AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಂಗಿಯನ್ನ ಮೈದನನಿಗೆ ಕೊಡಲಿಲ್ಲವೆಂದು ಅತ್ತೆ ಮನೆಯವರಿಂದ ಕಿರುಕುಳ: ಅನುಮಾನ ಹುಟ್ಟಿಸಿದ ಗೃಹಿಣಿ ಸಾವು

ಅದು ಅತ್ತೆ ಮಾವ ಮೈದ ಗಂಡ ಹೆಂಡತಿ ಜೊತೆಗೆ ಎರಡು ಮಕ್ಕಳ ಜೊತೆ ಒಂದೇ ಮನೆಯಲ್ಲಿ ವಾಸವಿದ್ದ ಸುಂದರ ಕುಟುಂಬ. ತಾವಾಯಿತು ತಮ್ಮ ಕೆಲಸವಾಯಿತು ಅಂತಿದ್ದ ಆ ಕುಟುಂಬದಲ್ಲಿ ಪತ್ನಿಯ ತಂಗಿಯ ಮದುವೆ ವಿಚಾರ ಬಿರುಗಾಳಿಯನ್ನೆ ಎಬ್ಬಿಸಿದ್ದು, ತಮ್ಮನ ಹಿತ ಕಾಯಲು ಹೋದ ಗಂಡ ಭಂಡನಾಗಿ ಪತ್ನಿಯ ಜೀವವನ್ನೆ ಬಲಿ ಪಡೆದುಕೊಂಡಿದ್ದಾನೆ.

ತಂಗಿಯನ್ನ ಮೈದನನಿಗೆ ಕೊಡಲಿಲ್ಲವೆಂದು ಅತ್ತೆ ಮನೆಯವರಿಂದ ಕಿರುಕುಳ: ಅನುಮಾನ ಹುಟ್ಟಿಸಿದ ಗೃಹಿಣಿ ಸಾವು
ಮಗಳನ್ನ ಕಳೆದುಕೊಂಡ ಮನೆಯವರ ಗೋಳಾಟ
ಕಿರಣ್ ಹನುಮಂತ್​ ಮಾದಾರ್
|

Updated on: Apr 26, 2023 | 7:54 AM

Share

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ಹೊಸಕೋಟೆ ತಾಲೂಕಿನ ದಳಸಗೆರೆ ಗ್ರಾಮದಲ್ಲಿ ವಾಸವಿದ್ದ ಪವಿತ್ರಾ ಮತ್ತು ಮುರಳಿ ಎಂಬ ಜೋಡಿ ಕಳೆದ ಐದು ವರ್ಷದ ಹಿಂದೆ ವಿವಾಹವಾಗಿದ್ದು, ಮನೆಯಲ್ಲಿ ಅತ್ತೆ ಮಾವ ಮೈದ ಹಾಗೂ ಗಂಡ ಎಲ್ಲರನ್ನೂ ಒಗ್ಗೂಡಿಸಿಕೊಂಡಿದ್ದ ಪವಿತ್ರಾ ಮನೆಯಲ್ಲಿ ಇಬ್ಬರು ಮಕ್ಕಳ ಜೊತೆ ಸುಖ ಸಂಸಾರ ನಡೆಸುತ್ತಿದ್ದಳು. ಆದ್ರೆ, ಈ ನಡುವೆ ಅತ್ತೆಯ ಮನೆಯವರು ಮೈದನಿಗೆ ತನ್ನ ತಂಗಿಯನ್ನ ಕೊಡಿಸುವಂತೆ ಪವಿತ್ರಾ ಮೇಲೆ ಒತ್ತಡ ಹೇರಿದ್ದು, ಬಾಣಂತನಕ್ಕೆ ಹೋದ ವೇಳೆ ಸಂಬಂಧ ಪಿಕ್ಸ್ ಮಾಡಿಕೊಂಡೆ ಬರಬೇಕು ಎಂದು ಹೇಳಿದ್ದರಂತೆ. ಆದ್ರೆ, ಒಂದೇ ಮನೆಗೆ ಎರಡನೆ ಮಗಳನ್ನ ಕೊಡಲು ಇಷ್ಟವಿಲ್ಲದ ಪವಿತ್ರ ಮನೆಯವರು ವಿರೋಧ ವ್ಯಕ್ತಪಡಿಸಿದ್ದು, ಬೇರೆ ಕಡೆ ಸಂಬಂಧ ಫಿಕ್ಸ್ ಮಾಡಿ, ಜತೆಗೆ ಕಳೆದ ಭಾನುವಾರ ಮಗಳ ಲಗ್ನ ಪತ್ರಿಕೆಯನ್ನ ತೆಗೆದುಕೊಂಡು ಪವಿತ್ರ ತಂದೆ ಮಗಳ ಊರಿಗೆ ಬಂದಿದ್ದಾರೆ. ಈ ವೇಳೆ ಸಂಬಂಧಿಕರಿಗೆ ಆಹ್ವಾನ ಪತ್ರಿಕೆ ನೀಡುತ್ತಿದ್ದಂತೆ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಗಂಡ ಪತ್ನಿ ಮೇಲೆ ಹಲ್ಲೆ ಸಹ ಮಾಡಿದ್ದರಂತೆ. ಬಳಿಕ ಎಲ್ಲರೂ ಜಗಳ ಬಿಡಿಸಿ ಕಳಿಸಿದ್ದು, ಅಂದು ರಾತ್ರಿಯೇ ಪವಿತ್ರ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪಿದ್ದಾಳೆ.

