ಬೆಂಗಳೂರು: ಗೂಗಲ್‌ ಮ್ಯಾಪ್‌ ನೋಡಿಕೊಂಡು ಹೋಗಿ ದುರಂತ ಸಾವು ಕಂಡ ವೈದ್ಯ

ಗೂಗಲ್‌ ಮ್ಯಾಪ್‌ ನಮಗೆ ಗೊತ್ತಿಲ್ಲದ ದಾರಿ ತೋರಿಸುತ್ತೆ ನಿಜ. ಆದ್ರೆ ಅದೇ ಮ್ಯಾಪ್‌ನಿಂದ ಹಲವು ಅವಘಡಗಳು ಸಂಭವಿಸಿದ ಉದಾಹರಣೆಗಳು ಸಹ ಇವೆ. ಇದೇ ಗೂಗಲ್​ ಮ್ಯಾಪ್ ನೋಡಿಕೊಂಡು ಹೋಗಿ ನದಿಗೆ ಬಿದ್ದಿರುವುದು ಸೇರಿದಂತೆ ಅನೇಕ ಪ್ರಕರಣಗಳು ಸಂಭವಿಸಿದೆ. ಅದರಂತೆ ಕರ್ನಾಟಕದಲ್ಲಿ ಗೂಗಲ್​ ಮ್ಯಾಪ್​ನಲ್ಲಿ ಮಗ್ನನಾಗಿದ್ದ ಕಾರು ಚಾಲಕ ಅಪಘಾತ ಮಾಡಿಕೊಂಡಿದ್ದಾನೆ. ಮ್ಯಾಪ್‌ನ ಎಡವಟ್ಟಿನಿಂದಲೇ ವೈದ್ಯ ಸಾವಿನ ಮನೆ ಸೇರಿದ್ದಾನೆ .

ಬೆಂಗಳೂರು: ಗೂಗಲ್‌ ಮ್ಯಾಪ್‌ ನೋಡಿಕೊಂಡು ಹೋಗಿ ದುರಂತ ಸಾವು ಕಂಡ ವೈದ್ಯ
Devanahalli Accident
Edited By:

Updated on: Feb 07, 2025 | 7:22 AM

ಬೆಂಗಳೂರು, (ಫೆಬ್ರವರಿ 07): ಗೂಗಲ್‌ ಮ್ಯಾಪ್‌ ದಾರಿಯನ್ನ ತೋರಿಸುವ ಗೆಳೆಯ. ಆದ್ರೆ ಅದೇ ಮ್ಯಾಪ್‌ನಲ್ಲಿ ಮಗ್ನನಾಗಿದ್ದ ಕಾರು ಚಾಲಕ ದುರಂತ ಸಾವು ಕಂಡಿದ್ದಾನೆ. ಶರವೇಗದಲ್ಲಿ ಹೋಗುತ್ತಿದ್ದ ಕಾರು ಹೈವೇನಲ್ಲಿ ಪಲ್ಟಿ ಹೊಡೆದಿದೆ. ಸೈಡ್‌ನಲ್ಲಿ ನಿಂತಿದ್ದ ಕ್ಯಾಂಟರ್‌ಗೆ ಹಿಂಬದಿಯಿಂದ ಡಿಕ್ಕಿಯಾದ ಕಾರು ಮೂರು ಪಲ್ಟಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ವೈದ್ಯ ಸ್ಥಳದಲ್ಲೇ ಸಾವಿನ ಮನೆ ಸೇರಿದ್ದಾನೆ. ಅಷ್ಟಕ್ಕೂ ಈ ಭೀಕರ ಅಪಘಾತಕ್ಕೆ ಕಾರಣವೇ ಗೂಗಲ್ ಮ್ಯಾಪ್‌.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಬಳಿಯ ರಾಷ್ಟ್ರೀಯ ಹೆದ್ದಾರಿ 648 ರಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಗೂಗಲ್‌ ಮ್ಯಾಪ್‌ ಮಗ್ನನಾಗಿದ್ದ ಕಾರು ಚಾಲಕ ವೇಗವಾಗಿ ಹೋಗಿ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಕಾರಿನಲ್ಲಿ ವೈದ್ಯ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ. ಹೈವೇನಲ್ಲಿ ಅಷ್ಟೊಂದು ವಾಹನದಟ್ಟಣೆ ಇರಲಿಲ್ಲ. ಹೀಗಾಗಿ ಟ್ರಕ್‌ ಚಾಲಕ, ತನ್ನ ಟ್ರಕ್‌ನ್ನ ಸೈಡ್‌ನಲ್ಲಿ ನಿಲ್ಲಿಸಿ ಟಿಫಿನ್‌ಗೆ ಹೋಗಿದ್ದ. ಇದೇ ವೇಳೆ ಶರವೇಗದಲ್ಲಿ ಬಂದ ಈ ಕಾರು ಹಿಂದಿನಿಂದ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಕಾರು ನಜ್ಜುಗುಜ್ಜಾದ್ರೆ, ಕಾರ್‌ನಲ್ಲಿದ್ದ ವೈದ್ಯ ಅಲ್ಲೇ ಪ್ರಾಣ ಬಿಟ್ಟಿದ್ದಾನೆ.

