
ಬೆಂಗಳೂರು, ಜೂನ್ 19: ಕಳೆದು ಒಂದು ತಿಂಗಳಿಂದ ಕರ್ನಾಟಕದ ಹಲವೆಡೆ ಕಿಡಿಗೇಡಿಗಳಿಂದ ಹುಸಿ ಬಾಂಬ್ ಬೆದರಿಕೆಯ ಇ-ಮೇಲ್ಗಳು (Bomb threat) ಬಂದಿವೆ. ಇತ್ತೀಚೆಗೆ ಹಾಸನದ ಮೂರು ಖಾಸಗಿ ಶಾಲೆಗೆ, ಮೈಸೂರಿನ ಖಾಸಗಿ ಶಾಲೆಗೆ, ಬೆಂಗಳೂರಿನ ಹಲವು ಶಾಲೆಗಳು ಮತ್ತು ಪ್ರತಿಷ್ಠಿತ ಹೋಟೆಲ್ಗಳಿಗೂ ಬಾಂಬ್ ಬೆದರಿಕೆ ಬಂದಿತ್ತು. ಅಷ್ಟೇ ಅಲ್ಲದೆ ಒಂದೇ ವಾರದಲ್ಲಿ ಎರಡೆರಡು ಬಾರಿಗೆ ಕೆಂಪೇಗೌಡ ಏರ್ಪೋರ್ಟ್ಗೆ (Kempegowda Airport) ಹುಸಿ ಬಾಂಬ್ ಮೇಲ್ ಬಂದಿದೆ. ಹೀಗಾಗಿ ಜನರಲ್ಲಿ ಆತಂಕ ಶುರುವಾಗಿದೆ.
ನಗರದಲ್ಲಿ ಕಳೆದ ಕೆಲ ದಿನಗಳಿಂದ ಸೈಲೆಂಟ್ ಆಗಿದ್ದ ಹುಸಿ ಬಾಂಬ್ ಮೇಲ್ಗಳು ಮತ್ತೆ ಆಕ್ಟೀವ್ ಆಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುರುವಾರ ಮತ್ತೊಂದು ಹುಸಿ ಬಾಂಬ್ ಮೇಲ್ ಬಂದಿದೆ. ಒಂದೇ ವಾರದಲ್ಲಿ ಇದು ಎರಡನೇ ಹುಸಿ ಬಾಂಬ್ ಮೇಲ್ ಆಗಿದೆ. ಜೂ.13, 16ರಂದು ಎರಡು ಬಾಂಬ್ ಬೆದರಿಕೆ ಇ-ಮೇಲ್ ಬಂದಿತ್ತು.
ಇದನ್ನೂ ಓದಿ: ಅತ್ಯಾಚಾರ ಪ್ರಕರಣ: ಮೈಸೂರಿನ ಖಾಸಗಿ ವಸತಿ ಶಾಲೆಗೆ ಬಾಂಬ್ ಬೆದರಿಕೆ
ಏರ್ಪೋರ್ಟ್ ಭದ್ರತಾ ಪಡೆಗೆ ಮೇಲ್ ಬಂದಿದ್ದು, ‘ಉಗ್ರ ಅಜ್ಮಲ್ ಕಸಬ್ ಗಲ್ಲಿಗೆ ಹಾಕಿದ್ದು ಸರಿಯಿಲ್ಲ. ಶೌಚಾಲಯದ ಪೈಪ್‌ಲೈನ್‌ನಲ್ಲಿ ಬಾಂಬ್ ಇಟ್ಟಿದ್ದು, ಪಝಲ್ ಗೇಮ್ ರೀತಿ ಎರಡು ಕಡೆ ಬಾಂಬ್ ಇಟ್ಟಿದ್ದು ಪ್ಲ್ಯಾನ್ ಎ ಫೇಲ್ ಆದರೆ ಪ್ಲ್ಯಾನ್ ಬಿ’ ಎಂದು ಬೆದರಿಕೆ ಸಂದೇಶ ರವಾನಿಸಲಾಗಿದೆ.
ಇದನ್ನೂ ಓದಿ: ಹಾಸನ: ಮೂರು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶ
ಬೆದರಿಕೆ ಮೇಲ್ ಹಿನ್ನೆಲೆ ಎಲ್ಲೆಡೆ ಪರಿಶೀಲನೆ ಮಾಡಿದ ಅಧಿಕಾರಿಗಳು ಬಳಿಕ ಇದೊಂದು ಹುಸಿ ಬಾಂಬ್ ಮೇಲ್ ಎಂದು ತಿಳಿಸಿದ್ದಾರೆ. ಸದ್ಯ ಕೆಂಪೇಗೌಡ ಏರ್ಪೋರ್ಟ್ ಪೊಲೀಸರು ಮತ್ತು ಅಧಿಕಾರಿಗಳಿಗೆ ಈ ಹುಸಿ ಬಾಂಬ್ ಮೇಲ್ ಮತ್ತು ಕರೆಗಳು ತಲೆ ನೋವಾಗಿದ್ದು, ಹುಸಿ ಬಾಂಬ್ ಬೆದರಿಕೆ ಬಂದ ಮೇಲ್ ಐಡಿಗಳ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:51 am, Thu, 19 June 25