
ದೇವನಹಳ್ಳಿ, ಅಕ್ಟೋಬರ್ 03: ಬೆಂಗಳೂರಿನ ಯಲಹಂಕ ಸುತ್ತಮುತ್ತಲಿನ 17 ಗ್ರಾಮಗಳ ವ್ಯಾಪ್ತಿಯಲ್ಲಿ ಸ್ವಂತ ಮನೆಯ ಕನಸು ಹೊತ್ತು 2008ರಲ್ಲಿ ಕಂದಾಯ ಬಡಾವಣೆಗಳಲ್ಲಿ ನಿವೇಶನ ಖರೀದಿಸಿದ್ದ ನಾಗರಿಕರು, ಇದೀಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಧೋರಣೆಯಿಂದಾಗಿ ಕಂಗಾಲಾಗಿದ್ದಾರೆ. ಡಾ. ಕೆ. ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ಭೂಸ್ವಾಧೀನ ಮಾಡಿಕೊಳ್ಳುವ ಸಂದರ್ಭದಲ್ಲಿ ಬಿಡಿಎ ಬದಲಿ ನಿವೇಶನ ನೀಡುವುದಾಗಿ ಭರವಸೆ ನೀಡಿತ್ತು. ಅದರಂತೆ ಸಾವಿರಾರು ಎಕರೆಯಲ್ಲಿ ಸುಸಜ್ಜಿತ ಬಡಾವಣೆ ನಿರ್ಮಿಸಿ, ಇತ್ತೀಚೆಗೆ ಹೊಸಬರಿಗೆ ಹಾಗೂ ಜಮೀನು ನೀಡಿದ ರೈತರಿಗೆ ಪರಿಹಾರವಾಗಿ ಸೈಟ್‌ಗಳನ್ನು ಹಂಚಿಕೆ ಮಾಡಲಾಗಿದ್ದರೂ, ಮೂಲತಃ ನಿವೇಶನ ಕಳೆದುಕೊಂಡ 3,500ಕ್ಕೂ ಅಧಿಕ ಮಾಲೀಕರಿಗೆ ಮಾತ್ರ ಇನ್ನೂ ಯಾವುದೇ ನಿವೇಶನ ನೀಡಿಲ್ಲ. ಹೀಗಾಗಿ ಇದೀಗ ಅವರೆಲ್ಲರೂ ಹೋರಾಟದ ಹಾದಿ ಹಿಡಿದಿದ್ದಾರೆ.
ಸಿಲಿಕಾನ್ ಸಿಟಿಯಲ್ಲಿ ಒಂದು ಸ್ವಂತ ಸೂರು ಮಾಡಿಕೊಳ್ಳಬೇಕು ಅಂತ 2008ರಲ್ಲೇ ಕಷ್ಟಪಟ್ಟು ದುಡಿದು, ಇದ್ದ ಹಣದಲ್ಲಿ ಯಲಹಂಕ ಸುತ್ತಮುತ್ತಲಿನ 17 ಗ್ರಾಮಗಳ ಗ್ರಾಮಸ್ಥರು ಕಂದಾಯ ಬಡಾವಣೆಗಳಲ್ಲಿ ಸೈಟ್ ಖರೀದಿ ಮಾಡಿ ರಿಜಿಸ್ಟರ್ ಸಹ ಮಾಡಿಸಿಕೊಂಡಿದ್ದರು. ಆದರೆ ಅಂದು ಯಲಹಂಕ ಬಳಿ ಸಾವಿರಾರು ಎಕರೆಯಲ್ಲಿ ಶಿವರಾಂ ಕಾರಂತ ಬಡಾವಣೆ ಮಾಡಲು ಮುಂದಾದ ಬಿಡಿಎ, ನಿವೇಶನ ಕಳೆದುಕೊಳ್ಳುವ ಮಾಲೀಕರಿಗೆ ಬದಲಿ ನಿವೇಶನ ಕೊಡುವುದಾಗಿ ಹೇಳಿ ಬಡಾವಣೆ ಹಾಗೂ ನಿವೇಶನಗಳನ್ನ ಭೂಸ್ವಾಧೀನ ಪಡಿಸಿಕೊಂಡಿತ್ತು.