ಹೈದ್ರಾಬಾದ್‌ ಮೂಲದ ಅಮರ್ ಪ್ರಸಾದ್, ವೇಣು ಮತ್ತು ಪ್ರವಳಿಕಾ ಅನ್ನೋ ಮೂವರು ಸ್ನೇಹಿತರು ತಮಿಳುನಾಡಿನ ಪಳನಿ ದೇವಸ್ಥಾನಕ್ಕೆ ಹೋಗಬೇಕು ಎಂದು ಕಾರು ಏರಿದ್ದಾರೆ . ಬೆಳಗಿನಜಾವ 2 ಗಂಟೆಗೆ ಹೈದ್ರಾಬಾದ್‌ನಿಂದ ಹೊರಟವರು, ಬೆಳಗ್ಗೆ 10 ಗಂಟೆ ಹೊತ್ತಿಗೆ ಹೊಸಕೋಟೆ ಬಳಿ ಬಂದಿದ್ದರು. ದೇವನಹಳ್ಳಿ ಮೂಲಕ ಹೊಸಕೋಟೆಗೆ ಬರುತ್ತಿದ್ದ ಕಾರು, ಕೋಲಾರದ ಹೆದ್ದಾರಿ ಕಡೆ ಯೂಟರ್ನ್ ಪಡೆಯೋಕೆ ಹೋಗಿದೆ. ಈ ವೇಳೆ ಗೂಗಲ್‌ ಮ್ಯಾಪ್‌ ನೋಡುತ್ತ ಕಾರು ಚಾಲನೆ ಮಾಡಿದ ಚಾಲಕ, ಮ್ಯಾಪ್‌ನತ್ತಲೇ ಹೆಚ್ಚು ಗಮನಹರಿಸಿದ್ದಾನೆ. ಇದರಿಂದ ನೋಡ ನೋಡುತ್ತಿದ್ದಂತೆಯೇ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಕಾರ್‌ನ ಹಿಂಭಾಗದಲ್ಲಿ ಕೂತಿದ್ದ ಹೈದರಾಬಾದ್ ಮೂಲದ ವೈದ್ಯ ಅಮರ್ ಪ್ರಸಾದ್ ಸ್ಥಳದಲ್ಲೆ ಸಾವನ್ನಪಿದ್ದಾನೆ.

ಇನ್ನು ಸ್ಥಳದಲ್ಲಿದ್ದವರು, ಕಾರ್‌ನಲ್ಲಿದ್ದ ವೈದ್ಯೆ ಪ್ರವಳಿಕಾ ಮತ್ತು ವೇಣು ಅನ್ನೋರನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ . ಸಣ್ಣಪುಟ್ಟ ಗಾಯದೊಂದಿಗೆ ಇಬ್ಬರು ಬದುಕುಳಿದಿದ್ದಾರೆ .