ಪವಿತ್ರ ಮೃತದೇಹವನ್ನ ಆಸ್ವತ್ರೆಯಲ್ಲಿಯೇ ಬಿಟ್ಟು ಗಂಡನ ಕುಟುಂಬಸ್ಥರು ಎಸ್ಕೇಪ್​

ಹೌದು ಭಾನುವಾರ ನೇಣು ಬಿಗಿದುಕೊಂಡು ಪವಿತ್ರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಳಿಕ ಗಂಡನ ಕುಟುಂಬಸ್ಥರು ಪವಿತ್ರಾಳ ಮೃತದೇಹವನ್ನ ಹೊಸಕೋಟೆಯ ಆಸ್ವತ್ರೆಗೆ ಕರೆತಂದಿದ್ದು, ನಂತರ ಆಸ್ವತ್ರೆಯಲ್ಲಿ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಜೊತೆಗೆ ನಿನ್ನೆ(ಏ.24) ರಾತ್ರಿ ಪವಿತ್ರಾ ಕುಟುಂಬಸ್ಥರಿಗೆ ವಿಚಾರ ತಿಳಿದಿದ್ದು, ಆಸ್ವತ್ರೆ ಹಾಗೂ ಗಂಡನ ಮನೆಯ ಬಳಿ ನೋಡಿದಾಗ ಎಲ್ಲರೂ ಮನೆಗೆ ಬೀಗ ಹಾಕಿಕೊಂಡು ಎಸ್ಕೇಪ್ ಆಗಿರುವುದು ಗೊತ್ತಾಗಿದೆ. ಹೀಗಾಗಿ ಇಂದು(ಏ.25) ಮೃತದೇಹದ ಶವಪರೀಕ್ಷೆ ನಡೆಸಿ ಗಂಡನ ಮನೆ ಬಳಿ ಬಂದ ಕುಟುಂಬಸ್ಥರು ಮನೆ ಮುಂದೆಯೆ ಜೆಸಿಬಿಯಿಂದ ಗುಂಡಿ ತಗೆಸಿ ಅಲ್ಲಿಯೇ ಶವ ಸಂಸ್ಕಾರ ಮಾಡಲು ಮುಂದಾಗಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ಪತ್ನಿಯನ್ನ ಕೊಲೆ ಮಾಡಿದ್ದ ಪತಿಗೆ ಜೀವಾವಧಿ ಶಿಕ್ಷೆ, 2 ಸಾವಿರ ರೂ. ದಂಡ

ಇದೇ ವೇಳೆ ಗ್ರಾಮದ ಕೆಲವರು ಮೃತಳ ಸಂಬಂಧಿಕರಿಗೆ ಸಮಾಧಾನ ಮಾಡಿ ನಂತರ ಗಂಡನ ಜಮೀನಿನಲ್ಲಿ ಪವಿತ್ರಾಳ ಅಂತ್ಯ ಸಂಸ್ಕಾರ ನೇರವೇರಿಸಿದ್ದಾರೆ. ಇನ್ನು ಗೃಹಿಣಿ ಪವಿತ್ರಾಳದ್ದು ಆತ್ಮಹತ್ಯೆಯಲ್ಲ, ಕೊಲೆ ಎನ್ನುವ ಅನುಮಾನವನ್ನು ಕುಟುಂಬಸ್ಥರು ವ್ಯಕ್ತಪಡಿಸಿದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ನಂದಗುಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಒಟ್ಟಾರೆ ಮನೆ ಬೆಳಗಲು ಬಂದಿದ್ದ ಹೆಣ್ಣು ಮಗಳನ್ನ ಸಂತೋಷದಿಂದ ನೋಡಿಕೊಳ್ಳೋದನ್ನ ಬಿಟ್ಟು ಮತ್ತೊಬ್ಬಳನ್ನ ಕೊಡಿಸಲಿಲ್ಲ ಎಂದು ಆಕೆಯ ಮೇಲೆ ಗಂಡನ ಕುಟುಂಬಸ್ಥರು ಕ್ರೌರ್ಯ ಮೆರೆದಿರುವುದು ನಿಜಕ್ಕೂ ದುರಂತ. ಇನ್ನು ಈ ಬಗ್ಗೆ ನಂದಗುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದು ತನಿಖೆಯ ನಂತರ ಪವಿತ್ರಾಳದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎನ್ನುವುದು ಗೊತ್ತಾಗಬೇಕಿದೆ.

ವರದಿ: ನವೀನ್ ಟಿವಿ9 ದೇವನಹಳ್ಳಿ

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