ಇದನ್ನೂ ಓದಿ: ಕಾರವಾರ ಮೆಡಿಕಲ್ ಕಾಲೇಜು, ಶಿವರಾಮ ಕಾರಂತ ಬಡಾವಣೆಯ ಪ್ರಮುಖ ರಸ್ತೆಗೆ ರಾಮಕೃಷ್ಣ ಹೆಗಡೆ ಹೆಸರು: ಸಿಎಂ ಘೋಷಣೆ
ಇನ್ನು ಭೂಸ್ವಾಧಿನ ಪಡಿಸಿಕೊಂಡ ಬಡಾವಣೆಯನ್ನ ಡೆಮಾಲಿಷನ್ ಮಾಡಿ ಸಾವಿರಾರು ಎಕರೆಯಲ್ಲಿ ಸುಸಜ್ಜಿತವಾದ ಶಿವರಾಂ ಕಾರಂತ ಬಡಾವಣೆಯನ್ನ ನಿರ್ಮಾಣ ಮಾಡಿದ್ದು, ಇತ್ತೀಚೆಗೆ ಸೈಟ್‌ಗಳನ್ನು ಸಹ ಹಂಚಿಕೆ ಮಾಡಿದೆ. ಆದರೆ ಹೊಸಬರಿಗೆ ಮತ್ತು ಜಮೀನು ನೀಡಿದ ರೈತರಿಗೆ ಪರಿಹಾರವಾಗಿ ಸೈಟ್ಗಳನ್ನ ಹಂಚಿಕೆ ಮಾಡಿರುವ ಬಿಡಿಎ, ಅಂದು ಸೈಟ್ಗಳನ್ನ ನೀಡಿರುವ ಮಾಲೀಕರನ್ನ ಮರೆತು ಬಿಟ್ಟಿದೆಯಂತೆ. ಹೀಗಾಗಿ ಬಿಡಿಎ ಕಚೇರಿಗೆ ಸೈಟ್ಗಾಗಿ ಅಲೆದು ಅಲೆದು ಸುಸ್ತಾದ 3500ಕ್ಕೂ ಹೆಚ್ಚು ನಿವೇಶನ ಕಳೆದುಕೊಂಡ ಮಾಲೀಕರು ಇದೀಗ ಬಿಡಿಎ ವಿರುದ್ದ ಆಕ್ರೋಶ ಹೊರಹಾಕುತ್ತಿದ್ದಾರೆ.
2008ರಲ್ಲಿ ಬಿಡಿಎ ಶಿವರಾಂ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ತಾವು ಕಷ್ಟಪಟ್ಟು ಖರೀದಿ ಮಾಡಿದ್ದ ಸೈಟ್ಗಳನ್ನ ನೀಡಿ ಎರಡು ದಶಕಗಳಿಂದ ನಿವೇಶನಕ್ಕಾಗಿ ಕಾದು ಕುಳಿತಿದ್ದವರಿಗೆ ಬಿಡಿಎ ಈವರೆಗೂ ಸೈಟ್ ನೀಡುವ ಯಾವುದೇ ಪ್ರಕ್ರಿಯೆ ಪ್ರಾರಂಭಿಸಿಲ್ಲವಂತೆ. ಜೊತೆಗೆ ಸೈಟ್ ಕಳೆದುಕೊಂಡವರು ಹೋಗಿ ಕೇಳಿದರೆ 6 ಸಾವಿರ ರೂವರೆಗೂ ದರ ನಿಗದಿ ಮಾಡಲಿದ್ದು, ಹಣ ಕಟ್ಟಿ ಖರೀದಿ ಮಾಡುವಂತೆ ಹೇಳುತ್ತಿದ್ದಾರಂತೆ. ಅಂದರೆ ಅಡಿಗೆ 6 ಸಾವಿರ ರೂ ಅಂದರೆ 30X40 ಅಳತೆಯ ಸೈಟ್ಗೆ ಲಕ್ಷಾಂತರ ರೂ ಬೆಲೆ ಆಗುತ್ತದೆ.
‘ನಿವೇಶನ ಕಳೆದುಕೊಂಡು ಕಷ್ಟದಲ್ಲಿರುವ ನಮಗೆ ಮತ್ತೆ ಹಣ ಕಟ್ಟಿ ಅಂದರೆ ಹೇಗೆ ಅಂತ ಮಾಲೀಕರು ಪ್ರಶ್ನಿಸಿದ್ದಾರೆ. ಅಲ್ಲದೆ ಈ ಹಿಂದೆ ಸೈಟ್ಗಳನ್ನ ಪಡೆದುಕೊಳ್ಳುವಾಗ ಬದಲಿ ಸೈಟ್ ನೀಡುವ ಭರವಸೆ ನೀಡಿದ್ದು, ಅದರಂತೆ ನಮಗೆ ಪಡೆದುಕೊಂಡಿರುವ ಸೈಟ್ಗೆ ಬದಲಾಗಿ ಸೈಟ್ನ್ನೇ ಯಾವುದೇ ದರ ನಿಗದಿ ಮಾಡದೆ ನೀಡುವಂತೆ ಒತ್ತಾಯಿಸಿದ್ದಾರೆ.’
ಒಟ್ಟಾರೆ ಶಿವರಾಂ ಕಾರಂತ ಬಡಾವಣೆಯಲ್ಲಿ ಸೈಟ್ ಸಿಗುತ್ತೆ ಮನೆ ಕಟ್ಟುಕೊಳ್ಳುವ ಅಂತ ಕನಸು ಕಂಡಿದ್ದವರಿಗೆ ಇದೀಗ ಬಿಡಿಎ ಹಣ ಕಟ್ಟುವಂತೆ ಶಾಕ್ ನೀಡಿದ್ದು, ನಿವೇಶನ ಕಳೆದುಕೊಂಡ ಮಾಲೀಕರು ಸೋಮವಾರದಂದು ಬಿಡಿಎ ಮುಂದೆ ಹೋರಾಟ ನಡೆಸಲು ಮುಂದಾಗಿದ್ದಾರೆ. ಹೀಗಾಗಿ ಬಿಡಿಎ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.