ದೊಡ್ಡಬಳ್ಳಾಪುರದಲ್ಲಿ ಗೃಹ ಪ್ರವೇಶ ವೇಳೆಯೇ ಗ್ಯಾಸ್ ದುರಂತ: 6 ಜನರ ಸ್ಥಿತಿ ಗಂಭೀರ
ದೊಡ್ಡಬಳ್ಳಾಪುರದಲ್ಲಿ ಹೊಸ ಮನೆಯ ಗೃಹಪ್ರವೇಶ ಸಮಯದಲ್ಲಿ ಗ್ಯಾಸ್ ಲೀಕ್ ಆಗಿ ಬೆಂಕಿ ಅವಘಡ ಸಂಭವಿಸಿದೆ. ಈ ಘಟನೆಯಲ್ಲಿ ಆರು ಜನರು ಗಂಭೀರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕಲಬುರಗಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮೆಡಿಕಲ್ ಅಂಗಡಿ ಬೆಂಕಿಗಾಹುತಿಯಾಗಿದೆ.

ದೇವನಹಳ್ಳಿ, ಫೆಬ್ರವರಿ 01: ಹೊಸ ಮನೆ ಗೃಹ ಪ್ರವೇಶದ ವೇಳೆಯೇ ಅಗ್ನಿ (fire) ಅವಘಡ ಸಂಭವಿಸಿದೆ. ಗ್ಯಾಸ್ ಲೀಕ್ ಆಗಿ ಬೆಂಕಿ ಹೊತ್ತಿಕೊಂಡು 6 ಜನರ ಸ್ಥಿತಿ ಗಂಭೀರವಾಗಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಗ್ರಾಮಾಂತರ ದರ್ಗಾಜೋಗಹಳ್ಳಿಯಲ್ಲಿ ನಡೆದಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರೆಲ್ಲಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸದ್ಯ ಗಾಯಾಳುಗಳಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ರವಿಕುಮಾರ್ ಎಂಬುವರಿಗೆ ಸೇರಿದ ನೂತನ ಮನೆಯಲ್ಲಿ ಅವಘಡ ಸಂಭವಿಸಿದ್ದು, ರವಿಕುಮಾರ್(41), ವರ್ಷಿತಾ(21), ಅನುಸೂಯ(37), ಭಾಗ್ಯಮ್ಮ(55), ಚಿರಂತ್(11), ಮಿಥುನ್ (14) ಗಂಭೀರವಾಗಿ ಗಾಯಗೊಂಡವರು.
ಶಾರ್ಟ್ ಸರ್ಕ್ಯೂಟ್: ಹೊತ್ತಿಯುರಿದ ಮೆಡಿಕಲ್ ಶಾಪ್
ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮೆಡಿಕಲ್ ಶಾಪ್ ಧಗಧಗ ಹೊತ್ತಿಯುರಿದ ಘಟನೆ ಕಲಬುರಗಿ ನಗರದ ಹೀರಾಪುರ ರಸ್ತೆಯಲ್ಲಿ ನಡೆದಿದೆ. ವಿನೋದ್ ಎಂಬುವರಿಗೆ ಸೇರಿದ ಕಣ್ಣಿ ಮೆಡಿಕಲ್ ಶಾಪ್ ಬೆಂಕಿಗೆ ಆಹುತಿಯಾಗಿದೆ. ಕಳೆದ ರಾತ್ರಿ ಮೆಡಿಕಲ್ ಬಂದ್ ಮಾಡಿಕೊಂಡು ಮನೆಗೆ ತೆರಳಿದ್ದ ವೇಳೆ ಅವಘಡ ಸಂಭವಿಸಿದೆ.
ಇದನ್ನೂ ಓದಿ: ಬೆಂಗಳೂರು: ನಗರದ ಈ ರಸ್ತೆಗಳಲ್ಲಿಂದು ಟ್ರಾಫಿಕ್ ಕಿರಿಕಿರಿ, ಸಂಚಾರ ಪೊಲೀಸ್ ಸಲಹೆ ಗಮನಿಸಿ
ಸುಮಾರು 10 ಲಕ್ಷಕ್ಕೂ ಅಧಿಕ ಮೌಲ್ಯದ ಔಷಧಿಗಳು ಸುಟ್ಟು ಕರಕಲಾಗಿವೆ. ಅಗ್ನಿಶಾಮಕ ದಳ ಸಿಬ್ಬಂದಿಗಳಿಂದ ಬೆಂಕಿ ನಂದಿಸಲಾಗಿದೆ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಮೀನು ವಿವಾದ: ರಾಗಿ ಹುಲ್ಲಿಗೆ ಬೆಂಕಿ ಹಾಕಿದ ಆರೋಪ
ಮತ್ತೊಂದು ಪ್ರಕರಣದಲ್ಲಿ ಜಮೀನು ವಿವಾದ ಹಿನ್ನಲೆ ರಾಗಿ ಹುಲ್ಲಿಗೆ ಬೆಂಕಿ ಹಚ್ಚಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಮರಸೂರು ಮಡಿವಾಳ ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು. ಗ್ರಾಮದ ಅಳ್ಳಳ್ಳಿ ಮುನಿಯಮ್ಮ ಎಂಬುವವರಿಗೆ ಸೇರಿದ 2 ಎಕರೆ 23 ಗುಂಟೆ ಜಮೀನಿನಲ್ಲಿದ್ದ ರಾಗಿ ಹುಲ್ಲಿಗೆ ಮುನಿಕೃಷ್ಣ ಮತ್ತು ಇತರರು ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿತ್ತು.
ಕಳೆದ ತಿಂಗಳು ರಾತ್ರಿ ವೇಳೆ ಅಕ್ರಮವಾಗಿ ರಾಗಿ ಕಟಾವು ಯಂತ್ರದ ಮೂಲಕ ಕಟಾವು ಮಾಡಿದ್ದು, ಪೊಲೀಸರಿಗೆ ರೆಡ್ ಹ್ಯಾಂಡೇಡ್ ಆಗಿ ಮಾಲು ಸಮೇತ ಹಿಡಿದು ಕೊಡಲಾಗಿತ್ತು. ಆದರೆ ಸೂರ್ಯನಗರ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಹಾಗಾಗಿ ಜಾನುವಾರುಗಳು ತಿನ್ನುವ ಎರಡು ಎಕರೆ ಪ್ರದೇಶದಲ್ಲಿದ್ದ ರಾಗಿ ಹುಲ್ಲಿಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದರು.
ಇದನ್ನೂ ಓದಿ: ಬಾಬುಸಾಬ್ ಪಾಳ್ಯ ಕಟ್ಟಡ ಕುಸಿದು 8 ಜನ ಸಾವು ಕೇಸ್: ವರದಿಯಲ್ಲಿ ಸ್ಫೋಟಕ ಕಾರಣ ಬಹಿರಂಗ
ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಸೂರ್ಯನಗರ ಠಾಣೆ ಇನ್ಸ್ಪೆಕ್ಟರ್ ಸಂಜೀವ್ ಕುಮಾರ್ ಮಹಾಜನ್ ಸಮ್ಮುಖದಲ್ಲಿಯೇ ಮುನಿಕೃಷ್ಣ ಹಲ್ಲೆ ನಡೆಸಿದ್ದು, ಯಾವುದೇ ಕ್ರಮ ವಹಿಸಿರುವುದಿಲ್ಲ ಎಂದು ಜಮೀನು ಮಾಲೀಕ ಅಳ್ಳಳ್ಳಿ ಮುನಿಯಮ್ಮ ಮಗ ಮುನಿರಾಜು ಆರೋಪ ಮಾಡಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.