
ಬೆಂಗಳೂರು, (ಜನವರಿ 14): ಮಾದನಾಯಕನಹಳ್ಳಿ ಪೊಲೀಸ್ ಠಾಣಾ (madanayakanahalli Police) ವ್ಯಾಪ್ತಿಯಲ್ಲಿ 55 ವರ್ಷದ ದಾಕ್ಷಾಯಿಣಿ ಕೊಲೆ ಪ್ರಕರಣದ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜನವರಿ 10ರಂದು ಕುದುರೆಗೆರೆಯಲ್ಲಿ ಹಾಡಹಗಲೇ ನಡುರಸ್ತೆಯಲ್ಲಿ ದಾಕ್ಷಾಯಿಣಿಯನ್ನು ಸೋದರ ಮಾವ 60 ವರ್ಷದ ವೀರಭದ್ರ ಎಂಬಾತ ಕೊಡಲಿಯಿಂದ ಕೊಚ್ಚಿ ಪರಾರಿಯಾಗಿದ್ದ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧನಕ್ಕೆ ಬಲೆ ಬೀಸಿದ್ದರು. ಆದ್ರೆ, ತಲೆ ಮರೆಸಿಕೊಂಡಿದ್ದ ಹಂತಕ ವೀರಭದ್ರ, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಕೊಳೂರು ಗ್ರಾಮದಲ್ಲಿ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಇನ್ನು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಡೆತ್ ನೋಟ್ ಬರೆದಿಟ್ಟಿದ್ದು, ಲಕ್ಷ ಲಕ್ಷ ಹಣ, ಬಂಗಾರದ ಒಡವೆಗಳನ್ನು ಮಾಡಿಸಿಕೊಟ್ಟರೂ ಸಹ ದಾಕ್ಷಾಯಿಣಿ ಬೇರೊಬ್ಬನ ಜತೆ ಸಂಬಂಧ ಹೊಂದಿದ್ದಕ್ಕೆ ಹತ್ಯೆ ಮಾಡಿರುವುದಾಗಿ ವೀರಭದ್ರ ಡೆತ್ನೋಟ್ನಲ್ಲಿ ಬರೆದಿಟ್ಟಿದ್ದಾನೆ.
ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ವೀರಭದ್ರ ದಾಕ್ಷಾಯಿಣಿಗೆ ಸೋದರ ಮಾವನಾಗಬೇಕು. ಚಿಕ್ಕಬಾಣಾವರ ನಿವಾಸಿಯಾಗಿರೋ ಈತ ಮೂಲತಃ ದೊಡ್ಡಬಳ್ಳಾಪುರದ ಕೊಳೂರಿನನವನು. ಕೊಲೆ ನಂತರ ತಲೆ ಮರೆಸಿಕೊಂಡಿದ್ದ ವೀರಭದ್ರ ಕೂಳೂರಿಗೆ ಹೋಗಿ ನಿರ್ಜನ ಪ್ರದೇರ್ಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಾಕ್ಷಾಯಿಣಿ ಜೊತೆ ಸಂಬಂಧ ಹೊಂದಿದ್ದ. ಹೀಗಾಗಿ ದಾಕ್ಷಾಯಿಣಿಗೆ ಹಣ ಹಾಗೂ ಒಡವೆಗಳನ್ನ ಕೂಡ ಮಾಡಿಸಿಕೊಟ್ಟಿದ್ದ. ಆದ್ರೆ ಕೆಲವು ತಿಂಗಳ ಹಿಂದೆ ದಾಕ್ಷಾಯಿಣಿಗೆ ಬೇರೊಬ್ಬನ ಜತೆ ಸಂಬಂಧವಿರುವುದು ಗೊತ್ತಾಗಿದೆ. ಹೀಗಾಗಿ ಕೊಟ್ಟ ಹಣ, ಒಡವೆಗಳನ್ನು ವಾಪಸ್ ಕೇಳಿದ್ದಾನೆ. ಆಗ ದಾಕ್ಷಾಯಿಣಿ ಮತ್ತು ಆಕೆಯ ಗೆಳೆಯ ಬೆದರಿಕೆ ಹಾಕಿದ್ದಾರೆ. ಇದರಿಂದ ಆಕ್ರೋಶಗೊಂಡಿದ್ದ ವೀರಭದ್ರಯ್ಯ, ದಾಕ್ಷಾಯಿಣಿಯನ್ನು ಕೊಚ್ಚಿ ಕೊಂದಿರುವುದಾಗಿ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾನೆ.
ಬೆಂಗಳೂರು ವಾಯುವ್ಯ ವಿಭಾಗ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕುದುರೆಗೆರೆ ಕಾಲೋನಿಯಲ್ಲಿ ನಿವಾಸಿ ದಾಕ್ಷಾಯಿಣಮ್ಮ 8 ವರ್ಷದ ಹಿಂದೆ ಪತಿ ನಾಗರಾಜ್ರನ್ನು ಕಳೆದುಕೊಂಡಿದ್ದರು. ಇಬ್ಬರು ಹೆಣ್ಣು ಮಕ್ಕಳನ್ನ ಮದುವೆ ಕೂಡ ಮಾಡಿದ್ದಾರೆ. ಹಣಕಾಸಿನ ವ್ಯವಹಾರ ಹಾಗೂ ಮನೆ ಬಾಡಿಗೆ ಹಣದಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಆದ್ರೆ, ಜನವರಿ 10ರಂದು ದಾಕ್ಷಾಯಿಣಿ, ಶಾಲೆಯಿಂದ ಮೊಮ್ಮಗನನ್ನು ಕರೆತರಲು ಹೊರಟಿದ್ದಾಗ ಬೈಕ್ನಲ್ಲಿ ಬದು ಏಕಾಏಕಿ ಕೊಡಲಿಯಿಂದ ಕೊಚ್ಚಿ ಎಸ್ಕೇಪ್ ಆಗಿದ್ದ. ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಅಷ್ಟೇ ಅಲ್ಲದರೆ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದರು. ಆದರೆ ಅಷ್ಟರಲ್ಲಿ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವರದಿ: ಮಂಜುನಾಥ್ ಟಿವಿ9 ನೆಲಮಂಗಲ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.