾಗಲೇ ನಾಯಿಗಳು ಕಚ್ಚಿ ಘಾಸಿಗೊಳಿಸಿವೆ. ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನೂ ಕೆಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಬೀದಿ ನಾಯಿಗಳ ಉಪಟಳಕ್ಕೆ ಬ್ರೇಕ್ ಹಾಕುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ದಾವಣಗೆರೆ: ವ್ಯಕ್ತಿಯನ್ನು ಕೊಂದ ಮಂಗ ಕೊನೆಗೂ ಸೆರೆ
ಇನ್ನು ಮತ್ತೊಂದೆಡೆ ದಾವಣಗೆರೆಯಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿ ಕೊಂದು ಹಾಕಿದ್ದ ಕಿಲ್ಲರ್ ಕೋತಿಯನ್ನು ಸೆರೆ ಹಿಡಿಯಲಾಗಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಕೆರೆ ಗ್ರಾಮದಲ್ಲಿ ಕೋತಿಯೊಂದು ಗುತ್ಯಪ್ಪ (60) ಎಂಬುವವರ ಮೇಲೆ ದಾಳಿ ಮಾಡಿ ಕೊಂದು ಹಾಕಿತ್ತು. ಜೊತೆಗೆ ಮತೋರ್ವ ವ್ಯಕ್ತಿಯ ಮೇಲೆ ದಾಳಿ ನಡೆಸಿತ್ತು. ಸದ್ಯ ಕಿಲ್ಲರ್ ಕೋತಿಯನ್ನು ಸೆರೆ ಹಿಡಿಯಲಾಗಿದೆ. ನಿನ್ನೆಯಿಂದ ಕೋತಿಯನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದರು. ಇಂದು ಅರಣ್ಯ ಇಲಾಖೆ ಸಿಬ್ಬಂದಿಗಳ ಕೈಗೆ ಕೋತಿ ಸಿಕ್ಕಿ ಬಿದ್ದಿದೆ. ಸದ್ಯ ಕೋತಿಯನ್ನು ಬೋನ್ನಲ್ಲಿ ಇಡಲಾಗಿದೆ. ಗ್ರಾಮಕ್ಕೆ ಕಾಡುಪ್ರಾಣಿಗಳಿಂದ ರಕ್ಷಣೆ ನೀಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಹಾಗೂ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