ಅತ್ತಿಬೆಲೆ ಬಳಿ ಹಿಟ್ ಆ್ಯಂಡ್ ರನ್‌ಗೆ ಇಬ್ಬರು ಬೈಕ್ ಸವಾರರು ಬಲಿ; ಕಿಲೋಮೀಟರ್‌ಗಟ್ಟಲೆ ಚೇಸ್ ಮಾಡಿ ಕಾರು ಚಾಲಕನನ್ನು ಹಿಡಿದ ಪೊಲೀಸರು!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹೊರವಲಯದಲ್ಲಿ ಭೀಕರ ಹಿಟ್ ಅಂಡ್ ರನ್ ಅಪಘಾತ ಸಂಭವಿಸಿ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದಾರೆ. ಅಪಘಾತದ ಬಳಿಕ ಪರಾರಿಯಾಗುತ್ತಿದ್ದ ಫಾರ್ಚುನರ್ ಕಾರನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಕಿಲೋಮೀಟರ್‌ಗಟ್ಟಲೆ ಚೇಸ್ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಬಳಿ ಕಾರು ಸಮೇತ ಚಾಲಕನನ್ನು ವಶಕ್ಕೆ ಪಡೆದಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.

ಅತ್ತಿಬೆಲೆ ಬಳಿ ಹಿಟ್ ಆ್ಯಂಡ್ ರನ್‌ಗೆ ಇಬ್ಬರು ಬೈಕ್ ಸವಾರರು ಬಲಿ; ಕಿಲೋಮೀಟರ್‌ಗಟ್ಟಲೆ ಚೇಸ್ ಮಾಡಿ ಕಾರು ಚಾಲಕನನ್ನು ಹಿಡಿದ ಪೊಲೀಸರು!
ಮಿಥುನ್ ಮತ್ತು ಕನಕ
Edited By:

Updated on: Nov 09, 2026 | 12:13 PM

ಮುಖ್ಯಾಂಶಗಳು

  • ದೇವನಹಳ್ಳಿ ಹೊರವಲಯದಲ್ಲಿ ಫಾರ್ಚುನರ್ ಕಾರು ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ದುರ್ಮರಣ.
  • ಅಪಘಾತದ ಬಳಿಕ ಪರಾರಿಯಾಗುತ್ತಿದ್ದ ಚಾಲಕನನ್ನು ಪೊಲೀಸರು ಕಿಲೋಮೀಟರ್‌ಗಟ್ಟಲೆ ಚೇಸ್ ಮಾಡಿ ಸೆರೆಹಿಡಿದರು.
  • ಚಿಕ್ಕಬಳ್ಳಾಪುರ ಬಳಿ ಕಾರು ವಶಕ್ಕೆ ಪಡೆದ ಪೊಲೀಸರು, ಚಾಲಕನನ್ನು ಬಂಧಿಸಿ ತನಿಖೆ ಆರಂಭಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ, ನವೆಂಬರ್ 09: ರಸ್ತೆ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರನ್ನು ಬಲಿ ಪಡೆದ ಕಾರು ಚಾಲಕ, ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹೊರವಲಯದಲ್ಲಿ ನಡೆದಿದೆ. ಅತಿವೇಗವಾಗಿ ಬಂದ ಕಾರು ಹಿಂದಿನಿಂದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ಬಳಿಕ ಚಾಲಕ ಕಾರಿನೊಂದಿಗೆ ಪರಾರಿಯಾಗಿದ್ದು, ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿದ ಪೊಲೀಸರು ಕೊನೆಗೂ ಕಾರು ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಿಲೋಮೀಟರ್‌ಗಟ್ಟಲೆ ನಡೆದ ಈ ಚೇಸಿಂಗ್ ದೃಶ್ಯ ಪೊಲೀಸರ ಮೊಬೈಲ್‌ನಲ್ಲಿ ಸೆರೆಯಾಗಿದೆ.

ಹಿಂಬದಿಯಿಂದ ಡಿಕ್ಕಿ ಹೊಡೆದು ಇಬ್ಬರ ಸಾವು!

ದೇವನಹಳ್ಳಿ ತಾಲೂಕಿನ ಅತ್ತಿಬೆಲೆ ಸಮೀಪ ರಾತ್ರಿ ಈ ಭೀಕರ ಅಪಘಾತ ಸಂಭವಿಸಿದೆ. ದೇವನಹಳ್ಳಿ ಪಟ್ಟಣದ ಮಿಥುನ್ ಮತ್ತು ಕನಕ ಮೃತ ದುರ್ದೈವಿಗಳು. ಇಬ್ಬರೂ ಹೆದ್ದಾರಿಯಲ್ಲಿರುವ ಡಾಬಾಗಳಿಗೆ ಮೊಟ್ಟೆ ಮತ್ತು ಚಿಕನ್ ಪೂರೈಕೆ ಮಾಡುವ ಕೆಲಸ ಮಾಡುತ್ತಿದ್ದರು. ರಾತ್ರಿ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಹಿಂದಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ನಲ್ಲಿದ್ದ ಇಬ್ಬರೂ ರಸ್ತೆಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Loading...

ಅಪಘಾತದ ಬಳಿಕ ಕಾರು ಚಾಲಕ ಗಾಯಾಳುಗಳ ನೆರವಿಗೆ ಧಾವಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ. ಆದರೆ ಅಪಘಾತದ ಸ್ಥಳದಲ್ಲಿ ಕಾರಿನ ನಂಬರ್ ಪ್ಲೇಟ್ ಬಿದ್ದಿತ್ತು. ಇದನ್ನೇ ಪ್ರಮುಖ ಸುಳಿವಾಗಿ ಪರಿಗಣಿಸಿದ ಪೊಲೀಸರು ಕಾರಿನ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.

ಸಿನಿಮೀಯ ರೀತಿಯಲ್ಲಿ ಕಾರು ಚೇಸ್ ಮಾಡಿದ ಪೊಲೀಸರು!

ಅಪಘಾತ ಮಾಡಿ ಪರಾರಿಯಾಗುತ್ತಿದ್ದ ಫಾರ್ಚುನರ್ ಕಾರು ಚಿಕ್ಕಬಳ್ಳಾಪುರ ಮಾರ್ಗವಾಗಿ ತೆಲಂಗಾಣದತ್ತ ತೆರಳುತ್ತಿತ್ತು. ಮಾಹಿತಿ ಪಡೆದ ಪೊಲೀಸರು ಸೈರನ್ ಹಾಕಿ ಕಾರು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಆದರೂ ಚಾಲಕ ಕಾರು ನಿಲ್ಲಿಸದೆ ವೇಗವಾಗಿ ಚಲಾಯಿಸಿದ್ದಾನೆ. ಅಷ್ಟೇ ಅಲ್ಲ, ಪೊಲೀಸರು ಬೊಲೆರೋ ಗೂಡ್ಸ್ ವಾಹನವನ್ನು ಅಡ್ಡ ಹಾಕಿದರೂ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದಾನೆ.

YouTube video player

ಕುಡಿದ ಅಮಲಿನಲ್ಲಿದ್ದ ಎನ್ನಲಾದ ಚಾಲಕ ಬೇಕಾಬಿಟ್ಟಿಯಾಗಿ ಕಾರು ಚಲಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಕಿಲೋಮೀಟರ್‌ಗಟ್ಟಲೆ ಬೆನ್ನಟ್ಟಿದ್ದಾರೆ. ಕೊನೆಗೆ ಇತರೆ ವಾಹನಗಳ ನೆರವಿನಿಂದ ಕಾರನ್ನು ತಡೆದು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಚಿಕ್ಕಬಳ್ಳಾಪುರದ ಬಳಿ ಮಧ್ಯರಾತ್ರಿ ನಡೆದ ಈ ಕಾರ್ಯಾಚರಣೆಯಲ್ಲಿ ಹಿಟ್ ಆ್ಯಂಡ್ ರನ್ ಮಾಡಿ ಪರಾರಿಯಾಗುತ್ತಿದ್ದ ಕಾರು ಪೊಲೀಸರ ಕೈಗೆ ಸಿಕ್ಕಿದೆ.

ಸಂಪೂರ್ಣ ಚೇಸಿಂಗ್ ದೃಶ್ಯ ಪೊಲೀಸರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸದ್ಯ ಪ್ರಕರಣ ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ. ಇಬ್ಬರ ಸಾವಿಗೆ ಕಾರಣವಾದ ಕಾರು ಚಾಲಕನ ವಿರುದ್ಧ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:07 pm, Mon, 9 November 26

ನವೀನ್ ಕುಮಾರ್ ಟಿ.

ನವೀನ್ ಕುಮಾರ್ ಟಿ ರವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡದ ದೇವನಹಳ್ಳಿ, ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಂಎಸ್​ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ಇವರು ಪದವಿ ಶಿಕ್ಷಣ ಮುಗಿದ ನಂತರ ಟಿವಿ9 ಕನ್ನಡದಲ್ಲಿ ವರದಿಗಾರರಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಹುದ್ದೆಯನ್ನು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಿದ್ದಾರೆ.

Read More
Loading...
Unable to load recommendations.
Follow Us